Thursday 16 January 2014

ಅತ್ತೆಗೊಂದು ಕಾಲ...


ಅವಳು ಇಂದು ಸ್ವತಂತ್ರವಾಗಿ ಅತ್ತ ಇತ್ತ ಅಲುಗಾಡುವ ಸ್ಥಿತಿಯಲ್ಲಿ ಕೂಡಾ ಇರಲಿಲ್ಲ. ಅವಳಿಗೆ ಲಕ್ವ ಹೊಡೆದು ಮಲಗಿದ್ದಲ್ಲಿಯೇ ಇರುವಂತಾಗಿತ್ತು. ಒಂದು ಲೋಟ ನೀರು ಬೇಕಾದರೂ ಬೇರೆಯವರನ್ನು ಆಶ್ರಯಿಸಬೇಕಿತ್ತು.  ನಿಂತು ಹೋಗಿದ್ದ ಫ್ಯಾನ್ ನ್ನು ಕಾಂತಿಹೀನ ಕಣ್ಣನಿಂದ ನೋಡುತ್ತಾ ಅವಳು ಗತ ಜೀವನವನ್ನು ನೆನಪಿಸತೊಡಗಿದಳು. ಅದೊಂದು ಬಿಟ್ರೆ ಬೇರೆ ಏನೂ ಮಾಡುವ ಸ್ಥಿತಿಯಲ್ಲಿ ಅವಳಿರಲಿಲ್ಲ.

ಮಗ ತಾನು ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಿ ಮನೆಗೆ ಕರಕೊಂಡು ಬಂದಿದ್ದ. ಪರಜಾತಿ ಹುಡುಗಿ ಎಂದು ಸೊಸೆಯನ್ನು ಅದೆಷ್ಟು ಗೋಳು ಹೊಯ್ದುಕೊಂಡಿದ್ದಳು. ಅವಳು ಏನು ಮಾಡಿದರೂ ತಪ್ಪು. ಮೊಸರಲ್ಲೂ ಕಲ್ಲು ಹುಡುಕುತ್ತಿದ್ದಳು. ಕೊನೆಗೆ ಮಗ ಸೊಸೆ ಜೊತೆಯಲ್ಲಿದ್ದರೆ ಸೊಸೆ ಮಗನ ಮನಸ್ಸು ಕೆಡಿಸಿ ತನ್ನನ್ನು ಮೂಲೆಗುಂಪು ಮಾಡಬಹುದು ಅಂತ ಅವರಿಬ್ಬರನ್ನು ಜೊತೆಯಲ್ಲಿರಲು ಸಹಾ ಬಿಡುತ್ತಿರಲಿಲ್ಲ. ಮಗ ರೂಮಿಗೆ ಮಲಗಲು ಹೊರಟ ತಕ್ಷಣ ಮಗಾ, ತುಂಬಾ ತಲೆ ನೋಯ್ತಾ ಇದೆ ಅಂತಲೋ ಹೊಟ್ಟೆ ನೋವು ಅಂತಲೋ ಏನಾದ್ರೂ ಒಂದು ನೆಪ ತೆಗೆದು ಅವನನ್ನು ತನ್ನ ಹತ್ತಿರವೇ ಇರಿಸಿಕೊಳ್ಳುತ್ತಿದ್ದಳು. ಅವನು ಅಮ್ಮನಿಗೆ ಇಷ್ಟವಿಲ್ಲದ ಸೊಸೆಯನ್ನು ತಂದು ಅಮ್ಮನ ಮನಸ್ಸು ನೋಯಿಸಿದ್ದೇನೆ ಇನ್ನೆಂದೂ ಅಮ್ಮನ ಮನಸ್ಸಿಗೆ ನೋವುಂಟು ಮಾಡಬಾರದು ಅಂತ ಅಮ್ಮನ ಮಾತನ್ನು ಎಂದೂ ಮೀರುತ್ತಿರಲಿಲ್ಲ. ಸೊಸೆ ಮಾತ್ರ ಈ ಸಂಪತ್ತಿಗೆ ಮದುವೆ ಯಾಕೆ ಮಾಡ್ಕೋಬೇಕಾಗಿತ್ತು ಅಂತ ಒಳಗೊಳಗೆ ಕೊರಗುತ್ತಿದ್ದಳು. ಸೊಸೆ ಕೊರಗೋದನ್ನು ನೋಡಿ ಅವಳು ಖುಷಿಪಡುತ್ತಿದ್ದಳು.

ಒಂದು ದಿನ ಅತ್ತೆ ಸೊಸೆಗೆ ಜಗಳ ಹತ್ತಿಕೊಳ್ತು. ಸೊಸೆಗೂ ರೋಸಿ ಹೋಗಿತ್ತು. ಮಾತಿಗೆ ಮಾತು ಕೊಡಲಾರಂಭಿಸಿದಳು. ಮಗ ಬಂದವನೇ, ಅಮ್ಮನಿಗೇ ಎದುರು ವಾದಿಸುತ್ತೀಯಾ ಅಂತ ಕೆನ್ನೆಗೆ ರಪ್ ಅಂತ ಬಾರಿಸಿದ. ಅವಳು ಇದನ್ನ ನಿರೀಕ್ಷಿಸಿರಲಿಲ್ಲ. ರೂಮಿಗೆ ಹೋದವಳೇ ಬಾಗಿಲು ಹಾಕಿಕೊಂಡು ಫ್ಯಾನಿಗೆ ನೇಣು ಹಾಕಿಕೊಂಡಳು.

ಸೊಸೆ ಸತ್ತು ವರ್ಷವಾಗುವುದರೊಳಗೆ ಮಗನಿಗೆ ತನ್ನ ಸಂಬಂಧಿಕರ ಹುಡುಗಿಯೊಬ್ಬಳನ್ನು ತಂದು ಮನೆ ತುಂಬಿಸಿಕೊಂಡಳು. ಹೊಸ ಸೊಸೆ ಮೊದಮೊದಲು ಅತ್ತೆಯನ್ನು ಚೆನ್ನಾಗಿಯೇ ನೋಡಿಕೊಂಡಳು. ಯಾವಾಗ ಅತ್ತೆಗೆ ಲಕ್ವ ಹೊಡೆದು ಮಲಗಿದ್ದಲ್ಲಿಯೇ ಆದಳು ಅಂದಿನಿಂದ ಅವಳ ವರಸೆ ಬದಲಾಗತೊಡಗಿತು. ಎಂತೆಂತವರೋ ಸಾಯ್ತಾರೆ ಈ ಹಾಳು ಮುದುಕಿಗೆ ಮಾತ್ರ ಸಾವು ಬರಲ್ಲ. ನನಗೆ ಯಾವ ಕರ್ಮ ಇದರ ಹೇಲು ಉಚ್ಚೆ ಬಾಚೋದು. ಯಾವಾಗ ಸಾಯುತ್ತೋ ಇದು ಅಂತ ಅವಳಿಗೆ ಕೇಳಿಸುವಂತೆ ವಟಗುಟ್ಟುತ್ತಿದ್ದಳು. ಹೇಲು ಉಚ್ಚೆ ಬಾಚಬೇಕಾಗುತ್ತದೆಂದು ಹೊಟ್ಟೆಗೂ ಕೊಡುತ್ತಿರಲಿಲ್ಲ. ಅವಳು ಹಸಿವೆಯಿಂದ ಒದ್ದಾಡುತ್ತಿದ್ದಳು.

ಅವಳು ಮೊದಲ ಸೊಸೆಯನ್ನು ನೆನಪಿಸಿಕೊಳ್ಳುತ್ತಾ, ನಿನಗೆ ಕೊಡಬಾರದ ಕಷ್ಟ ಕೊಟ್ಟೆ ಕಣೆ. ದೇವರು ಸರಿಯಾದ ಶಿಕ್ಷೆ ಕೊಟ್ಟ. ನೀನೇ ಪುಣ್ಯವಂತೆ. ಯಾಕೇಂದ್ರೆ ಕಷ್ಟವನ್ನು ಸಹಿಸಲಾಗದೆ ನೇಣು ಹಾಕಿಕೊಳ್ಳುವ ಸ್ವಾತಂತ್ಯ್ರನಾದ್ರೂ ನಿನಗಿತ್ತು. ನನ್ನ ಅವಸ್ಥೆ ನೋಡು ಸಾಯೋಣಾ ಅಂದ್ರೆ ನೇಣು ಹಾಕಿಕೊಳ್ಳಲೂ ಆಗ್ತಾ ಇಲ್ಲ. ಹೊಟ್ಟೇಗೂ ಇಲ್ಲದೆ ದಿನಾ ಸಾಯುತ್ತಿದ್ದೇನೆ ಕಣೆ. ನನ್ನಿಂದ ತಪ್ಪಾಯ್ತು. ನನ್ನನ್ನೂ ನಿನ್ನ ಹತ್ತಿರ ಕರೆಸ್ಕೋ. ಈ ನರಕದಿಂದ ನನ್ನನ್ನು ಪಾರು ಮಾಡು ಪ್ಲೀಸ್.
*****