Thursday 29 March 2012

ಗಣೇಶ


     ಸುಮಾರು 30 ವರ್ಷಗಳ ಹಿಂದಿನ ಮಾತು. ನಮ್ಮೊಂದಿಗೆ ಆಟವಾಡಿಕೊಂಡಿದ್ದ ತಮ್ಮನ ಸ್ನೇಹಿತ ಗಣೇಶ ಆಗ ತಾನೇ ನಾದಸ್ವರ ನುಡಿಸಲು ಆರಂಭಿಸಿದ್ದ. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಪೂಜೆಯ ವೇಳೆಯಲ್ಲಿ ನಾದಸ್ವರ ನುಡಿಸುತ್ತಿದ್ದ ಈತ ಕ್ರಮೇಣ ಮದುವೆ ಮುಂಜಿ ನಾಮಕರಣದಲ್ಲಿ ನುಡಿಸಲಾರಂಭಿಸಿದ. ಸ್ವಲ್ಪ ಸ್ವಲ್ಪಾನೇ ಹೆಸರು ಗಳಿಸಲಾರಂಭಿಸಿದ್ದ. ಜನರು ಈತನನ್ನು ಗುರುತಿಸಲಾರಂಭಿಸಿದ್ದರು. ಆಗ ಅವನಿಗೆ ಸುಮಾರು 18-19 ವರ್ಷ ವಯಸ್ಸಿರಬಹುದು.

     ಅಂದು ನನ್ನ ಮದುವೆಗೆ ಬೆಂಗಳೂರಿನಿಂದ ಭಾವೀ ಗಂಡನ ಸುಮಾರು 20 ಜನ ಸ್ನೇಹಿತರು ಮಂಗಳೂರಿಗೆ ಬಂದಿದ್ದರು. ತಮ್ಮನೊಂದಿಗೆ ಆಟವಾಡಲು ದಿನಾ ನಮ್ಮ ಮನೆಗೆ ಬರುತ್ತಿದ್ದ ಗಣೇಶ ನಮ್ಮ ಮನೆಯವರಲ್ಲಿ ಒಬ್ಬನಾಗಿದ್ದ. ನನ್ನ ಮದುವೆಗೆ ತಾನೇ ನಾದಸ್ವರ ನುಡಿಸುವುದಾಗಿ, ಆದರೆ ಸಂಭಾವನೆ ಮಾತ್ರ ತೆಗೆದುಕೊಳ್ಳುವುದಿಲ್ಲವೆಂದು ಮಾತು ತೆಗೆದುಕೊಂಡಿದ್ದ. ಆ ಸಮಯದಲ್ಲಿ ಶಂಕರಾಭರಣ, ಸನಾದಿ ಅಪ್ಪಣ್ಣ ಸಿನೆಮಾದ ಹಾಡುಗಳು ತುಂಬಾ ಜನಪ್ರಿಯವಾಗಿತ್ತು. ಗಣೇಶ ನುಡಿಸಲಾರಂಭಿಸಿದ. ಮದುವೆಗೆ ಬೆಂಗಳೂರಿನಿಂದ ಬಂದ ಗಂಡನ ಗೆಳೆಯರೆಲ್ಲರೂ ಗಣೇಶನ ಮುಂದೆ ಸೇರಿ ಒಂದಾದ ಮೇಲೆ ಒಂದು ತಮಗಿಷ್ಟವಾದ ಹಾಡನ್ನು ನುಡಿಸಲು ಕೇಳಲಾರಂಭಿಸಿದರು. ಗಣೇಶ ಕೂಡಾ ಸ್ವಲ್ಪವೂ ಬೇಸರವಿಲ್ಲದೆ ಅವರು ಕೇಳಿದ ಹಾಡುಗಳನ್ನು ನುಡಿಸುತ್ತಿದ್ದ.

     ಗಣೇಶ ನನ್ನ ಮಗಳ ಮದುವೆಗೂ ನಾದಸ್ವರ ನುಡಿಸಲು ಒಪ್ಪಿದ್ದ.. ಗಣೇಶ ಇಂದು ತುಂಬಾ ಹೆಸರು ಗಳಿಸಿ ತುಂಬಾ ಎತ್ತರಕ್ಕೆ ಬೆಳೆದಿದ್ದ. ಒಂದು ಕಾರ್ಯಕ್ರಮಕ್ಕೆ 25 ರಿಂದ 30 ಸಾವಿರ ರೂ.ಗಳನ್ನು ಪಡೆಯುತ್ತಿದ್ದ. ವಿದೇಶಗಳಲ್ಲೂ ಹಲವು ಕಾರ್ಯಕ್ರಮಗಳನ್ನು ನೀಡಿದ್ದ. ಮಗಳ ಮದುವೆಗೂ ನಮ್ಮ ಮದುವೆಗೆ ಬಂದಿದ್ದ ನನ್ನ ಗಂಡನ ಸ್ನೇಹಿತರಲ್ಲಿ ಕೆಲವರು ಬಂದಿದ್ದರು. ಇಂದೂ ಅವರು ಗಣೇಶನ ಮುಂದೆ ಸೇರಿ ಅವರಿಗಿಷ್ಟವಾದ ಹಾಡುಗಳನ್ನು ನುಡಿಸಲು ಕೇಳುತ್ತಿದ್ದರು. ಅದೇ ಶಂಕರಾಭರಣಂ ಹಾಡನ್ನು ನುಡಿಸಲು ಕೇಳಿದರು. ಗಣೇಶ ನುಡಿಸಲಾರಂಭಿಸಿದ.



     ಮಗಳ ಮದುವೇಲಿ ಗಣೇಶನಿಗೆ ಸನ್ಮಾನ ಮಾಡಬೇಕೆಂದು ತೀರ್ಮಾನಿಸಿ ಶಾಲು ಹಣ್ಣುಗಳನ್ನು ತಂದು ಮದುವೆ ಮಂಟಪಕ್ಕೆ ಕರೆದು ಸನ್ಮಾನ ಮಾಡಿದೆವು. ಅವನು 2011ರ ನವೆಂಬರ್ ನಲ್ಲಿ ಅತ್ಯುತ್ತಮ ನಾದಸ್ವರ ವಾದಕ ಎಂದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಸಮಾರಂಭ. ಮಾನ್ಯ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪ್ರಧಾನ. ನಾವು ಮಗಳ ಸಮೇತ ಸಮಾರಂಭಕ್ಕೆ ಹೋಗಿದ್ದೆವು. ಪ್ರಶಸ್ತಿಗೆ ಆಯ್ಕೆಯಾದವರನ್ನು ಒಬ್ಬೊಬ್ಬರನ್ನೇ ಸ್ಟೇಜಿಗೆ ಕರೆದು ಕುಳ್ಳಿರಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿತ್ತು. ಗಣೇಶನ ಸರದಿ ಬಂತು. ನಮ್ಮೂರ ಹುಡುಗ, ಪಕ್ಕದ್ಮನೆ ಹುಡುಗ ಗಂಭೀರವಾಗಿ ಸ್ಠೇಜಿಗೆ ಹತ್ತುತ್ತಿದ್ದಂತೆ ಅಭಿಮಾನದಿಂದ ಮೈ ರೋಮಾಂಚನವಾಗುತ್ತಿತ್ತು. ಬಹುಷ: ಅವನು ನಮ್ಮನ್ನು ಅಲ್ಲಿ ನಿರೀಕ್ಷಿಸಿರಲಿಲ್ಲ. ಸ್ಟೇಜಿಗೆ ಹತ್ತಿ ಕೈ ಮುಗಿಯುತ್ತಿದ್ದಂತೆ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿದ್ದ ನಮ್ಮನ್ನು ಕಂಡವನೇ ನಮ್ಮ ಕಡೆ ಕೈ ಬೀಸಿದ. ಸಂತೋಷ ಅವನ ಮುಖದಲ್ಲಿ ಎದ್ದು ಕಾಣುತ್ತಿತ್ತು. ನಮಗೂ ಹಾಗೆಯೇ ಆಗಿತ್ತು. ಯಾರಾದರೂ ನೋಡಬಹುದು ಅನ್ನುವ ಅರಿವೂ ಇಲ್ಲದೆ ಆನಂದಬಾಷ್ಪ ಉದುರುತ್ತಿತ್ತು.

*****

No comments:

Post a Comment