Sunday 2 February 2014

ಅಪ್ಪುಗೆ


ಕೆಲವು ಧರ್ಮೀಯರಲ್ಲಿ ಆತ್ಮೀಯರು, ಗೆಳೆಯರು, ಸಂಬಂಧಿಕರು ಎದುರಾದಾಗ ಅವರನ್ನು ಅಪ್ಪಿಕೊಳ್ಳುವ ಮೂಲಕ ಎದುರುಗೊಳ್ಳುತ್ತಾರೆ. ವಿದಾಯ ಸಂದರ್ಭಗಳಲ್ಲೂ ಅಪ್ಪಿಕೊಂಡು ಬೀಳ್ಕೊಡುತ್ತಾರೆ. ಹಬ್ಬ ಹರಿದಿನಗಳಲ್ಲೂ ಒಬ್ಬರಿಗೊಬ್ಬರು ಅಪ್ಪಿಕೊಂಡು ಶುಭಾಷಯ ವಿನಿಯೋಗಿಸಿಕೊಳ್ಳುತ್ತಾರೆ. ಆದರೆ, ಹಿಂದೂ ಸಂಪ್ರದಾಯದಲ್ಲಿ ಇದು ಅಪರೂಪ. ಕೈಗಳನ್ನು ಜೋಡಿಸಿ ನಮಸ್ಕರಿಸುವ ಅಥವಾ ಬಗ್ಗಿ ಕಾಲಿಗೆ ನಮಸ್ಕರಿಸುವ ಮೂಲಕ ಗೌರವ ತೋರಿಸಲಾಗುತ್ತದೆ. ಅಪ್ಪಿಕೊಂಡು ಭಾವನೆಗಳನ್ನು ವ್ಯಕ್ತಪಡಿಸೋದು ತಪ್ಪೇನಲ್ಲ. ಕೆಲವೊಮ್ಮೆ ಮಾತಿನಲ್ಲಿ ವ್ಯಕ್ತಪಡಿಸಲಾಗದ ಭಾವನೆಗಳು ಅಪ್ಪುಗೆ ಮೂಲಕ ಹೊರಹೊಮ್ಮುತ್ತವೆ.

ನನ್ನ ಮಗನ ನಾಮಕರಣಕ್ಕೆಂದು ಅಮ್ಮ ಊರಿನಿಂದ ಬಂದಿದ್ದರು. ಅವರ ಆರೋಗ್ಯ ಹದಗೆಟ್ಟಿತ್ತು. ಆದರೂ ಮೊಮ್ಮಗನನ್ನು ನೋಡಲೇ ಬೇಕು ಎಂದು ಅಣ್ಣನನ್ನು ಜೊತೆಗೂಡಿಸಿಕೊಂಡು ಬೆಂಗಳೂರಿಗೆ ಬಂದಿದ್ದರು. ನಾಮಕರಣ ಮುಗಿಸಿ ವಾಪಸ್ಸು ಊರಿಗೆ ಹೊರಟು ನಿಂತಾಗ ನನ್ನನ್ನು ಜೋರಾಗಿ ಅಪ್ಪಿಕೊಂಡರು. ಎಷ್ಟು ಹೊತ್ತಿನವರೆಗೂ ಅಪ್ಪುಗೆಯಿಂದ ಬಿಡಿಸಿಕೊಳ್ಳಬೇಕು ಅಂತ ಇಬ್ಬರಿಗೂ ಅನಿಸಲೇ ಇಲ್ಲ. ಇಬ್ಬರ ಕಣ್ಣಲ್ಲೂ ನೀರು. ಹೇಳಿಕೊಳ್ಳಲಾಗದ ಅದೆಷ್ಟು ಭಾವನೆಗಳು ಆ ಅಪ್ಪುಗೆಯಲ್ಲಿದ್ದವು. ಆದರೆ ಅದೇ ಕೊನೆಯ ಅಪ್ಪುಗೆಯಾಗಬಹುದು ಅಂತ ನಾನು ಅಂದುಕೊಂಡಿರಲಿಲ್ಲ. ಬಹುಷ: ಅಮ್ಮನಿಗೆ ಮೊದಲೇ ಸೂಚನೆ ಇದ್ದಿರಬಹುದಾ. ಮಗನಿಗೆ 5 ತಿಂಗಳಾಗುವಾಗ ಅಮ್ಮ ದೈವಾಧೀನರಾಗಿದ್ದರು. ಆವಾಗ ಮೊಬೈಲ್ ಇರಲಿಲ್ಲ. ಮನೆಯಲ್ಲಿ ದೂರವಾಣಿ ಕೂಡಾ ಇರಲಿಲ್ಲ. ಯಜಮಾನರ ಆಫೀಸಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಆಗಲೇ ತಡವಾಗಿ ಬಿಟ್ಟಿತ್ತು. ನಾವು ಹೋಗುವಾಗ ಎಲ್ಲಾ ಮುಗಿದಿತ್ತು. ಕೊನೆಗೊಮ್ಮೆ ಅಮ್ಮನ ಮುಖ ನೋಡುವ ಭಾಗ್ಯ ಕೂಡಾ ನನಗೆ ಸಿಗಲಿಲ್ಲ. ಆದರೆ, ಅವರ ಆ ಕೊನೆಯ ಅಪ್ಪುಗೆ ಮಾತ್ರ ನಿಶ್ಚಲವಾಗಿ ನನ್ನ ಮನಸ್ಸಲ್ಲಿ ಬೇರೂರಿದೆ.

ಮಗಳ ಮದುವೆಯ ಸಂದರ್ಭ. ಹೆಣ್ಣಿಳಿಸಿ ಕೊಡುವ ಶಾಸ್ತ್ರ ಕೂಡಾ ಮುಗಿದು ಕೊನೆಯಲ್ಲಿ ಮಗಳು ಹೋಗಿ ಬರುತ್ತೇನೆ ಅಮ್ಮಾ ಅನ್ನುತ್ತಾ ಕಾಲಿಗೆ ನಮಸ್ಕಾರ ಮಾಡಲು ಬಗ್ಗಿದವಳು ಎಷ್ಟು ಹೊತ್ತಾದರೂ ಮೇಲೇ ಏಳಲೇ ಇಲ್ಲ. ಅವಳು ತನ್ನ ಕಣ್ಣೀರಿನಿಂದ ನನ್ನ ಪಾದಗಳನ್ನು ತೋಯಿಸುತ್ತಿದ್ದಳು. ಕೊನೆಗೆ ನಾನೇ ಅವಳ ಎರಡೂ ತೋಳುಗಳನ್ನು ಮೇಲೆತ್ತಿ ತಬ್ಬಿಕೊಂಡೆ. ಆ ಅಪ್ಪುಗೆಯಲ್ಲಿ ಅಡಗಿದ್ದ ಭಾವನೆಗಳನ್ನು ವಿವರಿಸೋದು ಅಸಾಧ್ಯ. ಅವಳ ಕಣ್ಣೊರಸಿ ಬೀಳ್ಕೊಟ್ಟಿದ್ದೆ. ಆದರೆ ಆ ಅಪ್ಪುಗೆಯನ್ನು ಮರೆಯೋದು ಸಾಧ್ಯಾನೇ ಇಲ್ಲ.

ಅಮ್ಮಾ ತಲೆಗೆ ಸ್ನಾನ ಮಾಡಲಾ ಮೈಗೆ ಮಾಡಲಾ ಅಂತ ಈಗಲೂ ಕೇಳುತ್ತಿದ್ದ ಆಳೆತ್ತರ ಬೆಳೆದು ನಿಂತಿದ್ದ ಮಗ ಅಂದು ಕೆಲಸದ ನಿಮಿತ್ತ ದುಬೈಗೆ ಹೊರಟು ನಿಂತಿದ್ದ. ಎಲ್ಲಕ್ಕೂ ಅಪ್ಪ ಅಮ್ಮನನ್ನು ಅವಲಂಬಿಸುತ್ತಿದ್ದ ಇವನು ಅಲ್ಲಿ ಹೇಗೆ ನಿಬಾಯಿಸುತ್ತಾನೆ ಅನ್ನುವ ಚಿಂತೆ ಅಮ್ಮನಿಗೆ. ಅವನು ಅಮ್ಮನನ್ನು ಬಿಟ್ಟು ಯಾವತ್ತೂ ಇರಲಿಲ್ಲ. ಒಳಗೊಳಗೆ ದು:ಖ ಉಮ್ಮಳಿಸಿ ಬರುತ್ತಿತ್ತು. ಓಡಿ ಬಂದವನೇ ಅಮ್ಮನನ್ನು ಅಪ್ಪಿಕೊಂಡುಬಿಟ್ಟ. ಆ ಅಪ್ಪುಗೆಯಲ್ಲಿ ಹೇಳಿಕೊಳ್ಳಲಾರದ ಅದೆಷ್ಟು ಭಾವನೆಗಳು, ಅಗಲಿಕೆಯ ನೋವು ತುಂಬಿತ್ತು. ಅದರ ನಂತರ ಅನೇಕ ಸಲ ಬಂದು ಹೋಗಿದ್ದಾನೆ. ಆದರೆ, ಮೊದಲ ಸಲ ದುಬೈಗೆ ಹೊರಟು ನಿಂತಾಗಿನ ಆ ಅಪ್ಪುಗೆ ಮರೆಯಲಸಾದ್ಯ.

ಅಂದು ಅವಳ ಪ್ರಾಣ ಸ್ನೇಹಿತೆ ನಿವೃತ್ತಿ ಹೊಂದುವವಳಿದ್ದಳು. ಅನಾರೋಗ್ಯದ ನಿಮಿತ್ತ ಅವಳು ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಳು. ಬೀಳ್ಕೊಡುಗೆ ಸಮಾರಂಭ ಮುಗಿದ ನಂತರ ಅವಳು ಸ್ನೇಹಿತೆಯನ್ನು ಬಿಗಿಯಾಗಿ ಅಪ್ಪಿಕೊಂಡಳು. ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಆ ಆಲಿಂಗನದಲ್ಲಿ ಅವರ ಅಷ್ಟು ದಿನಗಳ ಸ್ನೇಹ, ಒಡನಾಟ, ಅಗಲಿಕೆಯ ನೋವು ಎಲ್ಲಾ ತುಂಬಿತ್ತು.

ಎಷ್ಟೋ ಸಮಯದ ನಂತರ ಅಕ್ಕ ತಂಗಿಯ ಮನೆಗೆ ಬಂದಿದ್ದಳು. ದೂರದ ಮುಂಬೈನಲ್ಲಿದ್ದುದರಿಂದ ಆಗಾಗ್ಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ತಂಗಿಯ ಮಗಳ ಸೀಮಂತಕ್ಕೆಂದು ಬಂದವಳು ಮನೆ ಮಠ ಊರು ಎಲ್ಲಾ ಮರೆತು ಸಂತೋಷವಾಗಿ ಸ್ವಲ್ಪ ದಿನ ತಂಗಿಯ ಮನೆಯಲ್ಲಿ ತಂಗಿದ್ದಳು. ಹೊರಟು ನಿಂತಾಗ ಕಣ್ಣಲ್ಲಿ ನೀರು. ಭಾವುಕಳಾಗಿ ಅವಳಿಗೆ ಅರಿವಿಲ್ಲದೇ ತಂಗಿಯನ್ನು ಅಪ್ಪಿಕೊಂಡಿದ್ದಳು. ಎಷ್ಟು ಹೊತ್ತಾದರೂ ಆ ಬೆಸುಗೆ ಬೇರ್ಪಡಲೇ ಇಲ್ಲ. ಆ ಅಪ್ಪುಗೆಯಲ್ಲಿನ ಭಾವನೆಗಳನ್ನು ಪದಗಳಿಂದ ವರ್ಣಿಸೋದು ಅಸಾಧ್ಯ.

ಆತ್ಮೀಯರೊಬ್ಬರನ್ನು ಚಿಕಿತ್ಸೆಗೆಂದು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಅವರನ್ನು ನೋಡಲೆಂದು ಆಸ್ಪತ್ರೆಗೆ ಹೋಗಿದ್ದೆ. ಅವರು ಎದ್ದು ಕುಳಿತವರೇ ನನ್ನನ್ನು ಬಿಗಿಯಾಗಿ ತಬ್ಬಿಕೊಂಡು ಅಳತೊಡಗಿದರು. ನಾನು ತುಂಬಾ ಚಿಕ್ಕವಳು. ಆದರೂ ನನ್ನಲ್ಲಿ ಅವರು ಈ ರೀತಿ ನಡೆದುಕೊಳ್ಳಬೇಕಾದರೆ  ಅದು ಅವರು ನನ್ನಲ್ಲಿಟ್ಟಿರುವ ಆತ್ಮೀಯತೆ ಹಾಗೂ ನಂಬಿಕೆ. ಎಲ್ಲರ ಜೊತೆ ಈ ರೀತಿ ನಡೆದುಕೊಳ್ಳೋದು ಸಾಧ್ಯವಿಲ್ಲ. ಏನೂ ಆಗೋದಿಲ್ಲ. ಬೇಗ ಹುಷಾರಾಗಿ ಊರಿಗೆ ಹೋಗುತ್ತೀರಾ ಅಂತ ಸಮಾಧಾನದ ಮಾತಾಡಿದೆ. ಅಂದೇ ಅವರಿಗೆ ಆಪರೇಷನ್ ಇತ್ತು. ಆಪರೇಷನ್ ಮಾಡಿದ್ದಾಗ್ಯೂ ಅವರು ಉಳಿಯಲಿಲ್ಲ. ಅವರ ಆ ಅಪ್ಪುಗೆ ಪದೇ ಪದೇ ನೆನಪಾಗುತ್ತದೆ.

ಅದೊಂದು ಸುಂದರ ಚಿಕ್ಕ ಸಂಸಾರ. ಮಗಳಿಗೆ ಮದುವೆಯಾಗಿತ್ತು. ಮಗನಿಗೂ ಒಳ್ಳೆಯ ಕಡೆಯ ಸಂಬಂಧ ಬಂದುದರಿಂದ ಅವನಿಗೂ ಮದುವೆ ಮಾಡಿ ಮುಗಿಸಿದರು. ಅವರ ಸುಂದರ ಸಂಸಾರದ ಮೇಲೆ ದುಷ್ಟಶಕ್ತಿಯ ದೃಷ್ಟಿ ಬಿದ್ದಿರಬೇಕು. ಮಗನ ಮದುವೆಯಾಗಿ 6 ತಿಂಗಳಿಗೆ ಮನೆಯ ಯಜಮಾನನಿಗೆ ಹಠಾತ್ ಆಗಿ ಹಾರ್ಟ್ ಅಟ್ಯಾಕ್ ಆಗಿ ಸಾವು ಬಂದೊದಗಿತ್ತು. ಇದರಿಂದ ಆಘಾತಗೊಂದ ಅಣ್ಣ ತಂಗಿ ಇಬ್ಬರೂ ಎಚ್ಚರ ತಪ್ಪಿದವರಂತೆ ಒಬ್ಬರಿಗೊಬ್ಬರು ಅಪ್ಪಿಕೊಂಡು ಅಳುತ್ತಿದ್ದರು. ಆ ಅಪ್ಪುಗೆಯಲ್ಲಿನ ಭಾವನೆಗಳು ವರ್ಣನಾತೀತ.

ನಿಮಗೆ ತುಂಬಾ ದು:ಖವಾದಾಗಲಾಗಲೀ, ತುಂಬಾ ಸಂತೋಷವಾದಾಗಲಾಗಲೀ ಅದಕ್ಕೆ ಕಾರಣರಾದವರೊಂದಿಗೆ ಅಥವಾ ಹೃದಯಕ್ಕೆ ತುಂಬಾ ಹತ್ತಿರವಾದವರೊಂದಿಗೆ ಒಂದು ಅಪ್ಪುಗೆ ಮೂಲಕ ಅದನ್ನು ಹಂಚಿಕೊಳ್ಳಿ. ಒಂದು ಕ್ಷಣ ಇಹದ ಇರವನ್ನು ಮರೆಯೋದಂತೂ ನಿಜ..
*****