Thursday 18 September 2014

ಎಟಿಎಂ


ಮನೆಯಲ್ಲಿ  ಕಿತ್ತು ತಿನ್ನುವ ಬಡತನ. ಕೆಲಸಕ್ಕೆ ಹೋಗದೆ ಮೂರು ಹೊತ್ತೂ ಮನೇಲೇ ಬಿದ್ದಿರುತ್ತಿದ್ದ ಅಪ್ಪ.  ಅಮ್ಮ ಕಸ ಮುಸುರೆ ತಿಕ್ಕಿ ನಮಗೆ ಇಷ್ಟು ಮಾತ್ರ ವಿದ್ಯೆ ಕೊಡಿಸಿದ್ದಳು. ನಾವು ನಾಲ್ಕು ಜನ ಮಕ್ಕಳು. ನಾನೇ ಹಿರಿಯವಳು. ಪಿ.ಯು.ಸಿ. ಓದಿದವಳೇ ಸಣ್ಣ ಕಂಪೆನಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದೆ. ನನ್ನ ಜೊತೇಲಿ ಕೆಲಸಕ್ಕೆ ಸೇರಿಕೊಂಡವಳೇ ಶೈಲಾ. ಡಾಟಾ ಎಂಟ್ರಿ ಆಪರೇಟರ್ ಆಗಿ ಇಬ್ಬರೂ ಒಟ್ಟಿಗೇ ಕೆಲಸಕ್ಕೆ ಸೇರಿದ್ದೆವು. ಆವಾಗಿನಿಂದ ನಾವು ಜೀವದ ಗೆಳತಿಯರಾಗಿದ್ದೆವು.  ಒಂದೇ ದಿನ ಕೆಲಸಕ್ಕೆ ಸೇರಿಕೊಂಡಿದ್ದರಿಂದ ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ಕಾಫೀ, ಊಟ ಎಲ್ಲಾ ಜೊತೇಲೇ ಆಗುತ್ತಿತ್ತು. ಸಾಲರಿ ಡ್ರಾ ಮಾಡಲು ಎಟಿಎಂ ಕಾರ್ಡ್ ಕೊಟ್ಟಿದ್ದರು. ಅದನ್ನು ತಗೊಳ್ಳಲೂ ಜೊತೇಲೆ ಹೋಗುತ್ತಿದ್ದೆವು.

      ತಂಗಿಗೆ ಎಸ್.ಎಸ್.ಎಲ್.ಸಿ. ಎಕ್ಸಾಮ್ ಫೀಸ್ ಕಟ್ಟಲು ನಾಳೆ ಕೊನೆ ದಿನ. ಇಂದು ಆಫೀಸಿಗೆ ಹೊರಡುವಾಗಲೇ ನೆನಪಿಸಿದ್ದಳು. ನನ್ನ ಅಕೌಂಟ್ ನಲ್ಲಿ ಮಿನಿಮಮ್  ಎಷ್ಟಿರಬೇಕೋ ಅಷ್ಟು ಮಾತ್ರ ದುಡ್ಡಿತ್ತು. ಮಧ್ಯಾಹ್ನ ಊಟ ಮುಗಿಸಿ ನಾನು ಶೈಲಾ ಒಂದು ರೌಂಡ್ ಹೋಗಿ ಬರುತ್ತಿದ್ದೆವು. ಕ್ಲಾಕ್ ರೂಂಗೆ ಹೋಗುವಾಗ ಅವಳು ಕೈಯಲ್ಲಿದ್ದ ಪರ್ಸ್ ಮೊಬೈಲ್ ನನ್ನ ಕೈಯಲ್ಲಿ ಕೊಡುತ್ತಿದ್ದಳು. ಅಂದು ಕೂಡಾ ಹಾಗೇ ಮಾಡಿದಳು. ಎದುರಿಗೇ ಎಸ್.ಬಿ.ಎಂ.ನ  ಎಟಿಎಂ ಇತ್ತು. ಧೈರ್ಯ ಮಾಡಿ ಎಟಿಎಂ.ಗೆ ಹೋದವಳೇ ಅವಳ ಪರ್ಸ್ ನಿಂದ ಎಟಿಎಂ ಕಾರ್ಡ್ ತಗೊಂಡು ಎರಡು ಸಾವಿರ ರೂಪಾಯಿ ಡ್ರಾ ಮಾಡಿದೆ.  ಅವಳು ಹಣ ತೆಗೆಯುವಾಗಲೆಲ್ಲಾ ನಾನು ಕೂಡಾ ಒಳಗೆ ಹೋಗುತ್ತಿದ್ದುದರಿಂದ ಅವಳ ಪಾಸ್ ವರ್ಡ್ ನಂಬರ್ ಚೆನ್ನಾಗಿಯೇ ಗೊತ್ತಿತ್ತು. ಮೊಬೈಲ್ ನಲ್ಲಿ ಮೆಸೇಜ್ ಡಿಲೀಟ್ ಮಾಡಿದೆ. ಏನೂ ಆಗಿಲ್ಲದಂತೆ ನಟಿಸಿದೆ. ಅವಳಿಗೆ ಗೊತ್ತಾಗಲೇ ಇಲ್ಲ.

      ಅಮ್ಮ ಹಾಸಿಗೆ ಹಿಡಿದಿದ್ದಳು. ಅವಿರತ ವಿರಾಮವಿಲ್ಲದೆ ದುಡಿದಿದ್ದಕ್ಕೆ ಅವಳಿಗೆ ಟಿಬಿ ಬಳುವಳಿಯಾಗಿ ಬಂದಿತ್ತು. ಅಕೌಂಟ್ ನಲ್ಲಿ ಮಿನಿಮಮ್ ಬಿಟ್ಟರೆ ಬೇರೆ ದುಡ್ಡಿಲ್ಲ. ಏನು ಮಾಡೋದು. ಮೊದಲು ಒಂದು ಸಲ ಶೈಲಾಳ ಎಟಿಎಂ ಕಾರ್ಡ್ ನಿಂದ ತೆಗೆದಿದ್ದೆನಲ್ಲ.  ಇನ್ನೊಂದು ಸಲ ಪ್ರಯತ್ನಿಸಿದರೆ ಹೇಗೆ. ರೌಂಡ್ಸ್ ಹೋಗೋಣ ಅಂತ ಅವಳನ್ನು ಕರೆದುಕೊಂಡು ಹೋದೆ. ಲಕ್ಷಗಟ್ಟಲೆ ಹಣ ಇರುವಾಗ 10 ಸಾವಿರ ತಗೊಂಡ್ರೆ ಗೊತ್ತಾಗಲಿಕ್ಕಿಲ್ಲ ಅಂತ ಧೈರ್ಯ ಮಾಡಿ ತೆಗೆದೇ ಬಿಟ್ಟೆ.

ಪಾಸ್ ಬುಕ್ ಎಂಟ್ರಿ ಮಾಡಲು ಹೋದಾಗ ಅವಳಿಗೆ ಗೊತ್ತಾಗಿ ಹೋಯಿತು. ತಲೆಯಲ್ಲಿ ಹುಳು ಬಿಟ್ಟಂಗಾಯ್ತು.  ಯಾರು ತೆಗೆದಿರಬಹುದು ಅಂತ ಒಂದೇ ಸಮನೆ ಯೋಚನೆ ಮಾಡುತ್ತಿದ್ದಳು. ಅವಳಿಗೆ ಬಾಸ್ ತುಂಬಾ ಕ್ಲೋಸ್ ಆಗಿದ್ದರು. ಅವರಲ್ಲಿ ಎಲ್ಲಾ ವಿಷಯವನ್ನೂ ತಿಳಿಸಿದಳು. ಅವರು ಎನ್ ಕ್ವಯರಿ ಮಾಡಿದರು. ನಾನು ಸಿಕ್ಕಿ ಬಿದ್ದಿದ್ದೆ. ಕೊನೆಗೆ ಮನೆಯ ಬಡತನ ಅಮ್ಮನ ಅನಾರೋಗ್ಯದ ವಿಚಾರವೆಲ್ಲಾ ಹೇಳಿ ತಪ್ಪು ಒಪ್ಪಿಕೊಂಡು ಬಿಟ್ಟೆ. ಇದೊಂದು ಸಲ ಕ್ಷಮಿಸಿ ಇನ್ನೆಂದೂ ಇಂತಹ ತಪ್ಪು ಮಾಡೋದಿಲ್ಲ ಅಂತ ಗೋಗರೆದೆ. ನಿನಗೆ ಕಷ್ಟವಿದ್ದರೆ ನಮಗೆ ಹೇಳಿದಿದ್ರೆ ಸಹಾಯ ಮಾಡುತ್ತಿದ್ದೆವು. ಇಂತಹ ಕೆಲಸ ಮಾಡಿದ್ದು ತಪ್ಪು ಎಂದು ಮುಲಾಜಿಲ್ಲದೆ ಮನೆಗೆ ಕಳುಹಿಸಿಬಿಟ್ರು. ಅದೊಂದು ಕಪ್ಪು ಚುಕ್ಕೆ ನನ್ನ ಜೀವನದಲ್ಲಿ ಸೇರ್ಕೊಂಡು ಬಿಡ್ತು. ಈಗಿನ ಕಾಂಪಿಟೀಷನ್ ಯುಗದಲ್ಲಿ ಎಲ್ಲಿ ಹೋದರೂ ನನ್ನ ಅರ್ಹತೆಗೆ ಯಾವ ಕೆಲಸವೂ ಸಿಗಲಿಲ್ಲ. ಎರಡು ವರ್ಷದ ಅನುಭವ ಕೂಡಾ ಕೆಲಸಕ್ಕೆ ಬರಲಿಲ್ಲ. ಮುಂದಾಲೋಚನೆ ಇಲ್ಲದೆ ಮಾಡಿದ ತಪ್ಪಿನಿಂದ ಇಂದಿಗೂ ಯಾವ ಕೆಲಸವೂ ಇಲ್ಲದೆ ಕೊರಗುತ್ತಿದ್ದೇನೆ.

*****

 

Tuesday 15 April 2014

ಆಸರೆ


ಆಶ್ರಮದಲ್ಲಿ ಯಾರೊಂದಿಗೂ ಮಾತಿಲ್ಲ ಕತೆಯಿಲ್ಲ. ಹಾಗಂತ, ಅವಳು ಯೋಚಿಸುವ ಶಕ್ತಿಯನ್ನೇನೂ ಕಳೆದುಕೊಂಡಿರಲಿಲ್ಲ. ಬೆಳಗಿನ ಧ್ಯಾನ, ಪ್ರಾರ್ಥನೆ, ತಿಂಡಿ, ಊಟ, ಭಜನೆ ಎಲ್ಲದರಲ್ಲೂ ಭಾಗವಹಿಸುತ್ತಿದ್ದಳು. ಆದರೆ ಎಲ್ಲವೂ ಯಾಂತ್ರಿಕ.   

ಇಬ್ಬರು ಮಕ್ಕಳಿಗಾಗಿ ಎಷ್ಟು ಜೀವ ಸವೆಸಿದ್ದಳು. ಹೊಟ್ಟೆ ಬಾಯಿ ಕಟ್ಟಿ ಮಕ್ಕಳಿಗೆ ಮಾತ್ರ ಏನೂ ಕೊರತೆಯಾಗದಂತೆ ಬೆಳೆಸಿದ್ದಳು. ಸಾಲಸೂಲ ಮಾಡಿ ಒಬ್ಬನನ್ನು ಡಾಕ್ಟರ್ ಹಾಗೂ ಇನ್ನೊಬ್ಬನನ್ನು ಇಂಜಿನಿಯರ್ ಮಾಡಿಸಿದ್ದರು. ದೊಡ್ಡ ಮಗನಿಗೆ ಡಾಕ್ಟರ್ ಹೆಂಡತೀನೇ ಸಿಕ್ಕಿದ್ದಳು. ಅಮೇರಿಕದಲ್ಲಿ ಒಳ್ಳೆಯ ಕಡೆ ಕೆಲಸ ಸಿಕ್ಕಿದ್ದರಿಂದ ಹೆಂಡತಿಯನ್ನು ಕರ್ಕೊಂಡು ಅಮೇರಿಕಕ್ಕೆ ಹೋಗಿದ್ದ. ಆದರೆ ಇಬ್ಬರೂ ದುಡಿಯುತ್ತಿದ್ದುದರಿಂದ ಮಗ ಹುಟ್ಟಿದ ತಕ್ಷಣ ನೋಡಿಕೊಳ್ಳಲು ಕಷ್ಟವಾಗುತ್ತದೆಂದು ಊರಲ್ಲಿ ಅಮ್ಮನ ಮನೆಯಲ್ಲಿಯೇ ಬಿಟ್ಟು ಹೋಗಿದ್ದ. 

ಎರಡನೇ ಮಗನಿಗೂ ಇಂಜಿನಿಯರ್  ಹುಡುಗೀನೇ ಸಿಕ್ಕಿದ್ದಳು. ಅವನು ಕೂಡಾ ದೊಡ್ಡವನ ಹಾದೀನೇ ಹಿಡಿದಿದ್ದ. ಕೆಲಸ ಸಿಕ್ಕಿದ ತಕ್ಷಣ ಕಂಪೆನಿಯಿಂದ ಯು.ಕೆ.ಗೆ ಕಳುಹಿಸಿದ್ದರಿಂದ  ಹೆಂಡತಿಯನ್ನೂ ಕರ್ಕೊಂಡು ಅಲ್ಲಿಯೇ ಸೆಟಲ್ ಆಗಿಬಿಟ್ಟ. ಅವನೂ ಕೂಡಾ ನಾನೇನು ಕಮ್ಮಿ ಅಂತ ಮಗ ಹುಟ್ಟಿದ ತಕ್ಷಣ ಅಮ್ಮನ ಹತ್ತಿರ ಬಿಟ್ಟು ಹೋಗಿದ್ದ. 

ಅಂದು ಅವಳ ಜೀವನದ ಕರಾಳ ದಿನ. ಯಜಮಾನರು ರಾತ್ರಿ ಮಲಗಿದ್ದವರು ಬೆಳಿಗ್ಗೆ ಎದ್ದೇಳಲೇ ಇಲ್ಲ. ಗಂಡನನ್ನು ಕಳಕೊಂಡ ದು:ಖದಿಂದ ಆಘಾತಗೊಂಡಿದ್ದಳು. ಇಬ್ಬರು ಮಕ್ಕಳೂ ಪತ್ನಿ ಸಮೇತರಾಗಿ ಬಂದು ಪಿತೃ ಕಾರ್ಯ ಎಲ್ಲಾ ಮುಗಿಸಿ ಹೋದರು. ರಜೆ ಸಿಕ್ಕಿದ ತಕ್ಷಣ ಬರುವುದಾಗಿ ತಿಳಿಸಿ ವಾಪಸ್ಸು ಹೋಗಿದ್ದರು.  

ಸ್ವಲ್ಪ ದಿನ ಬಿಟ್ಟು ದೊಡ್ಡ ಮಗ ಬಂದವನೇ ಅಮ್ಮನನ್ನು ಚಿಕ್ಕ ಮಗ ಕರ್ಕೊಂಡು ಹೋಗಬಹುದು ಅಂದ್ಕೊಂಡು ಮಗನನ್ನು ಕರ್ಕೊಂಡು ಅಮೇರಿಕಕ್ಕೆ ಹೋಗಿಯೇ ಬಿಟ್ಟ. ಚಿಕ್ಕ ಮಗನಿಗೆ ಯಾವ ವಿಷಯವೂ ಗೊತ್ತಿರಲಿಲ್ಲ. ಸ್ವಲ್ಪ ದಿನ ಬಿಟ್ಟು ಚಿಕ್ಕ ಮಗ ಬಂದ. ಒಂದು ತಿಂಗಳು ರಜೆ ಹಾಕಿ ಮಾಡಬೇಕಾದ ಕೆಲಸಗಳನ್ನೆಲ್ಲಾ ಮಾಡಿ ಮುಗಿಸಿದ. ಅಣ್ಣ ಬಿಟ್ಟು ಹೋದ ಅಂತ ನಾನೂ ಹಾಗೆ ಮಾಡಕ್ಕಾಗುತ್ತಾ. ಮಗನಿಗೂ ನಿನಗೂ ವೀಸಾ ಮಾಡಿಸುತ್ತೇನೆ. ನಿನ್ನನ್ನೂ ಕರ್ಕೊಂಡು ಹೋಗುತ್ತೇನೆ. ಇಲ್ಲಿಯ ಮನೆ ಆಸ್ತಿ ಎಲ್ಲಾ ಮಾರಿಬಿಡೋಣ ಅಂತ ಹೇಳಿ ಅಮ್ಮನಿಂದ ಬೇಕಾದ ಕಡೆಗೆಲ್ಲಾ ಸಹಿ ಹಾಕಿಸಿಕೊಂಡ. ಬ್ರೋಕರ್ ನ್ನು ಹುಡುಕಿ ಎಲ್ಲವನ್ನೂ ಮಾರಿದ್ದೂ ಆಯಿತು. ಮದುವೆಯಾದಾಗಿನಿಂದ ಜೋಪಾನವಾಗಿ ನೋಡಿಕೊಂಡಿದ್ದ ಗಂಡ ಮಕ್ಕಳೊಂದಿಗೆ ಬಾಳಿ ಬದುಕಿದ ಮನೆ, ಮನೆಯಲ್ಲಿನ ಒಂದೊಂದು ವಸ್ತುಗಳನ್ನೂ ಬಿಟ್ಟು ಹೋಗಬೇಕಾದ್ರೆ ತುಂಬಾ ಸಂಕಟವಾಗಿತ್ತು. ಆದರೆ ಮಗನ ಜೊತೆಗಿರುತ್ತೇನೆ ಅನ್ನೋ ಸಮಾಧಾನ ಆ ನೋವನ್ನು ದೂರಮಾಡಿತ್ತು. ಮಗ ಹೇಳಿದಂತೆ ಬಟ್ಟೆ ಬರೆಗಳನ್ನೆಲ್ಲಾ ಒಂದು ಸೂಟ್ ಕೇಸ್ ನಲ್ಲಿ ತುಂಬಿದ್ದಳು. ಉಳಿದಂತೆ ಎಲ್ಲಾ ಸಾಮಾನು ಸಮೇತ ಮನೆಯನ್ನು ಮಾರಲಾಗಿತ್ತು.

ಏರ್ ಪೋರ್ಟ್ ನಲ್ಲಿ ಸೂಟ್ ಕೇಸ್ ಸಹಿತ ಮಗ ಅವಳನ್ನು ಒಂದು ಕಡೆ ಕುಳ್ಳಿರಿಸಿ ಹೋಗಿದ್ದ. ಎಷ್ಟೋ ಹೊತ್ತಿನಿಂದ ಒಂದೇ ಕಡೆ ಒಬ್ಬಳೇ ಕುಳಿತೇ ಇದ್ದ ಅವಳನ್ನು ಏರ್ ಪೋರ್ಟ್ ಸಿಬ್ಬಂದಿ ಒಬ್ಬರು ಬಂದು ಮಾತನಾಡಿಸಿದರು. ಪಾರಿನ್ ಗೆ ಹೋಗುತ್ತಿದ್ದೇವೆ ಮಗ ವೀಸಾ ತೆಗೆದುಕೊಂಡು ಬರಲು ಹೋಗಿದ್ದಾನೆ ಅಂದಳು. ಅವರು ಎಲ್ಲಿಗೆ ಹೋಗುತ್ತಿದ್ದೀರಿ ಯಾವ ಫ್ಲೈಟ್ ಎಲ್ಲಾ ವಿಚಾರಿಸಿದರು. ಆ ಫ್ಲೈಟ್ ಹೋಗಿ ಎರಡು ಗಂಟೆ ಆಯಿತು. ಮಗನ ನಂಬರ್ ಇದ್ದರೆ ಕೊಡಿ ಎಂದು ಕೇಳಿದರು. ಮಗ ಜೊತೇಲೇ ಇದ್ದ ಕಾರಣ ಏನನ್ನೂ ಇಟ್ಟುಕೊಂಡಿರಲಿಲ್ಲ. ಇಂತಹ ಕೇಸುಗಳನ್ನು ಅವರು ಎಷ್ಟೋ ನೋಡಿರಬಹುದು. ಬಹುಷ: ಮಗ ನಿಮ್ಮನ್ನು ಬಿಟ್ಟು ಹೊರಟು ಹೋಗಿದ್ದಾನೆ ಅಂದರು. ಏನೋ ತೊಂದರೆಯಾಗಿರಬಹುದು. ಮಗ ಬಂದೇ ಬರುತ್ತಾನೆ ಅನ್ನುತ್ತಾ ಇನ್ನೂ ಎಷ್ಟೋ ಸಮಯ ಅಲ್ಲಿಯೇ ಕುಳಿತಿದ್ದಳು. ಕತ್ತಲಾಗುತ್ತಾ ಬಂದಂತೆ ನಿಜವಾಗಿಯೂ ಮಗ ಬಿಟ್ಟು ಹೋದನೆ ಅನ್ನುವ ಭಯ ಶುರುವಾಯಿತು. ಏರ್ ಪೋರ್ಟ್ ಸಿಬ್ಬಂದಿ ಪುನ: ಬಂದು ಕರೆದರು. ಮಾತನಾಡದೆ ಅವರ ಜೊತೆಗೆ ಹೋದಳು. ಅವರು ಮನೆಗೆ ಕರೆದುಕೊಂಡು ಹೋದವರೇ ಹೆಂಡತಿಯಲ್ಲಿ ಎಲ್ಲಾ ವಿಚಾರ ತಿಳಿಸಿದರು. ಮರುದಿನ ವೃದ್ಧಾಶ್ರಮಗಳ ವಿವರ ತಿಳಿದು ಒಂದು ಆಶ್ರಮಕ್ಕೆ ಸೇರಿಸಿದರು.  

ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇ ಈ ರೀತಿ ಮೋಸ ಮಾಡಬಹುದೆಂದು ಊಹಿಸಲೂ ಸಾಧ್ಯವಿರಲಿಲ್ಲ. ಆ ಘಟನೆ ನಡೆದಾಗಿನಿಂದ ಆಘಾತ ತಡೀಲಾರದೆ ಅವಳು ಮೂಕಿಯಾಗಿದ್ದಳು. ಮಕ್ಕಳು ಚಿಕ್ಕೋರಿರುವಾಗ ಎಷ್ಟು ಚೆನ್ನಾಗಿತ್ತು. ಇಬ್ಬರೂ ಅಮ್ಮನಿಗಾಗಿ ಅದೆಷ್ಟು ಕಿತ್ತಾಡುತ್ತಿದ್ದರು. ನನ್ನಮ್ಮ, ನನ್ನಮ್ಮ ಅಂತ ನಾನು ಅಮ್ಮನ ಪಕ್ಕ ನಾನು ಅಮ್ಮನ ಪಕ್ಕ ಅಂತ,  ಮೊದಲ ತುತ್ತು ನನಗೆ ಅನ್ನುತ್ತಾ ಹೀಗೆ ಅಮ್ಮನಿಗಾಗಿ ಕಿತ್ತಾಡುತ್ತಿದ್ದರು. ಕಾಂಪಿಟೀಷನ್ ನಲ್ಲಿ ಅಮ್ಮನಿಗಾಗಿ ಜಗಳವಾಡುತ್ತಿದ್ದರು. ದೊಡ್ಡೋನಾದ ಮೇಲೆ ಅಮ್ಮನಿಗೆ ಚಿನ್ನದ ಸರ ಮಾಡಿಸ್ತೀನಿ ಅಂತ ಒಬ್ಬ ಅನ್ನುತ್ತಿದ್ದ. ಬಂಗ್ಲೆ ಕಟ್ಟಿಸಿ ಕೈಗೊಂದು ಆಳು ಕಾಲಿಗೊಂದು ಆಳುಗಳನ್ನಿಟ್ಟು ಅಮ್ಮನನ್ನು ರಾಣಿ ತರಹ ನೋಡ್ಕೋತೀನಿ ಅಂತ ಇನ್ನೊಬ್ಬ ಅನ್ನುತ್ತಿದ್ದ. ಅಮ್ಮ ನನಗೆ ಬೇಕು ನನಗೆ ಬೇಕು ಅಂತ ಕಿತ್ತಾಡುತ್ತಿದ್ದ ಅವರು ಈಗ ಬೇಕಾದ್ರೆ ಅಮ್ಮನನ್ನು ನೀನೇ ಇಟ್ಟುಕೋ ಅನ್ನುವ ಸ್ಥಿತಿಗೆ ಬಂದಿದ್ದರು. ಹಳೆಯದನ್ನು ನೆನೆಯುತ್ತಾ ಕಣ್ಣು ಮಂಜಾಗತೊಡಗಿತು.

ಫೇಸ್ ಬುಕ್ ನಲ್ಲಿ ಓಡಾಡುತ್ತಿದ್ದ ಒಂದು ಕತೆ ನೆನಪಿಗೆ ಬರುತ್ತದೆ. ಅಪ್ಪ ಮಗ ಮನೆಗೆ ತಾಗಿ ಇದ್ದ ಪಾರ್ಕ್ನ ಕಲ್ಲು ಬೆಂಚಿನಲ್ಲಿ ಕುಳಿತಿರುತ್ತಾರೆ. ಅಲ್ಲಿಗೆ ಒಂದು ಗುಬ್ಬಚ್ಚಿ ಬರುತ್ತದೆ. ಅಪ್ಪ ಕೇಳುತ್ತಾನೆ ‘ಅದೇನು’ ಅಂತ. ಮಗ ಹೇಳುತ್ತಾನೆ ‘ಗುಬ್ಬಚ್ಚಿ’ ಅಂತ. ಗುಬ್ಬಚ್ಚಿ ಗಿಡದ ಮೇಲೆ ಹೋಗಿ ಕುಳಿತುಕೊಳ್ಳುತ್ತದೆ. ಅಪ್ಪ ಕೇಳುತ್ತಾನೆ ‘ಅದೇನು’. ಮಗ ಹೇಳುತ್ತಾನೆ ‘ಗುಬ್ಬಚ್ಚಿ’. ಗುಬ್ಬಚ್ಚಿ ನೆಲದ ಮೇಲೆ ಓಡಾಡುತ್ತದೆ. ಅಪ್ಪ ಪುನ:ಕೇಳುತ್ತಾನೆ ‘ಅದೇನು’. ಮಗನ ತಾಳ್ಮೆ ತಪ್ಪುತ್ತದೆ. ಗುಬ್ಬಚ್ಚಿ, ಗುಬ್ಬಚ್ಚಿ, ಗುಬ್ಬಚ್ಚಿ ಎಷ್ಟು ಸಲ ಹೇಳೋದು ನಿನಗೆ ಒಂದು ಸಲ ಹೇಳಿದ್ರೆ ಅರ್ಥ ಆಗಲ್ವ ಅಪ್ಪ ನಿಧಾನವಾಗಿ ಮನೆಯ ಒಳಗೆ ಹೋಗಿ ಒಂದು ಡೈರಿ ತೆಗೆದುಕೊಂಡು ಬರುತ್ತಾನೆ. ಅದರಲ್ಲಿ ಹುಡುಕಿ ಒಂದು ಪೇಜನ್ನು ತೋರಿಸಿ ಇದನ್ನು ಗಟ್ಟಿಯಾಗಿ ಓದು ಅನ್ನುತ್ತಾನೆ. ಮಗ ಓದುತ್ತಾನೆ. ‘ಇಂದು ನನ್ನ ಮಗ ಮೂರನೆಯ ವರ್ಷಕ್ಕೆ ಕಾಲಿಟ್ಟ ದಿನ. ಮಗನ ಜೊತೆ ಆಟವಾಡುತ್ತಿದ್ದಾಗ ಅಲ್ಲಿಗೆ ಒಂದು ಗುಬ್ಬಚ್ಚಿ ಬಂತು. ಮಗ ‘ಅದೇನು’ ಅಂತ ಕೇಳಿದ. ನಾನು ‘ಗುಬ್ಬಚ್ಚಿ’ ಅಂದೆ. ಮಗ ಪುನ: ‘ಅದೇನು’ ಅಂತ ಕೇಳಿದ. ನಾನು ಹೇಳಿದೆ. ಅದೇ ರೀತಿ ಮಗ 21 ಸಲ ಕೇಳಿದ. ನಾನು ಬೇಜಾರಿಲ್ಲದೆ ಪ್ರತಿ ಸಲವೂ ಮಗ ಕೇಳುವಾಗ ಅವನನ್ನು ಮುದ್ದಿಸಿ ‘ಗುಬ್ಬಚ್ಚಿ’ ಅಂತ ಉತ್ತರಿಸಿದೆ. ಅವನು ಕೇಳುತ್ತಿದ್ದಷ್ಟೂ ನನಗೆ ಖುಷಿ ಅನ್ನಿಸುತ್ತಿತ್ತು’. ಮಗ ಡೈರಿ ಮುಚ್ಚಿಟ್ಟವನೇ ಅಪ್ಪನನ್ನು ಜೋರಾಗಿ ತಬ್ಬಿಕೊಂಡ.

*****

 

Saturday 22 March 2014

ಹೆತ್ತ ಕರುಳು


ತಕ್ಷಣ ನೋಡಿದಾಗ ಅದೊಂದು ಮರದ ಕೊರಡಿಗೆ ಬಿಳಿ ಬಟ್ಟೆ ಹೊದಿಸಿದಂತೆ ಕಾಣುತ್ತಿತ್ತು.  ಆದರೆ, ಅದೊಂದು ಹೆಣ. ಸುಮಾರು 5 ಅಥವಾ 6 ವಯಸ್ಸಿನ ಮಗುವಿನ ಹೆಣ. ಮುಖ ಮಾತ್ರ ಕಾಣುವಂತೆ ಅದರ ಮೇಲೆ ಬಿಳಿ ಬಟ್ಟೆ ಹೊದಿಸಿದ್ದರು. ಮುಖ ಕಪ್ಪುಗಟ್ಟಿತ್ತು. ಅದು ಯಾವಾಗ ಸತ್ತಿತ್ತೋ ದೇವರೇ ಬಲ್ಲ. ಕಣ್ಣುಗುಡ್ಡೆ ಈಚೆ ಬಂದಿತ್ತು. ಕಣ್ಣು ಮುಚ್ಚಿರಲಿಲ್ಲ. ಸಾವಿನ ಕ್ಷಣ ತುಂಬಾ ಒದ್ದಾಡಿರಬೇಕು. ಕೈಕಾಲುಗಳು ಸೆಟೆದು ನಿಂತಿದ್ದವು. ನೋಡಲು ತುಂಬಾ ಸಂಕಟವಾಗುತ್ತಿತ್ತು. ಎಲ್ಲರ ಕಣ್ಣಲ್ಲೂ ನೀರು. ಮಗುವಿನ ತಾಯಿಗಾಗಿ ಕಾಯುತ್ತಿದ್ದರು. ಅವಳು ತುಂಬು ಗರ್ಭಿಣಿ. ಹೆರಿಗೆಗೆಂದು ತಾಯಿ ಮನೆಗೆ ಹೋಗಿದ್ದಳು. ಅವಳಿಗೆ ಎರಡು ಗಂಡು ಮಕ್ಕಳು. ಒಂದು ಈಗ ಸತ್ತು ಹೋದ ದೊಡ್ಡ ಮಗ. ಇನ್ನೊಬ್ಬ ಮೂರು ವರ್ಷದ ಮಗ. ಈಗ ಮೂರನೇ ಮಗುವಿಗೆ ಗರ್ಭಿಣಿ.

ಹುಟ್ಟುವಾಗ ಮಗು ಚೆನ್ನಾಗಿಯೇ ಇತ್ತು. ಓಡಾಡಿಕೊಂಡಿದ್ದ ಮಗುವಿಗೆ ಒಂದು ವರ್ಷವಾದಾಗ ಒಂದು ದಿನ ವಿಪರೀತ ಜ್ವರ ಬಂದಿತ್ತು. ಡಾಕ್ಟರ್ ಮಗುವಿಗೆ ಇಂಜೆಕ್ಷನ್ ಚುಚ್ಚಿದ್ದರು ಅಷ್ಟೆ. ಅಲ್ಲಿಯವರೆಗೆ ಚೆನ್ನಾಗಿಯೇ ಇದ್ದ ಮಗು ಆಮೇಲೆ ಉಸಿರಾಡುವುದು ಒಂದನ್ನು ಬಿಟ್ಟು ಬೇರೆ ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ. ಅದೊಂದು ಜೀವಂತ ಶವವಾಗಿ ಬಿಟ್ಟಿತ್ತು. ಮಗು ಮೊದಲಿನಂತಾಗಬಹುದು ಎಂದು ಕಂಡ ಕಂಡ ಡಾಕ್ಟರುಗಳಲ್ಲಿ ಹೋಗಿ ಟ್ರೀಟ್ ಮೆಂಟ್ ಕೊಡಿಸಿದರು. ಕಂಡ ಕಂಡ ದೇವಸ್ಥಾನಗಳಿಗೆ ಹೋದರು. ಏನೂ ಪ್ರಯೋಜನವಾಗಲಿಲ್ಲ.

ಮಗುವಿಗೆ ಎರಡು ವರ್ಷವಾಗುತ್ತಿದ್ದಂತೆ ಅವಳು ಪುನ: ಗರ್ಭಿಣಿಯಾಗಿದ್ದಳು. ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದುದರಿಂದ ಮನಸ್ಸಿಲ್ಲದ ಮನಸ್ಸಿನಿಂದ ಮಗುವನ್ನು ಆಶ್ರಮಕ್ಕೆ ಸೇರಿಸಿದರು. ಆ ಸೇವಾ ಸಂಸ್ಥೆಯ ಮುಖ್ಯಸ್ಥೆ ಇಂತಹ ಒಂದು ಮಗುವನ್ನು ಕಳೆದುಕೊಂಡ ದು:ಖದಲ್ಲಿ ಮಗುವಿನ ನೆನಪಾರ್ಥ ಈ ಸಂಸ್ಥೆಯನ್ನು ಪ್ರಾರಂಬಿಸಿದ್ದರು. ಅನುಕೂಲಸ್ಥರಾಗಿದ್ದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ತಿಂಗಳಿಗೆ ಇಷ್ಟು ದುಡ್ಡು ಅಂತ ತೆಗೆದುಕೊಳ್ಳುತ್ತಿದ್ದರು. ತೀರಾ ಬಡವರಿದ್ದಲ್ಲಿ ಉಚಿತವಾಗಿಯೇ ನೋಡಿಕೊಳ್ಳುತ್ತಿದ್ದರು. ಇವರು ಮಗುವನ್ನು ಆ ಸೇವಾ ಸಂಸ್ಥೆಯಲ್ಲಿ ಬಿಟ್ಟು ತಿಂಗಳಿಗೊಮ್ಮೆ ನೋಡಿಕೊಂಡು ಬರುತ್ತಿದ್ದರು. ತಿಂಗಳು ಕಳೆಯುತ್ತಿದ್ದಂತೆ ಇನ್ನೊಂದು ಗಂಡುಮಗುವಿನ ತಾಯಿಯಾದಳು. ಈ ಮಗುವಿನ ಆರೈಕೆಯಲ್ಲಿ ದೊಡ್ಡ ಮಗನ ಕಡೆಗೆ ಗಮನ ಕಡಿಮೆಯಾಗತೊಡಗಿತು. ತಿಂಗಳಿಗೊಮ್ಮೆ ಆಶ್ರಮಕ್ಕೆ ಹೋಗುತ್ತಿದ್ದವರು ಮೂರು ತಿಂಗಳಿಗೊಮ್ಮೆ ಅಥವಾ ನಾಲ್ಕು ತಿಂಗಳಿಗೊಮ್ಮೆ ಹೋಗಲು ಶುರುಮಾಡಿದರು. ಕೊನೆಗೆ ಅದೂ ಕಡಿಮೆಯಾಯಿತು. ದೊಡ್ಡ ಮಗನ ಮೇಲಿದ್ದ ಪ್ರೀತಿ ವಾತ್ಸಲ್ಯ ಎಲ್ಲಾ ಚಿಕ್ಕ ಮಗನ ಕಡೆಗೆ ಹರಿಯತೊಡಗಿತು.

ಈ ಮಧ್ಯೆ ಮೂರನೆ ಮಗುವಿಗೆ ಗರ್ಭಿಣಿಯಾದಳು. ಸರ್ಕಾರಿ ಕೆಲಸದಲ್ಲಿದ್ದುದರಿಂದ ಎರಡು ಜೀವಂತ ಮಕ್ಕಳಿದ್ದಲ್ಲಿ ಮೂರನೆಯ ಮಗುವಿಗೆ ಹೆರಿಗೆ ರಜೆ, ವೈದ್ಯಕೀಯ ಮರುಪಾವತಿ ಯಾವ ಸೌಲಭ್ಯವೂ ಸಿಗೋದಿಲ್ಲ. ಅವಳು ಯೋಚಿಸತೊಡಗಿದಳು. ಆ ಮಗು ಇದ್ದರೂ ಒಂದೆ ಸತ್ತರೂ ಒಂದೇ. ಈಗಾಗಲೇ ಅದು ಜೀವಂತ ಶವ. ಆಶ್ರಮಕ್ಕೆ ಮಕ್ಕಳನ್ನು ನೋಡಲು ಪ್ರತಿದಿನ ಡಾಕ್ಟರ್ ಬರುತ್ತಿದ್ದರು. ಒಂದು ದಿನ ಮಗುವನ್ನು ಎತ್ತಿಕೊಂಡು ಆಶ್ರಮಕ್ಕೆ ಹೋಗಿ ಡಾಕ್ಟರನ್ನು ಭೇಟಿ ಮಾಡಿದಳು. ಆಶ್ರಮದಲ್ಲಿದ್ದ ಮಗನಿಗೆ ದಯಾಮರಣ ನೀಡುವಂತೆ ಕೋರಿದಳು. ಹೊಟ್ಟೆಯಲ್ಲೊಂದು ಮಗು, ಕಂಕುಳಲ್ಲೊಂದು ಮಗು ಡಾಕ್ಟರಿಗೆ ಏನನ್ನಿಸಿತೋ ಯೋಚಿಸಲು ಸ್ವಲ್ಪ ಕಾಲಾವಕಾಶ ಕೇಳಿದರು.

ಮಗು ಸತ್ತು ಹೋಗಿತ್ತು. ನೋಡಲು ಬಂದ ಎಲ್ಲರ ಕಣ್ಣಲ್ಲೂ ನೀರು. ಆದರೆ ಆ ತಾಯಿ ಮಾತ್ರ ಭಾವನೆಯನ್ನು ಕಳೆದುಕೊಂಡಂತಿದ್ದಳು. ಯಾರೋ ಅನ್ನುತ್ತಿದ್ದರು ‘’ಅತ್ತು ಬಿಡು ಮಗೂ, ಗರ್ಭಿಣಿ ಹೆಂಗಸು ಮನಸ್ಸಲ್ಲೇ ಅದುಮಿಟ್ಟುಕೊಂಡರೆ ಕಷ್ಟ’’ ಅಂತ. ಏನು ಮಾಡಿದರೂ ಕಣ್ಣಲ್ಲಿ ಒಂದು ತೊಟ್ಟೂ ನೀರು ಬರಲಿಲ್ಲ. ಕಾರಣ ಅವಳಿಗೆ ಮಾತ್ರ ಗೊತ್ತಿತ್ತು. ಸ್ವಲ್ಪ ದಿನಗಳ ತರುವಾಯ ಮೂರನೇ  ಮಗುವಿನ ತಾಯಿಯಾದಳು. ಅಲ್ಲಲ್ಲ ಎರಡನೇ ಮಗು.
*****

Sunday 2 February 2014

ಅಪ್ಪುಗೆ


ಕೆಲವು ಧರ್ಮೀಯರಲ್ಲಿ ಆತ್ಮೀಯರು, ಗೆಳೆಯರು, ಸಂಬಂಧಿಕರು ಎದುರಾದಾಗ ಅವರನ್ನು ಅಪ್ಪಿಕೊಳ್ಳುವ ಮೂಲಕ ಎದುರುಗೊಳ್ಳುತ್ತಾರೆ. ವಿದಾಯ ಸಂದರ್ಭಗಳಲ್ಲೂ ಅಪ್ಪಿಕೊಂಡು ಬೀಳ್ಕೊಡುತ್ತಾರೆ. ಹಬ್ಬ ಹರಿದಿನಗಳಲ್ಲೂ ಒಬ್ಬರಿಗೊಬ್ಬರು ಅಪ್ಪಿಕೊಂಡು ಶುಭಾಷಯ ವಿನಿಯೋಗಿಸಿಕೊಳ್ಳುತ್ತಾರೆ. ಆದರೆ, ಹಿಂದೂ ಸಂಪ್ರದಾಯದಲ್ಲಿ ಇದು ಅಪರೂಪ. ಕೈಗಳನ್ನು ಜೋಡಿಸಿ ನಮಸ್ಕರಿಸುವ ಅಥವಾ ಬಗ್ಗಿ ಕಾಲಿಗೆ ನಮಸ್ಕರಿಸುವ ಮೂಲಕ ಗೌರವ ತೋರಿಸಲಾಗುತ್ತದೆ. ಅಪ್ಪಿಕೊಂಡು ಭಾವನೆಗಳನ್ನು ವ್ಯಕ್ತಪಡಿಸೋದು ತಪ್ಪೇನಲ್ಲ. ಕೆಲವೊಮ್ಮೆ ಮಾತಿನಲ್ಲಿ ವ್ಯಕ್ತಪಡಿಸಲಾಗದ ಭಾವನೆಗಳು ಅಪ್ಪುಗೆ ಮೂಲಕ ಹೊರಹೊಮ್ಮುತ್ತವೆ.

ನನ್ನ ಮಗನ ನಾಮಕರಣಕ್ಕೆಂದು ಅಮ್ಮ ಊರಿನಿಂದ ಬಂದಿದ್ದರು. ಅವರ ಆರೋಗ್ಯ ಹದಗೆಟ್ಟಿತ್ತು. ಆದರೂ ಮೊಮ್ಮಗನನ್ನು ನೋಡಲೇ ಬೇಕು ಎಂದು ಅಣ್ಣನನ್ನು ಜೊತೆಗೂಡಿಸಿಕೊಂಡು ಬೆಂಗಳೂರಿಗೆ ಬಂದಿದ್ದರು. ನಾಮಕರಣ ಮುಗಿಸಿ ವಾಪಸ್ಸು ಊರಿಗೆ ಹೊರಟು ನಿಂತಾಗ ನನ್ನನ್ನು ಜೋರಾಗಿ ಅಪ್ಪಿಕೊಂಡರು. ಎಷ್ಟು ಹೊತ್ತಿನವರೆಗೂ ಅಪ್ಪುಗೆಯಿಂದ ಬಿಡಿಸಿಕೊಳ್ಳಬೇಕು ಅಂತ ಇಬ್ಬರಿಗೂ ಅನಿಸಲೇ ಇಲ್ಲ. ಇಬ್ಬರ ಕಣ್ಣಲ್ಲೂ ನೀರು. ಹೇಳಿಕೊಳ್ಳಲಾಗದ ಅದೆಷ್ಟು ಭಾವನೆಗಳು ಆ ಅಪ್ಪುಗೆಯಲ್ಲಿದ್ದವು. ಆದರೆ ಅದೇ ಕೊನೆಯ ಅಪ್ಪುಗೆಯಾಗಬಹುದು ಅಂತ ನಾನು ಅಂದುಕೊಂಡಿರಲಿಲ್ಲ. ಬಹುಷ: ಅಮ್ಮನಿಗೆ ಮೊದಲೇ ಸೂಚನೆ ಇದ್ದಿರಬಹುದಾ. ಮಗನಿಗೆ 5 ತಿಂಗಳಾಗುವಾಗ ಅಮ್ಮ ದೈವಾಧೀನರಾಗಿದ್ದರು. ಆವಾಗ ಮೊಬೈಲ್ ಇರಲಿಲ್ಲ. ಮನೆಯಲ್ಲಿ ದೂರವಾಣಿ ಕೂಡಾ ಇರಲಿಲ್ಲ. ಯಜಮಾನರ ಆಫೀಸಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಆಗಲೇ ತಡವಾಗಿ ಬಿಟ್ಟಿತ್ತು. ನಾವು ಹೋಗುವಾಗ ಎಲ್ಲಾ ಮುಗಿದಿತ್ತು. ಕೊನೆಗೊಮ್ಮೆ ಅಮ್ಮನ ಮುಖ ನೋಡುವ ಭಾಗ್ಯ ಕೂಡಾ ನನಗೆ ಸಿಗಲಿಲ್ಲ. ಆದರೆ, ಅವರ ಆ ಕೊನೆಯ ಅಪ್ಪುಗೆ ಮಾತ್ರ ನಿಶ್ಚಲವಾಗಿ ನನ್ನ ಮನಸ್ಸಲ್ಲಿ ಬೇರೂರಿದೆ.

ಮಗಳ ಮದುವೆಯ ಸಂದರ್ಭ. ಹೆಣ್ಣಿಳಿಸಿ ಕೊಡುವ ಶಾಸ್ತ್ರ ಕೂಡಾ ಮುಗಿದು ಕೊನೆಯಲ್ಲಿ ಮಗಳು ಹೋಗಿ ಬರುತ್ತೇನೆ ಅಮ್ಮಾ ಅನ್ನುತ್ತಾ ಕಾಲಿಗೆ ನಮಸ್ಕಾರ ಮಾಡಲು ಬಗ್ಗಿದವಳು ಎಷ್ಟು ಹೊತ್ತಾದರೂ ಮೇಲೇ ಏಳಲೇ ಇಲ್ಲ. ಅವಳು ತನ್ನ ಕಣ್ಣೀರಿನಿಂದ ನನ್ನ ಪಾದಗಳನ್ನು ತೋಯಿಸುತ್ತಿದ್ದಳು. ಕೊನೆಗೆ ನಾನೇ ಅವಳ ಎರಡೂ ತೋಳುಗಳನ್ನು ಮೇಲೆತ್ತಿ ತಬ್ಬಿಕೊಂಡೆ. ಆ ಅಪ್ಪುಗೆಯಲ್ಲಿ ಅಡಗಿದ್ದ ಭಾವನೆಗಳನ್ನು ವಿವರಿಸೋದು ಅಸಾಧ್ಯ. ಅವಳ ಕಣ್ಣೊರಸಿ ಬೀಳ್ಕೊಟ್ಟಿದ್ದೆ. ಆದರೆ ಆ ಅಪ್ಪುಗೆಯನ್ನು ಮರೆಯೋದು ಸಾಧ್ಯಾನೇ ಇಲ್ಲ.

ಅಮ್ಮಾ ತಲೆಗೆ ಸ್ನಾನ ಮಾಡಲಾ ಮೈಗೆ ಮಾಡಲಾ ಅಂತ ಈಗಲೂ ಕೇಳುತ್ತಿದ್ದ ಆಳೆತ್ತರ ಬೆಳೆದು ನಿಂತಿದ್ದ ಮಗ ಅಂದು ಕೆಲಸದ ನಿಮಿತ್ತ ದುಬೈಗೆ ಹೊರಟು ನಿಂತಿದ್ದ. ಎಲ್ಲಕ್ಕೂ ಅಪ್ಪ ಅಮ್ಮನನ್ನು ಅವಲಂಬಿಸುತ್ತಿದ್ದ ಇವನು ಅಲ್ಲಿ ಹೇಗೆ ನಿಬಾಯಿಸುತ್ತಾನೆ ಅನ್ನುವ ಚಿಂತೆ ಅಮ್ಮನಿಗೆ. ಅವನು ಅಮ್ಮನನ್ನು ಬಿಟ್ಟು ಯಾವತ್ತೂ ಇರಲಿಲ್ಲ. ಒಳಗೊಳಗೆ ದು:ಖ ಉಮ್ಮಳಿಸಿ ಬರುತ್ತಿತ್ತು. ಓಡಿ ಬಂದವನೇ ಅಮ್ಮನನ್ನು ಅಪ್ಪಿಕೊಂಡುಬಿಟ್ಟ. ಆ ಅಪ್ಪುಗೆಯಲ್ಲಿ ಹೇಳಿಕೊಳ್ಳಲಾರದ ಅದೆಷ್ಟು ಭಾವನೆಗಳು, ಅಗಲಿಕೆಯ ನೋವು ತುಂಬಿತ್ತು. ಅದರ ನಂತರ ಅನೇಕ ಸಲ ಬಂದು ಹೋಗಿದ್ದಾನೆ. ಆದರೆ, ಮೊದಲ ಸಲ ದುಬೈಗೆ ಹೊರಟು ನಿಂತಾಗಿನ ಆ ಅಪ್ಪುಗೆ ಮರೆಯಲಸಾದ್ಯ.

ಅಂದು ಅವಳ ಪ್ರಾಣ ಸ್ನೇಹಿತೆ ನಿವೃತ್ತಿ ಹೊಂದುವವಳಿದ್ದಳು. ಅನಾರೋಗ್ಯದ ನಿಮಿತ್ತ ಅವಳು ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಳು. ಬೀಳ್ಕೊಡುಗೆ ಸಮಾರಂಭ ಮುಗಿದ ನಂತರ ಅವಳು ಸ್ನೇಹಿತೆಯನ್ನು ಬಿಗಿಯಾಗಿ ಅಪ್ಪಿಕೊಂಡಳು. ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಆ ಆಲಿಂಗನದಲ್ಲಿ ಅವರ ಅಷ್ಟು ದಿನಗಳ ಸ್ನೇಹ, ಒಡನಾಟ, ಅಗಲಿಕೆಯ ನೋವು ಎಲ್ಲಾ ತುಂಬಿತ್ತು.

ಎಷ್ಟೋ ಸಮಯದ ನಂತರ ಅಕ್ಕ ತಂಗಿಯ ಮನೆಗೆ ಬಂದಿದ್ದಳು. ದೂರದ ಮುಂಬೈನಲ್ಲಿದ್ದುದರಿಂದ ಆಗಾಗ್ಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ತಂಗಿಯ ಮಗಳ ಸೀಮಂತಕ್ಕೆಂದು ಬಂದವಳು ಮನೆ ಮಠ ಊರು ಎಲ್ಲಾ ಮರೆತು ಸಂತೋಷವಾಗಿ ಸ್ವಲ್ಪ ದಿನ ತಂಗಿಯ ಮನೆಯಲ್ಲಿ ತಂಗಿದ್ದಳು. ಹೊರಟು ನಿಂತಾಗ ಕಣ್ಣಲ್ಲಿ ನೀರು. ಭಾವುಕಳಾಗಿ ಅವಳಿಗೆ ಅರಿವಿಲ್ಲದೇ ತಂಗಿಯನ್ನು ಅಪ್ಪಿಕೊಂಡಿದ್ದಳು. ಎಷ್ಟು ಹೊತ್ತಾದರೂ ಆ ಬೆಸುಗೆ ಬೇರ್ಪಡಲೇ ಇಲ್ಲ. ಆ ಅಪ್ಪುಗೆಯಲ್ಲಿನ ಭಾವನೆಗಳನ್ನು ಪದಗಳಿಂದ ವರ್ಣಿಸೋದು ಅಸಾಧ್ಯ.

ಆತ್ಮೀಯರೊಬ್ಬರನ್ನು ಚಿಕಿತ್ಸೆಗೆಂದು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಅವರನ್ನು ನೋಡಲೆಂದು ಆಸ್ಪತ್ರೆಗೆ ಹೋಗಿದ್ದೆ. ಅವರು ಎದ್ದು ಕುಳಿತವರೇ ನನ್ನನ್ನು ಬಿಗಿಯಾಗಿ ತಬ್ಬಿಕೊಂಡು ಅಳತೊಡಗಿದರು. ನಾನು ತುಂಬಾ ಚಿಕ್ಕವಳು. ಆದರೂ ನನ್ನಲ್ಲಿ ಅವರು ಈ ರೀತಿ ನಡೆದುಕೊಳ್ಳಬೇಕಾದರೆ  ಅದು ಅವರು ನನ್ನಲ್ಲಿಟ್ಟಿರುವ ಆತ್ಮೀಯತೆ ಹಾಗೂ ನಂಬಿಕೆ. ಎಲ್ಲರ ಜೊತೆ ಈ ರೀತಿ ನಡೆದುಕೊಳ್ಳೋದು ಸಾಧ್ಯವಿಲ್ಲ. ಏನೂ ಆಗೋದಿಲ್ಲ. ಬೇಗ ಹುಷಾರಾಗಿ ಊರಿಗೆ ಹೋಗುತ್ತೀರಾ ಅಂತ ಸಮಾಧಾನದ ಮಾತಾಡಿದೆ. ಅಂದೇ ಅವರಿಗೆ ಆಪರೇಷನ್ ಇತ್ತು. ಆಪರೇಷನ್ ಮಾಡಿದ್ದಾಗ್ಯೂ ಅವರು ಉಳಿಯಲಿಲ್ಲ. ಅವರ ಆ ಅಪ್ಪುಗೆ ಪದೇ ಪದೇ ನೆನಪಾಗುತ್ತದೆ.

ಅದೊಂದು ಸುಂದರ ಚಿಕ್ಕ ಸಂಸಾರ. ಮಗಳಿಗೆ ಮದುವೆಯಾಗಿತ್ತು. ಮಗನಿಗೂ ಒಳ್ಳೆಯ ಕಡೆಯ ಸಂಬಂಧ ಬಂದುದರಿಂದ ಅವನಿಗೂ ಮದುವೆ ಮಾಡಿ ಮುಗಿಸಿದರು. ಅವರ ಸುಂದರ ಸಂಸಾರದ ಮೇಲೆ ದುಷ್ಟಶಕ್ತಿಯ ದೃಷ್ಟಿ ಬಿದ್ದಿರಬೇಕು. ಮಗನ ಮದುವೆಯಾಗಿ 6 ತಿಂಗಳಿಗೆ ಮನೆಯ ಯಜಮಾನನಿಗೆ ಹಠಾತ್ ಆಗಿ ಹಾರ್ಟ್ ಅಟ್ಯಾಕ್ ಆಗಿ ಸಾವು ಬಂದೊದಗಿತ್ತು. ಇದರಿಂದ ಆಘಾತಗೊಂದ ಅಣ್ಣ ತಂಗಿ ಇಬ್ಬರೂ ಎಚ್ಚರ ತಪ್ಪಿದವರಂತೆ ಒಬ್ಬರಿಗೊಬ್ಬರು ಅಪ್ಪಿಕೊಂಡು ಅಳುತ್ತಿದ್ದರು. ಆ ಅಪ್ಪುಗೆಯಲ್ಲಿನ ಭಾವನೆಗಳು ವರ್ಣನಾತೀತ.

ನಿಮಗೆ ತುಂಬಾ ದು:ಖವಾದಾಗಲಾಗಲೀ, ತುಂಬಾ ಸಂತೋಷವಾದಾಗಲಾಗಲೀ ಅದಕ್ಕೆ ಕಾರಣರಾದವರೊಂದಿಗೆ ಅಥವಾ ಹೃದಯಕ್ಕೆ ತುಂಬಾ ಹತ್ತಿರವಾದವರೊಂದಿಗೆ ಒಂದು ಅಪ್ಪುಗೆ ಮೂಲಕ ಅದನ್ನು ಹಂಚಿಕೊಳ್ಳಿ. ಒಂದು ಕ್ಷಣ ಇಹದ ಇರವನ್ನು ಮರೆಯೋದಂತೂ ನಿಜ..
*****

Thursday 16 January 2014

ಅತ್ತೆಗೊಂದು ಕಾಲ...


ಅವಳು ಇಂದು ಸ್ವತಂತ್ರವಾಗಿ ಅತ್ತ ಇತ್ತ ಅಲುಗಾಡುವ ಸ್ಥಿತಿಯಲ್ಲಿ ಕೂಡಾ ಇರಲಿಲ್ಲ. ಅವಳಿಗೆ ಲಕ್ವ ಹೊಡೆದು ಮಲಗಿದ್ದಲ್ಲಿಯೇ ಇರುವಂತಾಗಿತ್ತು. ಒಂದು ಲೋಟ ನೀರು ಬೇಕಾದರೂ ಬೇರೆಯವರನ್ನು ಆಶ್ರಯಿಸಬೇಕಿತ್ತು.  ನಿಂತು ಹೋಗಿದ್ದ ಫ್ಯಾನ್ ನ್ನು ಕಾಂತಿಹೀನ ಕಣ್ಣನಿಂದ ನೋಡುತ್ತಾ ಅವಳು ಗತ ಜೀವನವನ್ನು ನೆನಪಿಸತೊಡಗಿದಳು. ಅದೊಂದು ಬಿಟ್ರೆ ಬೇರೆ ಏನೂ ಮಾಡುವ ಸ್ಥಿತಿಯಲ್ಲಿ ಅವಳಿರಲಿಲ್ಲ.

ಮಗ ತಾನು ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಿ ಮನೆಗೆ ಕರಕೊಂಡು ಬಂದಿದ್ದ. ಪರಜಾತಿ ಹುಡುಗಿ ಎಂದು ಸೊಸೆಯನ್ನು ಅದೆಷ್ಟು ಗೋಳು ಹೊಯ್ದುಕೊಂಡಿದ್ದಳು. ಅವಳು ಏನು ಮಾಡಿದರೂ ತಪ್ಪು. ಮೊಸರಲ್ಲೂ ಕಲ್ಲು ಹುಡುಕುತ್ತಿದ್ದಳು. ಕೊನೆಗೆ ಮಗ ಸೊಸೆ ಜೊತೆಯಲ್ಲಿದ್ದರೆ ಸೊಸೆ ಮಗನ ಮನಸ್ಸು ಕೆಡಿಸಿ ತನ್ನನ್ನು ಮೂಲೆಗುಂಪು ಮಾಡಬಹುದು ಅಂತ ಅವರಿಬ್ಬರನ್ನು ಜೊತೆಯಲ್ಲಿರಲು ಸಹಾ ಬಿಡುತ್ತಿರಲಿಲ್ಲ. ಮಗ ರೂಮಿಗೆ ಮಲಗಲು ಹೊರಟ ತಕ್ಷಣ ಮಗಾ, ತುಂಬಾ ತಲೆ ನೋಯ್ತಾ ಇದೆ ಅಂತಲೋ ಹೊಟ್ಟೆ ನೋವು ಅಂತಲೋ ಏನಾದ್ರೂ ಒಂದು ನೆಪ ತೆಗೆದು ಅವನನ್ನು ತನ್ನ ಹತ್ತಿರವೇ ಇರಿಸಿಕೊಳ್ಳುತ್ತಿದ್ದಳು. ಅವನು ಅಮ್ಮನಿಗೆ ಇಷ್ಟವಿಲ್ಲದ ಸೊಸೆಯನ್ನು ತಂದು ಅಮ್ಮನ ಮನಸ್ಸು ನೋಯಿಸಿದ್ದೇನೆ ಇನ್ನೆಂದೂ ಅಮ್ಮನ ಮನಸ್ಸಿಗೆ ನೋವುಂಟು ಮಾಡಬಾರದು ಅಂತ ಅಮ್ಮನ ಮಾತನ್ನು ಎಂದೂ ಮೀರುತ್ತಿರಲಿಲ್ಲ. ಸೊಸೆ ಮಾತ್ರ ಈ ಸಂಪತ್ತಿಗೆ ಮದುವೆ ಯಾಕೆ ಮಾಡ್ಕೋಬೇಕಾಗಿತ್ತು ಅಂತ ಒಳಗೊಳಗೆ ಕೊರಗುತ್ತಿದ್ದಳು. ಸೊಸೆ ಕೊರಗೋದನ್ನು ನೋಡಿ ಅವಳು ಖುಷಿಪಡುತ್ತಿದ್ದಳು.

ಒಂದು ದಿನ ಅತ್ತೆ ಸೊಸೆಗೆ ಜಗಳ ಹತ್ತಿಕೊಳ್ತು. ಸೊಸೆಗೂ ರೋಸಿ ಹೋಗಿತ್ತು. ಮಾತಿಗೆ ಮಾತು ಕೊಡಲಾರಂಭಿಸಿದಳು. ಮಗ ಬಂದವನೇ, ಅಮ್ಮನಿಗೇ ಎದುರು ವಾದಿಸುತ್ತೀಯಾ ಅಂತ ಕೆನ್ನೆಗೆ ರಪ್ ಅಂತ ಬಾರಿಸಿದ. ಅವಳು ಇದನ್ನ ನಿರೀಕ್ಷಿಸಿರಲಿಲ್ಲ. ರೂಮಿಗೆ ಹೋದವಳೇ ಬಾಗಿಲು ಹಾಕಿಕೊಂಡು ಫ್ಯಾನಿಗೆ ನೇಣು ಹಾಕಿಕೊಂಡಳು.

ಸೊಸೆ ಸತ್ತು ವರ್ಷವಾಗುವುದರೊಳಗೆ ಮಗನಿಗೆ ತನ್ನ ಸಂಬಂಧಿಕರ ಹುಡುಗಿಯೊಬ್ಬಳನ್ನು ತಂದು ಮನೆ ತುಂಬಿಸಿಕೊಂಡಳು. ಹೊಸ ಸೊಸೆ ಮೊದಮೊದಲು ಅತ್ತೆಯನ್ನು ಚೆನ್ನಾಗಿಯೇ ನೋಡಿಕೊಂಡಳು. ಯಾವಾಗ ಅತ್ತೆಗೆ ಲಕ್ವ ಹೊಡೆದು ಮಲಗಿದ್ದಲ್ಲಿಯೇ ಆದಳು ಅಂದಿನಿಂದ ಅವಳ ವರಸೆ ಬದಲಾಗತೊಡಗಿತು. ಎಂತೆಂತವರೋ ಸಾಯ್ತಾರೆ ಈ ಹಾಳು ಮುದುಕಿಗೆ ಮಾತ್ರ ಸಾವು ಬರಲ್ಲ. ನನಗೆ ಯಾವ ಕರ್ಮ ಇದರ ಹೇಲು ಉಚ್ಚೆ ಬಾಚೋದು. ಯಾವಾಗ ಸಾಯುತ್ತೋ ಇದು ಅಂತ ಅವಳಿಗೆ ಕೇಳಿಸುವಂತೆ ವಟಗುಟ್ಟುತ್ತಿದ್ದಳು. ಹೇಲು ಉಚ್ಚೆ ಬಾಚಬೇಕಾಗುತ್ತದೆಂದು ಹೊಟ್ಟೆಗೂ ಕೊಡುತ್ತಿರಲಿಲ್ಲ. ಅವಳು ಹಸಿವೆಯಿಂದ ಒದ್ದಾಡುತ್ತಿದ್ದಳು.

ಅವಳು ಮೊದಲ ಸೊಸೆಯನ್ನು ನೆನಪಿಸಿಕೊಳ್ಳುತ್ತಾ, ನಿನಗೆ ಕೊಡಬಾರದ ಕಷ್ಟ ಕೊಟ್ಟೆ ಕಣೆ. ದೇವರು ಸರಿಯಾದ ಶಿಕ್ಷೆ ಕೊಟ್ಟ. ನೀನೇ ಪುಣ್ಯವಂತೆ. ಯಾಕೇಂದ್ರೆ ಕಷ್ಟವನ್ನು ಸಹಿಸಲಾಗದೆ ನೇಣು ಹಾಕಿಕೊಳ್ಳುವ ಸ್ವಾತಂತ್ಯ್ರನಾದ್ರೂ ನಿನಗಿತ್ತು. ನನ್ನ ಅವಸ್ಥೆ ನೋಡು ಸಾಯೋಣಾ ಅಂದ್ರೆ ನೇಣು ಹಾಕಿಕೊಳ್ಳಲೂ ಆಗ್ತಾ ಇಲ್ಲ. ಹೊಟ್ಟೇಗೂ ಇಲ್ಲದೆ ದಿನಾ ಸಾಯುತ್ತಿದ್ದೇನೆ ಕಣೆ. ನನ್ನಿಂದ ತಪ್ಪಾಯ್ತು. ನನ್ನನ್ನೂ ನಿನ್ನ ಹತ್ತಿರ ಕರೆಸ್ಕೋ. ಈ ನರಕದಿಂದ ನನ್ನನ್ನು ಪಾರು ಮಾಡು ಪ್ಲೀಸ್.
*****

Saturday 21 December 2013

ಕೃಷ್ಣ ಕೃಷ್ಣ


ಅದೊಂದು ಆಶ್ರಮ. ಅಲ್ಲಿ ಗಂಡಸರು ಹೆಂಗಸರು, ಹದಿಹರೆಯದವರು ಮಧ್ಯ ವಯಸ್ಸಿನವರು ವಯಸ್ಸಾದವರು ಹೀಗೆ ಎಲ್ಲ ಜಾಯಮಾನದವರೂ ಇದ್ದರು. ಗಂಡಸರು ಎದುರಾದಲ್ಲಿ ‘ಕೃಷ್ಣ ಕೃಷ್ಣ’ ಅನ್ನುತ್ತಿದ್ದರು. ಹೆಂಗಸರಾದಲ್ಲಿ ‘ರಾಧೆ ರಾಧೆ’ ಅನ್ನುತ್ತಿದ್ದರು. ಹೆಸರು ಹಿಡಿದು ಯಾರೂ ಕೂಗುತ್ತಿರಲಿಲ್ಲ. ಕಡ್ಡಾಯವೆಂಬಂತೆ ಎಲ್ಲರ ಕೈಯಲ್ಲೂ ಜಪಮಾಲೆ ಇದ್ದೇ ಇರುತ್ತಿತ್ತು.

ಅಪ್ಪ ಅಮ್ಮನಿಗೆ ಅವಳು ಒಬ್ಬಳೇ ಮಗಳು. ಅತಿ ಮುದ್ದಿನಿಂದ ಸಾಕಿದ್ದರು. ಅವಳಿಗೆ ಚಿಕ್ಕಂದಿನಿಂದಲೇ ದೇವರ ಬಗ್ಗೆ ಅತೀ ಆಸಕ್ತಿ.  ದಿನಗಳೆದಂತೆ ಅದು ಜಾಸ್ತಿಯಾಗತೊಡಗಿತು. ಊಟ ತಿಂಡಿ ಬಿಟ್ಟು ಉಪವಾಸ ಮಾಡುತ್ತಿದ್ದಳು. ಇಡೀ ದಿನ ನಿರಾಹಾರ ಇರುತ್ತಿದ್ದಳು. ದೇವಸ್ಥಾನಕ್ಕೆ ತಪ್ಪದೆ ಹೋಗುತ್ತಿದ್ದಳು. ಆಧ್ಯಾತ್ಮದ ಬಗ್ಗೆ ಎಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಹಾಜರಿರುತ್ತಿದ್ದಳು. ಅವಳು ಆಶ್ರಮದ ಸ್ವಾಮೀಜಿಯವರಿಂದ ಪ್ರೇರೇಪಿತಳಾಗಿದ್ದಳು. ಸ್ವಾಮೀಜಿಯವರ ಒಂದು ಪ್ರವಚನವನ್ನೂ ಮಿಸ್ ಮಾಡುತ್ತಿರಲಿಲ್ಲ. ದೇವರಿಗೆ ನೈವೇದ್ಯ ಮಾಡದೆ ತಾನು ತಿನ್ನುತ್ತಿರಲಿಲ್ಲ. ದೇವರಿಗೆ ನೈವೇದ್ಯ ಮಾಡದೆ ತಿಂದಲ್ಲಿ ಅದು ಮಣ್ಣು ತಿಂದ ಹಾಗೆ ಅನ್ನುತ್ತಿದ್ದಳು. ಅವಳಿಗೆ ಬೇಜಾರಾಗಬಾರದೆಂದು ಏನೇ ಅಡುಗೆ ಮಾಡಿದರೂ ಮೊದಲು ಸ್ವಲ್ಪ ದೇವರಿಗೆ ಎತ್ತಿಟ್ಟು ಆಮೇಲೆ ಮನೆಮಂದಿ ಎಲ್ಲಾ ತಿನ್ನುತ್ತಿದ್ದೆವು.

ಮನೆಯಲ್ಲಿ ಇದ್ದರೆ ಶ್ರದ್ಧೆ ಭಕ್ತಿಯಿಂದ ದೇವರ ಧ್ಯಾನ ಮಾಡಲಾಗುತ್ತಿಲ್ಲ. ಆಶ್ರಮದಲ್ಲಿಯೇ ಇದ್ದರೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ 24 ಗಂಟೆಯೂ ಭಗವಂತನ ಸೇವೆ ಮಾಡಬಹುದು ಎಂದು ನಿರ್ಧರಿಸಿ ಒಂದು ದಿನ ಅಪ್ಪ ಅಮ್ಮ ಎಷ್ಟು ಹೇಳಿದರೂ ಕೇಳದೆ ಆಶ್ರಮದಲ್ಲಿರಲು ನಿರ್ಧರಿಸಿ ಹೋಗಿಯೇ ಬಿಟ್ಟಳು. ಮನೆಯಲ್ಲಿಯೇ ಪೂಜೆ ಮಾಡಲು ನಿನಗೆ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತೇವೆ  ಎಂದು ಎಷ್ಟು ಗೋಗರೆದರೂ ಕೇಳಲಿಲ್ಲ. ಅಪ್ಪ ಅಮ್ಮ ಆಶ್ರಮಕ್ಕೆ ತೆರಳಿ ಸ್ವಾಮೀಜಿಯವರ ಕಾಲು ಹಿಡಿದು ಮಗಳನ್ನು ವಾಪಸ್ಸು ಮನೆಗೆ ಬರುವಂತೆ ಮಾಡಿ ಎಂದು ಕಣ್ಣೀರಿಟ್ಟರು. ‘’ಕೃಷ್ಣ ಕೃಷ್ಣ, ಎಲ್ಲಾ ಅವನಿಚ್ಛೆ. ಅವನ ಆಣತಿಯಂತೆ ನಾವು ನಡೆಯಲೇ ಬೇಕು. ನಾನೂ ಬುದ್ಧಿ ಹೇಳುತ್ತೇನೆ. ಆದರೆ ಕೇಳುವ ಸ್ಥಿತಿಯಲ್ಲಿ ಈಗ ಅವಳಿಲ್ಲ. ಅವನಿಚ್ಛೆ ಇದ್ದಲ್ಲಿ ಸ್ವಲ್ಪ ಸಮಯದ ನಂತರ ಅವಳೇ ಬರುತ್ತಾಳೆ’’ ಅಂತ ಹೇಳಿ ಕಳುಹಿಸಿಬಿಟ್ಟರು.

ಅಂದು ಅವಳ ಮದುವೆ. ಅವನು ಆಶ್ರಮದಲ್ಲಿಯೇ ಇರುವ ಇನ್ನೊಬ್ಬ ಭಕ್ತ. ಅವಳನ್ನು ಮದುವೆಯಾಗುವುದಾಗಿ ಸ್ವಾಮೀಜಿಯವರಲ್ಲಿ ತನ್ನ ಆಸೆ ವ್ಯಕ್ತಪಡಿಸಿದ್ದ. ಅವರಿಗೂ ಸರಿ ಅನ್ನಿಸಿತ್ತು. ಅವಳಿಗೆ ತಿಳಿ ಹೇಳಿ ಒಪ್ಪಿಸಿದ್ದರು. ಅವನಿಗೆ ಹಿಂದು ಮುಂದು ಯಾರೂ ಇರಲಿಲ್ಲ. ಸ್ವಾಮೀಜಿ ಅವಳ ಅಪ್ಪ ಅಮ್ಮನನ್ನು ಕರೆಸಿ ಎಲ್ಲಾ ವಿಷಯವನ್ನು ತಿಳಿಸಿದರು. ಅವರಿಗೂ ಬೇರೆ ಆಯ್ಕೆ ಇರಲಿಲ್ಲ. ಸಧ್ಯ ಮದುವೆ ಮಾಡಿಕೊಳ್ಳಲಾದರೂ ಒಪ್ಪಿದಳಲ್ಲ ಎಂದು ಅವರೂ ನಕಾರವೆತ್ತಲಿಲ್ಲ. ಅವನಿಗೂ ಅವಳಿಗೂ ಆಶ್ರಮದಲ್ಲಿ ಹಾರ ಬದಲಾಯಿಸಲಾಯಿತು. ಈ ರೀತಿ ಮದುವೆಯಾದ ದಂಪತಿಗಳಿಗಾಗಿ ಆಶ್ರಮದಲ್ಲಿ ಚಿಕ್ಕ ಚಿಕ್ಕ ಕುಟೀರಗಳಿದ್ದವು. ಸ್ವಾಮೀಜಿ ಇವರಿಗೂ ಒಂದು ಕುಟೀರದಲ್ಲಿ ಇರಲು ವ್ಯವಸ್ಥೆ ಮಾಡಿದರು.

ಮಧ್ಯಾಹ್ನದ ಪೂಜೆಗೆಂದು ಹೊರಟವಳು ಯಾಕೋ ತಲೆ ತಿರುಗಿದಂತಾಗಲು ಮುಂದಕ್ಕೆ ಹೋಗಲಾರದೆ ಅವಳು ಕುಟೀರಕ್ಕೆ ವಾಪಸ್ಸಾದಳು. ಕುಟೀರದ ಒಳಗೆ ಪ್ರವೇಶಿಸುತ್ತಿದ್ದಂತೆ ಅವಳು ಕಂಡ ದೃಶ್ಯ ಅದನ್ನು ವಿವರಿಸೋದು ಅಸಾಧ್ಯ. ಅದೊಂದು ಊಹಾತೀತ ಅಸಹನೀಯ ಅಸಹ್ಯ ದೃಶ್ಯ. ಆ ಹುಡುಗಿ ಕೂಡಾ ಆಶ್ರಮದ ಒಬ್ಬ ಭಕ್ತೆ. ಅವನೊಂದಿಗೆ ಆ ಹುಡುಗಿ ಅದೆಂಥಾ ಸ್ಥಿತಿಯಲ್ಲಿದ್ದಳೆಂದರೆ ಅದನ್ನು ಕಂಡ ಅವಳು ಮೂರ್ಛೆ ಹೋಗದಿರೋದು ಹೆಚ್ಚು. ಅವಳು ಈ ದೃಶ್ಯ ನೋಡಲಾರದೆ ತಿರುಗಿ ನಿಂತುಬಿಟ್ಟಳು. ಆ ಹುಡುಗಿ ಅವಸರವಸರವಾಗಿ ಸೀರೆ ಸುತ್ತಿಕೊಂಡು ಹೊರಗೋಡಿದಳು. ಇವಳು ಮಾತಾಡದೆ ತನ್ನ ಬಟ್ಟೆಬರೆಗಳನ್ನು ಬ್ಯಾಗ್ ನಲ್ಲಿ ತುಂಬಲಾರಂಭಿಸಿದಳು. ಅವನು ಹೇಳುತ್ತಲಿದ್ದ ‘’ನಾನವಳಲ್ಲಿ ರಾಧೆಯನ್ನು ಕಂಡೆ. ಇದರಲ್ಲಿ ನನ್ನ ತಪ್ಪು ಏನೂ ಇಲ್ಲ. ನೀನೂ ರಾಧೆ ಅವಳೂ ರಾಧೆ ಇಬ್ಬರಲ್ಲೂ ನಾನು ರಾಧೆಯನ್ನ ಕಂಡೆ’’. ನಾಳೆ ದಿನ ಇನ್ನೊಬ್ಬ ರಾಧೆನೂ ಕಾಣಬಹುದು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಬ್ಯಾಗ್ ಎತ್ತಿಕೊಂಡು ಅವಳು ಹೊರಟೇ ಬಿಟ್ಟಳು.

ಮನೆಗೆ ಬಂದವಳೇ ‘’ಅಮ್ಮಾ ನಾನು ತಪ್ಪು ಮಾಡಿಬಿಟ್ಟೆ. ಆವತ್ತು ನಿನ್ನ ಮಾತು ಕೇಳಿದ್ದರೆ ನನಗೆ ಈ ಸ್ಥಿತಿ ಬರುತ್ತಿರಲಿಲ್ಲ. ನನ್ನ ಕ್ಷಮಿಸಮ್ಮಾ’’ ಅನ್ನುತ್ತಾ ಅಮ್ಮನ ಕಾಲು ಹಿಡ್ಕೊಂಡು ಒಂದೇ ಸಮನೆ ಗೋಳಾಡಲಾರಂಭಿಸಿದಳು. ಸಮಾಧಾನ ಆಗುವವರೆಗೂ ಅಳಲಿ ಎಂದು ಅವಳಮ್ಮ ಸುಮ್ಮನಿದ್ದುಬಿಟ್ಟಳು. ಕೃಷ್ಣ ಕೃಷ್ಣ. ಏನು ನಿನ್ನ ಲೀಲೆ. ಅಂದು ಸ್ವಾಮೀಜಿ ಹೇಳಿದ ‘’ಅವನಿಚ್ಛೆ ಇದ್ದಲ್ಲಿ ಸ್ವಲ್ಪ ಸಮಯದ ನಂತರ ಅವಳೇ ಬರುತ್ತಾಳೆ’’ ಅನ್ನುವ ಮಾತನ್ನು ಅವಳಮ್ಮ ನೆನಪಿಸಿಕೊಂಡಳು. ಮುಂದಿನ ಮಗಳ ಜೀವನದ ಬಗ್ಗೆ ಯೋಚಿಸಲಾರಂಭಿಸಿದಳು.
*****

Friday 8 November 2013

ಕ್ಯಾನ್ಸರ್


ಇತ್ತೀಚೆಗೆ ಎಲ್ಲಾ ಬ್ಲೌಸುಗಳೂ ತುಂಬಾ ಬಿಗಿಯುತ್ತಿತ್ತು. ನಾನೇನೂ ದಪ್ಪ ಆಗಿರಲಿಲ್ಲ. ಮೊದಲಿದ್ದ ಹಾಗೇ ಇದ್ದೆ. ಆದರೆ ಬ್ಲೌಸ್ ಯಾಕೆ ಟೈಟ್ ಆಗುತ್ತಿದೆ ಅರ್ಥವಾಗಲಿಲ್ಲ. ಬ್ಲೌಸ್ ಕಳಚಿ ಕನ್ನಡಿ ಮುಂದೆ ನಿಂತೆ. ದಷ್ಟಪುಷ್ಟವಾದ ಸ್ತನಗಳು. ಬಲಗೈಯನ್ನು ಮೇಲಕ್ಕೆತ್ತಿ ಎಡಗೈಯಿಂದ ಬಲ ಸ್ತನವನ್ನೂ, ಎಡಗೈಯನ್ನು ಮೇಲಕ್ಕೆತ್ತಿ ಬಲಗೈಯಿಂದ ಎಡ ಸ್ತನವನ್ನೂ ಒತ್ತಿ ಒತ್ತಿ ನೋಡಲಾರಂಭಿಸಿದೆ. ಏನೂ ಗೊತ್ತಾಗಲಿಲ್ಲ.

ಒಂದು ದಿನ ಎಡಗೈ ಎತ್ತಲಾಗದಷ್ಟು ನೋವಾಗಲಾರಂಭಿಸಿತು. ಡಾಕ್ಟರಲ್ಲಿ ಹೋದಾಗ ಸ್ತನ ಕ್ಯಾನ್ಸರ್ ಇರುವುದು ಗೊತ್ತಾಯಿತು.  3-4 ಡಾಕ್ಟರನ್ನು ಕನ್ಸಲ್ಟ್ ಮಾಡಿದೆವು. ಎಲ್ಲಾ ಕಡೆ ಒಂದೇ ರಿಸಲ್ಟ್. ಕೊನೆಗೆ ಬೆಂಗಳೂರು ಅನ್ಕಾಲಜಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆದೆ. ಮುಲಾಜಿಲ್ಲದೆ ಎಡಸ್ತನವನ್ನು ಕತ್ತರಿಸಿ ಹಾಕಿದರು. ಅಂದು ನಾನು ಅನುಭವಿಸಿದ ನೋವು, ಸಂಕಟ ಯಾರಿಗೂ ಬೇಡ. ಆಮೇಲೆ ತಿಂಗಳಿಗೊಂದರಂತೆ ಒಟ್ಟು 6 ಕಿಮೋ ತೆಗೆದುಕೊಳ್ಳಬೇಕು ಅಂದ್ರು. ಅದರಂತೆ ತಿಂಗಳಿಗೊಮ್ಮೆ ಕಿಮೋ ತಗೊಳ್ಳಲು ಆರಂಭಿಸಿದೆ.  3-4 ಕಿಮೋ ತಗೊಳ್ಳೊವರೆಗೂ ಸರಿಯಾಗೇ ಇದ್ದೆ. ಆಮೇಲೆ ಕಿಮೋ ತಗೊಳ್ಳಲು ಆಸ್ಪತ್ರೆಗೆ ಹೋಗ್ಬೇಕು ಅಂದ್ರೆ ಚಳಿ ಸುರುವಾಗುತ್ತಿತ್ತು. ಕಿಮೋ ತಗೊಂಡ ಒಂದು ವಾರ ತುಂಬಾ ಹಿಂಸೆ ಆಗುತ್ತಿತ್ತು. ಏನು ತಗೊಂಡರೂ ವಾಂತಿ ಆಗುತ್ತಿತ್ತು. ಒಂದು ದಿನ ತಲೆಗೆ ಸ್ನಾನ ಮಾಡಿ ಬಂದು ತಲೆ ಒರೆಸಿದ್ರೆ ಕೂದಲೆಲ್ಲಾ ಟವೆಲ್ ನಲ್ಲಿ ಬಂದಿತ್ತು. ನಾನು ಬೋಡಿ ಆಗಿದ್ದೆ. 6 ರಿಂದ 8 ಕಿಮೋ ಆಯಿತು. ಇನ್ನೂ 4 ಕಿಮೋ ತಗೋಬೇಕು ಅಂದ್ರು. ಔಷಧಿಯ ಪರಿಣಾಮ ಮೈಯೆಲ್ಲಾ ಕಪ್ಪಾಗಿತ್ತು ಜೊತೆಗೆ ಗುಳ್ಳೆಗಳು. ತಲೆ ಹುಬ್ಬು ಕಣ್ಣು ರೆಪ್ಪೆ ಎಲ್ಲೂ ಕೂದಲಿನ ಸುಳಿವಿಲ್ಲ. ಕನ್ನಡಿ ಮುಂದೆ ನಿಂತುಕೊಳ್ಳಲೂ ಭಯಪಡುವಂತಾಯಿತು. ಒಂದೊಮ್ಮೆ ಕಾಲೇಜಿಗೆ ಹೋಗುತ್ತಿರಬೇಕಾದರೆ ಹುಡುಗರ ಹಿಂಡೇ ಹಿಂದಿನಿಂದ ಬರುತ್ತಿತ್ತು. ಸ್ನೇಹಿತೆಯರೆಲ್ಲ ಏನು ಸೆಕ್ಸಿ ಆಗಿದ್ದೀಯ ಕಣೆ ಅಂತ ರೇಗಿಸುತ್ತಿದ್ದರು. ನನಗಾಗ ಹೆಮ್ಮೆ ಅನಿಸುತ್ತಿತ್ತು. ಅವರುಗಳು ಒಳಗೊಳಗೆ ಕುರುಬುತ್ತಿದ್ದರು. ಅದೆಲ್ಲಾ ಒಮ್ಮೆ ಕಣ್ಣ ಮುಂದೆ ಹಾದು ಹೋಯಿತು.

ಅಪ್ಪನನ್ನು ಕಳಕೊಂಡ ಅಮ್ಮನಿಗೆ ಇಳಿವಯಸ್ಸಿನಲ್ಲಿ ನಾನು ಸೇವೆ ಮಾಡಬೇಕಾಗಿದ್ದ ಸಮಯ ಅವಳಿಂದ ಸೇವೆ ಮಾಡಿಸಿಕೊಳ್ಳಬೇಕಾಗಿ ಬಂದಿದ್ದು ನನ್ನ ದುರಾದೃಷ್ಟ. ನನ್ನನ್ನು ನೋಡಿಕೊಳ್ಳುವುದರ ಜೊತೆಗೆ ವಿಷಯ ತಿಳಿದು ನನ್ನನ್ನು ನೋಡಲೆಂದು ಊರಿನಿಂದ ಬರುತ್ತಿದ್ದ ಸಂಬಂಧಿಕರನ್ನೂ ಸುಧಾರಿಸಬೇಕಿತ್ತು. ನನಗೆ ಅಳಲು ಕಣ್ಣಲ್ಲಿ ನೀರು ಕೂಡಾ ಬತ್ತಿ ಹೋಗಿತ್ತು. ಎಲ್ಲಿತ್ತು ಈ ಹಾಳು ಕಾಯಿಲೆ. ಎಷ್ಟು ಜನರಿಗೆ ನನ್ನಿಂದ ತೊಂದರೆ. ಅದರ ಬದಲು ಹಾರ್ಟ್ ಅಟ್ಯಾಕ್ ಆದ್ರು ಆಗಬಾರದಿತ್ತಾ ಅನ್ನಿಸುತ್ತಿತ್ತು.

ಆ ಸಮಯದಲ್ಲಿ ಬಂದವಳು ರಾಜೇಶ್ವರಿ. ಸುಮಾರು 12 ವರ್ಷಗಳ ಹಿಂದೆ ಅವಳೂ ಕೂಡಾ ಇದೇ ಕಾಯಿಲೆಯಿಂದ ನರಳುತ್ತಿದ್ದವಳು. ಆದರೆ ಅವಳಿಗೆ ಸಾಂತ್ವನ ಹೇಳುವವರಾಗಲಿ ಸೇವೆ ಮಾಡುವವರಾಗಲಿ ಯಾರೂ ಇರಲಿಲ್ಲ. ಅವಳಿಗೆ ಇದ್ದುದು ಒಂದೇ ಅದು ವಿಲ್ ಪವರ್. ಕಾಯಿಲೆಯಿಂದ ಗುಣಮುಖಳಾಗುತ್ತಿದ್ದಂತೆ ಅವಳು ನಿರ್ಧರಿಸಿದ್ದಳು. ಈ ಕಾಯಿಲೆಯಿಂದ ನರಳುವ ಯಾರಿಗಾದರೂ ತನ್ನಿಂದಾದ ಸಹಾಯ ಮಾಡಬೇಕು ಎಂದು. ಯಾರಿಗಾದರೂ ಈ ಕಾಯಿಲೆ ಇರುವ ವಿಷಯ ತಿಳಿದ ತಕ್ಷಣ ಎಷ್ಟೇ ದೂರವಾದ್ರೂ ಸರಿ ಅವರಲ್ಲಿಗೆ ಹೋಗಿ ಸಾಂತ್ವನ ಹೇಳುತ್ತಿದ್ದಳು. ತನ್ನಿಂದಾದ ಸಹಾಯ ಮಾಡುತ್ತಿದ್ದಳು. ವಿಷಯ ತಿಳಿದು ನನ್ನಲ್ಲಿಗೂ ಹುಡುಕಿಕೊಂಡು ಬಂದು ತನ್ನ ಅನುಭವವನ್ನು ಹೇಳಿದಾಗ, ಎಲ್ಲಾ ಮುಗಿದು ಹೋಯಿತು ಎಂದು ಆತ್ಮವಿಶ್ವಾಸ ಕಳೆದುಕೊಂಡಂತಿದ್ದ ನನ್ನಲ್ಲೂ ಕೊಂಚ ಬದಲಾವಣೆ ಆಗಲಾರಂಭಿಸಿತು. ನನ್ನಲ್ಲಿನ ಬದಲಾವಣೆ ಕಂಡು ಅಮ್ಮನಿಗೂ ಕೊಂಚ ಹಾಯೆನಿಸಿತ್ತು.

ಇಂದು ಸಂಪೂರ್ಣವಾಗಿ ಹುಷಾರಾಗಿದ್ದೇನೆ. ಇಂದು ಕೂಡಾ ಬ್ಲೌಸ್ ಕಳಚಿ ಕನ್ನಡಿ ಮುಂದೆ ನಿಂತಿದ್ದೇನೆ. 8 ವರ್ಷದ ಮಗಳು ನೋಡಿದವಳೇ ಬೆಚ್ಚಿ ಯಾಕಮ್ಮಾ ಹೀಗಿದೆ ನಿನ್ನ ಮೊಮ್ಮ ಏನಾಯ್ತಮ್ಮ ಎಂದು ಅಳಲಾರಂಭಿಸಿದಳು. ನಾನು ಅವಳನ್ನು ತಬ್ಬಿಕೊಂಡವಳೇ ಅಳಬೇಡ ಕಂದಾ, ಅದರ ಮೇಲೆ ಗಾಯ ಆಗಿತ್ತು ಅದಕ್ಕೆ ಅದನ್ನ ಕಟ್ ಮಾಡಿದ್ದಾರೆ. ಸ್ವಲ್ಪ ದಿನ ಆದ ಮೇಲೆ ಬರುತ್ತೆ ಅಂತ ಸಮಾಧಾನಪಡಿಸಿದೆ. ಅಂದಿನಿಂದ ನಾನು ಕೂಡಾ ರಾಜೇಶ್ವರಿಯ ಹಾದಿ ಹಿಡಿದೆ. ಯಾರಿಗಾದರೂ ಈ ಕಾಯಿಲೆ ಇರುವ ವಿಷಯ ತಿಳಿದಲ್ಲಿ ಹೋಗಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಈ ಕಾಯಿಲೆ ಬಂದ್ರೆ ಸತ್ತೇ ಹೋಗುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಪ್ರಾರಂಭಿಸಿದೆ. 40 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಮಮೋಗ್ರಫಿ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದೆ.  ಈಗ ನನ್ನಲ್ಲಿ ನನಗೆ ತೃಪ್ತಿ ಇದೆ. ಆತ್ಮವಿಶ್ವಾಸ ಒಂದಿದ್ದಲ್ಲಿ ಜೀವನದಲ್ಲಿ ಏನನ್ನಾದರೂ ಗೆಲ್ಲಬಹುದು. ಆದರೂ ಕನ್ನಡಿ ಮುಂದೆ ನಿಂತಾಗಲೆಲ್ಲಾ ದೇವರಲ್ಲಿ ಬೇಡಿಕೊಳ್ಳುತ್ತೇನೆ ಈ ಕಾಯಿಲೆ ಯಾರಿಗೂ ಬಾರದಿರಲಿ.

*****