ಒಂದು ದಿನ
ನಾರದರು ನಾರಾಯಣನಲ್ಲಿ ಕೇಳಿದರು ಈ ‘ಮಾಯೆ’ ಅಂದರೇನು? ನಾರಾಯಣ ಏನೂ ಮಾತಾಡಲಿಲ್ಲ. ಒಂದು ಬಂಗಾರದ
ಬಿಂದಿಗೆ ನೀಡಿ ಭೂಲೋಕಕ್ಕೆ ಹೋಗಿ ಇದರಲ್ಲಿ ಒಂದು ಬಿಂದಿಗೆ ನೀರು ತೆಗೆದುಕೊಂಡು ಬಾ ಎಂದು
ಹೇಳಿದ. ನಾರದರಿಗೆ ಏನೂ ಅರ್ಥವಾಗಲಿಲ್ಲ. ಬಿಂದಿಗೆ ತೆಗೆದುಕೊಂಡು ಭೂಲೋಕಕ್ಕೆ ನಡೆದರು. ಇನ್ನೇನು
ಕೊಳದಿಂದ ನೀರು ತೆಗೆದುಕೊಳ್ಳಬೇಕು ಅಷ್ಟರಲ್ಲಿ ರಂಭೆ ಮೇನಕೆಯರನ್ನು ಮೀರಿಸಿದ ಒಬ್ಬ ಕನ್ಯೆ
ಬಿಂದಿಗೆ ಹಿಡ್ಕೊಂಡು ಬರೋದನ್ನ ನೋಡಿದರು. ಅಂತಹ ಸೌಂದರ್ಯವತಿಯನ್ನು ಅವರು ಯಾವತ್ತೂ
ನೋಡಿರಲಿಲ್ಲ. ಯಾರೀ ಸುಂದರಿ ಅಂದುಕೊಂಡವರೇ ಬಿಟ್ಟ ಕಣ್ಣು ಬಿಟ್ಟಂತಯೇ ಒಂದೇ ಸಮನೆ ಅವಳನ್ನೇ
ನೋಡಲಾರಂಭಿಸಿದರು. ಅವಳೂ ಕೂಡಾ ಇವರನ್ನು ನೋಡಿದಳು. ಮೊದಲ ನೋಟದಲ್ಲೇ ಪ್ರೇಮಾಂಕುರವಾಗಿ ಇಬ್ಬರೂ
ಗಾಂಧರ್ವ ವಿವಾಹವಾದರು. ಇಬ್ಬರೂ ಒಂದು ಕುಟೀರ ಕಟ್ಟಿಕೊಂಡು ಸಂಸಾರ ಪ್ರಾರಂಭಿಸಿದರು. ಕ್ರಮೇಣ ಅವರಿಗೆ
ಇಬ್ಬರು ಗಂಡುಮಕ್ಕಳಾದರು.
ಒಂದು ದಿನ
ನಾರದರು ವಾಯು ವಿಹಾರಕ್ಕೆಂದು ಹೆಂಡತಿ ಮಕ್ಕಳನ್ನು ಕರೆದುಕೊಂಡು ಸಮುದ್ರತೀರಕ್ಕೆ ಹೋದರು.
ಮಕ್ಕಳು ಮರಳಲ್ಲಿ ಆಟವಾಡುತ್ತಿದ್ದರು. ನೋಡನೋಡುತ್ತಿದ್ದಂತೆಯೇ ಒಂದು ಅಲೆ ಬಂದು ಚಿಕ್ಕ ಮಗನನ್ನು
ಎಳ್ಕೊಂಡು ಹೋಯಿತು. ಎಲ್ಲರೂ ಹೋ ಎಂದು ಕಿರುಚಾಡಿದರು. ಅವರ ಪತ್ನಿ ಒಂದೇ ಸಮನೆ ಅಳಲು
ಪ್ರಾರಂಭಿಸಿದಳು. ಅಷ್ಟರಲ್ಲಿ ಇನ್ನೊಂದು ಅಲೆ ಬಂದು ಇನ್ನೊಬ್ಬ ಮಗನನ್ನೂ ಎಳ್ಕೊಂಡು ಹೋಯಿತು. ಈಗ
ಅವರ ಅಳು ಮುಗಿಲು ಮುಟ್ಟುವಂತಿತ್ತು. ಪತ್ನಿಯನ್ನು ಸಮಾಧಾನ ಮಾಡುತ್ತಿದ್ದಂತೆಯೇ ಇನ್ನೊಂದು ಅಲೆ
ಬಂದು ಅವಳನ್ನೂ ಎಳ್ಕೊಂಡು ಹೋಯಿತು. ನಾರದರಿಗೆ ಏನೂ ಮಾಡಲೂ ತೋಚಲಿಲ್ಲ. ಇನ್ನೂ ಇಲ್ಲಿಯೇ ಇದ್ದರೆ
ನನ್ನನ್ನೂ ಅಲೆ ಬಂದು ಎಳ್ಕೊಂಡು ಹೋಗಬಹುದು ಅಂತ ಅಲ್ಲಿಂದ ನಿಧಾನವಾಗಿ ಎದ್ದು ಹೊರಟರು. ಆಗ
ಅಲ್ಲಿ ನಾರಾಯಣ ಪ್ರತ್ಯಕ್ಷನಾಗಿ ಏನು ನಾರದ, ಒಂದು ಬಿಂದಿಗೆ ನೀರು ತರಲು ಇಷ್ಟು ಸಮಯವೇ ಎಂದು
ಕೇಳಿದ. ನಾರದರು ಚಾಚೂ ಬಿಡದಂಗೆ ಎಲ್ಲಾ ಕಥೆಯನ್ನೂ ಹೇಳಿದರು. ನಾರಾಯಣ ನೀನು ನನ್ನಲ್ಲಿ ಮಾಯೆ
ಎಂದರೇನು ಎಂದು ಕೇಳಿದೆ. ಆಗ ನಾನು ಹೇಳಲಿಲ್ಲ. ಈಗ ನಿನಗೆ ಗೊತ್ತಾಗಿರಬಹುದು. ಒಂದು ಬಿಂದಿಗೆ
ನೀರು ತರಲು ಬಂದಾಗಿನಿಂದ ಇಲ್ಲಿಯವರೆಗೂ ನಿನ್ನ ಬದುಕಿನಲ್ಲಿ ಏನೇನು ನಡೆಯಿತೋ ಅದುವೇ ‘ಮಾಯೆ’ ಎಂದು
ಹೇಳಿದ.
*****