Wednesday 29 February 2012

ಜೋಷ್


ಮೂರು ಹೊತ್ತು ಓದು ಓದು ಅಂತ ತಲೆ ತಿನ್ತಾರೆ. ಮಾಡೋಕೆ ಇವ್ರಿಗೆ ಬೇರೇನೂ ಕೆಲ್ಸ ಇಲ್ವಾ. ಇವತ್ತಂತೂ ಯಾವತ್ತೂ ನನ್ನ ಮೇಲೆ ಕೈಮಾಡದಿದ್ದ ಅಪ್ಪ ಕೂಡಾ ಅಮ್ಮನ ಮಾತು ಕೇಳ್ಕೊಂಡು ಒಂದೇಟು ಹೊಡೆದೇ ಬಿಟ್ರು.  ನಂಗಂತೂ ಸಖತ್ತಾಗಿ ಕೋಪ ಬಂದಿತ್ತು. ಏನು ಅಂದ್ಕೊಂಡಿದ್ದಾರೆ ಇವ್ರೆಲ್ಲ ನನ್ನ.   ಪ್ರಪಂಚದಲ್ಲಿ ಓದೋದು ಬಿಟ್ರೆ ಬೇರೇನೂ ಇಲ್ವಾ. ಇವ್ರೆಲ್ಲಾ ಓದಿ ಕಡಿದು ಕಟ್ಟೆ ಹಾಕಿರೋದು ನಂಗೊತ್ತಿಲ್ವಾ. ಅವ್ನು ನೋಡು ಅಷ್ಟು ಮಾರ್ಕ್ ತಗೊಂಡಿದ್ದಾನೆ. ಇವ್ನು ನೋಡು ಇಷ್ಟು ಮಾರ್ಕ್ ತಗೊಂಡಿದ್ದಾನೆ. ನೀನೂ ಇದ್ದೀಯಾ..

ಕೇಳಿ ಕೇಳಿ ತಲೆ ಚಿಟ್ಟು ಹಿಡಿದು ಹೋಗ್ತಾ ಇದೆ. ಮಾಡ್ತೀನಿ ಇವ್ರಿಗೆ ಚೆನ್ನಾಗಿ ಬುದ್ಧಿ ಕಲಿಸ್ತೀನಿ ಅಂದುಕೊಂಡು ರಾತ್ರಿ ಊಟ ಮಾಡದೇನೆ ಮಲಗಿಬಿಟ್ಟೆ. ಬೆಳಿಗ್ಗೆ ಹೊಟ್ಟೆ ಚುರುಗುಟ್ಟುತ್ತಿತ್ತು. ಯಾವಾಗ ತಿಂಡಿಗೆ ಕರೀತಾಳೆ ಅಂತ ಓರೆಕಣ್ಣಿನಿಂದ ಅಮ್ಮನನ್ನು ನೋಡುತ್ತಲೇ ಇದ್ದೆ. ಹುಸಿಮುನಿಸಿನಿಂದಲೇ ಅಮ್ಮ ಮಾಡಿಟ್ಟ ಪೂರಿ ಸಾಗು ಚೆನ್ನಾಗೇ ಹೊಡೆದೆ.  ಅಮ್ಮನೂ ಬಿಗುಮಾನದಿಂದ ಮಾತಾಡಿಸಲಿಲ್ಲ. ಸ್ಕೂಲ್ ಗೆ ಯೂನಿಫಾರಂ ಹಾಕುವಾಗ ಷರ್ಟ್ ಹಾಕೋಕೆ ಮುಂಚೆ ಒಳಗೆ ಒಂದು ಟಿ-ಷರ್ಟ್ ಹಾಕ್ಕೊಂಡೆ. ಮಾಮೂಲಿನಂತೆಯೇ ಸ್ಕೂಲ್ ಗೆ ಹೊರಟೆ. ಸಂಜೆ ಸ್ಕೂಲ್ ಬಿಟ್ಟಾಕ್ಷಣ ಯಾರಿಗೂ ಸಂಶಯ ಬರದಿರಲೆಂದು ಮಾಮೂಲಿನಂತೆಯೇ ಎಲ್ಲರಿಗೂ ಬೈ ಬೈ ಹೇಳಿ ಹೊರಟೆ. ಒಬ್ಬನೇ ಹೋಗಲು ಭಯವಾಗಿ ಹಳೆಯ ಮನೆಯ ಹತ್ತಿರದ ಫ್ರೆಂಡ್ ಸ್ಕೂಲ್ ಹತ್ತಿರ ಹೋಗಿ ಅವನನ್ನೂ ಕರೆದುಕೊಂಡು ಹೊರಟೆ. ಯೂನಿಫಾರಂ ಷರ್ಟ್ ಬಿಚ್ಚಿ ಬ್ಯಾಗ್ ಒಳಗೆ ಹಾಕಿದೆ. ಮನೆಯಿಂದ ಬರುತ್ತಾ ಅಮ್ಮ ಆಗಾಗ್ಗ ಕೊಡುತ್ತಿದ್ದ ಪಾಕೆಟ್ ಮನಿ ತೆಗೆದುಕೊಂಡು ಬಂದಿದ್ದೆ. ಇಬ್ಬರೂ ಪಾನಿಪುರಿ, ಮಸಾಲೆಪುರಿ, ಬೇಲ್ ಪುರಿ ಎಲ್ಲಾ ಒಂದೊಂದು ಪ್ಲೇಟ್ ಹೊಡೆದೆವು. ಸಮಯ ಹೋಗ್ತಾನೇ ಇಲ್ಲ. ಹತ್ತಿರದಲ್ಲಿದ್ದ ಪಾರ್ಕ್ ನಲ್ಲಿ ಸ್ವಲ್ಪ ಹೊತ್ತು ಕಳೆದೆವು. ನಂತರ ಇಬ್ಬರೂ ಸೆಕೆಂಡ್ ಷೋ ಕನ್ನಡ ಸಿನೆಮಾ ನೋಡಲು ಥಿಯೇಟರ್ ನಲ್ಲಿ ಹೋಗಿ ಕುಳಿತೆವು. ಜೋಷ್ ಫಿಲಂ.  ಥತ್ ತೆರೀಕೆ ಇಲ್ಲೂ ಇದೇ ಕಥೇನಾ. ನೋಡಲು ಮನಸ್ಸಾಗಲಿಲ್ಲ.

ಕಣ್ಮುಚ್ಚಿ ನಿಧಾನವಾಗಿ ಯೋಚಿಸುತ್ತಾ ಕುಳಿತೆ. ಏನೋ ಒಂಥರಾ ಭಯ, ಆತಂಕ, ಹೊಟ್ಟೆಯಲ್ಲಿ ತಳಮಳ ಆಗಲು ಶುರುವಾಯಿತು. ದು:ಖ ಉಮ್ಮಳಿಸಿ ಬರಲಾರಂಭಿಸಿತು. ಇದ್ರಲ್ಲಿ ಅಪ್ಪ ಅಮ್ಮಂದು ಏನು ತಪ್ಪಿದೆ. ಮಗ ಚೆನ್ನಾಗಿ ಓದಲಿ ಅಂತ ಅವರು ಆಸೆ ಪಡೋದು ತಪ್ಪಾ. ನನಗೋಸ್ಕರ ಎಷ್ಟೆಲ್ಲ ಕಷ್ಟಪಡ್ತಾರೆ ಒಂದೇಟು ಹಾಕುವ ಅಧಿಕಾರಾನೂ ಅವ್ರಿಗೆ ಇಲ್ವಾ. ಇನ್ನೇನು ಪ್ರಿಪರೇಟರಿ ಎಕ್ಸಾಮ್ ಹತ್ತಿರ ಬರ್ತಾ ಇದೆ. ನಾನು ಹೆಚ್ಚು ಅಂಕ ತಗೊಂಡ್ರೆ ನನಗೆ, ಸ್ಕೂಲ್ ಗೆ, ಅಪ್ಪ ಅಮ್ಮಂಗೆ ಎಲ್ಲರಿಗೂ ಹೆಮ್ಮೆ ಅಲ್ವಾ. ಮುಂದೆ ಯೋಚಿಸಲಾಗಲಿಲ್ಲ. ಮನೆಯಲ್ಲಿ ಎಷ್ಟು ಗಲಾಟೆ ಬಿದ್ದಿರಬಹುದು. ಒಂದು ಕ್ಷಣ ಅಳುತ್ತಿರುವ ಅಮ್ಮನ ಮುಖ ಕಣ್ಮುಂದೆ ಸುಳಿಯಿತು. ಅಪ್ಪ ಎಲ್ಲೆಲ್ಲಿ ನನ್ನನ್ನು ಹುಡುಕುತ್ತಿರಬಹುದು. ಸ್ಕೂಲ್ ಹತ್ತಿರ, ಟ್ಯೂಷನ್ ಕ್ಲಾಸ್ ಹತ್ತಿರ, ಫ್ರೆಂಡ್ಸ್ ಹತ್ತಿರ ಎಲ್ಲಾ ವಿಚಾರಿಸಿ ಸುಳಿವು ಸಿಗದಿದ್ದಾಗ ಎಷ್ಟು ಆತಂಕ ಆಗಿರಬಹುದು.  ಛೆ. ನಾನೆಂತಹ ಮಗ. ನನ್ಮೇಲೆ ಎಷ್ಟು ಆಸೆ ಇಟ್ಟುಕೊಂಡಿದ್ದರು. ಸಂಜೆ ಸ್ಕೂಲಿಂದ ಬರ್ತಾ ಇದ್ದ ಹಾಗೆ ಮಗ ಹಸಿದಿರುತ್ತಾನೆ ಅಂತ ಬಿಸಿಬಿಸಿ ಬಜ್ಜಿ, ಬೋಂಡಾ ಮಾಡಿ ಕಾಯುತ್ತಿದ್ದ ಅಮ್ಮ ಕಣ್ಮುಂದೆ ಬಂದಳು. ಅಮ್ಮಾ ನನ್ನನ್ನು ಕ್ಷಮಿಸಮ್ಮಾ. ದಿನಾ ಟ್ಯೂಷನ್ ನಿಂದ ಮಗ ನಡ್ಕೊಂಡು ಸುಸ್ತಾಗಿ ಬರುತ್ತಾನಂತ ಸ್ಕೂಟರ್ ನಲ್ಲಿ ಕಾಯುತ್ತಿದ್ದ ಅಪ್ಪ ಕಣ್ಮುಂದೆ ಬಂದರು. ನನ್ನನ್ನ ಕ್ಷಮಿಸ್ತೀಯಾ ಅಪ್ಪಾ. ಇನ್ಯಾವತ್ತೂ ಇಂತಹ ತಪ್ಪು ಮಾಡೋದಿಲ್ಲ. ಮನೆ ಬಿಟ್ಟು ಹೊರಡುವಾಗ ಇದ್ದ ಜೋಷ್ ಎಲ್ಲ ಝರ್ ಅಂತ ಇಳಿದಿತ್ತು.

ಮತ್ತೆ ಅಲ್ಲಿ ಕುಳಿತುಕೊಳ್ಳಲಾಗಲಿಲ್ಲ. ಬ್ಯಾಗ್ ತಗಲಾಕಿಕೊಂಡು ಎದ್ದು ಹೊರಗೋಡಿದೆ. ಜೊತೇಗಿದ್ದ ಸ್ನೇಹಿತನೂ ನನ್ನ ಹಿಂದೆ ಒಡೋಡಿ ಬರಲಾರಂಭಿಸಿದ. ಬಹುಷ: ಅವನಿಗೂ ನನ್ನ ತರಹಾನೇ ಅನ್ನಿಸಿರಬಹುದೇನೋ. ಟೆಲಿಫೋನ್ ಬೂತ್ ಕಂಡಾಕ್ಷಣ ಮನೆಗೆ ಡಯಲ್ ಮಾಡಲಾರಂಭಿಸಿದೆ. ಫೋನ್ ಗೇ ಕಾಯುತ್ತಿದ್ದಂತೆ ಕುಳಿತ ಅಮ್ಮನ ಸ್ವರ ಕೇಳುತ್ತಿದ್ದಂತೆ ಸ್ವರ ಹೊರಡಲಿಲ್ಲ. ಮೆಜೆಸ್ಟಿಕ್ ನಲ್ಲಿ ಇದ್ದೇನೆ. ಬರುತ್ತಿದ್ದೇನೆ ಅಂತ ಹೇಳಿ ಫೋನ್ ಇಟ್ಟುಬಿಟ್ಟೆ. ಯಾವಾಗ ಮನೆ ಸೇರ್ತೀನೋ ಅಂತ ಚಡಪಡಿಸಲಾರಂಭಿಸಿದೆ. ಕ್ಷಣವೂ ಯುಗವೆನಿಸುತ್ತಿತ್ತು. ಅತ್ತ ಕಡೆಯಿಂದ ಅಮ್ಮ ಅಳುತ್ತಿರುವ ಸ್ವರ ಕಿವಿಯಲ್ಲಿ ಗುಂಯ್ ಗುಡುತ್ತಲೇ ಇತ್ತು.

ಮಗು


ಪ್ರಪಂಚ ನೋಡೋಕೆ ನನ್ನಮ್ಮ ನನಗೆ ಅವಕಾಶಾನೇ ನೀಡಲಿಲ್ಲ. ಈ ಜಗತ್ತನ್ನು ಕಾಣೋಕೆ ಮುಂಚೇನೆ ನಾನು ಇಹಲೋಕ ತ್ಯಜಿಸಿದ್ದೆ. ಹಿಂದಿನ ಜನ್ಮದಲ್ಲಿ ನಾನೇನು ಕರ್ಮ ಮಾಡಿದ್ದೆನೋ. ಎಲ್ಲ ಅಪ್ಪ ಅಮ್ಮಂದಿರು ಮಗುವಿನ ಮುಖ ಯಾವಾಗ ನೋಡುತ್ತೇವೋ, ಅದು ಯಾವಾಗ ಕಣ್ಣು ಬಿಡುತ್ತೋ ಅಂತ ಕಾತರದಿಂದ ಕಾಯುತ್ತಿದ್ದರೆ, ನನ್ನಮ್ಮ, ಇದು ಯಾಕಾದ್ರೂ ಹುಟ್ಟುತ್ತೋ ಯಾರಿಗೆ ಬೇಕಾಗಿತ್ತು ದರಿದ್ರ ಪಿಂಡ ಅಂತ ನನ್ನನ್ನು ಹೊಟ್ಟೇಲಿದ್ದಾಗಿಂದಲೇ ಹಿಂಸಿಸುತ್ತಿದ್ದಳು. ತನ್ನ ಕ್ಷಣಿಕ ಸುಖಕ್ಕಾಗಿ ಅವಳು ನನ್ನನ್ನು ಬಲಿಕೊಟ್ಟಳು. ಹುಟ್ಟಿದ ತಕ್ಷಣವೇ ಬಟ್ಟೆಯಲ್ಲಿ ಸುತ್ತಿ ತೊಟ್ಟಿಗೆ ಎಸೀವಾಗ ಅವಳಿಗೆ ತನ್ನ ಭವಿಷ್ಯದ ಬಗ್ಗೆ ಬಿಟ್ಟು ಬೇರೇನೂ ಗೋಚರಿಸಲಿಲ್ಲ.

ಯಾಕಮ್ಮಾ ಹೀಗೆ ಮಾಡಿದೆ. ಹೀಗೆ ಮಾಡಲು ನಿನಗೆ ಮನಸ್ಸಾದರೂ ಹೇಗೆ ಬಂತು. ನಾನು ಏನಮ್ಮ ತಪ್ಪು ಮಾಡಿದ್ದೆ. ತೊಟ್ಟೀಗೆ ಎಸೀವಾಗ ಕರುಳ ಕುಡಿಯನ್ನು ನಾಯಿ ನರಿ ತಿನ್ನಬಹುದು ಅಂತ ನಿನಗೆ ಅನಿಸಲಿಲ್ವಾ. ಒಂಭತ್ತು ತಿಂಗಳು ನಿನ್ನ ಹೊಟ್ಟೇಲಿ ಬೆಚ್ಚಗಿದ್ದ ನಾನು ಚಳೀಲಿ ನಡುಗಬಹುದು ಅಂತ ನಿನಗೆ ಕಿಂಚಿತ್ತೂ ಅನ್ನಿಸಲಿಲ್ವಾ. ಸಾಯೋಕೆ ಮುಂಚೆ ನಾನು ಅದೆಷ್ಟು ಯಾತನೆ ಅನುಭವಿಸಿದೆ ಗೊತ್ತಾ.  ಹಸಿವೆಯಿಂದ ಕಂಗಾಲಾಗಿ ತೊಟ್ಟು ಹಾಲಿಗಾಗಿ ಅದೆಷ್ಟು ಕಿರುಚಿದೆ ಗೊತ್ತಾ. ಒಂದು ದೇವಸ್ಥಾನದ ಮುಂದೆ ಅಥವಾ ಅನಾಥಾಶ್ರಮದ ಮುಂದೆಯಾದರೂ ನನ್ನನ್ನು ಎಸೀಬಾರದಿತ್ತಾ ಅಮ್ಮ. ಆಗ ನನಗೆ ಬದುಕು ನೀಡಿ ಒಳ್ಳೆಯವರು ಇನ್ನೂ ಪ್ರಪಂಚದಲ್ಲಿ ಇದ್ದಾರೆ ಅನ್ನೋದನ್ನ ಯಾರಾದ್ರೂ ರುಜುವಾತು ಮಾಡುತ್ತಿದ್ದರು.

ನನ್ನನ್ನು ಏನು ಉದ್ದೇಶವಿಟ್ಟು ತೊಟ್ಟೀಗೆ ಎಸೆದಿಯೋ ಆ ಉದ್ದೇಶ ಆದಷ್ಟು ಬೇಗ ಫಲಿಸಲಿ. ಆದರೆ, ಮುಂದೊಂದು ದಿನ ನೀನು ಪುನ: ಪ್ರಸವ ವೇದನೆ ಅನುಭವಿಸುತ್ತೀಯಲ್ಲ, ಆ ಸಂದರ್ಭದಲ್ಲಿ ಒಂದು ಕ್ಷಣ ಖಂಡಿತಾ ನನ್ನನ್ನು ನೆನಪಿಸಿಕೊಳ್ಳುವೆ… ಆಗ ನಾನು ನಿನ್ನ ಮನಸ್ಸಿನ ಒಂದು ಕಪ್ಪು ಚುಕ್ಕೆಯಾಗಿ ಪ್ರತಿ ಕ್ಷಣ ಧುತ್ತೆಂದು ಎದುರು ಬಂದು ನಿಲ್ಲುವೆ…

ನನ್ನ ಅಮ್ಮನಂತಹ ಅಮ್ಮಂದಿರೇ, ದಯವಿಟ್ಟು ನಮ್ಮನ್ನು ಬದುಕಲು ಬಿಡಿ. ಕಣ್ಣು ತೆರೆದು ಪ್ರಪಂಚ ನೋಡಲು ನಮಗೆ ಅವಕಾಶ ಮಾಡಿಕೊಡಿ. ನಿಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಬಲಿಕೊಡಬೇಡಿ ದಯವಿಟ್ಟು…

Friday 24 February 2012

ಪುತ್ತೂರು ಶ್ರೀ ಮಹಾಲಿಂಗೇಶ್ವರ




ಪುತ್ತೂರಿನ ಮಹತೋಬಾರ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಸುಮಾರು 11-12ನೇ ಶತಮಾನದ ಹಳೆಯ ದೇವಸ್ಥಾನ. ಮಹಾಲಿಂಗೇಶ್ವರ ದೇವಸ್ಥಾನದ ಮುಂದೆ ಇರುವ ಸ್ಮಶಾನ ಇಲ್ಲಿನ ವಿಶೇಷ. ಕಾಶಿ ಬಿಟ್ಟರೆ ಬಹುಷ: ಶಿವನ ದೇವಸ್ಥಾನದ ಮುಂದೆ ಸ್ಮಶಾನ ಬೇರೆಲ್ಲೂ ಕಾಣಸಿಗಲಾರದು.

ದೇವಸ್ಥಾನದ ಸುತ್ತಮುತ್ತ ಆನೆ ಬರುವ ಹಾಗಿಲ್ಲ. ಆಕಸ್ಮಾತ್ ಬಂದಲ್ಲಿ ಅವುಗಳಿಗೆ ಸಾವು ಖಚಿತ ಅನ್ನೋ ಪ್ರತೀತಿ ಇದೆ. ಇದಕ್ಕೆ ಒಂದು ಕಥೆ ಇದೆ. ಒಮ್ಮೆ ಗೋವಿಂದ ಭಟ್ಟರು ಅನ್ನೋ ಬ್ರಾಹ್ಮಣರು ಪೂಜೆ ಮಾಡಲೆಂದು ಒಂದು ಶಿವಲಿಂಗವನ್ನು ಈಗ ದೇವಸ್ಥಾನ ಇರುವ ಜಾಗದಲ್ಲಿ ಮರೆತು ನೆಲದ ಮೇಲಿಟ್ಟರಂತೆ. ಭೂಸ್ಪರ್ಶವಾದ ಶಿವಲಿಂಗವು ಎಷ್ಟು ಎಳೆದರೂ ಮೇಲೇಳಲಿಲ್ಲವಂತೆ. ಆಗ ಅದನ್ನು ಎಳೆಯಲು ಆನೆಯನ್ನು ಕರೆಸಿದರಂತೆ. ಶಿವಲಿಂಗಕ್ಕೆ ಹಗ್ಗ ಕಟ್ಟಿ ಎಳೆಯುತ್ತಿದ್ದಂತೆ ಶಿವಲಿಂಗವು ದೊಡ್ಡದಾಗತೊಡಗಿತಂತೆ. ಅದೇ ಮಹಾಲಿಂಗವಾಗಿ ಮಹಾಲಿಂಗೇಶ್ವರ ಆಯಿತು. ರಭಸವಾಗಿ ಶಿವಲಿಂಗವನ್ನು ಎಳೆಯುತ್ತಿದ್ದ ಆನೆ ಛಿದ್ರಛಿದ್ರವಾಗಿ ದೂರ ದೂರ ಎಸೆಯಲ್ಪಟ್ಟಿತು. ಅದರ ಒಂದೊಂದು ಅಂಗ ಬಿದ್ದ ಒಂದೊಂದು ಸ್ಥಳಕ್ಕೆ ಒಂದೊಂದು ಹೆಸರು ಹುಟ್ಟಿಕೊಂಡಿತು. ಕೊಂಬು ಬಿದ್ದ ಕಡೆ ಕೊಂಬೆಟ್ಟು. ತಲೆ ಬಿದ್ದ ಕಡೆ ತಾಳೆಪಾಡಿ, ಕೈ ಬಿದ್ದ ಕಡೆ ಕೇಪಳ, ಬಾಲ ಬಿದ್ದಲ್ಲಿ ಬೀದಿಮಜಲು ಎಂದು ಹೆಸರಾಯಿತು. ಈ ಪವಾಡವನ್ನು ಕಂಡ, ಅಂದು ಪುತ್ತೂರನ್ನು ಆಳುತ್ತಿದ್ದ ಬಂಗರಾಜ ದೇವರಿಗೆ ಗುಡಿ ಕಟ್ಟಿಸಿದನಂತೆ.  

ಮಹಾಲಿಂಗೇಶ್ವರ ಗುಡಿಯ ಮುಂದೆ ಮೂರು ಕಾಲುಗಳ್ಳುಳ್ಳ ನಂದಿ ಇದೆ. ಇದಕ್ಕೂ ಒಂದು ಕಥೆ ಇದೆ. ರೈತರು ಹೊಲದಲ್ಲಿ ಬೆಳೆದಿದ್ದ ಪೈರನ್ನು ದಿನಾ ಒಂದು ಬಸವ ಬಂದು ಹಾಳು ಮಾಡುತ್ತಿತ್ತಂತೆ. ಒಂದು ದಿನ ರೈತ ಕಾದು ಕುಳಿತು ಬಸವನ ಕಾಲಿಗೆ ಹೊಡೆದ ರಭಸಕ್ಕೆ ಕಾಲು ಮುರಿದು ಹೋಯಿತಂತೆ. ಮೂರು ಕಾಲುಗಳಲ್ಲಿ ಅಳುತ್ತಾ ಮಹಾಲಿಂಗೇಶ್ವರನ ಮುಂದೆ ಬಂದ ಬಸವನಿಗೆ, ಮುಂದೆ ನಿನಗೆ ಯಾರಿಂದಲೂ ತೊಂದರೆ ಆಗುವುದಿಲ್ಲ ಬದಲಾಗಿ ನನ್ನ ಜೊತೆಗೆ ನಿನ್ನನ್ನೂ ಪೂಜಿಸುವಂತಾಗಲಿ ಎಂದು ಕಲ್ಲಾಗಿ ಮಾಡಿಬಿಟ್ಟನಂತೆ. ಮಹಾಲಿಂಗೇಶ್ವರನ ಎದುರು ಇರುವ ನಂದಿಗೆ ಒಂದು ಕಾಲು ಮುರಿದುಹೋದುದನ್ನು ಈಗಲೂ ಗಮನಿಸಬಹುದು. ಮುರಿದ ಕಾಲು ಈಗಲೂ ಕಲ್ಲಾಗಿ ಹೊಲದ ಮಧ್ಯೆ ಇದೆ ಎಂದು ಪ್ರತೀತಿ.

ಕ್ರಮೇಣ ಶಾಸ್ತ್ರೋಕ್ತವಾಗಿ ಪೂಜಾವಿಧಿಗಳೊಂದಿಗೆ ಪರಿವಾರ ದೇವತೆಗಳಾದ ಪಾರ್ವತಿ, ಸುಬ್ರಮಣ್ಯ, ಗಣೇಶ ಹಾಗೂ ದೈವಗಳನ್ನು ಪ್ರತಿಷ್ಟಾಪಿಸಲಾಯಿತು. ದೇವಸ್ಥಾನದ ಮುಂಭಾಗದಲ್ಲಿ ನಾಗ, ಅಯ್ಯಪ್ಪ ಹಾಗೂ ನವಗ್ರಹಗಳ ಗುಡಿಗಳನ್ನು ನಿರ್ಮಿಸಲಾಯಿತು.

ದೇವಸ್ಥಾನದ ಹಿಂದೆ ನಿತ್ಯ ಹರಿದ್ವರ್ಣದ ಒಂದು ಕೆರೆ ಇದೆ. ಇಲ್ಲಿ ನಡೆಯುವ ತೆಪ್ಪೋತ್ಸವ ಮಹತ್ವಪೂರ್ಣವಾದುದು. ಕಾರ್ತೀಕ ಮಾಸದಲ್ಲಿ ದೇವಸ್ಥಾನ ಹಾಗೂ ಕೆರೆಯ ಸುತ್ತಲೂ ದೀಪಗಳನ್ನು ಹಚ್ಚಿ ಲಕ್ಷದೀಪೋತ್ಸವ ಆಚರಿಸಲಾಗುತ್ತದೆ. ಈ ಕೆರೆಯಲ್ಲಿ ಹಿಂದೆ ಮುತ್ತು ಬೆಳೆಯುತ್ತಿತ್ತಂತೆ. ಇದಕ್ಕೂ ಒಂದು ಕಥೆ ಇದೆ. ದೇವಸ್ಥಾನದ ಹಿಂದೆ ಕೆರೆ ನಿರ್ಮಿಸುತ್ತಿರುವಾಗ ಎಷ್ಟು ಆಳ ಅಗೆದರೂ ನೀರು ಬರಲಿಲ್ಲವಂತೆ. ಅದಕ್ಕೆ ವರುಣನ ಪೂಜೆಗೈದು ಬ್ರಾಹ್ಮಣರಿಗೆ ಕೆರೆಯಲ್ಲಿ ಅನ್ನಸಂತರ್ಪಣೆ ಮಾಡಲಾಯಿತಂತೆ. ಅವರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರೂ ತುಂಬಲಾರಂಭಿಸಿದಾಗ ಅವರು ಊಟ ಬಿಟ್ಟು ಓಡಿದರಂತೆ. ಅವರ ಎಲೆಯಲ್ಲಿದ್ದ ಅನ್ನದ ಅಗಳುಗಳು ಮುತ್ತಾಗಿ ಪರಿವರ್ತನೆಗೊಂಡವಂತೆ. ಮುತ್ತು ಸಿಗೋ ಊರಿಗೆ ಮುತ್ತೂರು ಎಂಬ ಹೆಸರು ಬಂತು. ಕ್ರಮೇಣ ಜನರ ಬಾಯಲ್ಲಿ ಮುತ್ತೂರು, ಪುತ್ತೂರು ಆಯಿತು.


ಇಲ್ಲಿ ಏಪ್ರಿಲ್ ನಲ್ಲಿ ನಡೆಯುವ ಜಾತ್ರೆ ತುಂಬಾ ವಿಶೇಷ. ಏಪ್ರಿಲ್ 1ನೇ ತಾರೀಕಿಗೆ ಗೊನೆ ಕಡಿಯುವುದು. 10ನೇ ತಾರೀಕಿಗೆ ಕೊಡಿ ಏರುವುದು. 16ನೇ ತಾರೀಕಿಗೆ ಮಹಾರಥೋತ್ಸವ. ರಥೋತ್ಸವಕ್ಕೆ ಮುನ್ನ ಬೆಡಿಕಂಬ ಎಂಬ ಹೆಸರಿನಲ್ಲಿ ಸುಡುಮದ್ದುಗಳ ಪ್ರದರ್ಶನ. 18ನೇ ತಾರೀಕಿಗೆ ಕೊಡಿ ಇಳಿಯುವುದು. ಕೊಡಿ ಏರಿದ ನಂತರ ಇಳಿಯುವವರೆಗೆ ಪುತ್ತೂರಿನ ಜನ ಊರು ಬಿಟ್ಟು ಬೇರೆಡೆ ಹೋಗುವುದಿಲ್ಲ ಹಾಗೂ ಮಾಂಸಾಹಾರ ಸೇವಿಸುವುದಿಲ್ಲ. ಈ ದಿನಗಳಲ್ಲಿ ದೇವರಿಗೆ ಊರು ಪ್ರದಕ್ಷಿಣೆ ಹಾಕಿಸಿ ಕಟ್ಟೆ ಪೂಜೆ ಮಾಡಿಸಲಾಗುತ್ತದೆ.

ಜಯ ಕರ್ನಾಟಕ ಸಂಸ್ಥಾಪಕ ಶ್ರೀ ಮುತ್ತಪ್ಪ ರೈ ರವರು 2010 ರಲ್ಲಿ ಸುಮಾರು 1.00 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ 71 ಅಡಿ ಎತ್ತರ, 55 ಟನ್ ಭಾರವಿರುವ ತೇಗದ ಮರದ ಬ್ರಹ್ಮರಥವನ್ನು ಮಹಾಲಿಂಗೇಶ್ವರನಿಗೆ ಸಮರ್ಪಿಸಿದರು ಹಾಗೂ  2012 ರಲ್ಲಿ ಸುಮಾರು 22.00 ಲಕ್ಷ ರೂ. ವೆಚ್ಚದಲ್ಲಿ, ಬ್ರಹ್ಮರಥದ ಸಂರಕ್ಷಣೆಗೆಂದು ಬ್ರಹ್ಮರಥ ಮಂದಿರ ನಿರ್ಮಿಸಿ ಅರ್ಪಿಸಿದರು.


ಸುಮಾರು ರೂ.14.00 ಕೋಟಿಗಳ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ನಡೆದು ದೇವಾಲಯವು ಪುನರ್ ನಿರ್ಮಾಣಗೊಂಡಿದೆ. ನಾನಾ ಸಂಘ ಸಂಸ್ಥೆಗಳು ಕರಸೇವೆ ನಡೆಸಲು ನಾ ಮುಂದೆ ತಾ ಮುಂದೆ ಎಂದು ಕರಸೇವೆಯಲ್ಲಿ ತೊಡಗಿಸಿಕೊಂಡಿದ್ದು ಒಂದು ಇತಿಹಾಸವೇ ಸರಿ. 2013ರ ಮೇ ತಿಂಗಳ 5ನೇ ತಾರೀಕಿನಿಂದ 16 ರವರೆಗೆ ವಿಜ್ರಂಭಣೆಯಿಂದ ಬ್ರಹ್ಮಕಲಶೋತ್ಸವ ನಡೆದು, ಮೇ  13ರಂದು ಪರಿವಾರ ದೇವತೆಗಳೊಂದಿಗೆ ಮಹಾಲಿಂಗೇಶ್ವರ ದೇವರ ಪ್ರತಿಷ್ಠೆ ಕಾರ್ಯ ನಿರ್ವಿಘ್ನವಾಗಿ ನೆರವೇರಿದೆ.

 

ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಗರ್ಭಗುಡಿಯಲ್ಲಿ ತಾಮ್ರದ ತಂಬಿಗೆಯಲ್ಲಿ ತುಂಬಿಟ್ಟ ಚಿನ್ನದ ನಾಣ್ಯಗಳು ದೊರೆತಿದ್ದು ಕೂಡಾ ಒಂದು ಇತಿಹಾಸ. ಇದೇ ರೀತಿ ದೇವಸ್ಥಾನದ ಜೀರ್ಣೋದ್ಧಾರ ಸಮಯದಲ್ಲಿ ಅನೇಕ ಪವಾಡಗಳು ನಡೆದಿವೆ.

ಮಹಾಲಿಂಗೇಶ್ವರ ದೇವರನ್ನು ಬಹಳವಾಗಿ ನಂಬಿರುವ ಮುತ್ತಪ್ಪ ರೈ ರವರಿಗೆ ಆ ದೇವರ ಪವಾಡಗಳಲ್ಲಿ ಅಪಾರ ನಂಬಿಕೆ. ಇದೇ ರೀತಿ ಶ್ರೀ ದೇವರ ಅನುಗ್ರಹದಿಂದ ಅನೇಕರಿಗೆ ಅನೇಕ ಪವಾಡಗಳ ಅನುಭವವಾಗಿದೆ. ಬೇಡಿಬಂದವರ ಕಷ್ಟಗಳನ್ನು ನಿವಾರಿಸುವ, ತುಂಬಾ ಕಾರಣಿಕ ಇರುವ ಹತ್ತೂರ ಒಡೆಯ ಪುತ್ತೂರಿನ ಮಹಾಲಿಂಗೇಶ್ವರ ದೇವರಲ್ಲಿ ಪುತ್ತೂರಿನ ಜನತೆಗೆ ಅಪಾರ ನಂಬಿಕೆ. ಅಂತೆಯೇ ಪುತ್ತೂರಲ್ಲಿ ಹುಟ್ಟಿ ಬೆಳೆದು ಬೇರೆಡೆ ನೆಲೆಸಿರುವವರಿಗೆ ಕೂಡಾ. ದೇವಸ್ಥಾನದಲ್ಲಿ ಪ್ರತಿದಿನ ಊಟದ (ಪ್ರಸಾದ) ವ್ಯವಸ್ಥೆ ಇದೆ.
 
ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಲ್ಲಿ ಪುತ್ತೂರಿಗೆ ಒಮ್ಮೆ ಭೇಟಿ ಕೊಟ್ಟು ಮಹಾತೋಬಾರ್ ಶ್ರೀ ಮಹಾಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಲು ಮರೆಯದಿರಿ.                                                          (ಸಂಗ್ರಹ) 



*****


Tuesday 21 February 2012

ನಾ ಕಂಡ ಒಂದು ಮದುವೆ


ಕೆಲಸ ಅರಸಿಕೊಂಡು ಬರುವ ಬಿಜಾಪುರದವರು ನಮ್ಮ ಮನೆಗೆ ಸ್ವಲ್ಪ ದೂರದಲ್ಲಿ ಟೆಂಟ್ ಹಾಕಿಕೊಂಡಿದ್ದರು. ನಮ್ಮ ಮನೆಯ ಟ್ಯಾರಿಸ್ ಮೇಲೆ ನಿಂತರೆ ಅವರ ಟೆಂಟ್ ಗಳು ಕಾಣುತ್ತಿತ್ತು. ಸಾಯಂಕಾಲ ಆಯಿತೂಂದ್ರೆ ರೊಟ್ಟಿ ತಟ್ಟೋ ಕೆಲ್ಸ. ಗ್ರಾನೈಟ್ ಕಲ್ಲಿನ ಮೇಲೆ ಜೋಳದ ರೊಟ್ಟಿ ತಟ್ಟೋದೇ ಒಂದು ಚೆಂದ.

ಒಂದು ದಿನ ಟ್ಯಾರಿಸ್ ಮೇಲೆ ನಿಂತುಕೊಂಡಿದ್ದೆವು. ಟೆಂಟ್ ಗಳಲ್ಲಿ ಬೆಳಕು ಕಾಣಿಸುತ್ತಿತ್ತು. ಎದುರು ಮನೆಯಿಂದ ಕೇಬಲ್ ಎಳೆದು ಎರಡು ಟ್ಯೂಬ್ ಲೈಟ್ ಹಾಕಲಾಗಿತ್ತು. ಒಂದು ಟೆಂಟ್ನ ಒಂದು ಪುಟ್ಟ ಹುಡುಗಿ ಸುಮಾರು 15-16 ವರ್ಷ ಇರಬಹುದು. ಅದಕ್ಕೆ ಸೀರೆ ಉಡಿಸಲಾಗಿತ್ತು. ಇನ್ನೊಂದು ಟೆಂಟ್ ನಿಂದ ಒಬ್ಬ ಹುಡುಗ ಒಂದು ಪಂಚೆ ಬಿಳಿ ಷರ್ಟ್ ಹಾಕಿ ರೆಡಿ ಆಗಿದ್ದ. ಇಬ್ಬರ ಕೈಯಲ್ಲಿ ಒಂದೊಂದು ಕಾಕಡ ಹೂವಿನ ಹಾರ. ಇಬ್ಬರೂ ಹಾರ ಬದಲಾಯಿಸಿಕೊಂಡರು. ಅಷ್ಟೆ ಮದುವೆ ಆಯಿತು. ಫೋಟೋಗ್ರಾಫರ್ ಒಂದು ಗ್ರೂಫ್ ಫೋಟೋ ತೆಗೆದ.  ನಂತರ ಮುಯ್ಯಿ. ಒಬ್ಬ ಒಂದು ಪುಸ್ತಕ ಪೆನ್ ಇಟ್ಟುಕೊಂಡು ನಿಂತಿದ್ದ. ಒಬ್ಬ ಬಂದವನೇ ಸಂಗಪ್ಪ 10 ರೂಪಾಯಿ ಅಂದ. ಇವನು ಬರಕೊಂಡ. ಇನ್ನೊಬ್ಬ ಬಂದ ಭೀಮಪ್ಪ 5 ರೂಪಾಯಿ. ಬಾಳಪ್ಪ 5 ರೂಪಾಯಿ.. ಧರಮಪ್ಪ 5 ರೂಪಾಯಿ ಹೀಗೆ ಒಬ್ಬೊಬ್ಬರು ಬಂದವರೇ ಕೂಗಿ ಹೇಳುತ್ತಿದ್ದರು. ಇವನು ಬರಕೊಳ್ಳುತ್ತಿದ್ದ.

ಆಮೇಲೆ ಊಟ. ಕೆಲವು ಹೆಂಗಸರು ರೊಟ್ಟಿ ತರಹನೇ ಏನೋ ತಟ್ಟುತ್ತಿದ್ದರು. ಬಹುಷ: ಒಬ್ಬಟ್ಟು ಇರಬಹುದು. ನೆಂಟರಿಷ್ಟರು ಸೇರಿದ್ದರು. ಎಲ್ಲರಿಗೂ ನೆಲದ ಮೇಲೆ ಕೂಡಿಸಿ ಮುತ್ತುಗದ ಎಲೆ ಹಾಕಲಾಯಿತು. ಒಂದೊಂದು ಒಬ್ಬಟ್ಟು ಹಾಕಲಾಯಿತು. ಆಮೇಲೆ ಅನ್ನ, ಸಾರು. ಅಷ್ಟೆ. ಮದುವೆ ಮುಗಿಯಿತು.

ಕೆಲವು ಮದುವೆಗಳಲ್ಲಿ ತಟ್ಟೆಯಲ್ಲಿ, ಎಲೆಯಲ್ಲಿ ವೇಸ್ಟ್ ಮಾಡುವ ಆಹಾರದಲ್ಲಿ ಇಂತಹ ಎಷ್ಟು ಮದುವೆಗಳನ್ನು ಮಾಡಬಹುದಲ್ವಾ? ತಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಯಾಕೆ ಹಾಕಿಸಿಕೊಳ್ಳಬಾರದು?  ತಮಗೆ ಇಷ್ಟವಿಲ್ಲದನ್ನು ಹಾಕೋಕೆ ಮುಂಚೇನೆ ಬೇಡ ಅಂತ ಹೇಳಬಹುದಲ್ಲಾ. ಎಲೆ ತುಂಬಾ ಹಾಕಿಸಿಕೊಂಡು ಕಾಟಾಚಾರಕ್ಕೆ ತಿಂದಂತೆ ಮಾಡಿ ಉಳಿದದ್ದನ್ನು ವೇಸ್ಟ್ ಮಾಡುವುದು ಅದೇನು ಹೆಚ್ಚುಗಾರಿಕೆ? ಆಕಸ್ಮಾತ್ ಉಳಿದರೂ ಅನಾಥಾಶ್ರಮಕ್ಕೆ ನೀಡಬಹುದಲ್ಲಾ. ಆ ಒಂದು ದಿನವಾದರೂ ಅನಾಥ ಮಕ್ಕಳ ಹೊಟ್ಟೆ ತುಂಬಿದ ನಗುವಿಗೆ ಕಾರಣರಾಗಬಹುದಲ್ಲಾ. ಈಗಿನ ಕಾಲದಲ್ಲಿ ಬೆಲೆ ಏರಿಕೆಯಿಂದಾಗಿ ಯಾವುದರ ಬೆಲೆಯೂ ಕಡಿಮೆ ಇಲ್ಲ. ಮದುವೆ ಮಾಡಿಸುವವರು ಕೂಡಾ ಸಿಕ್ಕಾಪಟ್ಟೆ ಐಟಂಗಳನ್ನು ಮಾಡಿಸದೆ ಅವಶ್ಯಕವಾದಷ್ಟು ಮಾತ್ರ ಮಾಡಿಸುವುದು ಸೂಕ್ತ ಅಂತ ಅನ್ನಿಸುವುದಿಲ್ಲವೇ?


Friday 17 February 2012

ಆ ದಿನಗಳು


ನೆನಪಾಗುತ್ತಿದೆ ಬಾಲ್ಯದ ಆ ದಿನಗಳು.

ಪಿರಿಪಿರಿ ಮಳೆಯಲ್ಲಿ ಮೂರು ನಾಲ್ಕು ಜನ ಸೇರಿ ತೂತಾದ ಒಂದು ಕೊಡೆ ಹಿಡ್ಕೊಂಡು ಶಾಲೆಗೆ ಹೋಗುತ್ತಿದ್ದುದ್ದು, ಜೋರು ಮಳೆಗೆ ಶಾಲೆಗೆ ರಜೆ ಕೊಟ್ಟಾಗ ಮಳೆಯಲ್ಲಿ ನೆನೆಯುತ್ತಾ ಸುತ್ತಾಡಿಕೊಂಡು ಮನೆ ಸೇರುತ್ತಿದ್ದುದು. ಶಾಲೆಯಿಂದ ಬಂದ ಕೂಡಲೇ ಚೀಲ ಬಿಸಾಕಿ ಕುಂಟೆಬಿಲ್ಲೆ, ಲಗೋರಿ, ಚಿನ್ನಿದಾಂಡು, ಬುಗುರಿ, ಮರಕೋತಿ ಆಟ ಆಡುತ್ತಿದ್ದುದು; ಸ್ಕೂಲ್ ಡೇಗೆ ಟಮ್ಕಿ ಡ್ಯಾನ್ಸ್ ಆಡುತ್ತಿದ್ದುದು. ಒಮ್ಮೆ ಕಣ್ಣಾಮುಚ್ಚಾಲೆ ಆಟ ಆಡುವಾಗ ನಾನು ಮಂಚದ ಕೆಳಗೆ ಬಚ್ಚಿಟ್ಟುಕೊಂಡವಳು ಅಲ್ಲಿಯೇ ನಿದ್ದೆ ಹೋಗಿದ್ದು; ನಾನು ಕಾಣಿಸುತ್ತಿಲ್ಲ ಅಂತ ಗಲಾಟೆ ಬಿದ್ದಾಗ ನನಗೆ ಎಚ್ಚರವಾಗಿ ಇನ್ನೆಲ್ಲಿ ಹೊಡೀತಾರೋ ಅಂತ ಪುನ: ನಿದ್ದೆ ಬಂದಂತೆ ನಟಿಸಿದ್ದು. ಅಕ್ಕ ನೋಡಿ ದರದರ ಅಂತ ಎಳೆದಿದ್ದು. ಮದುವೆ ಮನೆಗೆ ಹೋದ್ರೆ ಮೈಕ್ ಹಿಡ್ಕೊಂಡು ಹಾಡುತ್ತಿದ್ದುದು; ಊಟಕ್ಕೆ ಕೂತರೆ ಪಾಯಸ ಯಾವಾಗ ಬರುತ್ತದೆ ಅಂತ ಕಾಯುತ್ತಿದ್ದುದು.

ಗಾಳಿ ಬಂದಾಗ ಪಟಪಟ ಅಂತ ಬೀಳುತ್ತಿದ್ದ ಮಾವಿನಹಣ್ಣನ್ನು ಆರಿಸಿಕೊಂಡು ಬರಲು ಓಡುತ್ತಿದ್ದುದು.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂದೆ ಸ್ಮಶಾನ. ಅಲ್ಲಿ ಏನಾದ್ರೂ ಹೆಣ ಸುಡುತ್ತಿದ್ದರೆ ಒಬ್ಬಳೇ ಸಂಕ ದಾಟಲು ಹೆದರಿ ಯಾರಾದ್ರೂ ಆ ದಾರೀಲಿ ಬರುವವರೆಗೆ ಕಾಯುತ್ತಿದ್ದುದು; ಜಾತ್ರೇಲಿ ತೇರಿನ ದಿನ ಹೊಡೆಯುತ್ತಿದ್ದ ಬೇಡಿಗೆ(ಪಟಾಕಿ) ಹೆದರುತ್ತಿದ್ದುದು. ಬೇತಾಳದ ಹಿಂದೆ ಹೋಗುತ್ತಿದ್ದುದು. ಐಸ್ ಕ್ರೀಂ ತಿನ್ನುತ್ತಿದ್ದುದು.. ತೊಟ್ಟಿಲಲ್ಲಿ ಕೂರುತ್ತಿದ್ದುದು. ಸರ್ಕಸ್ ಗೆ ಹೋಗುತ್ತಿದ್ದುದು. ಮನೆಮಂದಿ ಎಲ್ಲಾ ಒಟ್ಟಾಗಿ ಸಿನೆಮಾಗೆ ಹೋಗುತ್ತಿದ್ದುದು. ಬೇಸಿಗೆ ರಜೆ ಬಂತೂಂದ್ರೆ ಕೆಮ್ಮಿಂಜೆ ಅತ್ತಿಗೆಮ್ಮನ ಮನೆಗೆ ಹೋಗುತ್ತಿದ್ದುದು. ಅಲ್ಲಿ ಮನೆಯ ಮುಂದೆ ಹರಿಯುತ್ತಿದ್ದ ತೋಡಿನಲ್ಲಿ ಈಜು ಕಲಿಯುತ್ತಿದ್ದುದು. ರಜೆಯಲ್ಲಿ ಅಪ್ಪ ಅಮ್ಮ ಆಟ ಆಡುತ್ತಿದ್ದುದು. ನಾನು ಅಮ್ಮನ ಸೀರೆ ಉಟ್ಕೊಂಡು ಅಮ್ಮ ಆಗುತ್ತಿದ್ದುದು. ಒಂದನೇ ತಾರೀಕು ಬಂತೂಂದ್ರೆ ಸಂಬಳದ ದಿನ ಅಪ್ಪ, ಅಣ್ಣ ತರುತ್ತಿದ್ದ ಸ್ವೀಟಿಗೆ ಕಾಯುತ್ತಿದ್ದುದು. ನಿಂಗೆ ಜಾಸ್ತಿ ನಂಗೆ ಕಡಿಮೆ ಅಂತ ಜಗಳವಾಡುತ್ತಿದ್ದುದು. ಸಾಲಾಗಿ ಊಟಕ್ಕೆ ಕೂತರೆ ನನ್ನ ತಟ್ಟೆಗೆ ಹಾಕಿದ್ದ ಮೀನು ಮಾಯವಾಗಿ ಪಕ್ಕದ ತಟ್ಟೆಯಲ್ಲಿರುತ್ತಿದ್ದುದು.

ಯುಗಾದಿ ಹಬ್ಬಕ್ಕೆ ಮಾತ್ರ ಕೊಡಿಸುತ್ತಿದ್ದ ಹೊಸ ಬಟ್ಟೆಯನ್ನು ಎಲ್ಲರಿಗೂ ತೋರಿಸಿ ಸಂಭ್ರಮಿಸುತ್ತಿದ್ದುದು. ದೀಪಾವಳಿಗೆ ಮೈಗೆ ಎಣ್ಣೆ ಹಚ್ಚಿಕೊಂಡು ರಾತ್ರಿ ಎಲ್ಲಾ ಹುಲಿವೇಷ ಕುಣಿಯುತ್ತಿದ್ದುದು. ತಾಳಿಂಬು ಆಡುತ್ತಿದ್ದುದು. ಬೆಳ್ಳಂಬೆಳಿಗ್ಗೆ ಸ್ನಾನಮಾಡಿ ಅಮ್ಮ ಮಾಡುತ್ತಿದ್ದ ಸಿಹಿಅವಲಕ್ಕಿ, ದೋಸೆ ತಿನ್ನುತ್ತಿದ್ದುದು. ತುಳಿಸಿಪೂಜೆ ದಿನ ಪೈಪೋಟಿ ಮೇಲೆ ಡೆಕೊರೇಷನ್ ಮಾಡುತ್ತಿದ್ದುದು. ಗೂಡುದೀಪ ಮಾಡುತ್ತಿದ್ದುದು. ನೀರಿನ ಹಂಡೆಯಲ್ಲಿ ಸರ ಪಟಾಕಿ ಹೊಡೆಯುತ್ತಿದ್ದುದು. ದಸರಾದಲ್ಲಿ ಮನೆಮನೆಗೆ ಬರುತ್ತಿದ್ದ ಹುಲಿವೇಷ, ಕರಡಿ ವೇಷದ ಹಿಂದೆ ಹಿಂದೆ ಹೋಗುತ್ತಿದ್ದುದು. ಬೇಲಿಯಲ್ಲಿರುವ ಹೂವನ್ನೆಲ್ಲ ಕಿತ್ತು ದೊಡ್ಡ ದೊಡ್ಡ ಹಾರ ಮಾಡಿ ದೇವಸ್ಥಾನಕ್ಕೆ ಕೊಡುತ್ತಿದ್ದುದು. ಯಕ್ಷಗಾನ(ಆಟ)ದಲ್ಲಿ ರಾಕ್ಷಸ ವೇಷಧಾರಿ ಬಂದಾಗ ಹೆದರಿ ಒಂದು ಕಣ್ಣಿಂದ ನೋಡುತ್ತಿದ್ದುದು. ಮರುದಿನ ಯಾರು ಹೆಚ್ಚು ಸುತ್ತುತ್ತಾರೆ ಅಂತ ಪೈಪೋಟಿ ಮೇಲೆ ಸುತ್ತುತ್ತಿದ್ದುದು. ಎಂತಹ ಸುಂದರ ನೆನಪುಗಳು. ಕಪಟ ವಂಚನೆಯನ್ನರಿಯದ  ಸುಂದರ ಜೀವನ.

ಸವಿನೆನಪುಗಳು ಬೇಕು ಸವಿಯಲೀ ಬದುಕು…

ನೆನಪು ಮರುಕಳಿಸಿದಾಗಲೆಲ್ಲ ಮಕ್ಕಳಲ್ಲಿ ನೆನಪನ್ನು ಬಿಚ್ಚಿಡುತ್ತೇವೆ. ಅವರು ಕುತೂಹಲದಿಂದ ಮುಂದೇನಾಯ್ತು ಅಂತ ಕೇಳುವಾಗ ಇನ್ನೂ ಉತ್ಸಾಹದಿಂದ ಹೇಳುತ್ತೇವೆ.

ಈಗಿನ ಮಕ್ಕಳಿಗೆ ಎಲ್ಲವೂ ಇದೆ. ಬಯಸಿದ್ದು ತಕ್ಷಣ ಸಿಗುತ್ತದೆ. ಆದರೆ ಮುಂದೆ, ಅವರ ಮಕ್ಕಳಲ್ಲಿ ಹೇಳಲು, ಮಕ್ಕಳು ಮುಂದೇನಾಯ್ತು ಅಂತ ಕೇಳುವಂತಹ ಘಟನೆಗಳು ಬಹುಷ: ಅಷ್ಟಾಗಿ ಇರಲಾರವು. ಮಣಭಾರ ಪುಸ್ತಕ, ಹೋಂ ವರ್ಕ, ಟಿವಿ, ಇಂಟರ್ ನೆಟ್ ಇಷ್ಟೇ ಅವರ ಪ್ರಪಂಚ. ಏನೇ ಆದರೂ ನಾವು ಅನುಭವಿಸಿಷ್ಟು ಬಾಲ್ಯ ಜೀವನದ ಸುಂದರ, ಸಂತಸದ ಕ್ಷಣಗಳನ್ನು ನಮ್ಮ ಮಕ್ಕಳು ಅನುಭವಿಸುತ್ತಿಲ್ಲ. ನಾವು ಕೂಡಾ ಅವರಿಗೆ ಸಾಕಷ್ಟು ಸ್ವಾತಂತ್ರ್ಯ ನೀಡುತ್ತಿಲ್ಲ ಅಂತ ಅನ್ನಿಸುವುದಿಲ್ಲವೆ?






ಮುಗ್ದೆ


ದೊಡ್ಡ ಕಂಪೆನಿಯಲ್ಲಿ

ದೊಡ್ಡ ಹುದ್ದೆಯಲ್ಲಿದ್ದ ಅವಳ ಗಂಡ

ದಿನಾ ಬೆಳಿಗ್ಗೆ ಹೋಗುವಾಗ

ಗಾರ್ಮೇಂಟ್ ಕೆಲಸಕ್ಕೆ ಹೋಗುತ್ತಿದ್ದ

ಹುಡುಗಿಯನ್ನು ಕಾರಲ್ಲಿ

ಕೂರಿಸಿಕೊಂಡು ಹೋಗುತ್ತಿದ್ದುದು

ಕೊನೆಯವರೆಗೂ ಅವಳಿಗೆ

ಗೊತ್ತಾಗಲೇ ಇಲ್ಲ…

Thursday 16 February 2012

ಜಾಣೆ


ತಳ್ಳೋ ಗಾಡೀಲಿ ತರಕಾರಿ ಮಾರಿಕೊಂಡು

ಬರುತ್ತಿದ್ದ ಆತ ತರಕಾರೀ….ಅಂತ

ಕೂಗಿದಾಕ್ಷಣ ಸಿಂಗರಿಸಿಕೊಂಡು ಬರುತ್ತಿದ್ದ ಆಕೆ..

ಅಕ್ಕಪಕ್ಕದವರು ಗುಸುಗುಸು ಪಿಸುಪಿಸು ಅಂತ

ಮಾತಾಡಿಕೊಳ್ಳುತ್ತಿದ್ದ ವಿಷಯ ಆಕೆಯ ಗಂಡನಿಗೆ ಗೊತ್ತಾಗಿ

ನಾಳೆಯಿಂದ ಈ ಬೀದೀಲಿ ಬಂದ್ರೆ ಜೋಕೆ

ಅಂತ ಹೊಡೆದಟ್ಟಿದ ಮರುದಿನದಿಂದ ಆತ ಬರಲಿಲ್ಲ

ಯಾಕಂದ್ರೆ ಅಂದೇ ರಾತ್ರಿ ಆತನೊಂದಿಗೆ ಓಡಿಹೋದ ಆಕೆ

ಅವನು ತರಕಾರಿ ಮಾರೋದನ್ನೇ ನಿಲ್ಲಿಸಿಬಿಟ್ಟಳು

ತರಕಾರೀ..... ಅಂತ ಮಗದೊಬ್ಬಳ

ಮನೆ ಮುಂದೆ ಹೋಗಿ ಕೂಗಬಾರದು ಅಂತ…

My daughter


ನನ್ನ ಮಗಳು



ಚೊಚ್ಚಲ ಹೆರಿಗೆಗೆಂದು ತವರುಮನೆಗೆ ಹೋಗಿದ್ದ ಅವಳಿಗೆ ಹೆರಿಗೆ ನೋವು ಶುರುವಾಗಿದೆ ಅಂತ ಫೋನ್ ಬಂದಾಕ್ಷಣ ಆ ಕ್ಷಣಕ್ಕಾಗಿಯೇ ಕಾಯುತ್ತಿದ್ದ ನಾನು ರಾತ್ರಿ ಬಸ್ಸಿಗೆ ಊರಿಗೆ ಹೊರಟು ನಿಂತಿದ್ದೆ. ಮರುದಿನ ಬೆಳಿಗ್ಗೆ ಆಸ್ಪತ್ರೆ ತಲುಪಿದ ತಕ್ಷಣ ಅತ್ತೆಯವರು ಮುದ್ದಾದ ಹೆಣ್ಣು ಮಗುವನ್ನು ಬಟ್ಟೆಯಲ್ಲಿ ಸುತ್ತಿ ನನ್ನ ಕೈಯಲ್ಲಿಟ್ಟಾಗ ಆ ಸ್ಪರ್ಶಕ್ಕೆ ಮೈಮನ ಎಲ್ಲಾ ರೋಮಾಂಚನ. ಪಕ್ಕದಲ್ಲಿ ರಾತ್ರಿ ಎಲ್ಲಾ ನೋವು ತಿಂದು ಮಲಗಿದ್ದ ಅವಳು ಸ್ಪಲ್ಪ ಸುಸ್ತಾದಂತೆ ಕಂಡರೂ ಮುಖದಲ್ಲಿ ಸಂತಸ ಎದ್ದು ಕಾಣುತ್ತಿತ್ತು.
ನನ್ನವಳು ಕೆಲಸಕ್ಕೆ ಹೋಗುತ್ತಿದ್ದುದರಿಂದ 3 ತಿಂಗಳಿಗೇ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೆ. ಅತ್ತೆನೂ ಜೊತೆಯಲ್ಲಿ ಬಂದಿದ್ದರು. ನನಗೆ ಶಿಫ್ಟ್ ಡ್ಯೂಟಿ ಇರುತ್ತಿದ್ದುದರಿಂದ ಮಗಳ ಜೊತೆ ಹೆಚ್ಚಾಗಿ ಸಮಯ ಕಳೆಯುತ್ತಿದ್ದೆ. ಎಳೇ ಕಂದನಿಗೆ ಎಣ್ಣೆ ಹಚ್ಚುವುದು. ಸ್ನಾನ ಮಾಡಿಸುವಾಗ ನೀರು ಹಾಕುವುದು. ಸಾಂಬ್ರಾಣಿ ರೆಡಿ ಮಾಡುವುದು. ತೊಟ್ಟಿಲು ತೂಗಿ ಮಲಗಿಸುವುದು. ಜ್ಯೂಸ್ ಕುಡಿಸೋದು ಸೆರಿಲ್ಯಾಕ್ ತಿನ್ನಿಸೋದು ಎಲ್ಲಾ ಇಷ್ಟಪಟ್ಟು ಮಾಡುತ್ತಿದ್ದೆ. ಜವಾಬ್ದಾರಿಯಿಲ್ಲದೆ ಗುಂಡ್ರುಗೋವಿಯಂತಿದ್ದ ನಾನು ಮಗಳು ಹುಟ್ಟಿದಾಕ್ಷಣದಿಂದ ಪಕ್ಕಾ ಸಂಸಾರಸ್ತನಾಗಿಬಿಟ್ಟೆ. ಕ್ಷಣವೂ ಮಗಳನ್ನು ಬಿಟ್ಟಿರಲಾಗುತ್ತಿರಲಿಲ್ಲ. ಅಂದು ಸ್ಕೂಲ್ ಗೆ ಸೇರಿಸೋ ಸಂಭ್ರಮ. ಎಲ್ಲಾ ರೆಡಿಯಾಗಿ ಗಣೇಶ ದೇವಸ್ಥಾನಕ್ಕೆ ಹೋಗಿ ತಾತ ಪೂಜಾರಿಯಿಂದ ‘ಓಂ’ ಬರೆಸಿ ಸ್ಕೂಲ್ ಗೆ ಬಿಟ್ಟು ಬರುವಾಗ ಅವಳು ಒಂದೇ ಸಮನೆ ಅಳುತ್ತಿದ್ದಳು. ಆಮೇಲೆ ದಿನಾ ಸ್ಕೂಲ್ ನಿಂದ ಕರೆದುಕೊಂಡು ಬರುವುದು ಸ್ವಿಮಿಂಗ್ ಗೆ, ಯೋಗ ಕ್ಲಾಸ್ ಗೆ ಕರೆದುಕೊಂಡು ಹೋಗುವುದು ಇವೆಲ್ಲಾ ನನ್ನ ದಿನಚರಿಯಲ್ಲಿ ಸೇರಿತ್ತು. ಪ್ರತಿ ವರ್ಷವೂ ಅವಳು ಫ್ರೈಝ್ ತಗೊಂಡು ಬರುವಾಗ ಹೆಮ್ಮೆ ಎನಿಸುತ್ತಿತ್ತು. ಸೈಕಲ್ ತುಳಿಯಲು ಕಲಿಸಿದ್ದು ಆಮೇಲೆ ಇಂಜಿನಿಯರಿಂಗ್ ಸೇರಿದಾಗ ಸ್ಕೂಟಿ ಕೊಡಿಸಿದ್ದು ಕ್ಯಾಂಪಸ್ ಸೆಲೆಕ್ಷನ್ ಆಗಿದ್ದು. ಕೆಲಸಕ್ಕೆ ಸೇರಿದ್ದು. ನನ್ನ ಮಗಳು ಅಂತ ಹೆಮ್ಮೆಯಿಂದ  ಹೇಳಿಕೊಳ್ಳುತ್ತಿದ್ದೆ. ನಂತರ ಒಳ್ಳೆಯ ಸಂಬಂಧ ಬಂತೆಂದು ಮದುವೇನೂ ಮಾಡಿಬಿಟ್ಟೆವು. ಮದುವೆಯ ದಿನ ಹೆಣ್ಣಿಳಿಸಿಕೊಡುವಾಗ ಎಲ್ಲರೂ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಮಗಳೂ ಅಳುತ್ತಿದ್ದಳು. ನಾನು ಅಳಲಿಲ್ಲ ಯಾಕೆಂದ್ರೆ ನಾನು ಅಳುವುದನ್ನು ಕಂಡ್ರೆ ಅವಳ ಅಳು ಜಾಸ್ತಿಯಾಗಬಹುದು ಅಂತ.  ಅಂದು ರಾತ್ರಿ  ನಿದ್ದೆ ಬರಲಿಲ್ಲ. ಆದರೆ ದಿಂಬು ಮಾತ್ರ ಒದ್ದೆಯಾಗುತ್ತಲೇ ಇತ್ತು…