ಅಪ್ಪನ ತಪ್ಪೋ ಅಮ್ಮನ ತಪ್ಪೋ
ಗೊತ್ತಿಲ್ಲ. ನಾನಂತೂ ಒಬ್ಬಂಟಿಯಾಗಿಯೇ ಬೆಳೆದೆ. ಅಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಆ ಕಾಲದಲ್ಲಿ
ಹೆಂಗಸರು ಕೆಲಸಕ್ಕೆ ಹೋಗುತ್ತಿದ್ದುದೇ ಕಡಿಮೆ. ಅಪ್ಪ ಸ್ಪುರದ್ರೂಪಿ ಅಂತ ಕೇಳಿದ್ದೆ. ಅಮ್ಮ
ಸುಮಾರಾಗಿದ್ದರು. ಅಪ್ಪನ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹತ್ತು ಜನ ಮಕ್ಕಳು ದೊಡ್ಡ ಸಂಸಾರ.
ಹಿಂದು ಮುಂದು ಯೋಚನೆ ಮಾಡದೆ ಮದುವೆಗೆ ಒಪ್ಪಿದ್ದರು. ಆದರೆ ಸಂಬಂಧ ಜಾಸ್ತಿ ದಿನ ಉಳಿಯಲಿಲ್ಲ.
ಬಾಣಂತನಕ್ಕೆಂದು ತವರು ಮನೆಗೆ ಬಂದಿದ್ದ ಅಮ್ಮ 40 ದಿನಕ್ಕೆ ನನ್ನನ್ನು ಅಪ್ಪನ ಮನೆಗೆ
ಕರೆದುಕೊಂಡು ಹೋದವರು ನನ್ನನ್ನು ಅಲ್ಲಿಯೇ ಬಿಟ್ಟು ತವರು ಮನೆಗೆ ವಾಪಸ್ಸು ಬಂದಿದ್ದರು. ಆಮೇಲೆ
ಕೋರ್ಟ್ ಕಚೇರಿ ಡೈವೋರ್ಸ್ ಎಲ್ಲಾ ಆಯಿತು. ಡೈವೋರ್ಸ್ ದಿನದಂದು, 5 ವರ್ಷಗಳ ಬಳಿಕ ಮಗುವನ್ನು
ತಂದೆ ಹತ್ತಿರ ಕರೆದುಕೊಂಡು ಹೋಗಬಹುದು. ಅಲ್ಲಿಯವರೆಗೆ ತಾಯಿಯ ಹತ್ತಿರ ಇರಬೇಕು ಎಂದು ತೀರ್ಪು
ನೀಡಲಾಯಿತು. ಅಪ್ಪನ ಮನೆಯಲ್ಲಿ ನನ್ನನ್ನು ಬಿಟ್ಟು ಹೋದಾಗಿನಿಂದ ನನ್ನನ್ನು ನೋಡಿಕೊಳ್ಳುತ್ತಿದ್ದ
ಅಪ್ಪಮ್ಮ ಡೈವೋರ್ಸ್ ದಿನ ನನ್ನನ್ನು ಅಮ್ಮನ ಹತ್ತಿರ ಕೊಡಬೇಕಾದ್ರೆ ಬಿಕ್ಕಿ ಬಿಕ್ಕಿ
ಅಳುತ್ತಿದ್ದರಂತೆ.
ಅಪ್ಪ ಇನ್ನೊಂದು ಮದುವೆ ಆದರು. ಅವರಿಗೂ
ಮೂರು ಮಕ್ಕಳಾದವು. 5 ವರ್ಷಗಳ ನಂತರ ನನ್ನನ್ನು ಕರೆದುಕೊಂಡು ಹೋಗುವುದಿರಲಿ ನನ್ನನ್ನು ಸಂಪೂರ್ಣ ಮರೆತೇ
ಬಿಟ್ಟಿದ್ದರು. ಆದ್ದರಿಂದ ಅಮ್ಮನೊಂದಿಗೇ ಬೆಳೆದೆ. ಅಮ್ಮ ಅಪ್ಪನಿಲ್ಲದ ಕೊರತೆಯ ಅರಿವಾಗದಂತೆ
ನನ್ನನ್ನು ಬೆಳೆಸಿದರು. ಬಹುಷ: ಅಪ್ಪನ ಮನೆಯಲ್ಲಿರುತ್ತಿದ್ದರೂ ನಾನು ಅಷ್ಟು ಚೆನ್ನಾಗಿ
ಬೆಳೆಯುತ್ತಿರಲಿಲ್ಲವೇನೋ. ಕೇಳೋಕೆ ಮುಂಚೇನೇ ಎಲ್ಲಾ ನನಗೆ ದೊರಕುತ್ತಿತ್ತು. ಅಪ್ಪ
ಜೊತೆಯಲ್ಲಿಲ್ಲ ಅನ್ನೋ ಕೊರತೆ ಬಿಟ್ಟರೆ ನನಗೆ ಬೇರಾವ ಯೋಚನೇನೂ ಇರಲಿಲ್ಲ.
ಆದರೆ ಸ್ಕೂಲ್ ಗೆ ಹೋಗಲು ಶುರು ಮಾಡಿದ
ಮೇಲೆ ಒಬ್ಬೊಬ್ಬರು ಒಂದೊಂದು ಮಾತಾಡುತ್ತಿದ್ದರು. ಫ್ರೆಂಡ್ಸ್ ಎಲ್ಲ ಜೊತೇಲಿ ಸೇರಿ, ಅವನಿಗೆ
ಅಪ್ಪ ಇಲ್ಲ ಅಂತೆ ಕಣೋ. ಅವನ ಅಮ್ಮ ಅಪ್ಪನನ್ನು ಬಿಟ್ಟು ಓಡಿ ಬಂದಿದ್ದಾರಂತೆ ಕಣೋ. ಏನೇನೋ
ಮಾತಾಡಿಕೊಳ್ಳುತ್ತಿದ್ದರು. ಕೆಲವು ಕಿವಿಗೆ ಬೀಳುತ್ತಿದ್ದುವು. ಅದರಿಂದ ಸ್ಕೂಲ್ ನಲ್ಲೂ ಯಾರ
ಜೊತೆಗೂ ಸೇರದೆ ಅಲ್ಲೂ ಒಬ್ಬಂಟಿಯಾಗಿಯೇ ಇರುತ್ತಿದ್ದೆ. ನನ್ನ ಓದಾಯಿತು ನಾನಾಯಿತು. ಮನೆಯಲ್ಲೂ
ನನ್ನ ಓರಗೆಯವರು ಯಾರೂ ಇರಲಿಲ್ಲವಾದ ಕಾರಣ ಮನೆಯಲ್ಲೂ ಏಕಾಂಗಿಯಾಗಿಯೇ ಬೆಳೆದೆ.
ದೊಡ್ಡವನಾಗುತ್ತಿದ್ದಂತೆ ಆಗಾಗ ಅಪ್ಪನ
ನೆನಪು ಬರುತ್ತಿತ್ತು. ಅಪ್ಪನನ್ನು ಒಮ್ಮೆಯಾದರೂ ನೋಡಬೇಕು ಅಂತ ಮನಸ್ಸು ಹಾತೊರೆಯುತ್ತಿತ್ತು.
ಅಮ್ಮಮ್ಮನಿಗೆ ಅಪ್ಪನ ಹೆಸರು ಕೇಳಿದ್ರೆ ಆಗುತ್ತಿರಲಿಲ್ಲ. ಆದಕಾರಣ ಕೇಳಲು ಭಯವಾಗಿ ಸುಮ್ಮನಿರುತ್ತಿದ್ದೆ.
ಸಂಬಂಧಿಕರ ಮದುವೇಗೆ ಹೋದಲ್ಲಿ ಅಲ್ಲಿಗೆ ಅಪ್ಪ ಬಂದಿರಬಹುದೇನೋ ಅಂತ ಸುತ್ತಲೂ ಹುಡುಕುತ್ತಿದ್ದೆ. ಈ
ಅಪ್ಪ ಅಮ್ಮಂದಿರು ಯಾಕೆ ಹೀಗೆ ಮಾಡುತ್ತಾರೆ. ತಾವು ಕಿತ್ತಾಡ್ಕೊಂಡು ಡೈವೋರ್ಸ್ ತಗೊಂಡು
ಮಕ್ಕಳಿಗೆ ಅಪ್ಪ ಅಥವಾ ಅಮ್ಮನ ಪ್ರೀತಿಯಿಂದ ವಂಚಿತರಾಗುವಂತೆ ಮಾಡುತ್ತಾರೆ. ಯಾಕೆ ಮಕ್ಕಳ ಬಗ್ಗೆ
ಯೋಚನೇನೇ ಮಾಡೋದಿಲ್ಲ. ಡೈವೋರ್ಸ್ ಅನ್ನೋ ಒಂದು ಪತ್ರ ಕೊಟ್ಟ ತಕ್ಷಣ ಸಂಬಂಧಗಳು ದೂರವಾಗಲು ಸಾಧ್ಯಾನಾ.
ಅಮ್ಮ ನನ್ನನ್ನು ಇಂಜಿನಿಯರಿಂಗ್
ಓದಿಸಿದ್ದರು. ಪೂನಾದಲ್ಲಿ ಒಳ್ಳೇ ಕಂಪೆನಿಯಲ್ಲಿ ಕೆಲಸ ಸಿಕ್ಕಿದ ಕಾರಣ ಊರು ಬಿಡಬೇಕಾಯಿತು. ಅಮ್ಮ
ಅಮ್ಮಮ್ಮನ ಜೊತೆಯಲ್ಲಿಯೇ ಇದ್ದರು. ಊರು ಬಿಡಬೇಕಾದ್ರೆ ಅಮ್ಮ ಬಿಕ್ಕಿ ಬಿಕ್ಕಿ ಅತ್ತರು. ನನ್ನ ಸೌಮ್ಯ
ಸ್ವಭಾವವನ್ನು ಇಷ್ಟಪಟ್ಟ ಸಹೋದ್ಯೋಗಿ ಒಬ್ಬಳು ಮದುವೆಯಾಗುವಂತೆ ಕೇಳಿಕೊಂಡಳು. ನನಗೂ ಒಂಟಿತನ
ಸಾಕಾಗಿತ್ತು. ಅಮ್ಮನ ಒಪ್ಪಿಗೆ ಪಡೆದು ಅವಳನ್ನು ಮದುವೆಯಾದೆ.
ಈ ಮಧ್ಯೆ ಅಪ್ಪನ ಸಾವಿನ ವಿಷಯ
ಅಮ್ಮನಿಂದ ತಿಳಿಯಿತು. ಬದುಕಿದ್ದಾಗ ಅಂತೂ ಅಪ್ಪನನ್ನು ನೋಡಲಿಲ್ಲ. ಕೊನೆ ಪಕ್ಷ ಸತ್ತಾಗಲಾದರೂ
ಒಮ್ಮೆ ಮುಖ ನೋಡಿ ಬರಬೇಕು ಅಂತ ಮನಸ್ಸು ಕೂಗಿ ಹೇಳುತ್ತಿತ್ತು. ತಡೀಲಾರದೆ ನಾನು ನೋಡಿ
ಬರುತ್ತೇನೆ ಅಂತ ಅಮ್ಮನಿಗೆ ತಿಳಿಸಿದೆ. ಅಮ್ಮಮ್ಮ ಹೋಗಲು ಬಿಡಲಿಲ್ಲ. ಈಗ ಹೋದಲ್ಲಿ ಆಸ್ತಿ ಪಾಲು
ಕೇಳಲು ಬಂದಿದ್ದಾನೆ ಅಂದ್ಕೋಬಹುದು. ಹೋಗೋದು ಬೇಡ ಅಂದುಬಿಟ್ರು. ಅವರ ಮಾತನ್ನು ಮೀರುವ
ಹಾಗಿರಲಿಲ್ಲ. ಏನೂ ಮಾಡಲಾಗದೆ ಮನಸ್ಸೊಳಗೇ ಅತ್ತೆ. ಅಪ್ಪನ ಆತ್ಮಕ್ಕೆ ಶಾಂತಿ ನೀಡುವಂತೆ
ಭಗವಂತನಲ್ಲಿ ಪ್ರಾರ್ಥಿಸಿದೆ. ಮಗನಾಗಿ ಅದನ್ನು ಬಿಟ್ಟು ಬೇರೆ ಏನನ್ನೂ ನನ್ನಿಂದ ಮಾಡಲಾಗಲಿಲ್ಲ. ಕೊನೆಗೂ
ನಾನು ಅಪ್ಪನನ್ನು ನೋಡಲೇ ಇಲ್ಲ. I love you dad. I miss you.
*****