Tuesday 15 April 2014

ಆಸರೆ


ಆಶ್ರಮದಲ್ಲಿ ಯಾರೊಂದಿಗೂ ಮಾತಿಲ್ಲ ಕತೆಯಿಲ್ಲ. ಹಾಗಂತ, ಅವಳು ಯೋಚಿಸುವ ಶಕ್ತಿಯನ್ನೇನೂ ಕಳೆದುಕೊಂಡಿರಲಿಲ್ಲ. ಬೆಳಗಿನ ಧ್ಯಾನ, ಪ್ರಾರ್ಥನೆ, ತಿಂಡಿ, ಊಟ, ಭಜನೆ ಎಲ್ಲದರಲ್ಲೂ ಭಾಗವಹಿಸುತ್ತಿದ್ದಳು. ಆದರೆ ಎಲ್ಲವೂ ಯಾಂತ್ರಿಕ.   

ಇಬ್ಬರು ಮಕ್ಕಳಿಗಾಗಿ ಎಷ್ಟು ಜೀವ ಸವೆಸಿದ್ದಳು. ಹೊಟ್ಟೆ ಬಾಯಿ ಕಟ್ಟಿ ಮಕ್ಕಳಿಗೆ ಮಾತ್ರ ಏನೂ ಕೊರತೆಯಾಗದಂತೆ ಬೆಳೆಸಿದ್ದಳು. ಸಾಲಸೂಲ ಮಾಡಿ ಒಬ್ಬನನ್ನು ಡಾಕ್ಟರ್ ಹಾಗೂ ಇನ್ನೊಬ್ಬನನ್ನು ಇಂಜಿನಿಯರ್ ಮಾಡಿಸಿದ್ದರು. ದೊಡ್ಡ ಮಗನಿಗೆ ಡಾಕ್ಟರ್ ಹೆಂಡತೀನೇ ಸಿಕ್ಕಿದ್ದಳು. ಅಮೇರಿಕದಲ್ಲಿ ಒಳ್ಳೆಯ ಕಡೆ ಕೆಲಸ ಸಿಕ್ಕಿದ್ದರಿಂದ ಹೆಂಡತಿಯನ್ನು ಕರ್ಕೊಂಡು ಅಮೇರಿಕಕ್ಕೆ ಹೋಗಿದ್ದ. ಆದರೆ ಇಬ್ಬರೂ ದುಡಿಯುತ್ತಿದ್ದುದರಿಂದ ಮಗ ಹುಟ್ಟಿದ ತಕ್ಷಣ ನೋಡಿಕೊಳ್ಳಲು ಕಷ್ಟವಾಗುತ್ತದೆಂದು ಊರಲ್ಲಿ ಅಮ್ಮನ ಮನೆಯಲ್ಲಿಯೇ ಬಿಟ್ಟು ಹೋಗಿದ್ದ. 

ಎರಡನೇ ಮಗನಿಗೂ ಇಂಜಿನಿಯರ್  ಹುಡುಗೀನೇ ಸಿಕ್ಕಿದ್ದಳು. ಅವನು ಕೂಡಾ ದೊಡ್ಡವನ ಹಾದೀನೇ ಹಿಡಿದಿದ್ದ. ಕೆಲಸ ಸಿಕ್ಕಿದ ತಕ್ಷಣ ಕಂಪೆನಿಯಿಂದ ಯು.ಕೆ.ಗೆ ಕಳುಹಿಸಿದ್ದರಿಂದ  ಹೆಂಡತಿಯನ್ನೂ ಕರ್ಕೊಂಡು ಅಲ್ಲಿಯೇ ಸೆಟಲ್ ಆಗಿಬಿಟ್ಟ. ಅವನೂ ಕೂಡಾ ನಾನೇನು ಕಮ್ಮಿ ಅಂತ ಮಗ ಹುಟ್ಟಿದ ತಕ್ಷಣ ಅಮ್ಮನ ಹತ್ತಿರ ಬಿಟ್ಟು ಹೋಗಿದ್ದ. 

ಅಂದು ಅವಳ ಜೀವನದ ಕರಾಳ ದಿನ. ಯಜಮಾನರು ರಾತ್ರಿ ಮಲಗಿದ್ದವರು ಬೆಳಿಗ್ಗೆ ಎದ್ದೇಳಲೇ ಇಲ್ಲ. ಗಂಡನನ್ನು ಕಳಕೊಂಡ ದು:ಖದಿಂದ ಆಘಾತಗೊಂಡಿದ್ದಳು. ಇಬ್ಬರು ಮಕ್ಕಳೂ ಪತ್ನಿ ಸಮೇತರಾಗಿ ಬಂದು ಪಿತೃ ಕಾರ್ಯ ಎಲ್ಲಾ ಮುಗಿಸಿ ಹೋದರು. ರಜೆ ಸಿಕ್ಕಿದ ತಕ್ಷಣ ಬರುವುದಾಗಿ ತಿಳಿಸಿ ವಾಪಸ್ಸು ಹೋಗಿದ್ದರು.  

ಸ್ವಲ್ಪ ದಿನ ಬಿಟ್ಟು ದೊಡ್ಡ ಮಗ ಬಂದವನೇ ಅಮ್ಮನನ್ನು ಚಿಕ್ಕ ಮಗ ಕರ್ಕೊಂಡು ಹೋಗಬಹುದು ಅಂದ್ಕೊಂಡು ಮಗನನ್ನು ಕರ್ಕೊಂಡು ಅಮೇರಿಕಕ್ಕೆ ಹೋಗಿಯೇ ಬಿಟ್ಟ. ಚಿಕ್ಕ ಮಗನಿಗೆ ಯಾವ ವಿಷಯವೂ ಗೊತ್ತಿರಲಿಲ್ಲ. ಸ್ವಲ್ಪ ದಿನ ಬಿಟ್ಟು ಚಿಕ್ಕ ಮಗ ಬಂದ. ಒಂದು ತಿಂಗಳು ರಜೆ ಹಾಕಿ ಮಾಡಬೇಕಾದ ಕೆಲಸಗಳನ್ನೆಲ್ಲಾ ಮಾಡಿ ಮುಗಿಸಿದ. ಅಣ್ಣ ಬಿಟ್ಟು ಹೋದ ಅಂತ ನಾನೂ ಹಾಗೆ ಮಾಡಕ್ಕಾಗುತ್ತಾ. ಮಗನಿಗೂ ನಿನಗೂ ವೀಸಾ ಮಾಡಿಸುತ್ತೇನೆ. ನಿನ್ನನ್ನೂ ಕರ್ಕೊಂಡು ಹೋಗುತ್ತೇನೆ. ಇಲ್ಲಿಯ ಮನೆ ಆಸ್ತಿ ಎಲ್ಲಾ ಮಾರಿಬಿಡೋಣ ಅಂತ ಹೇಳಿ ಅಮ್ಮನಿಂದ ಬೇಕಾದ ಕಡೆಗೆಲ್ಲಾ ಸಹಿ ಹಾಕಿಸಿಕೊಂಡ. ಬ್ರೋಕರ್ ನ್ನು ಹುಡುಕಿ ಎಲ್ಲವನ್ನೂ ಮಾರಿದ್ದೂ ಆಯಿತು. ಮದುವೆಯಾದಾಗಿನಿಂದ ಜೋಪಾನವಾಗಿ ನೋಡಿಕೊಂಡಿದ್ದ ಗಂಡ ಮಕ್ಕಳೊಂದಿಗೆ ಬಾಳಿ ಬದುಕಿದ ಮನೆ, ಮನೆಯಲ್ಲಿನ ಒಂದೊಂದು ವಸ್ತುಗಳನ್ನೂ ಬಿಟ್ಟು ಹೋಗಬೇಕಾದ್ರೆ ತುಂಬಾ ಸಂಕಟವಾಗಿತ್ತು. ಆದರೆ ಮಗನ ಜೊತೆಗಿರುತ್ತೇನೆ ಅನ್ನೋ ಸಮಾಧಾನ ಆ ನೋವನ್ನು ದೂರಮಾಡಿತ್ತು. ಮಗ ಹೇಳಿದಂತೆ ಬಟ್ಟೆ ಬರೆಗಳನ್ನೆಲ್ಲಾ ಒಂದು ಸೂಟ್ ಕೇಸ್ ನಲ್ಲಿ ತುಂಬಿದ್ದಳು. ಉಳಿದಂತೆ ಎಲ್ಲಾ ಸಾಮಾನು ಸಮೇತ ಮನೆಯನ್ನು ಮಾರಲಾಗಿತ್ತು.

ಏರ್ ಪೋರ್ಟ್ ನಲ್ಲಿ ಸೂಟ್ ಕೇಸ್ ಸಹಿತ ಮಗ ಅವಳನ್ನು ಒಂದು ಕಡೆ ಕುಳ್ಳಿರಿಸಿ ಹೋಗಿದ್ದ. ಎಷ್ಟೋ ಹೊತ್ತಿನಿಂದ ಒಂದೇ ಕಡೆ ಒಬ್ಬಳೇ ಕುಳಿತೇ ಇದ್ದ ಅವಳನ್ನು ಏರ್ ಪೋರ್ಟ್ ಸಿಬ್ಬಂದಿ ಒಬ್ಬರು ಬಂದು ಮಾತನಾಡಿಸಿದರು. ಪಾರಿನ್ ಗೆ ಹೋಗುತ್ತಿದ್ದೇವೆ ಮಗ ವೀಸಾ ತೆಗೆದುಕೊಂಡು ಬರಲು ಹೋಗಿದ್ದಾನೆ ಅಂದಳು. ಅವರು ಎಲ್ಲಿಗೆ ಹೋಗುತ್ತಿದ್ದೀರಿ ಯಾವ ಫ್ಲೈಟ್ ಎಲ್ಲಾ ವಿಚಾರಿಸಿದರು. ಆ ಫ್ಲೈಟ್ ಹೋಗಿ ಎರಡು ಗಂಟೆ ಆಯಿತು. ಮಗನ ನಂಬರ್ ಇದ್ದರೆ ಕೊಡಿ ಎಂದು ಕೇಳಿದರು. ಮಗ ಜೊತೇಲೇ ಇದ್ದ ಕಾರಣ ಏನನ್ನೂ ಇಟ್ಟುಕೊಂಡಿರಲಿಲ್ಲ. ಇಂತಹ ಕೇಸುಗಳನ್ನು ಅವರು ಎಷ್ಟೋ ನೋಡಿರಬಹುದು. ಬಹುಷ: ಮಗ ನಿಮ್ಮನ್ನು ಬಿಟ್ಟು ಹೊರಟು ಹೋಗಿದ್ದಾನೆ ಅಂದರು. ಏನೋ ತೊಂದರೆಯಾಗಿರಬಹುದು. ಮಗ ಬಂದೇ ಬರುತ್ತಾನೆ ಅನ್ನುತ್ತಾ ಇನ್ನೂ ಎಷ್ಟೋ ಸಮಯ ಅಲ್ಲಿಯೇ ಕುಳಿತಿದ್ದಳು. ಕತ್ತಲಾಗುತ್ತಾ ಬಂದಂತೆ ನಿಜವಾಗಿಯೂ ಮಗ ಬಿಟ್ಟು ಹೋದನೆ ಅನ್ನುವ ಭಯ ಶುರುವಾಯಿತು. ಏರ್ ಪೋರ್ಟ್ ಸಿಬ್ಬಂದಿ ಪುನ: ಬಂದು ಕರೆದರು. ಮಾತನಾಡದೆ ಅವರ ಜೊತೆಗೆ ಹೋದಳು. ಅವರು ಮನೆಗೆ ಕರೆದುಕೊಂಡು ಹೋದವರೇ ಹೆಂಡತಿಯಲ್ಲಿ ಎಲ್ಲಾ ವಿಚಾರ ತಿಳಿಸಿದರು. ಮರುದಿನ ವೃದ್ಧಾಶ್ರಮಗಳ ವಿವರ ತಿಳಿದು ಒಂದು ಆಶ್ರಮಕ್ಕೆ ಸೇರಿಸಿದರು.  

ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇ ಈ ರೀತಿ ಮೋಸ ಮಾಡಬಹುದೆಂದು ಊಹಿಸಲೂ ಸಾಧ್ಯವಿರಲಿಲ್ಲ. ಆ ಘಟನೆ ನಡೆದಾಗಿನಿಂದ ಆಘಾತ ತಡೀಲಾರದೆ ಅವಳು ಮೂಕಿಯಾಗಿದ್ದಳು. ಮಕ್ಕಳು ಚಿಕ್ಕೋರಿರುವಾಗ ಎಷ್ಟು ಚೆನ್ನಾಗಿತ್ತು. ಇಬ್ಬರೂ ಅಮ್ಮನಿಗಾಗಿ ಅದೆಷ್ಟು ಕಿತ್ತಾಡುತ್ತಿದ್ದರು. ನನ್ನಮ್ಮ, ನನ್ನಮ್ಮ ಅಂತ ನಾನು ಅಮ್ಮನ ಪಕ್ಕ ನಾನು ಅಮ್ಮನ ಪಕ್ಕ ಅಂತ,  ಮೊದಲ ತುತ್ತು ನನಗೆ ಅನ್ನುತ್ತಾ ಹೀಗೆ ಅಮ್ಮನಿಗಾಗಿ ಕಿತ್ತಾಡುತ್ತಿದ್ದರು. ಕಾಂಪಿಟೀಷನ್ ನಲ್ಲಿ ಅಮ್ಮನಿಗಾಗಿ ಜಗಳವಾಡುತ್ತಿದ್ದರು. ದೊಡ್ಡೋನಾದ ಮೇಲೆ ಅಮ್ಮನಿಗೆ ಚಿನ್ನದ ಸರ ಮಾಡಿಸ್ತೀನಿ ಅಂತ ಒಬ್ಬ ಅನ್ನುತ್ತಿದ್ದ. ಬಂಗ್ಲೆ ಕಟ್ಟಿಸಿ ಕೈಗೊಂದು ಆಳು ಕಾಲಿಗೊಂದು ಆಳುಗಳನ್ನಿಟ್ಟು ಅಮ್ಮನನ್ನು ರಾಣಿ ತರಹ ನೋಡ್ಕೋತೀನಿ ಅಂತ ಇನ್ನೊಬ್ಬ ಅನ್ನುತ್ತಿದ್ದ. ಅಮ್ಮ ನನಗೆ ಬೇಕು ನನಗೆ ಬೇಕು ಅಂತ ಕಿತ್ತಾಡುತ್ತಿದ್ದ ಅವರು ಈಗ ಬೇಕಾದ್ರೆ ಅಮ್ಮನನ್ನು ನೀನೇ ಇಟ್ಟುಕೋ ಅನ್ನುವ ಸ್ಥಿತಿಗೆ ಬಂದಿದ್ದರು. ಹಳೆಯದನ್ನು ನೆನೆಯುತ್ತಾ ಕಣ್ಣು ಮಂಜಾಗತೊಡಗಿತು.

ಫೇಸ್ ಬುಕ್ ನಲ್ಲಿ ಓಡಾಡುತ್ತಿದ್ದ ಒಂದು ಕತೆ ನೆನಪಿಗೆ ಬರುತ್ತದೆ. ಅಪ್ಪ ಮಗ ಮನೆಗೆ ತಾಗಿ ಇದ್ದ ಪಾರ್ಕ್ನ ಕಲ್ಲು ಬೆಂಚಿನಲ್ಲಿ ಕುಳಿತಿರುತ್ತಾರೆ. ಅಲ್ಲಿಗೆ ಒಂದು ಗುಬ್ಬಚ್ಚಿ ಬರುತ್ತದೆ. ಅಪ್ಪ ಕೇಳುತ್ತಾನೆ ‘ಅದೇನು’ ಅಂತ. ಮಗ ಹೇಳುತ್ತಾನೆ ‘ಗುಬ್ಬಚ್ಚಿ’ ಅಂತ. ಗುಬ್ಬಚ್ಚಿ ಗಿಡದ ಮೇಲೆ ಹೋಗಿ ಕುಳಿತುಕೊಳ್ಳುತ್ತದೆ. ಅಪ್ಪ ಕೇಳುತ್ತಾನೆ ‘ಅದೇನು’. ಮಗ ಹೇಳುತ್ತಾನೆ ‘ಗುಬ್ಬಚ್ಚಿ’. ಗುಬ್ಬಚ್ಚಿ ನೆಲದ ಮೇಲೆ ಓಡಾಡುತ್ತದೆ. ಅಪ್ಪ ಪುನ:ಕೇಳುತ್ತಾನೆ ‘ಅದೇನು’. ಮಗನ ತಾಳ್ಮೆ ತಪ್ಪುತ್ತದೆ. ಗುಬ್ಬಚ್ಚಿ, ಗುಬ್ಬಚ್ಚಿ, ಗುಬ್ಬಚ್ಚಿ ಎಷ್ಟು ಸಲ ಹೇಳೋದು ನಿನಗೆ ಒಂದು ಸಲ ಹೇಳಿದ್ರೆ ಅರ್ಥ ಆಗಲ್ವ ಅಪ್ಪ ನಿಧಾನವಾಗಿ ಮನೆಯ ಒಳಗೆ ಹೋಗಿ ಒಂದು ಡೈರಿ ತೆಗೆದುಕೊಂಡು ಬರುತ್ತಾನೆ. ಅದರಲ್ಲಿ ಹುಡುಕಿ ಒಂದು ಪೇಜನ್ನು ತೋರಿಸಿ ಇದನ್ನು ಗಟ್ಟಿಯಾಗಿ ಓದು ಅನ್ನುತ್ತಾನೆ. ಮಗ ಓದುತ್ತಾನೆ. ‘ಇಂದು ನನ್ನ ಮಗ ಮೂರನೆಯ ವರ್ಷಕ್ಕೆ ಕಾಲಿಟ್ಟ ದಿನ. ಮಗನ ಜೊತೆ ಆಟವಾಡುತ್ತಿದ್ದಾಗ ಅಲ್ಲಿಗೆ ಒಂದು ಗುಬ್ಬಚ್ಚಿ ಬಂತು. ಮಗ ‘ಅದೇನು’ ಅಂತ ಕೇಳಿದ. ನಾನು ‘ಗುಬ್ಬಚ್ಚಿ’ ಅಂದೆ. ಮಗ ಪುನ: ‘ಅದೇನು’ ಅಂತ ಕೇಳಿದ. ನಾನು ಹೇಳಿದೆ. ಅದೇ ರೀತಿ ಮಗ 21 ಸಲ ಕೇಳಿದ. ನಾನು ಬೇಜಾರಿಲ್ಲದೆ ಪ್ರತಿ ಸಲವೂ ಮಗ ಕೇಳುವಾಗ ಅವನನ್ನು ಮುದ್ದಿಸಿ ‘ಗುಬ್ಬಚ್ಚಿ’ ಅಂತ ಉತ್ತರಿಸಿದೆ. ಅವನು ಕೇಳುತ್ತಿದ್ದಷ್ಟೂ ನನಗೆ ಖುಷಿ ಅನ್ನಿಸುತ್ತಿತ್ತು’. ಮಗ ಡೈರಿ ಮುಚ್ಚಿಟ್ಟವನೇ ಅಪ್ಪನನ್ನು ಜೋರಾಗಿ ತಬ್ಬಿಕೊಂಡ.

*****