Sunday 29 April 2012

ತುಡಿತ


ಅಪ್ಪನ ತಪ್ಪೋ ಅಮ್ಮನ ತಪ್ಪೋ ಗೊತ್ತಿಲ್ಲ. ನಾನಂತೂ ಒಬ್ಬಂಟಿಯಾಗಿಯೇ ಬೆಳೆದೆ. ಅಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಆ ಕಾಲದಲ್ಲಿ ಹೆಂಗಸರು ಕೆಲಸಕ್ಕೆ ಹೋಗುತ್ತಿದ್ದುದೇ ಕಡಿಮೆ. ಅಪ್ಪ ಸ್ಪುರದ್ರೂಪಿ ಅಂತ ಕೇಳಿದ್ದೆ. ಅಮ್ಮ ಸುಮಾರಾಗಿದ್ದರು. ಅಪ್ಪನ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹತ್ತು ಜನ ಮಕ್ಕಳು ದೊಡ್ಡ ಸಂಸಾರ. ಹಿಂದು ಮುಂದು ಯೋಚನೆ ಮಾಡದೆ ಮದುವೆಗೆ ಒಪ್ಪಿದ್ದರು. ಆದರೆ ಸಂಬಂಧ ಜಾಸ್ತಿ ದಿನ ಉಳಿಯಲಿಲ್ಲ. ಬಾಣಂತನಕ್ಕೆಂದು ತವರು ಮನೆಗೆ ಬಂದಿದ್ದ ಅಮ್ಮ 40 ದಿನಕ್ಕೆ ನನ್ನನ್ನು ಅಪ್ಪನ ಮನೆಗೆ ಕರೆದುಕೊಂಡು ಹೋದವರು ನನ್ನನ್ನು ಅಲ್ಲಿಯೇ ಬಿಟ್ಟು ತವರು ಮನೆಗೆ ವಾಪಸ್ಸು ಬಂದಿದ್ದರು. ಆಮೇಲೆ ಕೋರ್ಟ್ ಕಚೇರಿ ಡೈವೋರ್ಸ್ ಎಲ್ಲಾ ಆಯಿತು. ಡೈವೋರ್ಸ್ ದಿನದಂದು, 5 ವರ್ಷಗಳ ಬಳಿಕ ಮಗುವನ್ನು ತಂದೆ ಹತ್ತಿರ ಕರೆದುಕೊಂಡು ಹೋಗಬಹುದು. ಅಲ್ಲಿಯವರೆಗೆ ತಾಯಿಯ ಹತ್ತಿರ ಇರಬೇಕು ಎಂದು ತೀರ್ಪು ನೀಡಲಾಯಿತು. ಅಪ್ಪನ ಮನೆಯಲ್ಲಿ ನನ್ನನ್ನು ಬಿಟ್ಟು ಹೋದಾಗಿನಿಂದ ನನ್ನನ್ನು ನೋಡಿಕೊಳ್ಳುತ್ತಿದ್ದ ಅಪ್ಪಮ್ಮ ಡೈವೋರ್ಸ್ ದಿನ ನನ್ನನ್ನು ಅಮ್ಮನ ಹತ್ತಿರ ಕೊಡಬೇಕಾದ್ರೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರಂತೆ.  

ಅಪ್ಪ ಇನ್ನೊಂದು ಮದುವೆ ಆದರು. ಅವರಿಗೂ ಮೂರು ಮಕ್ಕಳಾದವು. 5 ವರ್ಷಗಳ ನಂತರ ನನ್ನನ್ನು ಕರೆದುಕೊಂಡು ಹೋಗುವುದಿರಲಿ ನನ್ನನ್ನು ಸಂಪೂರ್ಣ ಮರೆತೇ ಬಿಟ್ಟಿದ್ದರು. ಆದ್ದರಿಂದ ಅಮ್ಮನೊಂದಿಗೇ ಬೆಳೆದೆ. ಅಮ್ಮ ಅಪ್ಪನಿಲ್ಲದ ಕೊರತೆಯ ಅರಿವಾಗದಂತೆ ನನ್ನನ್ನು ಬೆಳೆಸಿದರು. ಬಹುಷ: ಅಪ್ಪನ ಮನೆಯಲ್ಲಿರುತ್ತಿದ್ದರೂ ನಾನು ಅಷ್ಟು ಚೆನ್ನಾಗಿ ಬೆಳೆಯುತ್ತಿರಲಿಲ್ಲವೇನೋ. ಕೇಳೋಕೆ ಮುಂಚೇನೇ ಎಲ್ಲಾ ನನಗೆ ದೊರಕುತ್ತಿತ್ತು. ಅಪ್ಪ ಜೊತೆಯಲ್ಲಿಲ್ಲ ಅನ್ನೋ ಕೊರತೆ ಬಿಟ್ಟರೆ ನನಗೆ ಬೇರಾವ ಯೋಚನೇನೂ ಇರಲಿಲ್ಲ.

ಆದರೆ ಸ್ಕೂಲ್ ಗೆ ಹೋಗಲು ಶುರು ಮಾಡಿದ ಮೇಲೆ ಒಬ್ಬೊಬ್ಬರು ಒಂದೊಂದು ಮಾತಾಡುತ್ತಿದ್ದರು. ಫ್ರೆಂಡ್ಸ್ ಎಲ್ಲ ಜೊತೇಲಿ ಸೇರಿ, ಅವನಿಗೆ ಅಪ್ಪ ಇಲ್ಲ ಅಂತೆ ಕಣೋ. ಅವನ ಅಮ್ಮ ಅಪ್ಪನನ್ನು ಬಿಟ್ಟು ಓಡಿ ಬಂದಿದ್ದಾರಂತೆ ಕಣೋ. ಏನೇನೋ ಮಾತಾಡಿಕೊಳ್ಳುತ್ತಿದ್ದರು. ಕೆಲವು ಕಿವಿಗೆ ಬೀಳುತ್ತಿದ್ದುವು. ಅದರಿಂದ ಸ್ಕೂಲ್ ನಲ್ಲೂ ಯಾರ ಜೊತೆಗೂ ಸೇರದೆ ಅಲ್ಲೂ ಒಬ್ಬಂಟಿಯಾಗಿಯೇ ಇರುತ್ತಿದ್ದೆ. ನನ್ನ ಓದಾಯಿತು ನಾನಾಯಿತು. ಮನೆಯಲ್ಲೂ ನನ್ನ ಓರಗೆಯವರು ಯಾರೂ ಇರಲಿಲ್ಲವಾದ ಕಾರಣ ಮನೆಯಲ್ಲೂ ಏಕಾಂಗಿಯಾಗಿಯೇ ಬೆಳೆದೆ.

ದೊಡ್ಡವನಾಗುತ್ತಿದ್ದಂತೆ ಆಗಾಗ ಅಪ್ಪನ ನೆನಪು ಬರುತ್ತಿತ್ತು. ಅಪ್ಪನನ್ನು ಒಮ್ಮೆಯಾದರೂ ನೋಡಬೇಕು ಅಂತ ಮನಸ್ಸು ಹಾತೊರೆಯುತ್ತಿತ್ತು. ಅಮ್ಮಮ್ಮನಿಗೆ ಅಪ್ಪನ ಹೆಸರು ಕೇಳಿದ್ರೆ ಆಗುತ್ತಿರಲಿಲ್ಲ. ಆದಕಾರಣ ಕೇಳಲು ಭಯವಾಗಿ ಸುಮ್ಮನಿರುತ್ತಿದ್ದೆ. ಸಂಬಂಧಿಕರ ಮದುವೇಗೆ ಹೋದಲ್ಲಿ ಅಲ್ಲಿಗೆ ಅಪ್ಪ ಬಂದಿರಬಹುದೇನೋ ಅಂತ ಸುತ್ತಲೂ ಹುಡುಕುತ್ತಿದ್ದೆ. ಈ ಅಪ್ಪ ಅಮ್ಮಂದಿರು ಯಾಕೆ ಹೀಗೆ ಮಾಡುತ್ತಾರೆ. ತಾವು ಕಿತ್ತಾಡ್ಕೊಂಡು ಡೈವೋರ್ಸ್ ತಗೊಂಡು ಮಕ್ಕಳಿಗೆ ಅಪ್ಪ ಅಥವಾ ಅಮ್ಮನ ಪ್ರೀತಿಯಿಂದ ವಂಚಿತರಾಗುವಂತೆ ಮಾಡುತ್ತಾರೆ. ಯಾಕೆ ಮಕ್ಕಳ ಬಗ್ಗೆ ಯೋಚನೇನೇ ಮಾಡೋದಿಲ್ಲ. ಡೈವೋರ್ಸ್ ಅನ್ನೋ ಒಂದು ಪತ್ರ ಕೊಟ್ಟ ತಕ್ಷಣ ಸಂಬಂಧಗಳು ದೂರವಾಗಲು ಸಾಧ್ಯಾನಾ.

ಅಮ್ಮ ನನ್ನನ್ನು ಇಂಜಿನಿಯರಿಂಗ್ ಓದಿಸಿದ್ದರು. ಪೂನಾದಲ್ಲಿ ಒಳ್ಳೇ ಕಂಪೆನಿಯಲ್ಲಿ ಕೆಲಸ ಸಿಕ್ಕಿದ ಕಾರಣ ಊರು ಬಿಡಬೇಕಾಯಿತು. ಅಮ್ಮ ಅಮ್ಮಮ್ಮನ ಜೊತೆಯಲ್ಲಿಯೇ ಇದ್ದರು. ಊರು ಬಿಡಬೇಕಾದ್ರೆ ಅಮ್ಮ ಬಿಕ್ಕಿ ಬಿಕ್ಕಿ ಅತ್ತರು. ನನ್ನ ಸೌಮ್ಯ ಸ್ವಭಾವವನ್ನು ಇಷ್ಟಪಟ್ಟ ಸಹೋದ್ಯೋಗಿ ಒಬ್ಬಳು ಮದುವೆಯಾಗುವಂತೆ ಕೇಳಿಕೊಂಡಳು. ನನಗೂ ಒಂಟಿತನ ಸಾಕಾಗಿತ್ತು. ಅಮ್ಮನ ಒಪ್ಪಿಗೆ ಪಡೆದು ಅವಳನ್ನು ಮದುವೆಯಾದೆ.

ಈ ಮಧ್ಯೆ ಅಪ್ಪನ ಸಾವಿನ ವಿಷಯ ಅಮ್ಮನಿಂದ ತಿಳಿಯಿತು. ಬದುಕಿದ್ದಾಗ ಅಂತೂ ಅಪ್ಪನನ್ನು ನೋಡಲಿಲ್ಲ. ಕೊನೆ ಪಕ್ಷ ಸತ್ತಾಗಲಾದರೂ ಒಮ್ಮೆ ಮುಖ ನೋಡಿ ಬರಬೇಕು ಅಂತ ಮನಸ್ಸು ಕೂಗಿ ಹೇಳುತ್ತಿತ್ತು. ತಡೀಲಾರದೆ ನಾನು ನೋಡಿ ಬರುತ್ತೇನೆ ಅಂತ ಅಮ್ಮನಿಗೆ ತಿಳಿಸಿದೆ. ಅಮ್ಮಮ್ಮ ಹೋಗಲು ಬಿಡಲಿಲ್ಲ. ಈಗ ಹೋದಲ್ಲಿ ಆಸ್ತಿ ಪಾಲು ಕೇಳಲು ಬಂದಿದ್ದಾನೆ ಅಂದ್ಕೋಬಹುದು. ಹೋಗೋದು ಬೇಡ ಅಂದುಬಿಟ್ರು. ಅವರ ಮಾತನ್ನು ಮೀರುವ ಹಾಗಿರಲಿಲ್ಲ. ಏನೂ ಮಾಡಲಾಗದೆ ಮನಸ್ಸೊಳಗೇ ಅತ್ತೆ. ಅಪ್ಪನ ಆತ್ಮಕ್ಕೆ ಶಾಂತಿ ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸಿದೆ. ಮಗನಾಗಿ ಅದನ್ನು ಬಿಟ್ಟು ಬೇರೆ ಏನನ್ನೂ ನನ್ನಿಂದ ಮಾಡಲಾಗಲಿಲ್ಲ. ಕೊನೆಗೂ ನಾನು ಅಪ್ಪನನ್ನು ನೋಡಲೇ ಇಲ್ಲ. I love you dad. I miss you.

*****

Tuesday 17 April 2012

ಆತ್ಮ


ಜನ್ಮ ಮೃತ್ಯು ಜರಾ ವ್ಯಾಧಿ ಈ ನಾಲ್ಕರಲ್ಲಿ ಮನುಷ್ಯ ತುಂಬಾ ಭಯಪಡುವುದು ಮೃತ್ಯುವಿಗೆ. ಜನ್ಮ ಅಂದರೆ ಹುಟ್ಟು. ಹುಟ್ಟಿದ ತಕ್ಷಣ ಮಗು, ಎಲ್ಲೋ ಇದ್ದಿದ್ದು ಎಲ್ಲಿಗೋ ಬಂದಿದ್ದೀನಿ ಅಂತ ಒಮ್ಮೆ ಭಯಪಟ್ಟು ಕಿರುಚಿದರೂ ನಂತರ ಸುತ್ತ ಎಲ್ಲರೂ ಇದ್ದಾರೆ ಅಂತ ಧೈರ್ಯ ತಂದ್ಕೊಂಡು ಅಳೋದನ್ನ ನಿಲ್ಲಿಸುತ್ತೆ. ಜರಾ ಅಂದರೆ ಮುಪ್ಪು. ಇದು ಎಲ್ಲರಿಗೂ ಬರುವಂತಾದ್ದು. ಇದಕ್ಕೆ ಭಯಪಡುವ ಅವಶ್ಯಕತೆ ಇಲ್ಲ. ಕೆಲವರಿಗೆ ಬೇಗ ಬರುತ್ತೆ ಇನ್ನು ಕೆಲವರಿಗೆ ತಡವಾಗಿ ಬರುತ್ತೆ. ಅಂತೆಯೇ ವ್ಯಾಧಿ ಅಂದರೆ ರೋಗ. ಇದಕ್ಕೂ ಪರಿಹಾರವಿದೆ. ರೋಗ ಮನುಷ್ಯರಿಗೆ ಬರದೆ ಮರಕ್ಕೆ ಬರುತ್ತಾ ಅನ್ನೋ ರೂಢಿ ಮಾತಿದೆ. ಆದುದರಿಂದ ವ್ಯಾಧಿಗೂ ಭಯಪಡುವ ಅವಶ್ಯಕತೆ ಇಲ್ಲ. ಆದರೆ ಈ ಮೃತ್ಯು ಅಂದರೆ ಸಾವು ಅನ್ನೋದು ಒಂದು ನಿಗೂಢ. ಈ ಸಾವು ಹೇಳಿ ಕೇಳಿ ಬರೋದಿಲ್ಲ. ಇದು ಯಾವಾಗ ಬರುತ್ತೆ ಅಂತ ಯಾರಿಗೂ ಗೊತ್ತಿರೋದಿಲ್ಲ. ಪ್ರತಿ ಸಾವು ಕೂಡಾ ಎಚ್ಚರಿಕೆ ನೀಡುತ್ತಿರುತ್ತದೆ ಮುಂದಿನ ಸರದಿ ನಿನ್ನದು ಅಂತ. ಈ ಭಯ ವಯಸ್ಸಾದವರಲ್ಲಿ ಜಾಸ್ತಿ.  ಜನ್ಮ, ಜರಾ & ವ್ಯಾಧಿ ಈ ಮೂರರ ಬಗ್ಗೆ ನಮಗೆ ಅರಿವಿದೆ. ಆದರೆ ಈ ಸಾವಿನ ಬಗ್ಗೆ ಅರಿವಿರೋದಿಲ್ಲ. ಸತ್ತ ನಂತರ ನಾವು ಏನಾಗುತ್ತೇವೆ ಎಲ್ಲಿಗೆ ಹೋಗುತ್ತೇವೆ ಅನ್ನೋದು ಗೊತ್ತಿರೋದಿಲ್ಲ. ಹೋಗುವಾಗ ಜೊತೆಯಲ್ಲಿ ಯಾರೂ ಇರೋದಿಲ್ಲ. ಒಬ್ಬರೇ ಹೋಗಬೇಕು. ತಿರುಗಿ ಬರುವ ಹಾಗಿಲ್ಲ. ಬಂದು ನಮ್ಮವರು ಅನ್ನಿಸಿಕೊಂಡವರನ್ನು ಪುನ: ಕೂಡುವ ಹಾಗಿಲ್ಲ. ಎಲ್ಲಾ ಬಾಂಧವ್ಯಗಳನ್ನು ಕಳಚಿಕೊಂಡು ಮತ್ತೆ ಯಾವತ್ತೂ ಹಿಂದಿರುಗಿ ಬರಲಾಗದಂತ ಜಾಗಕ್ಕೆ ಹೋಗಬೇಕು. ನಾನು ಅಂದರೆ ಆತ್ಮ. ದೇಹವಲ್ಲ. ಆತ್ಮ ದೇಹವನ್ನು ಬಿಟ್ಟು ಹೋದ ನಂತರ ಆ ದೇಹವನ್ನು ಸಂಸ್ಕಾರ ಮಾಡಲಾಗುತ್ತದೆ. ಅದು ಯಾವ ಮಹಾತ್ಮನದೇ ಆಗಿರಲಿ ಅದು ಬರೀ ಶವ. ಅದು ಯಾರಿಗೂ ಯಾವುದಕ್ಕೂ ಬೇಡ. ಎಷ್ಟು ಬೇಗ ಸಂಸ್ಕಾರ ಮಾಡಿದಷ್ಟೂ ಭೂಮಿಗೆ ಭಾರ ಕಡಿಮೆ. ಸಮಯ ಕಳೆದಷ್ಟೂ ದುರ್ವಾಸನೆ ಬರಲಾರಂಭಿಸುತ್ತದೆ. ದೇಹವೇನೋ ಬೂದಿ ಆಯಿತು. ಆದರೆ, ನಾನು ಅನ್ನುವ ಈ ಆತ್ಮ ಎಲ್ಲಿಗೆ ಹೋಗುತ್ತದೆ. ನಿಜಕ್ಕೂ ಭಯಪಡುವಂತಹ ವಿಷಯವೇ.



ನಮ್ಮಲ್ಲಿ ಒಂದು ನಂಬಿಕೆ ಇದೆ. ಸತ್ತ ನಂತರದ ಮೂರು ದಿನಗಳು ಆತ್ಮ ಶವವನ್ನಿಟ್ಟ ಜಾಗದಲ್ಲಿ ಸುತ್ತುತ್ತಿರುತ್ತದೆ ಎಂದು. ಅದಕ್ಕಾಗಿ ಮೂರು ದಿನವೂ ದೀಪ ಉರಿಸಿಟ್ಟು,  ಮೊದಲ ದಿನ ಎಳನೀರು, ಎರಡನೇ ದಿನ ನೀರು ಹಾಗೂ 3ನೇ ದಿನ ಹಾಲನ್ನು ಇಟ್ಟು ಅದರೊಳಗೆ ಒಂದು ನೂಲನ್ನು ಇಳಿಬಿಡಲಾಗುತ್ತದೆ. ನೂಲಿನ ಮುಖಾಂತರ ಆತ್ಮ ಅದನ್ನು ಕುಡಿಯುತ್ತದೆ ಅನ್ನೋ ನಂಬಿಕೆ. ಅದೇ ರೀತಿ ಶವವನ್ನಿಟ್ಟ ಜಾಗದಲ್ಲಿ ಬೂದಿ ಚೆಲ್ಲಿ ಆತ್ಮದ ಹೆಜ್ಜೆ ಗುರುತನ್ನು ಅದರಲ್ಲಿ ಹುಡುಕಲಾಗುತ್ತದೆ. 11ನೇ ದಿನ ಪಿತೃಕಾರ್ಯಗಳನ್ನು ಮಾಡಿ ಅದಕ್ಕೆ ಮುಕ್ತಿ ದೊರಕಿತು ಎಂದು ಭಾವಿಸಲಾಗುತ್ತದೆ.



ಆದರೆ ಒಂದು ದೇಹದಿಂದ ಹೊರಬಂದ ಆ ಆತ್ಮ ಇನ್ನೊಂದು ದೇಹದಲ್ಲಿ ಸೇರಿಕೊಳ್ಳುತ್ತದೆ ಹಾಗೂ ಆತ್ಮವು ಹಣ್ಣುಗಳೊಳಗೆ ಸೇರಿ ಆ ಹಣ್ಣನ್ನು ತಿಂದ ಮನುಷ್ಯನ ಮೂಲಕ ಯೋನಿಯೊಳಗೆ ಸೇರಿ ಭ್ರೂಣವಾಗುತ್ತದೆ ಅನ್ನುವ ಪ್ರತೀತಿ ಇದೆ. ಎಲ್ಲವೂ ಗೋಜಲು ಗೋಜಲು. ನಿಗೂಢ. ಹುಟ್ಟು ಸಾವು ಮಾತ್ರ ನಿಜ. ಆಮೇಲಿನದು ಕಂಡವರು ಯಾರೂ ಇಲ್ಲ.

*****