Friday 14 June 2013

ಬಿಳಿಗಂಡ


ಅಂದು ಮೀನಾಕುಮಾರಿ ಯವರ ಮನೆಯಲ್ಲಿ ಸಂತಸ ಸಂಭ್ರಮ ತುಂಬಿ ತುಳುಕಾಡುತ್ತಿತ್ತು. ಮನೆ ತುಂಬಾ ನೆಂಟರು. ಮುಂದಿನ ವಾರದಲ್ಲಿ ಅವರ ತಮ್ಮನ ಮಗನ ಮದುವೆ. ಮದುವೆಗೆಂದು ಅಮೇರಿಕಾದಿಂದ ಅವರ ಮನೆಗೆ ಮಗಳು, ಅಳಿಯ ಹಾಗೂ ಮೊಮ್ಮಗ ಬರುವವರಿದ್ದರು. ಎಲ್ಲರಿಗೂ ಕುತೂಹಲ ಹೊಸ ಅಳಿಯನನ್ನು ನೋಡಲು. ಎಲ್ಲರ ಮನೆಗೆ ಮಗಳು ಅಳಿಯ ಬರುತ್ತಾರಪ್ಪ. ಇದರಲ್ಲಿ ಏನು ವಿಶೇಷ ಅಂದ್ಕೋಬೇಡಿ. ವಿಶೇಷ ಇದೆ. ಎಲ್ಲರಂತಲ್ಲ ಅವರ ಅಳಿಯ. ಅವನು ಬಿಳಿ ಅಳಿಯ.

ಒಬ್ಬಳೇ ಮಗಳು. ಬೇಕಾದಷ್ಟು ಆಸ್ತಿ ಇತ್ತು. ಅಮೇರಿಕಾದಲ್ಲಿರುವ ಹುಡುಗನನ್ನು ನೋಡಿ ಬಹಳ ವಿಜ್ರಂಭಣೆಯಿಂದ ಮಗಳಿಗೆ ಮದುವೆ ಮಾಡಿ ಕೊಟ್ಟಿದ್ದರು. ಮಗಳು ಬಿಇ ಓದಿದ್ದಳು. ಅವಳೂ ಕೂಡಾ ಮದುವೆ ನಂತರ ಅಮೇರಿಕಾದಲ್ಲಿ ಕೆಲಸಕ್ಕೆ ಸೇರಿದ್ದಳು. ಆದರೆ ಅವರ ದಾಂಪತ್ಯ ಜೀವನ ಬಹಳ ದಿನ ಉಳಿಯಲಿಲ್ಲ. ಅವಳಿಗೆ ದಾಂಪತ್ಯ ಜೀವನದ ಸುಖವನ್ನು ನೀಡಲು ಅವನು ಸಂಪೂರ್ಣ ವಿಫಲನಾಗಿದ್ದ. ಅವನು ನಪುಂಸಕನಾಗಿದ್ದ. ದಿನಗಳೆದಂತೆ ಅವಳಿಗೆ ಅವನ ಜೊತೆಗಿನ ಜೀವನ ಅಸಹನೀಯವಾಗತೊಡಗಿತ್ತು. ಅವನ ಗುಟ್ಟು ಅವಳಿಗೆ ಗೊತ್ತಾಗುತ್ತಿದ್ದಂತೆ ಅವನು ಕ್ರೂರಿಯಾಗತೊಡಗಿದ್ದ. ಯವಾಗಲೂ ಅವಳ ಮೇಲೆ ಸಂಶಯಪಟ್ಟು ಹಿಂಸಿಸತೊಡಗಿದ. ಹೇಗಪ್ಪಾ ಇಲ್ಲಿಂದ ತಪ್ಪಿಸಿಕೊಂಡು ಹೋಗೋದು ಅಂತ ಅವಳು ಚಡಪಡಿಸುತ್ತಿದ್ದಳು.

       ಅಮೇರಿಕಾದ ಪ್ರತಿಷ್ಟಿತ ಕಂಪೆನಿಯಲ್ಲಿ ಅವಳು ಕೆಲಸ ಮಾಡುತ್ತಿದ್ದಳು. ಅವಳ ಬಾಸ್ ಅಮೇರಿಕಾದವನಾಗಿದ್ದ. ಅವನಿಗೆ ಮೊದಲಿನಿಂದಲೂ ಭಾರತ ದೇಶ, ಹಿಂದೂ ಧರ್ಮ, ದೇಶದ ಸಂಸ್ಕೃತಿ ಸಂಪ್ರದಾಯಗಳು, ಭಗವದ್ಗೀತೆ, ವಿವೇಕಾನಂದ ಹೀಗೆ ಎಲ್ಲದರಲ್ಲೂ ಆಸಕ್ತಿ.  ಎಲ್ಲವನ್ನೂ ಇಂಟರ್ ನೆಟ್ ನಲ್ಲಿ ಓದಿ ತಿಳಿದುಕೊಂಡಿದ್ದ. ಜೀವನದಲ್ಲಿ ಒಮ್ಮೆಯಾದರೂ ಭಾರತದೇಶಕ್ಕೆ ಭೇಟಿ ನೀಡಿ ರಾಮ, ಕೃಷ್ಣರ ಜನ್ಮಸ್ಥಳವನ್ನು ನೋಡಿ ಬರಬೇಕು ಅಂದುಕೊಳ್ಳುತ್ತಿದ್ದ. ಹೀಗಾಗಿ ಇವಳೊಂದಿಗೆ ಸಲುಗೆ ವಹಿಸಿ ಎಲ್ಲ ವಿಷಯವನ್ನು ಚರ್ಚಿಸುತ್ತಿದ್ದ. ಒಂದು ದಿನ ತುಂಬಾ ಖಿನ್ನಳಾಗಿದ್ದ ಅವಳು ತನ್ನ ವೈಯಕ್ತಿಕ ಬದುಕಿನ ಬಗ್ಗೆ ಎಲ್ಲವನ್ನೂ ಅವನೊಂದಿಗೆ ತೋಡಿಕೊಂಡಳು.

ಅವನು ಯೋಚಿಸಿದ. ತನಗಿನ್ನೂ ಮದುವೆಯಾಗಿಲ್ಲ. ಅವಳೀಗ ಅಮೇರಿಕಾದ ಪ್ರಜೆ. ಅವಳಿಗೆ ಅವಳ ಗಂಡನಿಂದ ಡೈವೋರ್ಸ್ ಪಡೆದುಕೊಳ್ಳುವುದು ಅಷ್ಟೇನೂ ಕಷ್ಟವಾಗಲಾರದು. ತಾನು ಅವಳನ್ನು ಮದುವೆಯಾಗಲು ಪ್ರಪೋಸ್ ಮಾಡಿದರೆ ಅವಳು ಒಪ್ಪಬಹುದೇ ಎಂದು ಯೋಚಿಸತೊಡಗಿದ. ಮಾರನೆ ದಿನ ಈ ವಿಷಯವನ್ನು ಅವಳಲ್ಲಿ ಬಹಿರಂಗಪಡಿಸಿದ. ಮೊದಲು ಅವಳಿಗೆ ಈ ಶಾಕ್ ನಿಂದ ಹೊರಬರಲು ಸ್ವಲ್ಪ ಸಮಯ ಹಿಡಿಸಿತು. ಆಮೇಲೆ ಅವಳೂ ಯೋಚಿಸತೊಡಗಿದಳು. ತನಗೂ ಆಸೆ ಆಕಾಂಕ್ಷೆಗಳಿವೆ. ಷಂಡ ಗಂಡನೊಂದಿಗೆ ಸಂಸಾರ ಮಾಡುವುದಂತೂ ಸಾಧ್ಯವಿಲ್ಲ. ಇವನಿಂದ ಬಿಡುಗಡೆಗೆ ದೇವರು ದಾರಿ ತೋರಿಸಿ ಕೊಟ್ಟಿದ್ದಾನೆ ಈ ಅವಕಾಶಾನಾ ಬಿಡಬಾರದು ಎಂದು ಯೋಚಿಸಿ ಮೊದಲು ಭಾರತದಲ್ಲಿರುವ ಅಪ್ಪ ಅಮ್ಮನಿಗೆ ತಿಳಿಸಿ ಅವರ ಅಭಿಪ್ರಾಯ ಪಡೆಯಬೇಕು ಎಂದು ಯೋಚಿಸಿದವಳೇ ಅಮ್ಮನಿಗೆ ಫೋನ್ ಮಾಡಿದಳು. ಅಮ್ಮನೂ ವಿಷಯ ತಿಳಿದು ಶಾಕ್ ನಿಂದ ಈಚೆ ಬರಲಾರದಾದಳು. ಬಿಳಿ ಹೆಂಡತಿಯನ್ನು ಕಟ್ಟಿಕೊಳ್ಳೋದು ಕೇಳಿದ್ದೀನಿ ಆದ್ರೆ ಮಗಳು ಬಿಳಿ ಗಂಡನನ್ನು ಕಟ್ಟಿಕೊಳ್ಳುತ್ತೇನೆ ಅಂತ ಹೇಳುತ್ತಿದ್ದಾಳಲ್ಲ. ಕೊನೆಗೆ ಅಪ್ಪ ಸಮಜಾಯಿಷಿ ನೀಡಿ ಅಮ್ಮನಿಗೆ ಸಮಾಧಾನ ಮಾಡಿ ಮದುವೆಗೆ ಒಪ್ಪಿಗೆ ನೀಡಿದರು.

ಗಂಡನಿಂದ ಡೈವೋರ್ಸ್ ಪಡೆದ ಅವಳಿಗೆ ಅಮೇರಿಕಾ ಹುಡುಗನ ಜೊತೆ ಅವನ ಆಸೆಯಂತೆ ಹಿಂದೂ ಸಂಪ್ರದಾಯ ಪ್ರಕಾರ ಮದುವೆ ಮಾಡಿಕೊಡಲಾಯಿತು. ಅಪ್ಪ ಅಮ್ಮ ಅಮೇರಿಕಾಕ್ಕೆ ಹೋಗಿ ಧಾರೆ ಎರೆದು ಕೊಟ್ಟರು. ಅಮೇರಿಕಾ ಗಂಡನಿಂದ  ಒಂದು ಗಂಡುಮಗುವನ್ನು ಪಡೆದಳು. ಅಮೇರಿಕಾದ ಬಿಳಿ ಗಂಡನೊಂದಿಗೆ ಆ ಮಗುವನ್ನು ಕರೆದುಕೊಂಡು ಅವಳು ಮಾವನ ಮಗನ ಮದುವೆಗೆಂದು ಭಾರತಕ್ಕೆ ಅಮ್ಮನ ಮನೆಗೆ ಬರುವವಳಿದ್ದಳು. ಅದಕ್ಕೆ ಆ ಮನೆಯಲ್ಲಿ ಅಂದು ಅಷ್ಟು ಸಂತಸ, ಸಂಭ್ರಮ. ಆರತಿ ಹಿಡಿದು ಬಿಳಿ ಅಳಿಯನನ್ನು ಹಾಗೂ ಮಗುವನ್ನು ಸ್ವಾಗತಿಸಲು ಎಲ್ಲರೂ ತುದಿಗಾಲಲ್ಲಿ ಕಾಯುತ್ತಿದ್ದರು.

                                        *****

Thursday 6 June 2013

ಕುರೂಪಿ


ಯಾಕೋ ಅವನಿಗೂ ಸೌಂದರ್ಯಕ್ಕೂ ಆಗಿಬರುತ್ತಿಲ್ಲ ಅಂತ ಕಾಣ್ಸುತ್ತೆ. ಅಮ್ಮನಿಗೆ ವನು ಮತ್ತು ಅಕ್ಕ ಇಬ್ಬರು ಮಕ್ಕಳು. ಅಕ್ಕನ ವಯಸ್ಸು 30ರ ಹತ್ತಿರ ಬರುತ್ತಿದ್ದರೂ ಮದುವೆಯಾಗುವ ಯಾವ ಸೂಚನೆಯೂ ಕಂಡು ಬರುತ್ತಿಲ್ಲ.. ಅವನಿಗೆ 28 ಇರಬಹುದು. ಒಂದು ಎದುರು ಬದುರು ಅಂದರೆ ಒಂದು ತರೋದು ಒಂದು ಕೊಡೋ ಸಂಬಂಧ ಬಂದಿತ್ತು. ಅಮ್ಮ ಹೇಳುತ್ತಿದ್ದರು ಹುಡುಗಿ ನೋಡಲು ಅಷ್ಟು ಚೆನ್ನಾಗಿಲ್ಲ ಆದರೆ ಏನು ಮಾಡೋದು ನಮ್ಮ ಹುಡುಗಿ ಆಚೆ ಹೋಗಬೇಕಾದ್ರೆ ಒಪ್ಪಲೇ ಬೇಕು ಅಂತ. ಗಂಡನನ್ನು ಕಳಕೊಂಡ ಅಮ್ಮನಿಗೆ ಒಮ್ಮೆ ಮಗಳ ಮದುವೆ ಮಾಡಿ ಮುಗಿಸಿದ್ದರೆ ಸಾಕಾಗಿತ್ತು. ಬೇರೆ ಉಪಾಯವಿಲ್ಲದೆ ಹುಡುಗಿಯ ಮುಖವನ್ನೂ ನೋಡದೆ ಅವನು ಅಕ್ಕನಿಗಾಗಿ ಮದುವೆಗೆ ಒಪ್ಪಿದ್ದ. ಹುಡುಗಿ ಮನೆಯಲ್ಲೂ ಇದೇ ಸಮಸ್ಯೆ. ಆ ಹುಡುಗ ಕೂಡಾ ತಂಗಿಗೋಸ್ಕರ 30 ಅವನ ಅಕ್ಕನನ್ನು ಮದುವೆಯಾಗಲು ಒಪ್ಪಿದ್ದ.  ಯಾವುದೇ ಸಂಬಂಧ ಬಂದರೂ ಆಗುತ್ತಿರಲಿಲ್ಲ. ಕೊನೆಗೂ ಅಕ್ಕನ ಮದುವೆ ತನ್ನಿಂದ ಆಗುವಂತೆ ಆಯಿತಲ್ಲ ಎಂದು ದೊಡ್ಡ ತ್ಯಾಗಿ ಅನ್ನುವಂತೆ ಅವನು ಬೀಗುತ್ತಿದ್ದ.

 ಮದುವೆಯ ಸಿದ್ಧತೆ ನಡೆದಿತ್ತು. ಎರಡೂ ಮನೆಯವರು ಖರ್ಚನ್ನು ಅರ್ಧ ಅರ್ಧ ಹಂಚಿಕೊಳ್ಳುವುದಾಗಿ ಮಾತಾಯಿತು. ಎರಡು ಮಂಟಪ ಹಾಕಲಾಗಿತ್ತು. ಗಂಡಿನ ಕಡೆಯವರು ಹೆಣ್ಣಿನ ಕಡೆಯವರು ಅಂತ ಏನೂ ಇರಲಿಲ್ಲ. ಎಲ್ಲರೂ ಓಡಾಡುತ್ತಿದ್ದರು. ಅಕ್ಕ ಹಿರಿಯಳಾಗಿದ್ದರಿಂದ ಅವಳ ಮದುವೆ ಮೊದಲು ಆಯಿತು. ನಂತರ ಹತ್ತು ನಿಮಿಷ ಬಿಟ್ಟು ಅವನ  ಮದುವೆ. ಅಂತರಪಟ ಸರಿಯುತ್ತಿದ್ದಂತೆ ಅವನ ಉತ್ಸಾಹವೆಲ್ಲ ಜರ್ರನೆ ಇಳಿಯಿತು. ಹುಡುಗಿ ಚೆನ್ನಾಗಿಲ್ಲ ಅಂತ ಅಮ್ಮ ಹೇಳಿದ್ದರು. ಆದ್ರೆ ಇಷ್ಟು ಕೆಟ್ಟದಾಗಿ ಅಸಹ್ಯವಾಗಿ ಇರಬಹುದು ಅಂತ ಅವನು ಊಹಿಸಿರಲಿಲ್ಲ. ಸಣಕಲು ದೇಹ, ಇದ್ದಲಿನಂತಹ ಬಣ್ಣ ಗೂನು ಬೆನ್ನು ಜೊತೆಗೆ ಹಲ್ಲುಬ್ಬು. ಯಾಂತ್ರಿಕವಾಗಿ ಮದುವೆ ಏನೋ ನಡೆಯಿತು. ಆದರೆ ನಂತರ ಏನೂ ನಡೆಯಲಿಲ್ಲ.

ಇವರ ನಡುವಿನ ಸಂಬಂಧದ ಅರಿವಾಗಿ ಒಂದು ದಿನ ಅಮ್ಮನೂ ಕೊರಗಿ ಕೊರಗಿ ಸತ್ತಳು. ಅವನು ಆಫೀಸಿನಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಗೀತಾ ಜೊತೆ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದ. ಅವಳಿಗಿನ್ನೂ ಮದುವೆಯಾಗಿರಲಿಲ್ಲ. ಅವಳ ಕೊತೆಗಿನ ಸ್ನೇಹ ಪ್ರೇಮವಾಗಿ ಮಾರ್ಪಟ್ಟಿತ್ತು.  ಅವನ ವಿಷಯ ಎಲ್ಲಾ ತಿಳಿದಿದ್ದರೂ ಅವಳು ಅವನನ್ನು ಪ್ರೇಮಿಸಿದ್ದಳು. ಕೊನೆಗೆ ಒಬ್ಬರನ್ನೊಬ್ಬರು ಬಿಡಲಾರದ ಸ್ಥಿತಿ ತಲುಪಿದರು. ಸಂಜೆ ಸುತ್ತಾಡಲು ಹೋಗೋದು ಮನೆಗೆ ದಿನಾ ತಡವಾಗಿ ಹೋಗೋದು ಅಭ್ಯಾಸವಾಗಿ ಹೋಯಿತು.

 ಪಾಪ ಆ ಹುಡುಗೀದು ಏನು ತಪ್ಪು. ಅವಳೇನಾದರೂ ಬಯಸಿ ಕುರೂಪಿಯಾಗಿದ್ದಳೆ ಎಂಬ ಯೋನೆಯನ್ನೂ ಮಾಡದೆ ಡೈವೋರ್ಸ್ ಗೆ ಅಪ್ಲೈ ಮಾಡಿದ. ವಿಷಯ ತಿಳಿದ ಅವರ ಮನೆಯಲ್ಲಿ ಅವನ ಅಕ್ಕನಿಗೆ ಕಿರುಕುಳ ಕೊಡಲು ಆರಂಭಿಸಿದ್ದರು. ಕೊನೆಗೆ ಒಂದು ದಿನ ಮಗಳಿಗಿಲ್ಲದ ಬಾಳು ನಿನಗೂ ಇಲ್ಲ ಎಂದು ಬಸಿರಾಗಿದ್ದ ಅಕ್ಕನನ್ನು ತವರಿಗೆ ದಬ್ಬಿದರು. ಅವನ ಅಕ್ಕ ಗಂಡು ಮಗುವಿಗೆ ಜನ್ಮ ನೀಡಿದಳು. ಅಕ್ಕನನ್ನೂ ಅವಳ ಮಗನನ್ನೂ ನೋಡಿಕೊಳ್ಳುವ ಜವಾಬ್ದಾರಿ ಕೂಡಾ ಅವನದಾಯಿತು. ಈ ಹುಡುಗಿ ಮೊದಲೇ ತವರು ಸೇರಿದ್ದಳು.  ಅವಳಿಂದ ಡೈವೋರ್ಸ್ ಸಿಕ್ಕಿ ಗೀತಾ ಜೊತೆ ಮದವೇನೂ ಆಯಿತು. ಒಬ್ಬ ಮಗಳೂ ಹುಟ್ಟಿದಳು.

ಇದ್ದಕ್ಕಿದ್ದಂತೆ ಗೀತಾಗೆ ತೊನ್ನು ರೋಗ ಆವರಿಸಿತು. ಕೈಯಲ್ಲಿ ಕಾಲಲ್ಲಿ ಪ್ರಾರಂಭವಾದ ರೋಗ ಮುಖದವರೆಗೂ ಹರಡಿತು. ಯಾವ ಔಷಧಿಯೂ ನಾಟಲಿಲ್ಲ. ಕೈಯನ್ನು ತುಂಬುತೋಳಿನ ಬ್ಲೌಸ್ ಧರಿಸಿ ಸೆರಗು ಹೊದ್ದುಕೊಂಡು ಮುಚ್ಚಲು ಪ್ರಯತ್ತಿಸುತ್ತಿದ್ದಳು. ಆದರೆ ಮುಖದ ತುಂಬಾ ಹರಡಿದ್ದ ತೊನ್ನು ರೋಗವನ್ನು ಯಾವುದರಿಂದ ಮರೆಮಾಚಲು ಸಾಧ್ಯ? ನಾಳೆ ಮಗಳನ್ನು ಯಾರು ಮದುವೆಯಾಗುತ್ತಾರೆ ಎಂದು ಅವಳು ಕೊರಗಲು ಪ್ರಾರಂಭಿಸಿದಳು. ಸಣಕಲು ಕಡ್ಡಿ, ಮುಖದ ತುಂಬಾ ಬಿಳಿ ಕಲೆ. ಅವನಿಗೆ ಅವಳ ಮೇಲೆ ಅಸಹ್ಯ ಮೂಡಲು ಪ್ರಾರಂಭವಾಯಿತು. ಏನು ಮಾಡಲಿ ಇವಳಿಗೂ ಡೈವೋರ್ಸ್ ಕೊಡಲಾ. ಅವಳಿಗೆ ಕಪ್ಪೆಂದು ಡೈವೋರ್ಸ್ ಕೊಟ್ಟಿದ್ದಾಯಿತು. ಇವಳಿಗೆ ಬಿಳಿ ಜಾಸ್ತಿ ಆಯಿತು ಅಂತ ಡೈವೋರ್ಸ್ ಕೊಡಲಾ. ಮಗಳು ಕಣ್ಮುಂದೆ ಬಂದಳು. ಮಗಳನ್ನು ತುಂಬಾ ಪ್ರೀತಿಸುತ್ತಿದ್ದ ಅವನು ಡೈವೋರ್ಸ್ ಯೋಚನೆಯನ್ನು ಕೈಬಿಟ್ಟ.

ಕಾಯಾ ವಾಚಾ ಮನಸಾ ಸಪ್ತಪದಿ ತುಳಿದು ಒಂದು ದಿನವೂ ಅವಳ ಜೊತೆ ಸಂಸಾರ ಮಾಡಲಿಲ್ಲ. ಅವಳ ಜೀವನವನ್ನೇ ನಾಶ ಮಾಡಿದ ತನಗೆ ದೇವರು ತಕ್ಕ ಶಿಕ್ಷೆಯನ್ನೇ ಕೊಟ್ಟಿದ್ದಾನೆ. ಅನುಭವಿಸಲೇಬೇಕು. ಕೊನೇ ಪಕ್ಷ ತನ್ನಿಂದ ಹಾಳಾದ ಅವಳ ಜೀವನವನ್ನು ಕಿಂಚಿತ್ತಾದರೂ ಸರಿಪಡಿಸುವ ಯೋಚನೆಯನ್ನಾದರೂ ಮಾಡಬೇಕಿತ್ತು. ಅದನ್ನೂ ಮಾಡಲಿಲ್ಲ ಎಂದು ಆ ಹುಡುಗಿಯನ್ನು ನೆನೆದು ನಿಟ್ಟುಸಿರು ಬಿಟ್ಟ. ಜೀವನದಲ್ಲಿ ಸೌಂದರ್ಯವೇ ಖಂಡಿತಾ ಮುಖ್ಯವಲ್ಲ ಎಂದು ಪಶ್ಚಾತಾಪ ಪಟ್ಟ. ಅವಳಿಗೆ ಡೈವೋರ್ಸ್ ಕೊಟ್ಟು ತಪ್ಪು ಮಾಡಿದೆ. ಈಗ ಇವಳನ್ನಾದರೂ ಚೆನ್ನಾಗಿ ನೋಡಿಕೊಳ್ಳಬೇಕು. ಗಂಡನಾದವನ ಆಸರೆ ಇದ್ದಲ್ಲಿ ಅವಳ ಮನೋಸ್ಥೈರ್ಯ ಹೆಚ್ಚಾಗುವುದು. ತಾನೂ ಕೂಡಾ ಅಸಡ್ಡೆ ತೋರಿಸಿದಲ್ಲಿ ಇವಳನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಬಾರದು. ಅವಳಲ್ಲಿ ಮಾಡಿದ ತಪ್ಪನ್ನು ಇವಳಲ್ಲಿ ಸರಿಪಡಿಸಿಕೊಳ್ಳಬೇಕು ಎಂಬ ಯೋಚನೆ ಬಂದಾಗ ಮನಸ್ಸು ಹಗುರವಾಯಿತು.

*****