ಬೆಳಿಗ್ಗೆ ಸುಮಾರು 9.00 ಗಂಟೆ
ಸಮಯ. ಆಫೀಸಿಗೆ ಹೋಗಲು ರೆಡಿಯಾಗುತ್ತಿದ್ದೆ. ಸಾಲ ವಸೂಲಾತಿ ವಾಹನ ಎಂದು ಬೋರ್ಡ್ ಹಾಕಿಕೊಂಡ ಒಂದು
ಮೆಟಡೋರ್ ಮನೆಯ ಮುಂದೆ ಬಂದು ನಿಂತಿತು. ಮೂರು ನಾಲ್ಕು ಜನ ಇಳಿದು ಬಂದವರೇ ಮನೆಯೊಳಗೆ
ನುಗ್ಗಿದರು. ಮೇಡಂ, ನಿಮ್ಮ ಯಜಮಾನರು ಒಬ್ಬರಿಗೆ ನಮ್ಮ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳಲು
ಶೂರಿಟಿ ಹಾಕಿದ್ದಾರೆ. ಅವರು ಲೋನ್ ಕಟ್ಟಲಿಲ್ಲ. ಅದಕ್ಕೆ ನಿಮ್ಮ ಮನೆಯ ಹತ್ತಿರ ಬಂದಿದ್ದೇವೆ.
ಇನ್ನು ಒಂದು ವಾರ ಬಿಟ್ಟು ಪುನ: ಬರುತ್ತೇವೆ. ಆಗ ಲೋನ್ ಕಂತು ಕಟ್ಟಿರಬೇಕು ಇಲ್ಲದಿದ್ದಲ್ಲಿ
ನಿಮ್ಮ ಮನೆಯಲ್ಲಿರೋ ಸಾಮಾನನ್ನೆಲ್ಲ ಆಚೆ ಹಾಕಬೇಕಾಗುತ್ತದೆ ಎಂದು ಹೆದರಿಸಿದರು. ನನಗೆ ಒಮ್ಮೆಲೆ
ಮೈ ಎಲ್ಲಾ ಉರಿದು ಹೋಯಿತು. ನೋಡ್ರಿ ಯಾರು ಲೋನ್ ತಗೊಂಡಿದ್ದಾರೋ ಅವರನ್ನು ಹೋಗಿ ಕೇಳಿ.
ಇಲ್ಲಾಂದ್ರೆ ಶೂರಿಟಿ ಹಾಕಿರೋರನ್ನ ಹೋಗಿ ಕೇಳಿ. ಹೆಂಗಸರು ಮಾತ್ರ ಮನೇಲಿರೋ ಹೊತ್ನಲ್ಲಿ ಬಂದು
ನಮ್ಮನ್ನು ಏನು ಕೇಳೋದು ಎಂದು ಜೋರು ಮಾಡಿದೆ. ನೆರೆಹೊರೆಯವರೆಲ್ಲ ಆಚೆ ಬಂದು ನೋಡುತ್ತಿದ್ದರು.
ಯಾರಿಗೂ ಏನು ವಿಷಯ ಎಂದು ಗೊತ್ತಿಲ್ಲದೆ ಯಾರೂ ಮಾತಾಡಲು ಮುಂದೆ ಬರಲಿಲ್ಲ. ನನಗೇ ಗೊತ್ತಿರಲಿಲ್ಲ.
ಇನ್ನು ಅವರಿಗೆ ಹೇಗೆ ಗೊತ್ತಾಗ್ಬೇಕು. ಮರ್ಯಾದೆಗೆ ಹೆದರೋ ಜನ ನಾವು. ತೀರಾ ಅವಮಾನವಾದಂತಾಗಿ
ಕಣ್ಣಲ್ಲಿ ನೀರು ತುಂಬೋಕೆ ಶುರುವಾಯಿತು.
ಲೋನ್ ತಗೊಂಡಿರೋ ಆ
ಪುಣ್ಯಾತ್ಮನ್ನ ಕೇಳೋಕೆ ಹೋದ್ರೆ ಅವನು ಕೈಗೇ ಸಿಗೋದಿಲ್ಲ. ಇನ್ನು ಅವನ ಹೆಂಡತಿ ಹತ್ತಿರ
ಕೇಳಿದ್ರೆ ನಾನೇನು ಮಾಡಲಿ ನನ್ನ ಹತ್ರ ಒಂದು ಪೈಸೇನೂ ಇಲ್ಲ. ಇದಕ್ಕೂ ಹೆಚ್ಚಾಗಿ ಫೋರ್ಸ್
ಮಾಡಿದ್ರೆ ಮೇಲಿಂದ ಬಿದ್ದು ಸತ್ತು ಹೋಗ್ತೀನಿ ಅಂತ ಹೆದರಿಸ್ತಾಳೆ. ಲೋನ್ ತಗೊಳ್ಳೋವಾಗ ಈ ಬುದ್ಧಿ
ಎಲ್ಲಾ ಎಲ್ಲಿ ಹೋಗಿತ್ತೋ. ಇನ್ನು ಇನ್ನೊಬ್ಬ ಶೂರಿಟಿ ಹಾಕಿರೋರ ಮನೆ ಹತ್ರ ಹೋದ್ರೆ ನಮ್ಮಷ್ಟು
ಗಾತ್ರದ ನಾಯಿನಾ ಛೂ ಬಿಡ್ತಾರೆ. ನೋಡ್ರಿ ಮೇಡಂ ನೀವು ಏನು ಮಾಡ್ತಿರೋ ನಮ್ಗೆ ಗೊತ್ತಿಲ್ಲ. ಪುನ:
ಬರುವಾಗ ಪೋಲೀಸ್ ಜೊತೇಲಿ ಬರುತ್ತೇವೆ ಅಂತ ಹೆದರಿಸಿದ್ರು. ನಂಗೂ ಯಾಕೋ ರೇಗೋಯ್ತು. ಯಾರೂ ನೋಡಿರದ ಪೋಲೀಸ್ ಕರಕೊಂಡು
ಬನ್ನಿ ಹೋಗ್ರಿ ಅಂತ ದಬಾಯಿಸಿದೆ. ಸಿಕ್ಕಾಪಟ್ಟೆ ಟೆನ್ಶನ್ ಮಾಡ್ಕೊಂಡು ಲೋನ್ ತಗೊಂಡವ್ನಿಗೆ,
ನಮ್ಮೆಜಮಾನ್ರಿಗೆ ಬಯ್ಕೋತಾ ಆಫೀಸಿಗೆ ಹೋದೆ.
ಸಂಜೆ
ಆಫೀಸ್ ನಿಂದ ಬಂದವಳೇ ಈ ವಿಷಯವನ್ನ ಮೊದಲೇ ನಂಗೆ ಯಾಕೆ ಹೇಳಲಿಲ್ಲ ಅಂತ ಯಜಮಾನರನ್ನ ಚೆನ್ನಾಗಿ
ತರಾಟೆಗೆ ತಗೊಂಡೆ. ನೋಟೀಸು ಬಂದಿರೋ ವಿಷಯವನ್ನ ನನ್ನಿಂದ ಮುಚ್ಚಿಟ್ಟಿದ್ದರು. ಕೊನೆಗೆ ನೋಡ್ರೀ
ಅದು ಎಷ್ಟು ಲೋನ್ ಅಂತ ಹೇಳಿ. ನಾನು ತಂದು ಕೊಡುತ್ತೀನಿ. ಮೊದಲು ಅದನ್ನು ಕಟ್ಟಿ.
ಇನ್ನೊಂದು ಸಲ ಆ ಸಾಲ ವಸೂಲಾತಿ ವಾಹನ ನಮ್ಮ ಮನೆ ಮುಂದೆ ಬರಬಾರದು ಅಂತ ಹೇಳಿದೆ. ಕೊನೆಗೆ ನಾನು
ದುಡ್ಡು ತಂದು ಕೊಟ್ಟಿದ್ದೂ ಆಯಿತು. ಅವರು ಕಟ್ಟಿದ್ದೂ ಆಯಿತು. ಅವರ ಸ್ನೇಹಿತ ಮಾತ್ರ
ತಲೆಮರೆಸಿಕೊಂಡು ಸುತ್ತಾಡುತ್ತಲೇ ಇದ್ದ. ಸ್ನೇಹಿತರೇ ನಿಮಗೂ ಇಂತಹ ಅನುಭವವಾಗಿರಬಹುದು. ಇದ್ದರೆ
ಇಂತಹ ಸ್ನೇಹಿತರಿರಬೇಕು ಅಲ್ವಾ?
*****