Showing posts with label ಕಥೆ. Show all posts
Showing posts with label ಕಥೆ. Show all posts

Tuesday, 15 April 2014

ಆಸರೆ


ಆಶ್ರಮದಲ್ಲಿ ಯಾರೊಂದಿಗೂ ಮಾತಿಲ್ಲ ಕತೆಯಿಲ್ಲ. ಹಾಗಂತ, ಅವಳು ಯೋಚಿಸುವ ಶಕ್ತಿಯನ್ನೇನೂ ಕಳೆದುಕೊಂಡಿರಲಿಲ್ಲ. ಬೆಳಗಿನ ಧ್ಯಾನ, ಪ್ರಾರ್ಥನೆ, ತಿಂಡಿ, ಊಟ, ಭಜನೆ ಎಲ್ಲದರಲ್ಲೂ ಭಾಗವಹಿಸುತ್ತಿದ್ದಳು. ಆದರೆ ಎಲ್ಲವೂ ಯಾಂತ್ರಿಕ.   

ಇಬ್ಬರು ಮಕ್ಕಳಿಗಾಗಿ ಎಷ್ಟು ಜೀವ ಸವೆಸಿದ್ದಳು. ಹೊಟ್ಟೆ ಬಾಯಿ ಕಟ್ಟಿ ಮಕ್ಕಳಿಗೆ ಮಾತ್ರ ಏನೂ ಕೊರತೆಯಾಗದಂತೆ ಬೆಳೆಸಿದ್ದಳು. ಸಾಲಸೂಲ ಮಾಡಿ ಒಬ್ಬನನ್ನು ಡಾಕ್ಟರ್ ಹಾಗೂ ಇನ್ನೊಬ್ಬನನ್ನು ಇಂಜಿನಿಯರ್ ಮಾಡಿಸಿದ್ದರು. ದೊಡ್ಡ ಮಗನಿಗೆ ಡಾಕ್ಟರ್ ಹೆಂಡತೀನೇ ಸಿಕ್ಕಿದ್ದಳು. ಅಮೇರಿಕದಲ್ಲಿ ಒಳ್ಳೆಯ ಕಡೆ ಕೆಲಸ ಸಿಕ್ಕಿದ್ದರಿಂದ ಹೆಂಡತಿಯನ್ನು ಕರ್ಕೊಂಡು ಅಮೇರಿಕಕ್ಕೆ ಹೋಗಿದ್ದ. ಆದರೆ ಇಬ್ಬರೂ ದುಡಿಯುತ್ತಿದ್ದುದರಿಂದ ಮಗ ಹುಟ್ಟಿದ ತಕ್ಷಣ ನೋಡಿಕೊಳ್ಳಲು ಕಷ್ಟವಾಗುತ್ತದೆಂದು ಊರಲ್ಲಿ ಅಮ್ಮನ ಮನೆಯಲ್ಲಿಯೇ ಬಿಟ್ಟು ಹೋಗಿದ್ದ. 

ಎರಡನೇ ಮಗನಿಗೂ ಇಂಜಿನಿಯರ್  ಹುಡುಗೀನೇ ಸಿಕ್ಕಿದ್ದಳು. ಅವನು ಕೂಡಾ ದೊಡ್ಡವನ ಹಾದೀನೇ ಹಿಡಿದಿದ್ದ. ಕೆಲಸ ಸಿಕ್ಕಿದ ತಕ್ಷಣ ಕಂಪೆನಿಯಿಂದ ಯು.ಕೆ.ಗೆ ಕಳುಹಿಸಿದ್ದರಿಂದ  ಹೆಂಡತಿಯನ್ನೂ ಕರ್ಕೊಂಡು ಅಲ್ಲಿಯೇ ಸೆಟಲ್ ಆಗಿಬಿಟ್ಟ. ಅವನೂ ಕೂಡಾ ನಾನೇನು ಕಮ್ಮಿ ಅಂತ ಮಗ ಹುಟ್ಟಿದ ತಕ್ಷಣ ಅಮ್ಮನ ಹತ್ತಿರ ಬಿಟ್ಟು ಹೋಗಿದ್ದ. 

ಅಂದು ಅವಳ ಜೀವನದ ಕರಾಳ ದಿನ. ಯಜಮಾನರು ರಾತ್ರಿ ಮಲಗಿದ್ದವರು ಬೆಳಿಗ್ಗೆ ಎದ್ದೇಳಲೇ ಇಲ್ಲ. ಗಂಡನನ್ನು ಕಳಕೊಂಡ ದು:ಖದಿಂದ ಆಘಾತಗೊಂಡಿದ್ದಳು. ಇಬ್ಬರು ಮಕ್ಕಳೂ ಪತ್ನಿ ಸಮೇತರಾಗಿ ಬಂದು ಪಿತೃ ಕಾರ್ಯ ಎಲ್ಲಾ ಮುಗಿಸಿ ಹೋದರು. ರಜೆ ಸಿಕ್ಕಿದ ತಕ್ಷಣ ಬರುವುದಾಗಿ ತಿಳಿಸಿ ವಾಪಸ್ಸು ಹೋಗಿದ್ದರು.  

ಸ್ವಲ್ಪ ದಿನ ಬಿಟ್ಟು ದೊಡ್ಡ ಮಗ ಬಂದವನೇ ಅಮ್ಮನನ್ನು ಚಿಕ್ಕ ಮಗ ಕರ್ಕೊಂಡು ಹೋಗಬಹುದು ಅಂದ್ಕೊಂಡು ಮಗನನ್ನು ಕರ್ಕೊಂಡು ಅಮೇರಿಕಕ್ಕೆ ಹೋಗಿಯೇ ಬಿಟ್ಟ. ಚಿಕ್ಕ ಮಗನಿಗೆ ಯಾವ ವಿಷಯವೂ ಗೊತ್ತಿರಲಿಲ್ಲ. ಸ್ವಲ್ಪ ದಿನ ಬಿಟ್ಟು ಚಿಕ್ಕ ಮಗ ಬಂದ. ಒಂದು ತಿಂಗಳು ರಜೆ ಹಾಕಿ ಮಾಡಬೇಕಾದ ಕೆಲಸಗಳನ್ನೆಲ್ಲಾ ಮಾಡಿ ಮುಗಿಸಿದ. ಅಣ್ಣ ಬಿಟ್ಟು ಹೋದ ಅಂತ ನಾನೂ ಹಾಗೆ ಮಾಡಕ್ಕಾಗುತ್ತಾ. ಮಗನಿಗೂ ನಿನಗೂ ವೀಸಾ ಮಾಡಿಸುತ್ತೇನೆ. ನಿನ್ನನ್ನೂ ಕರ್ಕೊಂಡು ಹೋಗುತ್ತೇನೆ. ಇಲ್ಲಿಯ ಮನೆ ಆಸ್ತಿ ಎಲ್ಲಾ ಮಾರಿಬಿಡೋಣ ಅಂತ ಹೇಳಿ ಅಮ್ಮನಿಂದ ಬೇಕಾದ ಕಡೆಗೆಲ್ಲಾ ಸಹಿ ಹಾಕಿಸಿಕೊಂಡ. ಬ್ರೋಕರ್ ನ್ನು ಹುಡುಕಿ ಎಲ್ಲವನ್ನೂ ಮಾರಿದ್ದೂ ಆಯಿತು. ಮದುವೆಯಾದಾಗಿನಿಂದ ಜೋಪಾನವಾಗಿ ನೋಡಿಕೊಂಡಿದ್ದ ಗಂಡ ಮಕ್ಕಳೊಂದಿಗೆ ಬಾಳಿ ಬದುಕಿದ ಮನೆ, ಮನೆಯಲ್ಲಿನ ಒಂದೊಂದು ವಸ್ತುಗಳನ್ನೂ ಬಿಟ್ಟು ಹೋಗಬೇಕಾದ್ರೆ ತುಂಬಾ ಸಂಕಟವಾಗಿತ್ತು. ಆದರೆ ಮಗನ ಜೊತೆಗಿರುತ್ತೇನೆ ಅನ್ನೋ ಸಮಾಧಾನ ಆ ನೋವನ್ನು ದೂರಮಾಡಿತ್ತು. ಮಗ ಹೇಳಿದಂತೆ ಬಟ್ಟೆ ಬರೆಗಳನ್ನೆಲ್ಲಾ ಒಂದು ಸೂಟ್ ಕೇಸ್ ನಲ್ಲಿ ತುಂಬಿದ್ದಳು. ಉಳಿದಂತೆ ಎಲ್ಲಾ ಸಾಮಾನು ಸಮೇತ ಮನೆಯನ್ನು ಮಾರಲಾಗಿತ್ತು.

ಏರ್ ಪೋರ್ಟ್ ನಲ್ಲಿ ಸೂಟ್ ಕೇಸ್ ಸಹಿತ ಮಗ ಅವಳನ್ನು ಒಂದು ಕಡೆ ಕುಳ್ಳಿರಿಸಿ ಹೋಗಿದ್ದ. ಎಷ್ಟೋ ಹೊತ್ತಿನಿಂದ ಒಂದೇ ಕಡೆ ಒಬ್ಬಳೇ ಕುಳಿತೇ ಇದ್ದ ಅವಳನ್ನು ಏರ್ ಪೋರ್ಟ್ ಸಿಬ್ಬಂದಿ ಒಬ್ಬರು ಬಂದು ಮಾತನಾಡಿಸಿದರು. ಪಾರಿನ್ ಗೆ ಹೋಗುತ್ತಿದ್ದೇವೆ ಮಗ ವೀಸಾ ತೆಗೆದುಕೊಂಡು ಬರಲು ಹೋಗಿದ್ದಾನೆ ಅಂದಳು. ಅವರು ಎಲ್ಲಿಗೆ ಹೋಗುತ್ತಿದ್ದೀರಿ ಯಾವ ಫ್ಲೈಟ್ ಎಲ್ಲಾ ವಿಚಾರಿಸಿದರು. ಆ ಫ್ಲೈಟ್ ಹೋಗಿ ಎರಡು ಗಂಟೆ ಆಯಿತು. ಮಗನ ನಂಬರ್ ಇದ್ದರೆ ಕೊಡಿ ಎಂದು ಕೇಳಿದರು. ಮಗ ಜೊತೇಲೇ ಇದ್ದ ಕಾರಣ ಏನನ್ನೂ ಇಟ್ಟುಕೊಂಡಿರಲಿಲ್ಲ. ಇಂತಹ ಕೇಸುಗಳನ್ನು ಅವರು ಎಷ್ಟೋ ನೋಡಿರಬಹುದು. ಬಹುಷ: ಮಗ ನಿಮ್ಮನ್ನು ಬಿಟ್ಟು ಹೊರಟು ಹೋಗಿದ್ದಾನೆ ಅಂದರು. ಏನೋ ತೊಂದರೆಯಾಗಿರಬಹುದು. ಮಗ ಬಂದೇ ಬರುತ್ತಾನೆ ಅನ್ನುತ್ತಾ ಇನ್ನೂ ಎಷ್ಟೋ ಸಮಯ ಅಲ್ಲಿಯೇ ಕುಳಿತಿದ್ದಳು. ಕತ್ತಲಾಗುತ್ತಾ ಬಂದಂತೆ ನಿಜವಾಗಿಯೂ ಮಗ ಬಿಟ್ಟು ಹೋದನೆ ಅನ್ನುವ ಭಯ ಶುರುವಾಯಿತು. ಏರ್ ಪೋರ್ಟ್ ಸಿಬ್ಬಂದಿ ಪುನ: ಬಂದು ಕರೆದರು. ಮಾತನಾಡದೆ ಅವರ ಜೊತೆಗೆ ಹೋದಳು. ಅವರು ಮನೆಗೆ ಕರೆದುಕೊಂಡು ಹೋದವರೇ ಹೆಂಡತಿಯಲ್ಲಿ ಎಲ್ಲಾ ವಿಚಾರ ತಿಳಿಸಿದರು. ಮರುದಿನ ವೃದ್ಧಾಶ್ರಮಗಳ ವಿವರ ತಿಳಿದು ಒಂದು ಆಶ್ರಮಕ್ಕೆ ಸೇರಿಸಿದರು.  

ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇ ಈ ರೀತಿ ಮೋಸ ಮಾಡಬಹುದೆಂದು ಊಹಿಸಲೂ ಸಾಧ್ಯವಿರಲಿಲ್ಲ. ಆ ಘಟನೆ ನಡೆದಾಗಿನಿಂದ ಆಘಾತ ತಡೀಲಾರದೆ ಅವಳು ಮೂಕಿಯಾಗಿದ್ದಳು. ಮಕ್ಕಳು ಚಿಕ್ಕೋರಿರುವಾಗ ಎಷ್ಟು ಚೆನ್ನಾಗಿತ್ತು. ಇಬ್ಬರೂ ಅಮ್ಮನಿಗಾಗಿ ಅದೆಷ್ಟು ಕಿತ್ತಾಡುತ್ತಿದ್ದರು. ನನ್ನಮ್ಮ, ನನ್ನಮ್ಮ ಅಂತ ನಾನು ಅಮ್ಮನ ಪಕ್ಕ ನಾನು ಅಮ್ಮನ ಪಕ್ಕ ಅಂತ,  ಮೊದಲ ತುತ್ತು ನನಗೆ ಅನ್ನುತ್ತಾ ಹೀಗೆ ಅಮ್ಮನಿಗಾಗಿ ಕಿತ್ತಾಡುತ್ತಿದ್ದರು. ಕಾಂಪಿಟೀಷನ್ ನಲ್ಲಿ ಅಮ್ಮನಿಗಾಗಿ ಜಗಳವಾಡುತ್ತಿದ್ದರು. ದೊಡ್ಡೋನಾದ ಮೇಲೆ ಅಮ್ಮನಿಗೆ ಚಿನ್ನದ ಸರ ಮಾಡಿಸ್ತೀನಿ ಅಂತ ಒಬ್ಬ ಅನ್ನುತ್ತಿದ್ದ. ಬಂಗ್ಲೆ ಕಟ್ಟಿಸಿ ಕೈಗೊಂದು ಆಳು ಕಾಲಿಗೊಂದು ಆಳುಗಳನ್ನಿಟ್ಟು ಅಮ್ಮನನ್ನು ರಾಣಿ ತರಹ ನೋಡ್ಕೋತೀನಿ ಅಂತ ಇನ್ನೊಬ್ಬ ಅನ್ನುತ್ತಿದ್ದ. ಅಮ್ಮ ನನಗೆ ಬೇಕು ನನಗೆ ಬೇಕು ಅಂತ ಕಿತ್ತಾಡುತ್ತಿದ್ದ ಅವರು ಈಗ ಬೇಕಾದ್ರೆ ಅಮ್ಮನನ್ನು ನೀನೇ ಇಟ್ಟುಕೋ ಅನ್ನುವ ಸ್ಥಿತಿಗೆ ಬಂದಿದ್ದರು. ಹಳೆಯದನ್ನು ನೆನೆಯುತ್ತಾ ಕಣ್ಣು ಮಂಜಾಗತೊಡಗಿತು.

ಫೇಸ್ ಬುಕ್ ನಲ್ಲಿ ಓಡಾಡುತ್ತಿದ್ದ ಒಂದು ಕತೆ ನೆನಪಿಗೆ ಬರುತ್ತದೆ. ಅಪ್ಪ ಮಗ ಮನೆಗೆ ತಾಗಿ ಇದ್ದ ಪಾರ್ಕ್ನ ಕಲ್ಲು ಬೆಂಚಿನಲ್ಲಿ ಕುಳಿತಿರುತ್ತಾರೆ. ಅಲ್ಲಿಗೆ ಒಂದು ಗುಬ್ಬಚ್ಚಿ ಬರುತ್ತದೆ. ಅಪ್ಪ ಕೇಳುತ್ತಾನೆ ‘ಅದೇನು’ ಅಂತ. ಮಗ ಹೇಳುತ್ತಾನೆ ‘ಗುಬ್ಬಚ್ಚಿ’ ಅಂತ. ಗುಬ್ಬಚ್ಚಿ ಗಿಡದ ಮೇಲೆ ಹೋಗಿ ಕುಳಿತುಕೊಳ್ಳುತ್ತದೆ. ಅಪ್ಪ ಕೇಳುತ್ತಾನೆ ‘ಅದೇನು’. ಮಗ ಹೇಳುತ್ತಾನೆ ‘ಗುಬ್ಬಚ್ಚಿ’. ಗುಬ್ಬಚ್ಚಿ ನೆಲದ ಮೇಲೆ ಓಡಾಡುತ್ತದೆ. ಅಪ್ಪ ಪುನ:ಕೇಳುತ್ತಾನೆ ‘ಅದೇನು’. ಮಗನ ತಾಳ್ಮೆ ತಪ್ಪುತ್ತದೆ. ಗುಬ್ಬಚ್ಚಿ, ಗುಬ್ಬಚ್ಚಿ, ಗುಬ್ಬಚ್ಚಿ ಎಷ್ಟು ಸಲ ಹೇಳೋದು ನಿನಗೆ ಒಂದು ಸಲ ಹೇಳಿದ್ರೆ ಅರ್ಥ ಆಗಲ್ವ ಅಪ್ಪ ನಿಧಾನವಾಗಿ ಮನೆಯ ಒಳಗೆ ಹೋಗಿ ಒಂದು ಡೈರಿ ತೆಗೆದುಕೊಂಡು ಬರುತ್ತಾನೆ. ಅದರಲ್ಲಿ ಹುಡುಕಿ ಒಂದು ಪೇಜನ್ನು ತೋರಿಸಿ ಇದನ್ನು ಗಟ್ಟಿಯಾಗಿ ಓದು ಅನ್ನುತ್ತಾನೆ. ಮಗ ಓದುತ್ತಾನೆ. ‘ಇಂದು ನನ್ನ ಮಗ ಮೂರನೆಯ ವರ್ಷಕ್ಕೆ ಕಾಲಿಟ್ಟ ದಿನ. ಮಗನ ಜೊತೆ ಆಟವಾಡುತ್ತಿದ್ದಾಗ ಅಲ್ಲಿಗೆ ಒಂದು ಗುಬ್ಬಚ್ಚಿ ಬಂತು. ಮಗ ‘ಅದೇನು’ ಅಂತ ಕೇಳಿದ. ನಾನು ‘ಗುಬ್ಬಚ್ಚಿ’ ಅಂದೆ. ಮಗ ಪುನ: ‘ಅದೇನು’ ಅಂತ ಕೇಳಿದ. ನಾನು ಹೇಳಿದೆ. ಅದೇ ರೀತಿ ಮಗ 21 ಸಲ ಕೇಳಿದ. ನಾನು ಬೇಜಾರಿಲ್ಲದೆ ಪ್ರತಿ ಸಲವೂ ಮಗ ಕೇಳುವಾಗ ಅವನನ್ನು ಮುದ್ದಿಸಿ ‘ಗುಬ್ಬಚ್ಚಿ’ ಅಂತ ಉತ್ತರಿಸಿದೆ. ಅವನು ಕೇಳುತ್ತಿದ್ದಷ್ಟೂ ನನಗೆ ಖುಷಿ ಅನ್ನಿಸುತ್ತಿತ್ತು’. ಮಗ ಡೈರಿ ಮುಚ್ಚಿಟ್ಟವನೇ ಅಪ್ಪನನ್ನು ಜೋರಾಗಿ ತಬ್ಬಿಕೊಂಡ.

*****

 

Saturday, 22 March 2014

ಹೆತ್ತ ಕರುಳು


ತಕ್ಷಣ ನೋಡಿದಾಗ ಅದೊಂದು ಮರದ ಕೊರಡಿಗೆ ಬಿಳಿ ಬಟ್ಟೆ ಹೊದಿಸಿದಂತೆ ಕಾಣುತ್ತಿತ್ತು.  ಆದರೆ, ಅದೊಂದು ಹೆಣ. ಸುಮಾರು 5 ಅಥವಾ 6 ವಯಸ್ಸಿನ ಮಗುವಿನ ಹೆಣ. ಮುಖ ಮಾತ್ರ ಕಾಣುವಂತೆ ಅದರ ಮೇಲೆ ಬಿಳಿ ಬಟ್ಟೆ ಹೊದಿಸಿದ್ದರು. ಮುಖ ಕಪ್ಪುಗಟ್ಟಿತ್ತು. ಅದು ಯಾವಾಗ ಸತ್ತಿತ್ತೋ ದೇವರೇ ಬಲ್ಲ. ಕಣ್ಣುಗುಡ್ಡೆ ಈಚೆ ಬಂದಿತ್ತು. ಕಣ್ಣು ಮುಚ್ಚಿರಲಿಲ್ಲ. ಸಾವಿನ ಕ್ಷಣ ತುಂಬಾ ಒದ್ದಾಡಿರಬೇಕು. ಕೈಕಾಲುಗಳು ಸೆಟೆದು ನಿಂತಿದ್ದವು. ನೋಡಲು ತುಂಬಾ ಸಂಕಟವಾಗುತ್ತಿತ್ತು. ಎಲ್ಲರ ಕಣ್ಣಲ್ಲೂ ನೀರು. ಮಗುವಿನ ತಾಯಿಗಾಗಿ ಕಾಯುತ್ತಿದ್ದರು. ಅವಳು ತುಂಬು ಗರ್ಭಿಣಿ. ಹೆರಿಗೆಗೆಂದು ತಾಯಿ ಮನೆಗೆ ಹೋಗಿದ್ದಳು. ಅವಳಿಗೆ ಎರಡು ಗಂಡು ಮಕ್ಕಳು. ಒಂದು ಈಗ ಸತ್ತು ಹೋದ ದೊಡ್ಡ ಮಗ. ಇನ್ನೊಬ್ಬ ಮೂರು ವರ್ಷದ ಮಗ. ಈಗ ಮೂರನೇ ಮಗುವಿಗೆ ಗರ್ಭಿಣಿ.

ಹುಟ್ಟುವಾಗ ಮಗು ಚೆನ್ನಾಗಿಯೇ ಇತ್ತು. ಓಡಾಡಿಕೊಂಡಿದ್ದ ಮಗುವಿಗೆ ಒಂದು ವರ್ಷವಾದಾಗ ಒಂದು ದಿನ ವಿಪರೀತ ಜ್ವರ ಬಂದಿತ್ತು. ಡಾಕ್ಟರ್ ಮಗುವಿಗೆ ಇಂಜೆಕ್ಷನ್ ಚುಚ್ಚಿದ್ದರು ಅಷ್ಟೆ. ಅಲ್ಲಿಯವರೆಗೆ ಚೆನ್ನಾಗಿಯೇ ಇದ್ದ ಮಗು ಆಮೇಲೆ ಉಸಿರಾಡುವುದು ಒಂದನ್ನು ಬಿಟ್ಟು ಬೇರೆ ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ. ಅದೊಂದು ಜೀವಂತ ಶವವಾಗಿ ಬಿಟ್ಟಿತ್ತು. ಮಗು ಮೊದಲಿನಂತಾಗಬಹುದು ಎಂದು ಕಂಡ ಕಂಡ ಡಾಕ್ಟರುಗಳಲ್ಲಿ ಹೋಗಿ ಟ್ರೀಟ್ ಮೆಂಟ್ ಕೊಡಿಸಿದರು. ಕಂಡ ಕಂಡ ದೇವಸ್ಥಾನಗಳಿಗೆ ಹೋದರು. ಏನೂ ಪ್ರಯೋಜನವಾಗಲಿಲ್ಲ.

ಮಗುವಿಗೆ ಎರಡು ವರ್ಷವಾಗುತ್ತಿದ್ದಂತೆ ಅವಳು ಪುನ: ಗರ್ಭಿಣಿಯಾಗಿದ್ದಳು. ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದುದರಿಂದ ಮನಸ್ಸಿಲ್ಲದ ಮನಸ್ಸಿನಿಂದ ಮಗುವನ್ನು ಆಶ್ರಮಕ್ಕೆ ಸೇರಿಸಿದರು. ಆ ಸೇವಾ ಸಂಸ್ಥೆಯ ಮುಖ್ಯಸ್ಥೆ ಇಂತಹ ಒಂದು ಮಗುವನ್ನು ಕಳೆದುಕೊಂಡ ದು:ಖದಲ್ಲಿ ಮಗುವಿನ ನೆನಪಾರ್ಥ ಈ ಸಂಸ್ಥೆಯನ್ನು ಪ್ರಾರಂಬಿಸಿದ್ದರು. ಅನುಕೂಲಸ್ಥರಾಗಿದ್ದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ತಿಂಗಳಿಗೆ ಇಷ್ಟು ದುಡ್ಡು ಅಂತ ತೆಗೆದುಕೊಳ್ಳುತ್ತಿದ್ದರು. ತೀರಾ ಬಡವರಿದ್ದಲ್ಲಿ ಉಚಿತವಾಗಿಯೇ ನೋಡಿಕೊಳ್ಳುತ್ತಿದ್ದರು. ಇವರು ಮಗುವನ್ನು ಆ ಸೇವಾ ಸಂಸ್ಥೆಯಲ್ಲಿ ಬಿಟ್ಟು ತಿಂಗಳಿಗೊಮ್ಮೆ ನೋಡಿಕೊಂಡು ಬರುತ್ತಿದ್ದರು. ತಿಂಗಳು ಕಳೆಯುತ್ತಿದ್ದಂತೆ ಇನ್ನೊಂದು ಗಂಡುಮಗುವಿನ ತಾಯಿಯಾದಳು. ಈ ಮಗುವಿನ ಆರೈಕೆಯಲ್ಲಿ ದೊಡ್ಡ ಮಗನ ಕಡೆಗೆ ಗಮನ ಕಡಿಮೆಯಾಗತೊಡಗಿತು. ತಿಂಗಳಿಗೊಮ್ಮೆ ಆಶ್ರಮಕ್ಕೆ ಹೋಗುತ್ತಿದ್ದವರು ಮೂರು ತಿಂಗಳಿಗೊಮ್ಮೆ ಅಥವಾ ನಾಲ್ಕು ತಿಂಗಳಿಗೊಮ್ಮೆ ಹೋಗಲು ಶುರುಮಾಡಿದರು. ಕೊನೆಗೆ ಅದೂ ಕಡಿಮೆಯಾಯಿತು. ದೊಡ್ಡ ಮಗನ ಮೇಲಿದ್ದ ಪ್ರೀತಿ ವಾತ್ಸಲ್ಯ ಎಲ್ಲಾ ಚಿಕ್ಕ ಮಗನ ಕಡೆಗೆ ಹರಿಯತೊಡಗಿತು.

ಈ ಮಧ್ಯೆ ಮೂರನೆ ಮಗುವಿಗೆ ಗರ್ಭಿಣಿಯಾದಳು. ಸರ್ಕಾರಿ ಕೆಲಸದಲ್ಲಿದ್ದುದರಿಂದ ಎರಡು ಜೀವಂತ ಮಕ್ಕಳಿದ್ದಲ್ಲಿ ಮೂರನೆಯ ಮಗುವಿಗೆ ಹೆರಿಗೆ ರಜೆ, ವೈದ್ಯಕೀಯ ಮರುಪಾವತಿ ಯಾವ ಸೌಲಭ್ಯವೂ ಸಿಗೋದಿಲ್ಲ. ಅವಳು ಯೋಚಿಸತೊಡಗಿದಳು. ಆ ಮಗು ಇದ್ದರೂ ಒಂದೆ ಸತ್ತರೂ ಒಂದೇ. ಈಗಾಗಲೇ ಅದು ಜೀವಂತ ಶವ. ಆಶ್ರಮಕ್ಕೆ ಮಕ್ಕಳನ್ನು ನೋಡಲು ಪ್ರತಿದಿನ ಡಾಕ್ಟರ್ ಬರುತ್ತಿದ್ದರು. ಒಂದು ದಿನ ಮಗುವನ್ನು ಎತ್ತಿಕೊಂಡು ಆಶ್ರಮಕ್ಕೆ ಹೋಗಿ ಡಾಕ್ಟರನ್ನು ಭೇಟಿ ಮಾಡಿದಳು. ಆಶ್ರಮದಲ್ಲಿದ್ದ ಮಗನಿಗೆ ದಯಾಮರಣ ನೀಡುವಂತೆ ಕೋರಿದಳು. ಹೊಟ್ಟೆಯಲ್ಲೊಂದು ಮಗು, ಕಂಕುಳಲ್ಲೊಂದು ಮಗು ಡಾಕ್ಟರಿಗೆ ಏನನ್ನಿಸಿತೋ ಯೋಚಿಸಲು ಸ್ವಲ್ಪ ಕಾಲಾವಕಾಶ ಕೇಳಿದರು.

ಮಗು ಸತ್ತು ಹೋಗಿತ್ತು. ನೋಡಲು ಬಂದ ಎಲ್ಲರ ಕಣ್ಣಲ್ಲೂ ನೀರು. ಆದರೆ ಆ ತಾಯಿ ಮಾತ್ರ ಭಾವನೆಯನ್ನು ಕಳೆದುಕೊಂಡಂತಿದ್ದಳು. ಯಾರೋ ಅನ್ನುತ್ತಿದ್ದರು ‘’ಅತ್ತು ಬಿಡು ಮಗೂ, ಗರ್ಭಿಣಿ ಹೆಂಗಸು ಮನಸ್ಸಲ್ಲೇ ಅದುಮಿಟ್ಟುಕೊಂಡರೆ ಕಷ್ಟ’’ ಅಂತ. ಏನು ಮಾಡಿದರೂ ಕಣ್ಣಲ್ಲಿ ಒಂದು ತೊಟ್ಟೂ ನೀರು ಬರಲಿಲ್ಲ. ಕಾರಣ ಅವಳಿಗೆ ಮಾತ್ರ ಗೊತ್ತಿತ್ತು. ಸ್ವಲ್ಪ ದಿನಗಳ ತರುವಾಯ ಮೂರನೇ  ಮಗುವಿನ ತಾಯಿಯಾದಳು. ಅಲ್ಲಲ್ಲ ಎರಡನೇ ಮಗು.
*****

Thursday, 16 January 2014

ಅತ್ತೆಗೊಂದು ಕಾಲ...


ಅವಳು ಇಂದು ಸ್ವತಂತ್ರವಾಗಿ ಅತ್ತ ಇತ್ತ ಅಲುಗಾಡುವ ಸ್ಥಿತಿಯಲ್ಲಿ ಕೂಡಾ ಇರಲಿಲ್ಲ. ಅವಳಿಗೆ ಲಕ್ವ ಹೊಡೆದು ಮಲಗಿದ್ದಲ್ಲಿಯೇ ಇರುವಂತಾಗಿತ್ತು. ಒಂದು ಲೋಟ ನೀರು ಬೇಕಾದರೂ ಬೇರೆಯವರನ್ನು ಆಶ್ರಯಿಸಬೇಕಿತ್ತು.  ನಿಂತು ಹೋಗಿದ್ದ ಫ್ಯಾನ್ ನ್ನು ಕಾಂತಿಹೀನ ಕಣ್ಣನಿಂದ ನೋಡುತ್ತಾ ಅವಳು ಗತ ಜೀವನವನ್ನು ನೆನಪಿಸತೊಡಗಿದಳು. ಅದೊಂದು ಬಿಟ್ರೆ ಬೇರೆ ಏನೂ ಮಾಡುವ ಸ್ಥಿತಿಯಲ್ಲಿ ಅವಳಿರಲಿಲ್ಲ.

ಮಗ ತಾನು ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಿ ಮನೆಗೆ ಕರಕೊಂಡು ಬಂದಿದ್ದ. ಪರಜಾತಿ ಹುಡುಗಿ ಎಂದು ಸೊಸೆಯನ್ನು ಅದೆಷ್ಟು ಗೋಳು ಹೊಯ್ದುಕೊಂಡಿದ್ದಳು. ಅವಳು ಏನು ಮಾಡಿದರೂ ತಪ್ಪು. ಮೊಸರಲ್ಲೂ ಕಲ್ಲು ಹುಡುಕುತ್ತಿದ್ದಳು. ಕೊನೆಗೆ ಮಗ ಸೊಸೆ ಜೊತೆಯಲ್ಲಿದ್ದರೆ ಸೊಸೆ ಮಗನ ಮನಸ್ಸು ಕೆಡಿಸಿ ತನ್ನನ್ನು ಮೂಲೆಗುಂಪು ಮಾಡಬಹುದು ಅಂತ ಅವರಿಬ್ಬರನ್ನು ಜೊತೆಯಲ್ಲಿರಲು ಸಹಾ ಬಿಡುತ್ತಿರಲಿಲ್ಲ. ಮಗ ರೂಮಿಗೆ ಮಲಗಲು ಹೊರಟ ತಕ್ಷಣ ಮಗಾ, ತುಂಬಾ ತಲೆ ನೋಯ್ತಾ ಇದೆ ಅಂತಲೋ ಹೊಟ್ಟೆ ನೋವು ಅಂತಲೋ ಏನಾದ್ರೂ ಒಂದು ನೆಪ ತೆಗೆದು ಅವನನ್ನು ತನ್ನ ಹತ್ತಿರವೇ ಇರಿಸಿಕೊಳ್ಳುತ್ತಿದ್ದಳು. ಅವನು ಅಮ್ಮನಿಗೆ ಇಷ್ಟವಿಲ್ಲದ ಸೊಸೆಯನ್ನು ತಂದು ಅಮ್ಮನ ಮನಸ್ಸು ನೋಯಿಸಿದ್ದೇನೆ ಇನ್ನೆಂದೂ ಅಮ್ಮನ ಮನಸ್ಸಿಗೆ ನೋವುಂಟು ಮಾಡಬಾರದು ಅಂತ ಅಮ್ಮನ ಮಾತನ್ನು ಎಂದೂ ಮೀರುತ್ತಿರಲಿಲ್ಲ. ಸೊಸೆ ಮಾತ್ರ ಈ ಸಂಪತ್ತಿಗೆ ಮದುವೆ ಯಾಕೆ ಮಾಡ್ಕೋಬೇಕಾಗಿತ್ತು ಅಂತ ಒಳಗೊಳಗೆ ಕೊರಗುತ್ತಿದ್ದಳು. ಸೊಸೆ ಕೊರಗೋದನ್ನು ನೋಡಿ ಅವಳು ಖುಷಿಪಡುತ್ತಿದ್ದಳು.

ಒಂದು ದಿನ ಅತ್ತೆ ಸೊಸೆಗೆ ಜಗಳ ಹತ್ತಿಕೊಳ್ತು. ಸೊಸೆಗೂ ರೋಸಿ ಹೋಗಿತ್ತು. ಮಾತಿಗೆ ಮಾತು ಕೊಡಲಾರಂಭಿಸಿದಳು. ಮಗ ಬಂದವನೇ, ಅಮ್ಮನಿಗೇ ಎದುರು ವಾದಿಸುತ್ತೀಯಾ ಅಂತ ಕೆನ್ನೆಗೆ ರಪ್ ಅಂತ ಬಾರಿಸಿದ. ಅವಳು ಇದನ್ನ ನಿರೀಕ್ಷಿಸಿರಲಿಲ್ಲ. ರೂಮಿಗೆ ಹೋದವಳೇ ಬಾಗಿಲು ಹಾಕಿಕೊಂಡು ಫ್ಯಾನಿಗೆ ನೇಣು ಹಾಕಿಕೊಂಡಳು.

ಸೊಸೆ ಸತ್ತು ವರ್ಷವಾಗುವುದರೊಳಗೆ ಮಗನಿಗೆ ತನ್ನ ಸಂಬಂಧಿಕರ ಹುಡುಗಿಯೊಬ್ಬಳನ್ನು ತಂದು ಮನೆ ತುಂಬಿಸಿಕೊಂಡಳು. ಹೊಸ ಸೊಸೆ ಮೊದಮೊದಲು ಅತ್ತೆಯನ್ನು ಚೆನ್ನಾಗಿಯೇ ನೋಡಿಕೊಂಡಳು. ಯಾವಾಗ ಅತ್ತೆಗೆ ಲಕ್ವ ಹೊಡೆದು ಮಲಗಿದ್ದಲ್ಲಿಯೇ ಆದಳು ಅಂದಿನಿಂದ ಅವಳ ವರಸೆ ಬದಲಾಗತೊಡಗಿತು. ಎಂತೆಂತವರೋ ಸಾಯ್ತಾರೆ ಈ ಹಾಳು ಮುದುಕಿಗೆ ಮಾತ್ರ ಸಾವು ಬರಲ್ಲ. ನನಗೆ ಯಾವ ಕರ್ಮ ಇದರ ಹೇಲು ಉಚ್ಚೆ ಬಾಚೋದು. ಯಾವಾಗ ಸಾಯುತ್ತೋ ಇದು ಅಂತ ಅವಳಿಗೆ ಕೇಳಿಸುವಂತೆ ವಟಗುಟ್ಟುತ್ತಿದ್ದಳು. ಹೇಲು ಉಚ್ಚೆ ಬಾಚಬೇಕಾಗುತ್ತದೆಂದು ಹೊಟ್ಟೆಗೂ ಕೊಡುತ್ತಿರಲಿಲ್ಲ. ಅವಳು ಹಸಿವೆಯಿಂದ ಒದ್ದಾಡುತ್ತಿದ್ದಳು.

ಅವಳು ಮೊದಲ ಸೊಸೆಯನ್ನು ನೆನಪಿಸಿಕೊಳ್ಳುತ್ತಾ, ನಿನಗೆ ಕೊಡಬಾರದ ಕಷ್ಟ ಕೊಟ್ಟೆ ಕಣೆ. ದೇವರು ಸರಿಯಾದ ಶಿಕ್ಷೆ ಕೊಟ್ಟ. ನೀನೇ ಪುಣ್ಯವಂತೆ. ಯಾಕೇಂದ್ರೆ ಕಷ್ಟವನ್ನು ಸಹಿಸಲಾಗದೆ ನೇಣು ಹಾಕಿಕೊಳ್ಳುವ ಸ್ವಾತಂತ್ಯ್ರನಾದ್ರೂ ನಿನಗಿತ್ತು. ನನ್ನ ಅವಸ್ಥೆ ನೋಡು ಸಾಯೋಣಾ ಅಂದ್ರೆ ನೇಣು ಹಾಕಿಕೊಳ್ಳಲೂ ಆಗ್ತಾ ಇಲ್ಲ. ಹೊಟ್ಟೇಗೂ ಇಲ್ಲದೆ ದಿನಾ ಸಾಯುತ್ತಿದ್ದೇನೆ ಕಣೆ. ನನ್ನಿಂದ ತಪ್ಪಾಯ್ತು. ನನ್ನನ್ನೂ ನಿನ್ನ ಹತ್ತಿರ ಕರೆಸ್ಕೋ. ಈ ನರಕದಿಂದ ನನ್ನನ್ನು ಪಾರು ಮಾಡು ಪ್ಲೀಸ್.
*****

Saturday, 21 December 2013

ಕೃಷ್ಣ ಕೃಷ್ಣ


ಅದೊಂದು ಆಶ್ರಮ. ಅಲ್ಲಿ ಗಂಡಸರು ಹೆಂಗಸರು, ಹದಿಹರೆಯದವರು ಮಧ್ಯ ವಯಸ್ಸಿನವರು ವಯಸ್ಸಾದವರು ಹೀಗೆ ಎಲ್ಲ ಜಾಯಮಾನದವರೂ ಇದ್ದರು. ಗಂಡಸರು ಎದುರಾದಲ್ಲಿ ‘ಕೃಷ್ಣ ಕೃಷ್ಣ’ ಅನ್ನುತ್ತಿದ್ದರು. ಹೆಂಗಸರಾದಲ್ಲಿ ‘ರಾಧೆ ರಾಧೆ’ ಅನ್ನುತ್ತಿದ್ದರು. ಹೆಸರು ಹಿಡಿದು ಯಾರೂ ಕೂಗುತ್ತಿರಲಿಲ್ಲ. ಕಡ್ಡಾಯವೆಂಬಂತೆ ಎಲ್ಲರ ಕೈಯಲ್ಲೂ ಜಪಮಾಲೆ ಇದ್ದೇ ಇರುತ್ತಿತ್ತು.

ಅಪ್ಪ ಅಮ್ಮನಿಗೆ ಅವಳು ಒಬ್ಬಳೇ ಮಗಳು. ಅತಿ ಮುದ್ದಿನಿಂದ ಸಾಕಿದ್ದರು. ಅವಳಿಗೆ ಚಿಕ್ಕಂದಿನಿಂದಲೇ ದೇವರ ಬಗ್ಗೆ ಅತೀ ಆಸಕ್ತಿ.  ದಿನಗಳೆದಂತೆ ಅದು ಜಾಸ್ತಿಯಾಗತೊಡಗಿತು. ಊಟ ತಿಂಡಿ ಬಿಟ್ಟು ಉಪವಾಸ ಮಾಡುತ್ತಿದ್ದಳು. ಇಡೀ ದಿನ ನಿರಾಹಾರ ಇರುತ್ತಿದ್ದಳು. ದೇವಸ್ಥಾನಕ್ಕೆ ತಪ್ಪದೆ ಹೋಗುತ್ತಿದ್ದಳು. ಆಧ್ಯಾತ್ಮದ ಬಗ್ಗೆ ಎಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಹಾಜರಿರುತ್ತಿದ್ದಳು. ಅವಳು ಆಶ್ರಮದ ಸ್ವಾಮೀಜಿಯವರಿಂದ ಪ್ರೇರೇಪಿತಳಾಗಿದ್ದಳು. ಸ್ವಾಮೀಜಿಯವರ ಒಂದು ಪ್ರವಚನವನ್ನೂ ಮಿಸ್ ಮಾಡುತ್ತಿರಲಿಲ್ಲ. ದೇವರಿಗೆ ನೈವೇದ್ಯ ಮಾಡದೆ ತಾನು ತಿನ್ನುತ್ತಿರಲಿಲ್ಲ. ದೇವರಿಗೆ ನೈವೇದ್ಯ ಮಾಡದೆ ತಿಂದಲ್ಲಿ ಅದು ಮಣ್ಣು ತಿಂದ ಹಾಗೆ ಅನ್ನುತ್ತಿದ್ದಳು. ಅವಳಿಗೆ ಬೇಜಾರಾಗಬಾರದೆಂದು ಏನೇ ಅಡುಗೆ ಮಾಡಿದರೂ ಮೊದಲು ಸ್ವಲ್ಪ ದೇವರಿಗೆ ಎತ್ತಿಟ್ಟು ಆಮೇಲೆ ಮನೆಮಂದಿ ಎಲ್ಲಾ ತಿನ್ನುತ್ತಿದ್ದೆವು.

ಮನೆಯಲ್ಲಿ ಇದ್ದರೆ ಶ್ರದ್ಧೆ ಭಕ್ತಿಯಿಂದ ದೇವರ ಧ್ಯಾನ ಮಾಡಲಾಗುತ್ತಿಲ್ಲ. ಆಶ್ರಮದಲ್ಲಿಯೇ ಇದ್ದರೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ 24 ಗಂಟೆಯೂ ಭಗವಂತನ ಸೇವೆ ಮಾಡಬಹುದು ಎಂದು ನಿರ್ಧರಿಸಿ ಒಂದು ದಿನ ಅಪ್ಪ ಅಮ್ಮ ಎಷ್ಟು ಹೇಳಿದರೂ ಕೇಳದೆ ಆಶ್ರಮದಲ್ಲಿರಲು ನಿರ್ಧರಿಸಿ ಹೋಗಿಯೇ ಬಿಟ್ಟಳು. ಮನೆಯಲ್ಲಿಯೇ ಪೂಜೆ ಮಾಡಲು ನಿನಗೆ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತೇವೆ  ಎಂದು ಎಷ್ಟು ಗೋಗರೆದರೂ ಕೇಳಲಿಲ್ಲ. ಅಪ್ಪ ಅಮ್ಮ ಆಶ್ರಮಕ್ಕೆ ತೆರಳಿ ಸ್ವಾಮೀಜಿಯವರ ಕಾಲು ಹಿಡಿದು ಮಗಳನ್ನು ವಾಪಸ್ಸು ಮನೆಗೆ ಬರುವಂತೆ ಮಾಡಿ ಎಂದು ಕಣ್ಣೀರಿಟ್ಟರು. ‘’ಕೃಷ್ಣ ಕೃಷ್ಣ, ಎಲ್ಲಾ ಅವನಿಚ್ಛೆ. ಅವನ ಆಣತಿಯಂತೆ ನಾವು ನಡೆಯಲೇ ಬೇಕು. ನಾನೂ ಬುದ್ಧಿ ಹೇಳುತ್ತೇನೆ. ಆದರೆ ಕೇಳುವ ಸ್ಥಿತಿಯಲ್ಲಿ ಈಗ ಅವಳಿಲ್ಲ. ಅವನಿಚ್ಛೆ ಇದ್ದಲ್ಲಿ ಸ್ವಲ್ಪ ಸಮಯದ ನಂತರ ಅವಳೇ ಬರುತ್ತಾಳೆ’’ ಅಂತ ಹೇಳಿ ಕಳುಹಿಸಿಬಿಟ್ಟರು.

ಅಂದು ಅವಳ ಮದುವೆ. ಅವನು ಆಶ್ರಮದಲ್ಲಿಯೇ ಇರುವ ಇನ್ನೊಬ್ಬ ಭಕ್ತ. ಅವಳನ್ನು ಮದುವೆಯಾಗುವುದಾಗಿ ಸ್ವಾಮೀಜಿಯವರಲ್ಲಿ ತನ್ನ ಆಸೆ ವ್ಯಕ್ತಪಡಿಸಿದ್ದ. ಅವರಿಗೂ ಸರಿ ಅನ್ನಿಸಿತ್ತು. ಅವಳಿಗೆ ತಿಳಿ ಹೇಳಿ ಒಪ್ಪಿಸಿದ್ದರು. ಅವನಿಗೆ ಹಿಂದು ಮುಂದು ಯಾರೂ ಇರಲಿಲ್ಲ. ಸ್ವಾಮೀಜಿ ಅವಳ ಅಪ್ಪ ಅಮ್ಮನನ್ನು ಕರೆಸಿ ಎಲ್ಲಾ ವಿಷಯವನ್ನು ತಿಳಿಸಿದರು. ಅವರಿಗೂ ಬೇರೆ ಆಯ್ಕೆ ಇರಲಿಲ್ಲ. ಸಧ್ಯ ಮದುವೆ ಮಾಡಿಕೊಳ್ಳಲಾದರೂ ಒಪ್ಪಿದಳಲ್ಲ ಎಂದು ಅವರೂ ನಕಾರವೆತ್ತಲಿಲ್ಲ. ಅವನಿಗೂ ಅವಳಿಗೂ ಆಶ್ರಮದಲ್ಲಿ ಹಾರ ಬದಲಾಯಿಸಲಾಯಿತು. ಈ ರೀತಿ ಮದುವೆಯಾದ ದಂಪತಿಗಳಿಗಾಗಿ ಆಶ್ರಮದಲ್ಲಿ ಚಿಕ್ಕ ಚಿಕ್ಕ ಕುಟೀರಗಳಿದ್ದವು. ಸ್ವಾಮೀಜಿ ಇವರಿಗೂ ಒಂದು ಕುಟೀರದಲ್ಲಿ ಇರಲು ವ್ಯವಸ್ಥೆ ಮಾಡಿದರು.

ಮಧ್ಯಾಹ್ನದ ಪೂಜೆಗೆಂದು ಹೊರಟವಳು ಯಾಕೋ ತಲೆ ತಿರುಗಿದಂತಾಗಲು ಮುಂದಕ್ಕೆ ಹೋಗಲಾರದೆ ಅವಳು ಕುಟೀರಕ್ಕೆ ವಾಪಸ್ಸಾದಳು. ಕುಟೀರದ ಒಳಗೆ ಪ್ರವೇಶಿಸುತ್ತಿದ್ದಂತೆ ಅವಳು ಕಂಡ ದೃಶ್ಯ ಅದನ್ನು ವಿವರಿಸೋದು ಅಸಾಧ್ಯ. ಅದೊಂದು ಊಹಾತೀತ ಅಸಹನೀಯ ಅಸಹ್ಯ ದೃಶ್ಯ. ಆ ಹುಡುಗಿ ಕೂಡಾ ಆಶ್ರಮದ ಒಬ್ಬ ಭಕ್ತೆ. ಅವನೊಂದಿಗೆ ಆ ಹುಡುಗಿ ಅದೆಂಥಾ ಸ್ಥಿತಿಯಲ್ಲಿದ್ದಳೆಂದರೆ ಅದನ್ನು ಕಂಡ ಅವಳು ಮೂರ್ಛೆ ಹೋಗದಿರೋದು ಹೆಚ್ಚು. ಅವಳು ಈ ದೃಶ್ಯ ನೋಡಲಾರದೆ ತಿರುಗಿ ನಿಂತುಬಿಟ್ಟಳು. ಆ ಹುಡುಗಿ ಅವಸರವಸರವಾಗಿ ಸೀರೆ ಸುತ್ತಿಕೊಂಡು ಹೊರಗೋಡಿದಳು. ಇವಳು ಮಾತಾಡದೆ ತನ್ನ ಬಟ್ಟೆಬರೆಗಳನ್ನು ಬ್ಯಾಗ್ ನಲ್ಲಿ ತುಂಬಲಾರಂಭಿಸಿದಳು. ಅವನು ಹೇಳುತ್ತಲಿದ್ದ ‘’ನಾನವಳಲ್ಲಿ ರಾಧೆಯನ್ನು ಕಂಡೆ. ಇದರಲ್ಲಿ ನನ್ನ ತಪ್ಪು ಏನೂ ಇಲ್ಲ. ನೀನೂ ರಾಧೆ ಅವಳೂ ರಾಧೆ ಇಬ್ಬರಲ್ಲೂ ನಾನು ರಾಧೆಯನ್ನ ಕಂಡೆ’’. ನಾಳೆ ದಿನ ಇನ್ನೊಬ್ಬ ರಾಧೆನೂ ಕಾಣಬಹುದು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಬ್ಯಾಗ್ ಎತ್ತಿಕೊಂಡು ಅವಳು ಹೊರಟೇ ಬಿಟ್ಟಳು.

ಮನೆಗೆ ಬಂದವಳೇ ‘’ಅಮ್ಮಾ ನಾನು ತಪ್ಪು ಮಾಡಿಬಿಟ್ಟೆ. ಆವತ್ತು ನಿನ್ನ ಮಾತು ಕೇಳಿದ್ದರೆ ನನಗೆ ಈ ಸ್ಥಿತಿ ಬರುತ್ತಿರಲಿಲ್ಲ. ನನ್ನ ಕ್ಷಮಿಸಮ್ಮಾ’’ ಅನ್ನುತ್ತಾ ಅಮ್ಮನ ಕಾಲು ಹಿಡ್ಕೊಂಡು ಒಂದೇ ಸಮನೆ ಗೋಳಾಡಲಾರಂಭಿಸಿದಳು. ಸಮಾಧಾನ ಆಗುವವರೆಗೂ ಅಳಲಿ ಎಂದು ಅವಳಮ್ಮ ಸುಮ್ಮನಿದ್ದುಬಿಟ್ಟಳು. ಕೃಷ್ಣ ಕೃಷ್ಣ. ಏನು ನಿನ್ನ ಲೀಲೆ. ಅಂದು ಸ್ವಾಮೀಜಿ ಹೇಳಿದ ‘’ಅವನಿಚ್ಛೆ ಇದ್ದಲ್ಲಿ ಸ್ವಲ್ಪ ಸಮಯದ ನಂತರ ಅವಳೇ ಬರುತ್ತಾಳೆ’’ ಅನ್ನುವ ಮಾತನ್ನು ಅವಳಮ್ಮ ನೆನಪಿಸಿಕೊಂಡಳು. ಮುಂದಿನ ಮಗಳ ಜೀವನದ ಬಗ್ಗೆ ಯೋಚಿಸಲಾರಂಭಿಸಿದಳು.
*****

Friday, 8 November 2013

ಕ್ಯಾನ್ಸರ್


ಇತ್ತೀಚೆಗೆ ಎಲ್ಲಾ ಬ್ಲೌಸುಗಳೂ ತುಂಬಾ ಬಿಗಿಯುತ್ತಿತ್ತು. ನಾನೇನೂ ದಪ್ಪ ಆಗಿರಲಿಲ್ಲ. ಮೊದಲಿದ್ದ ಹಾಗೇ ಇದ್ದೆ. ಆದರೆ ಬ್ಲೌಸ್ ಯಾಕೆ ಟೈಟ್ ಆಗುತ್ತಿದೆ ಅರ್ಥವಾಗಲಿಲ್ಲ. ಬ್ಲೌಸ್ ಕಳಚಿ ಕನ್ನಡಿ ಮುಂದೆ ನಿಂತೆ. ದಷ್ಟಪುಷ್ಟವಾದ ಸ್ತನಗಳು. ಬಲಗೈಯನ್ನು ಮೇಲಕ್ಕೆತ್ತಿ ಎಡಗೈಯಿಂದ ಬಲ ಸ್ತನವನ್ನೂ, ಎಡಗೈಯನ್ನು ಮೇಲಕ್ಕೆತ್ತಿ ಬಲಗೈಯಿಂದ ಎಡ ಸ್ತನವನ್ನೂ ಒತ್ತಿ ಒತ್ತಿ ನೋಡಲಾರಂಭಿಸಿದೆ. ಏನೂ ಗೊತ್ತಾಗಲಿಲ್ಲ.

ಒಂದು ದಿನ ಎಡಗೈ ಎತ್ತಲಾಗದಷ್ಟು ನೋವಾಗಲಾರಂಭಿಸಿತು. ಡಾಕ್ಟರಲ್ಲಿ ಹೋದಾಗ ಸ್ತನ ಕ್ಯಾನ್ಸರ್ ಇರುವುದು ಗೊತ್ತಾಯಿತು.  3-4 ಡಾಕ್ಟರನ್ನು ಕನ್ಸಲ್ಟ್ ಮಾಡಿದೆವು. ಎಲ್ಲಾ ಕಡೆ ಒಂದೇ ರಿಸಲ್ಟ್. ಕೊನೆಗೆ ಬೆಂಗಳೂರು ಅನ್ಕಾಲಜಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆದೆ. ಮುಲಾಜಿಲ್ಲದೆ ಎಡಸ್ತನವನ್ನು ಕತ್ತರಿಸಿ ಹಾಕಿದರು. ಅಂದು ನಾನು ಅನುಭವಿಸಿದ ನೋವು, ಸಂಕಟ ಯಾರಿಗೂ ಬೇಡ. ಆಮೇಲೆ ತಿಂಗಳಿಗೊಂದರಂತೆ ಒಟ್ಟು 6 ಕಿಮೋ ತೆಗೆದುಕೊಳ್ಳಬೇಕು ಅಂದ್ರು. ಅದರಂತೆ ತಿಂಗಳಿಗೊಮ್ಮೆ ಕಿಮೋ ತಗೊಳ್ಳಲು ಆರಂಭಿಸಿದೆ.  3-4 ಕಿಮೋ ತಗೊಳ್ಳೊವರೆಗೂ ಸರಿಯಾಗೇ ಇದ್ದೆ. ಆಮೇಲೆ ಕಿಮೋ ತಗೊಳ್ಳಲು ಆಸ್ಪತ್ರೆಗೆ ಹೋಗ್ಬೇಕು ಅಂದ್ರೆ ಚಳಿ ಸುರುವಾಗುತ್ತಿತ್ತು. ಕಿಮೋ ತಗೊಂಡ ಒಂದು ವಾರ ತುಂಬಾ ಹಿಂಸೆ ಆಗುತ್ತಿತ್ತು. ಏನು ತಗೊಂಡರೂ ವಾಂತಿ ಆಗುತ್ತಿತ್ತು. ಒಂದು ದಿನ ತಲೆಗೆ ಸ್ನಾನ ಮಾಡಿ ಬಂದು ತಲೆ ಒರೆಸಿದ್ರೆ ಕೂದಲೆಲ್ಲಾ ಟವೆಲ್ ನಲ್ಲಿ ಬಂದಿತ್ತು. ನಾನು ಬೋಡಿ ಆಗಿದ್ದೆ. 6 ರಿಂದ 8 ಕಿಮೋ ಆಯಿತು. ಇನ್ನೂ 4 ಕಿಮೋ ತಗೋಬೇಕು ಅಂದ್ರು. ಔಷಧಿಯ ಪರಿಣಾಮ ಮೈಯೆಲ್ಲಾ ಕಪ್ಪಾಗಿತ್ತು ಜೊತೆಗೆ ಗುಳ್ಳೆಗಳು. ತಲೆ ಹುಬ್ಬು ಕಣ್ಣು ರೆಪ್ಪೆ ಎಲ್ಲೂ ಕೂದಲಿನ ಸುಳಿವಿಲ್ಲ. ಕನ್ನಡಿ ಮುಂದೆ ನಿಂತುಕೊಳ್ಳಲೂ ಭಯಪಡುವಂತಾಯಿತು. ಒಂದೊಮ್ಮೆ ಕಾಲೇಜಿಗೆ ಹೋಗುತ್ತಿರಬೇಕಾದರೆ ಹುಡುಗರ ಹಿಂಡೇ ಹಿಂದಿನಿಂದ ಬರುತ್ತಿತ್ತು. ಸ್ನೇಹಿತೆಯರೆಲ್ಲ ಏನು ಸೆಕ್ಸಿ ಆಗಿದ್ದೀಯ ಕಣೆ ಅಂತ ರೇಗಿಸುತ್ತಿದ್ದರು. ನನಗಾಗ ಹೆಮ್ಮೆ ಅನಿಸುತ್ತಿತ್ತು. ಅವರುಗಳು ಒಳಗೊಳಗೆ ಕುರುಬುತ್ತಿದ್ದರು. ಅದೆಲ್ಲಾ ಒಮ್ಮೆ ಕಣ್ಣ ಮುಂದೆ ಹಾದು ಹೋಯಿತು.

ಅಪ್ಪನನ್ನು ಕಳಕೊಂಡ ಅಮ್ಮನಿಗೆ ಇಳಿವಯಸ್ಸಿನಲ್ಲಿ ನಾನು ಸೇವೆ ಮಾಡಬೇಕಾಗಿದ್ದ ಸಮಯ ಅವಳಿಂದ ಸೇವೆ ಮಾಡಿಸಿಕೊಳ್ಳಬೇಕಾಗಿ ಬಂದಿದ್ದು ನನ್ನ ದುರಾದೃಷ್ಟ. ನನ್ನನ್ನು ನೋಡಿಕೊಳ್ಳುವುದರ ಜೊತೆಗೆ ವಿಷಯ ತಿಳಿದು ನನ್ನನ್ನು ನೋಡಲೆಂದು ಊರಿನಿಂದ ಬರುತ್ತಿದ್ದ ಸಂಬಂಧಿಕರನ್ನೂ ಸುಧಾರಿಸಬೇಕಿತ್ತು. ನನಗೆ ಅಳಲು ಕಣ್ಣಲ್ಲಿ ನೀರು ಕೂಡಾ ಬತ್ತಿ ಹೋಗಿತ್ತು. ಎಲ್ಲಿತ್ತು ಈ ಹಾಳು ಕಾಯಿಲೆ. ಎಷ್ಟು ಜನರಿಗೆ ನನ್ನಿಂದ ತೊಂದರೆ. ಅದರ ಬದಲು ಹಾರ್ಟ್ ಅಟ್ಯಾಕ್ ಆದ್ರು ಆಗಬಾರದಿತ್ತಾ ಅನ್ನಿಸುತ್ತಿತ್ತು.

ಆ ಸಮಯದಲ್ಲಿ ಬಂದವಳು ರಾಜೇಶ್ವರಿ. ಸುಮಾರು 12 ವರ್ಷಗಳ ಹಿಂದೆ ಅವಳೂ ಕೂಡಾ ಇದೇ ಕಾಯಿಲೆಯಿಂದ ನರಳುತ್ತಿದ್ದವಳು. ಆದರೆ ಅವಳಿಗೆ ಸಾಂತ್ವನ ಹೇಳುವವರಾಗಲಿ ಸೇವೆ ಮಾಡುವವರಾಗಲಿ ಯಾರೂ ಇರಲಿಲ್ಲ. ಅವಳಿಗೆ ಇದ್ದುದು ಒಂದೇ ಅದು ವಿಲ್ ಪವರ್. ಕಾಯಿಲೆಯಿಂದ ಗುಣಮುಖಳಾಗುತ್ತಿದ್ದಂತೆ ಅವಳು ನಿರ್ಧರಿಸಿದ್ದಳು. ಈ ಕಾಯಿಲೆಯಿಂದ ನರಳುವ ಯಾರಿಗಾದರೂ ತನ್ನಿಂದಾದ ಸಹಾಯ ಮಾಡಬೇಕು ಎಂದು. ಯಾರಿಗಾದರೂ ಈ ಕಾಯಿಲೆ ಇರುವ ವಿಷಯ ತಿಳಿದ ತಕ್ಷಣ ಎಷ್ಟೇ ದೂರವಾದ್ರೂ ಸರಿ ಅವರಲ್ಲಿಗೆ ಹೋಗಿ ಸಾಂತ್ವನ ಹೇಳುತ್ತಿದ್ದಳು. ತನ್ನಿಂದಾದ ಸಹಾಯ ಮಾಡುತ್ತಿದ್ದಳು. ವಿಷಯ ತಿಳಿದು ನನ್ನಲ್ಲಿಗೂ ಹುಡುಕಿಕೊಂಡು ಬಂದು ತನ್ನ ಅನುಭವವನ್ನು ಹೇಳಿದಾಗ, ಎಲ್ಲಾ ಮುಗಿದು ಹೋಯಿತು ಎಂದು ಆತ್ಮವಿಶ್ವಾಸ ಕಳೆದುಕೊಂಡಂತಿದ್ದ ನನ್ನಲ್ಲೂ ಕೊಂಚ ಬದಲಾವಣೆ ಆಗಲಾರಂಭಿಸಿತು. ನನ್ನಲ್ಲಿನ ಬದಲಾವಣೆ ಕಂಡು ಅಮ್ಮನಿಗೂ ಕೊಂಚ ಹಾಯೆನಿಸಿತ್ತು.

ಇಂದು ಸಂಪೂರ್ಣವಾಗಿ ಹುಷಾರಾಗಿದ್ದೇನೆ. ಇಂದು ಕೂಡಾ ಬ್ಲೌಸ್ ಕಳಚಿ ಕನ್ನಡಿ ಮುಂದೆ ನಿಂತಿದ್ದೇನೆ. 8 ವರ್ಷದ ಮಗಳು ನೋಡಿದವಳೇ ಬೆಚ್ಚಿ ಯಾಕಮ್ಮಾ ಹೀಗಿದೆ ನಿನ್ನ ಮೊಮ್ಮ ಏನಾಯ್ತಮ್ಮ ಎಂದು ಅಳಲಾರಂಭಿಸಿದಳು. ನಾನು ಅವಳನ್ನು ತಬ್ಬಿಕೊಂಡವಳೇ ಅಳಬೇಡ ಕಂದಾ, ಅದರ ಮೇಲೆ ಗಾಯ ಆಗಿತ್ತು ಅದಕ್ಕೆ ಅದನ್ನ ಕಟ್ ಮಾಡಿದ್ದಾರೆ. ಸ್ವಲ್ಪ ದಿನ ಆದ ಮೇಲೆ ಬರುತ್ತೆ ಅಂತ ಸಮಾಧಾನಪಡಿಸಿದೆ. ಅಂದಿನಿಂದ ನಾನು ಕೂಡಾ ರಾಜೇಶ್ವರಿಯ ಹಾದಿ ಹಿಡಿದೆ. ಯಾರಿಗಾದರೂ ಈ ಕಾಯಿಲೆ ಇರುವ ವಿಷಯ ತಿಳಿದಲ್ಲಿ ಹೋಗಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಈ ಕಾಯಿಲೆ ಬಂದ್ರೆ ಸತ್ತೇ ಹೋಗುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಪ್ರಾರಂಭಿಸಿದೆ. 40 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಮಮೋಗ್ರಫಿ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದೆ.  ಈಗ ನನ್ನಲ್ಲಿ ನನಗೆ ತೃಪ್ತಿ ಇದೆ. ಆತ್ಮವಿಶ್ವಾಸ ಒಂದಿದ್ದಲ್ಲಿ ಜೀವನದಲ್ಲಿ ಏನನ್ನಾದರೂ ಗೆಲ್ಲಬಹುದು. ಆದರೂ ಕನ್ನಡಿ ಮುಂದೆ ನಿಂತಾಗಲೆಲ್ಲಾ ದೇವರಲ್ಲಿ ಬೇಡಿಕೊಳ್ಳುತ್ತೇನೆ ಈ ಕಾಯಿಲೆ ಯಾರಿಗೂ ಬಾರದಿರಲಿ.

*****

Thursday, 7 November 2013

ಸಂಬಂಧ


ಅಂದು ನನ್ನ ಮಗುವಿನ ನಾಮಕರಣ. 9 ತಿಂಗಳಿಗೆ ನಾಮಕರಣ ಮಾಡಲು ನಿಶ್ಚಯಿಸಿ ನೆಂಟರಿಷ್ಟರನ್ನೆಲ್ಲಾ ಆಹ್ವಾನಿಸಿದ್ದೆವು. ಎಲ್ಲೆಲ್ಲೂ ಸಂತಸ ಸಂಭ್ರಮ ತುಳುಕಾಡುತ್ತಿತ್ತು. ಎಲ್ಲರೂ ಮಗುವನ್ನು ಹೊಗಳುವವರೇ. ಮದುವೆಯಾಗಿ 15 ವರ್ಷಗಳ ನಂತರ ಹುಟ್ಟಿದ ಗಂಡು ಮಗು. ಅಮ್ಮನಿಗಂತೂ ಸಂತೋಷದಿಂದ ಕಾಲು ನೆಲದ ಮೇಲೇ ನಿಲ್ಲುತ್ತಿರಲಿಲ್ಲ. ‘’ನನ್ನ ಮಗನೂ ಚಿಕ್ಕೋನಿರೋವಾಗ ಹೀಗೇ ಇದ್ದ. ಕಣ್ಣು ಮೂಗು ಎಲ್ಲಾ ನನ್ನ ಮಗನ ತರಾನೇ ಇದೆ’’ ಎಂದು ಎಲ್ಲರಿಗೂ ಮಗುವನ್ನು ತೋರಿಸಿದ್ದೇ ತೋರಿಸಿದ್ದು. ಅವರ ಸ್ನೇಹಿತೆಯರು ಕೂಡಾ ‘’ಹೌದು ಕಣ್ರೀ ಡಿಟ್ಟೋ ನಿಮ್ಮ ಮಗನ ತರಾನೇ ಇದ್ದಾನೆ’’ ಅಂತಿದ್ರು.

 ಮದುವೆಯಾಗಿ ಎಂಟು ವರ್ಷಗಳಾದರೂ ಇನ್ನೂ ಮಕ್ಕಳಾಗದಿದ್ದ ನಮ್ಮನ್ನು ಕೆಲವರು ಹಿಂದಿನಿಂದ ಆಡಿಕೊಳ್ಳುತ್ತಿದ್ದರು. ಬೇಡಾ ಅಂದ್ರೂ ಅದು ನಮ್ಮ ಕಿವಿಗೆ ಬೀಳುತ್ತಿತ್ತು. ಹೋಮಿಯೋಪತಿಗೆ ಹೋದಲ್ಲಿ ಮಕ್ಕಳಾಗುವ ಸಾಧ್ಯತೆ ಇದೆ ಎಂದು ಒಬ್ಬರು ಹೇಳಿದರು. ಅದನ್ನು ಪ್ರಯತ್ನಿಸಿದೆವು. ನಾಗದೋಷವಿದ್ದಲ್ಲಿ ನಾಗ ಪ್ರತಿಷ್ಟೆ ಮಾಡಿಸಿದರೆ ಮಕ್ಕಳಾಗುತ್ತದೆ ಎಂದು ಇನ್ನೊಬ್ಬರು ಹೇಳಿದರು. ಅದನ್ನೂ ಮಾಡಿದೆವು. ಕೊನೆಗೆ ಯಾರು ಏನು ಹೇಳುತ್ತಾರೆ ಎಲ್ಲವನ್ನೂ ಮಾಡಿದೆವು. ಕೊನೆಗೆ ಒಬ್ಬ ಫೇಮಸ್ ಡಾಕ್ಟರಲ್ಲಿ ಇಬ್ಬರೂ ಮೆಡಿಕಲ್ ಚೆಕ್ ಅಪ್ ಮಾಡಿಸಿದಾಗ ನನ್ನಲ್ಲೇ ದೋಷವಿರುವ ಕಾರಣ ಮಕ್ಕಳಾಗುವ ಸಾಧ್ಯತೆ ತುಂಬಾ ಕಡಿಮೆ ಎಂದು ತಿಳಿಯಿತು. ಇಬ್ಬರೂ ದಿಕ್ಕು ತೋಚದೆ ಪೆಚ್ಚಾಗಿ ಮನೆಗೆ ಹಿಂತಿರುಗಿದೆವು. ಅಮ್ಮ ನೊಂದುಕೊಳ್ಳುತ್ತಾರೆ ಅಂತ ವಿಷಯ ಮುಚ್ಚಿಟ್ಟೆವು. ಆಮೇಲೆ ನಾವಿಬ್ಬರು ಅನುಭವಿಸಿದ ನೋವು ಹೇಳಲಸಾಧ್ಯ.

ಅಂದು ನನ್ನವಳ ವರ್ತನೆ ಸ್ವಲ್ಪ ವಿಚಿತ್ರವಾಗಿತ್ತು. ನನ್ನನ್ನು ತಬ್ಬಿಕೊಂಡವಳೇ ಗೊಳೋ ಎಂದು ಅಳಲು ಶುರು ಮಾಡಿದಳು. ‘’ನನ್ನಿಂದ ಒಂದು ತಪ್ಪಾಗಿದೆ. ಕ್ಷಮಿಸಲಾರದ ತಪ್ಪು ಅದು. ಆದ್ರೂ ಕ್ಷಮಿಸಿ ಅಂತ ನಾಚಿಕೆ ಬಿಟ್ಟು ಕೇಳುತ್ತಿದ್ದೀನಿ. ಕ್ಷಮಿಸ್ತೀರಿ ಅಲ್ವಾ’’ ಅಂತ ಅಳುತ್ತಲೇ ಕೇಳಿದ್ಲು. ‘’ಮೊದಲು ಕಣ್ಣೊರಸಿಕೊಂಡು ಏನಾಯ್ತು ಅಂತ ಹೇಳು’’ ಅಂದೆ.

ಕೆಎಎಸ್ ಆಫೀಸರ್ ಆಗಿದ್ದ ನನಗೆ ಓಡಾಡಲು ಸರ್ಕಾರದಿಂದ ಅಂಬಾಸಿಡರ್ ಕಾರ್ ಕೊಟ್ಟಿದ್ದರು. ಕುಮಾರ್ ಅಂತ ಕಾರಿನ ಡ್ರೈವರ್. ತುಂಬಾ ಒಳ್ಳೆಯ ಹುಡುಗ.  ಒತ್ತಾಯ ಮಾಡಿ ಕರೆದ್ರೆ ಮಾತ್ರ ಮನೆ ಒಳಗೆ ಬರುತ್ತಿದ್ದ. ನನ್ನವಳು ಶಾಪಿಂಗ್ ಹೋಗಬೇಕಾದ್ರೆ ಕುಮಾರ್ ಗೆ ಹೇಳಿ ಕಳುಹಿಸುತ್ತಿದ್ದಳು. ಅಂದು ನನ್ನವಳು ಶಾಪಿಂಗ್ ಮುಗಿಸಿಕೊಂಡು ಬಂದವಳು ಕುಮಾರ್ ಗೆ ಶಾಪಿಂಗ್ ಮಾಡಿದ ಸಾಮಾನನ್ನು ಸ್ವಲ್ಪ ಒಳಗೆ ತಂದು ಕೊಡುತ್ತೀಯಾಪ್ಪಾ ಅಂತ ಕೇಳಿದಳು. ಅವನು ಒಂದೊಂದೇ ಸಾಮಾನನ್ನು ಮನೆ ಒಳಗೆ ತಂದು ಇಡುತ್ತಿದ್ದ. ಮನೆಯಲ್ಲಿ ಇಬ್ಬರನ್ನು ಬಿಟ್ಟರೆ ಯಾರೂ ಇಲ್ಲ. ಅವಳಿಗೆ ಏನನಿಸಿತೋ ಏನೋ ಇದ್ದಕ್ಕಿದ್ದಂತೆ ಅವನ ಕೈ ಹಿಡಕೊಂಡವಳೇ ನನಗೆ ಒಂದು ಸಹಾಯ ಮಾಡುತ್ತೀಯಾಪ್ಪಾ ಅಂತ ಕೇಳಿದಳು. ಜಾಸ್ತಿ ಮಾತಾಡದಿದ್ದ ಅವನು ಕಣ್ಣು ಪಿಳಿಪಿಳಿ ಬಿಡಲಾರಂಭಿಸಿದ. ಅವಳು ಇನ್ನೂ ಹತ್ತಿರ ಬಂದು, ‘’ನಿನಗೆ ಗೊತ್ತೇ ಇದೆ ನನಗೆ ಮಕ್ಕಳಿಲ್ಲ ಎಂದು. ಬಂಜೆ ಅನ್ನಿಸಿಕೊಂಡು ಸಾಕಾಗಿದೆ. ನನ್ನಲ್ಲಿ ಮಕ್ಕಾಳಾಗೋ ಎಲ್ಲಾ ಸಾಧ್ಯತೆ ಇದೆ. ನನಗೆ ತಾಯಿ ಆಗೋ ಭಾಗ್ಯ ಕರುಣಿಸುತ್ತೀಯಾಪ್ಪಾ. ನಿನ್ನ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಮತ್ತೆ ಯಾವತ್ತೂ ನಿನ್ನನ್ನು ಕಣ್ಣೆತ್ತಿ ಸಹಾ ನೋಡುವುದಿಲ್ಲ. ನೋಡು ನಿನಗೆ ಒಪ್ಪಿಗೆ ಇದ್ದಲ್ಲಿ ನಾಳೆ ಇದೇ ಸಮಯಕ್ಕೆ ನೀನು ಇಲ್ಲಿ ಇರ್ತಿಯ. ಕಾಯುತ್ತಿರುತ್ತೇನೆ’’ ಅಂದಳು. ಮರುದಿನ ಎಣ್ಣೆ ನೀರು ಸ್ನಾನ ಮಾಡಿ ಅವಳು ಅವನಿಗೋಸ್ಕರ ಕಾಯುತ್ತಿದ್ದಳು. ಅವನು ಸಂಕೋಚದಿಂದ ಹೆದರುತ್ತಲೇ ಮನೆಯೊಳಗೆ ಕಾಲಿರಿಸಿದ. ಹುಚ್ಚು ಸಂತೋಷ ಜೊತೆಗೆ ಭಯ ಅವಳಲ್ಲಿ ಕಾಣುತ್ತಿತ್ತು. ಅವರಿಬ್ಬರಲ್ಲಿ ಅದು ನಡೆದು ಹೋಗಿತ್ತು. ಅವಳು ಅಂದುಕೊಂಡಂತೆ ಮುಂದಿನ ತಿಂಗಳು ಅವಳು ಮುಟ್ಟಾಗಲಿಲ್ಲ. ಅಬ್ಬಾ ಕೊನೆಗೂ ನಾನು ತಾಯಿಯಾಗುತ್ತಿದ್ದೇನೆ ಎಂದು ಎದೆ ಸಂತೋಷದಿಂದ ಬೀಗುತ್ತಿತ್ತು. ಜೊತೆಯಲ್ಲಿ ಈ ವಿಷಯ ಹೇಗೆ ಹೇಳಲಿ ಅನ್ನುವ ಭಯ ಕೂಡಾ ಕಾಡುತ್ತಿತ್ತು.

ಅಂದು ಈ ವಿಷಯವನ್ನು ಚಾಚೂ ತಪ್ಪದೆ ನನ್ನಲ್ಲಿ ಬಿಚ್ಚಿಟ್ಟಿದ್ದಳು. ತಲೆ ಬಿಸಿ ಆಗಿ ಒಂದು ಕ್ಷಣ ಏನೂ ಮಾಡಲು ತೋಚಲಿಲ್ಲ. ಕಣ್ಣು ಮುಚ್ಚಿಕೊಂಡು ನಿದ್ದೆ ಬಂದವನಂತೆ ಮಲಗಿ ಯೋಚಿಸತೊಡಗಿದೆ. ಇದರಲ್ಲಿ ಅವಳ ತಪ್ಪು ಏನೂ ಇಲ್ಲ. ಬೇರೆ ಹೆಣ್ಣಾಗಿದ್ರೆ ಬಹುಷ: ನನ್ನಲ್ಲಿಯೇ ದೋಷವಿರುವುದನ್ನು ತಿಳಿದು ರಂಪ ಮಾಡಿ ಎಲ್ಲರಿಗೂ ವಿಷಯ ಗೊತ್ತಾಗುವಂತೆ ಮಾಡಿ ನನ್ನ ಹಾಗೂ ನನ್ನ ಮನೆಯ ಮರ್ಯಾದೆ ತೆಗೆಯುತ್ತಿದ್ದಳು ಅಥವಾ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಳ್ಳಬಹುದಿತ್ತು. ಇವಳು ಹಾಗೆ ಮಾಡಲಿಲ್ಲ ಎಲ್ಲಾ ವಿಷಯವನ್ನು ಚಾಚೂ ತಪ್ಪದೆ ನನಗೆ ಒಪ್ಪಿಸಿದ್ದಾಳೆ. ಅನಾಥ ಮಗುವನ್ನು ದತ್ತು ತೆಗೆದುಕೊಳ್ಳುವ ಬದಲು ಇದು ಬೆಟರ್ ಅಲ್ವಾ  ನಾನು ಅತಿಯಾಗಿ ಪ್ರೀತಿಸುವ ನನ್ನವಳ ರಕ್ತವನ್ನಾದರೂ ಹಂಚಿಕೊಳ್ಳುತ್ತಲ್ಲಾ ಆ ಮಗು. ಪುರಾಣ ಕಾಲದಲ್ಲೂ ಈ ರೀತಿ ನಡೆದಿತ್ತಲ್ವಾ. ಧೃತರಾಷ್ಟ್ರ, ಪಾಂಡು, ವಿಧುರ ಹಾಗೂ ಪಾಂಡವರ ಜನನ ಕೂಡಾ ಇದೇ ರೀತಿ ಅಲ್ವಾ ಆಗಿದ್ದು.

ಕುಮಾರ್ ನನ್ನು ನೋಡಿದಾಗಲೆಲ್ಲಾ ಒಂಥರಾ ಹಿಂಸೆ ಆಗುತ್ತಿತ್ತು. ಅವನನ್ನು ಬೇರೆ ಊರಿಗೆ ವರ್ಗಾಯಿಸಿ ಆ ಜಾಗಕ್ಕೆ ಬೇರೊಬ್ಬ ಡ್ರೈವರ್ ನನ್ನು ಬದಲಾಯಿಸಿದೆ. ಸ್ವಲ್ಪ ದಿನ ಅವಳ ಕಣ್ಣು ತಪ್ಪಿಸಿ ಓಡಾಡಿದೆ. ಅದನ್ನು ಅವಳಿಂದ ಸಹಿಸಲಾಗುತ್ತಿರಲಿಲ್ಲ. ತುಂಬಾ ಕಷ್ಟ ಪಡುತ್ತಿದ್ದಳು. ಬಸುರಿ ಹುಡುಗಿ ನಾನು ಹೀಗೆ ಮಾಡೋದು ಸರೀನಾ. ನಾನೂ ದೂರ ಮಾಡಿದ್ರೆ ಅವಳಿಗೆ ಯಾರಿದ್ದಾರೆ. ಮನಸ್ಸು ತಿಳಿಯಾಗಿ ಮನೆಗೆ ಬಂದವನೇ ಅವಳನ್ನು ಅಪ್ಪಿಕೊಂಡು ಸಮಾಧಾನಪಡಿಸಿದೆ. ಡಾಕ್ಟರಲ್ಲಿ ಕರೆದುಕೊಂಡು ಹೋದೆ. ನಾನು, ಅವಳು ಹಾಗೂ ಅವನು ಮೂವರು ಬಿಟ್ಟರೆ ಬೇರಾರಿಗೂ ಸತ್ಯ ಗೊತ್ತಾಗಲಿಲ್ಲ. ಗೊತ್ತಾಗೋದೂ ಇಲ್ಲ. ಗೊತ್ತಾಗೋದೂ ಬೇಡ. ಇಂದು ನಾನು, ನನ್ನ ಹೆಂಡತಿ ಹಾಗೂ ನನ್ನ ಮಗ ನಮ್ಮ ಚಿಕ್ಕ ಸಂಸಾರ ತುಂಬಾ ಚೆನ್ನಾಗಿದೆ. ಯಾರ ದೃಷ್ಟಿಯೂ ತಾಗದೆ ಇರಲಿ.

*****

 

Friday, 14 June 2013

ಬಿಳಿಗಂಡ


ಅಂದು ಮೀನಾಕುಮಾರಿ ಯವರ ಮನೆಯಲ್ಲಿ ಸಂತಸ ಸಂಭ್ರಮ ತುಂಬಿ ತುಳುಕಾಡುತ್ತಿತ್ತು. ಮನೆ ತುಂಬಾ ನೆಂಟರು. ಮುಂದಿನ ವಾರದಲ್ಲಿ ಅವರ ತಮ್ಮನ ಮಗನ ಮದುವೆ. ಮದುವೆಗೆಂದು ಅಮೇರಿಕಾದಿಂದ ಅವರ ಮನೆಗೆ ಮಗಳು, ಅಳಿಯ ಹಾಗೂ ಮೊಮ್ಮಗ ಬರುವವರಿದ್ದರು. ಎಲ್ಲರಿಗೂ ಕುತೂಹಲ ಹೊಸ ಅಳಿಯನನ್ನು ನೋಡಲು. ಎಲ್ಲರ ಮನೆಗೆ ಮಗಳು ಅಳಿಯ ಬರುತ್ತಾರಪ್ಪ. ಇದರಲ್ಲಿ ಏನು ವಿಶೇಷ ಅಂದ್ಕೋಬೇಡಿ. ವಿಶೇಷ ಇದೆ. ಎಲ್ಲರಂತಲ್ಲ ಅವರ ಅಳಿಯ. ಅವನು ಬಿಳಿ ಅಳಿಯ.

ಒಬ್ಬಳೇ ಮಗಳು. ಬೇಕಾದಷ್ಟು ಆಸ್ತಿ ಇತ್ತು. ಅಮೇರಿಕಾದಲ್ಲಿರುವ ಹುಡುಗನನ್ನು ನೋಡಿ ಬಹಳ ವಿಜ್ರಂಭಣೆಯಿಂದ ಮಗಳಿಗೆ ಮದುವೆ ಮಾಡಿ ಕೊಟ್ಟಿದ್ದರು. ಮಗಳು ಬಿಇ ಓದಿದ್ದಳು. ಅವಳೂ ಕೂಡಾ ಮದುವೆ ನಂತರ ಅಮೇರಿಕಾದಲ್ಲಿ ಕೆಲಸಕ್ಕೆ ಸೇರಿದ್ದಳು. ಆದರೆ ಅವರ ದಾಂಪತ್ಯ ಜೀವನ ಬಹಳ ದಿನ ಉಳಿಯಲಿಲ್ಲ. ಅವಳಿಗೆ ದಾಂಪತ್ಯ ಜೀವನದ ಸುಖವನ್ನು ನೀಡಲು ಅವನು ಸಂಪೂರ್ಣ ವಿಫಲನಾಗಿದ್ದ. ಅವನು ನಪುಂಸಕನಾಗಿದ್ದ. ದಿನಗಳೆದಂತೆ ಅವಳಿಗೆ ಅವನ ಜೊತೆಗಿನ ಜೀವನ ಅಸಹನೀಯವಾಗತೊಡಗಿತ್ತು. ಅವನ ಗುಟ್ಟು ಅವಳಿಗೆ ಗೊತ್ತಾಗುತ್ತಿದ್ದಂತೆ ಅವನು ಕ್ರೂರಿಯಾಗತೊಡಗಿದ್ದ. ಯವಾಗಲೂ ಅವಳ ಮೇಲೆ ಸಂಶಯಪಟ್ಟು ಹಿಂಸಿಸತೊಡಗಿದ. ಹೇಗಪ್ಪಾ ಇಲ್ಲಿಂದ ತಪ್ಪಿಸಿಕೊಂಡು ಹೋಗೋದು ಅಂತ ಅವಳು ಚಡಪಡಿಸುತ್ತಿದ್ದಳು.

       ಅಮೇರಿಕಾದ ಪ್ರತಿಷ್ಟಿತ ಕಂಪೆನಿಯಲ್ಲಿ ಅವಳು ಕೆಲಸ ಮಾಡುತ್ತಿದ್ದಳು. ಅವಳ ಬಾಸ್ ಅಮೇರಿಕಾದವನಾಗಿದ್ದ. ಅವನಿಗೆ ಮೊದಲಿನಿಂದಲೂ ಭಾರತ ದೇಶ, ಹಿಂದೂ ಧರ್ಮ, ದೇಶದ ಸಂಸ್ಕೃತಿ ಸಂಪ್ರದಾಯಗಳು, ಭಗವದ್ಗೀತೆ, ವಿವೇಕಾನಂದ ಹೀಗೆ ಎಲ್ಲದರಲ್ಲೂ ಆಸಕ್ತಿ.  ಎಲ್ಲವನ್ನೂ ಇಂಟರ್ ನೆಟ್ ನಲ್ಲಿ ಓದಿ ತಿಳಿದುಕೊಂಡಿದ್ದ. ಜೀವನದಲ್ಲಿ ಒಮ್ಮೆಯಾದರೂ ಭಾರತದೇಶಕ್ಕೆ ಭೇಟಿ ನೀಡಿ ರಾಮ, ಕೃಷ್ಣರ ಜನ್ಮಸ್ಥಳವನ್ನು ನೋಡಿ ಬರಬೇಕು ಅಂದುಕೊಳ್ಳುತ್ತಿದ್ದ. ಹೀಗಾಗಿ ಇವಳೊಂದಿಗೆ ಸಲುಗೆ ವಹಿಸಿ ಎಲ್ಲ ವಿಷಯವನ್ನು ಚರ್ಚಿಸುತ್ತಿದ್ದ. ಒಂದು ದಿನ ತುಂಬಾ ಖಿನ್ನಳಾಗಿದ್ದ ಅವಳು ತನ್ನ ವೈಯಕ್ತಿಕ ಬದುಕಿನ ಬಗ್ಗೆ ಎಲ್ಲವನ್ನೂ ಅವನೊಂದಿಗೆ ತೋಡಿಕೊಂಡಳು.

ಅವನು ಯೋಚಿಸಿದ. ತನಗಿನ್ನೂ ಮದುವೆಯಾಗಿಲ್ಲ. ಅವಳೀಗ ಅಮೇರಿಕಾದ ಪ್ರಜೆ. ಅವಳಿಗೆ ಅವಳ ಗಂಡನಿಂದ ಡೈವೋರ್ಸ್ ಪಡೆದುಕೊಳ್ಳುವುದು ಅಷ್ಟೇನೂ ಕಷ್ಟವಾಗಲಾರದು. ತಾನು ಅವಳನ್ನು ಮದುವೆಯಾಗಲು ಪ್ರಪೋಸ್ ಮಾಡಿದರೆ ಅವಳು ಒಪ್ಪಬಹುದೇ ಎಂದು ಯೋಚಿಸತೊಡಗಿದ. ಮಾರನೆ ದಿನ ಈ ವಿಷಯವನ್ನು ಅವಳಲ್ಲಿ ಬಹಿರಂಗಪಡಿಸಿದ. ಮೊದಲು ಅವಳಿಗೆ ಈ ಶಾಕ್ ನಿಂದ ಹೊರಬರಲು ಸ್ವಲ್ಪ ಸಮಯ ಹಿಡಿಸಿತು. ಆಮೇಲೆ ಅವಳೂ ಯೋಚಿಸತೊಡಗಿದಳು. ತನಗೂ ಆಸೆ ಆಕಾಂಕ್ಷೆಗಳಿವೆ. ಷಂಡ ಗಂಡನೊಂದಿಗೆ ಸಂಸಾರ ಮಾಡುವುದಂತೂ ಸಾಧ್ಯವಿಲ್ಲ. ಇವನಿಂದ ಬಿಡುಗಡೆಗೆ ದೇವರು ದಾರಿ ತೋರಿಸಿ ಕೊಟ್ಟಿದ್ದಾನೆ ಈ ಅವಕಾಶಾನಾ ಬಿಡಬಾರದು ಎಂದು ಯೋಚಿಸಿ ಮೊದಲು ಭಾರತದಲ್ಲಿರುವ ಅಪ್ಪ ಅಮ್ಮನಿಗೆ ತಿಳಿಸಿ ಅವರ ಅಭಿಪ್ರಾಯ ಪಡೆಯಬೇಕು ಎಂದು ಯೋಚಿಸಿದವಳೇ ಅಮ್ಮನಿಗೆ ಫೋನ್ ಮಾಡಿದಳು. ಅಮ್ಮನೂ ವಿಷಯ ತಿಳಿದು ಶಾಕ್ ನಿಂದ ಈಚೆ ಬರಲಾರದಾದಳು. ಬಿಳಿ ಹೆಂಡತಿಯನ್ನು ಕಟ್ಟಿಕೊಳ್ಳೋದು ಕೇಳಿದ್ದೀನಿ ಆದ್ರೆ ಮಗಳು ಬಿಳಿ ಗಂಡನನ್ನು ಕಟ್ಟಿಕೊಳ್ಳುತ್ತೇನೆ ಅಂತ ಹೇಳುತ್ತಿದ್ದಾಳಲ್ಲ. ಕೊನೆಗೆ ಅಪ್ಪ ಸಮಜಾಯಿಷಿ ನೀಡಿ ಅಮ್ಮನಿಗೆ ಸಮಾಧಾನ ಮಾಡಿ ಮದುವೆಗೆ ಒಪ್ಪಿಗೆ ನೀಡಿದರು.

ಗಂಡನಿಂದ ಡೈವೋರ್ಸ್ ಪಡೆದ ಅವಳಿಗೆ ಅಮೇರಿಕಾ ಹುಡುಗನ ಜೊತೆ ಅವನ ಆಸೆಯಂತೆ ಹಿಂದೂ ಸಂಪ್ರದಾಯ ಪ್ರಕಾರ ಮದುವೆ ಮಾಡಿಕೊಡಲಾಯಿತು. ಅಪ್ಪ ಅಮ್ಮ ಅಮೇರಿಕಾಕ್ಕೆ ಹೋಗಿ ಧಾರೆ ಎರೆದು ಕೊಟ್ಟರು. ಅಮೇರಿಕಾ ಗಂಡನಿಂದ  ಒಂದು ಗಂಡುಮಗುವನ್ನು ಪಡೆದಳು. ಅಮೇರಿಕಾದ ಬಿಳಿ ಗಂಡನೊಂದಿಗೆ ಆ ಮಗುವನ್ನು ಕರೆದುಕೊಂಡು ಅವಳು ಮಾವನ ಮಗನ ಮದುವೆಗೆಂದು ಭಾರತಕ್ಕೆ ಅಮ್ಮನ ಮನೆಗೆ ಬರುವವಳಿದ್ದಳು. ಅದಕ್ಕೆ ಆ ಮನೆಯಲ್ಲಿ ಅಂದು ಅಷ್ಟು ಸಂತಸ, ಸಂಭ್ರಮ. ಆರತಿ ಹಿಡಿದು ಬಿಳಿ ಅಳಿಯನನ್ನು ಹಾಗೂ ಮಗುವನ್ನು ಸ್ವಾಗತಿಸಲು ಎಲ್ಲರೂ ತುದಿಗಾಲಲ್ಲಿ ಕಾಯುತ್ತಿದ್ದರು.

                                        *****

Thursday, 6 June 2013

ಕುರೂಪಿ


ಯಾಕೋ ಅವನಿಗೂ ಸೌಂದರ್ಯಕ್ಕೂ ಆಗಿಬರುತ್ತಿಲ್ಲ ಅಂತ ಕಾಣ್ಸುತ್ತೆ. ಅಮ್ಮನಿಗೆ ವನು ಮತ್ತು ಅಕ್ಕ ಇಬ್ಬರು ಮಕ್ಕಳು. ಅಕ್ಕನ ವಯಸ್ಸು 30ರ ಹತ್ತಿರ ಬರುತ್ತಿದ್ದರೂ ಮದುವೆಯಾಗುವ ಯಾವ ಸೂಚನೆಯೂ ಕಂಡು ಬರುತ್ತಿಲ್ಲ.. ಅವನಿಗೆ 28 ಇರಬಹುದು. ಒಂದು ಎದುರು ಬದುರು ಅಂದರೆ ಒಂದು ತರೋದು ಒಂದು ಕೊಡೋ ಸಂಬಂಧ ಬಂದಿತ್ತು. ಅಮ್ಮ ಹೇಳುತ್ತಿದ್ದರು ಹುಡುಗಿ ನೋಡಲು ಅಷ್ಟು ಚೆನ್ನಾಗಿಲ್ಲ ಆದರೆ ಏನು ಮಾಡೋದು ನಮ್ಮ ಹುಡುಗಿ ಆಚೆ ಹೋಗಬೇಕಾದ್ರೆ ಒಪ್ಪಲೇ ಬೇಕು ಅಂತ. ಗಂಡನನ್ನು ಕಳಕೊಂಡ ಅಮ್ಮನಿಗೆ ಒಮ್ಮೆ ಮಗಳ ಮದುವೆ ಮಾಡಿ ಮುಗಿಸಿದ್ದರೆ ಸಾಕಾಗಿತ್ತು. ಬೇರೆ ಉಪಾಯವಿಲ್ಲದೆ ಹುಡುಗಿಯ ಮುಖವನ್ನೂ ನೋಡದೆ ಅವನು ಅಕ್ಕನಿಗಾಗಿ ಮದುವೆಗೆ ಒಪ್ಪಿದ್ದ. ಹುಡುಗಿ ಮನೆಯಲ್ಲೂ ಇದೇ ಸಮಸ್ಯೆ. ಆ ಹುಡುಗ ಕೂಡಾ ತಂಗಿಗೋಸ್ಕರ 30 ಅವನ ಅಕ್ಕನನ್ನು ಮದುವೆಯಾಗಲು ಒಪ್ಪಿದ್ದ.  ಯಾವುದೇ ಸಂಬಂಧ ಬಂದರೂ ಆಗುತ್ತಿರಲಿಲ್ಲ. ಕೊನೆಗೂ ಅಕ್ಕನ ಮದುವೆ ತನ್ನಿಂದ ಆಗುವಂತೆ ಆಯಿತಲ್ಲ ಎಂದು ದೊಡ್ಡ ತ್ಯಾಗಿ ಅನ್ನುವಂತೆ ಅವನು ಬೀಗುತ್ತಿದ್ದ.

 ಮದುವೆಯ ಸಿದ್ಧತೆ ನಡೆದಿತ್ತು. ಎರಡೂ ಮನೆಯವರು ಖರ್ಚನ್ನು ಅರ್ಧ ಅರ್ಧ ಹಂಚಿಕೊಳ್ಳುವುದಾಗಿ ಮಾತಾಯಿತು. ಎರಡು ಮಂಟಪ ಹಾಕಲಾಗಿತ್ತು. ಗಂಡಿನ ಕಡೆಯವರು ಹೆಣ್ಣಿನ ಕಡೆಯವರು ಅಂತ ಏನೂ ಇರಲಿಲ್ಲ. ಎಲ್ಲರೂ ಓಡಾಡುತ್ತಿದ್ದರು. ಅಕ್ಕ ಹಿರಿಯಳಾಗಿದ್ದರಿಂದ ಅವಳ ಮದುವೆ ಮೊದಲು ಆಯಿತು. ನಂತರ ಹತ್ತು ನಿಮಿಷ ಬಿಟ್ಟು ಅವನ  ಮದುವೆ. ಅಂತರಪಟ ಸರಿಯುತ್ತಿದ್ದಂತೆ ಅವನ ಉತ್ಸಾಹವೆಲ್ಲ ಜರ್ರನೆ ಇಳಿಯಿತು. ಹುಡುಗಿ ಚೆನ್ನಾಗಿಲ್ಲ ಅಂತ ಅಮ್ಮ ಹೇಳಿದ್ದರು. ಆದ್ರೆ ಇಷ್ಟು ಕೆಟ್ಟದಾಗಿ ಅಸಹ್ಯವಾಗಿ ಇರಬಹುದು ಅಂತ ಅವನು ಊಹಿಸಿರಲಿಲ್ಲ. ಸಣಕಲು ದೇಹ, ಇದ್ದಲಿನಂತಹ ಬಣ್ಣ ಗೂನು ಬೆನ್ನು ಜೊತೆಗೆ ಹಲ್ಲುಬ್ಬು. ಯಾಂತ್ರಿಕವಾಗಿ ಮದುವೆ ಏನೋ ನಡೆಯಿತು. ಆದರೆ ನಂತರ ಏನೂ ನಡೆಯಲಿಲ್ಲ.

ಇವರ ನಡುವಿನ ಸಂಬಂಧದ ಅರಿವಾಗಿ ಒಂದು ದಿನ ಅಮ್ಮನೂ ಕೊರಗಿ ಕೊರಗಿ ಸತ್ತಳು. ಅವನು ಆಫೀಸಿನಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಗೀತಾ ಜೊತೆ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದ. ಅವಳಿಗಿನ್ನೂ ಮದುವೆಯಾಗಿರಲಿಲ್ಲ. ಅವಳ ಕೊತೆಗಿನ ಸ್ನೇಹ ಪ್ರೇಮವಾಗಿ ಮಾರ್ಪಟ್ಟಿತ್ತು.  ಅವನ ವಿಷಯ ಎಲ್ಲಾ ತಿಳಿದಿದ್ದರೂ ಅವಳು ಅವನನ್ನು ಪ್ರೇಮಿಸಿದ್ದಳು. ಕೊನೆಗೆ ಒಬ್ಬರನ್ನೊಬ್ಬರು ಬಿಡಲಾರದ ಸ್ಥಿತಿ ತಲುಪಿದರು. ಸಂಜೆ ಸುತ್ತಾಡಲು ಹೋಗೋದು ಮನೆಗೆ ದಿನಾ ತಡವಾಗಿ ಹೋಗೋದು ಅಭ್ಯಾಸವಾಗಿ ಹೋಯಿತು.

 ಪಾಪ ಆ ಹುಡುಗೀದು ಏನು ತಪ್ಪು. ಅವಳೇನಾದರೂ ಬಯಸಿ ಕುರೂಪಿಯಾಗಿದ್ದಳೆ ಎಂಬ ಯೋನೆಯನ್ನೂ ಮಾಡದೆ ಡೈವೋರ್ಸ್ ಗೆ ಅಪ್ಲೈ ಮಾಡಿದ. ವಿಷಯ ತಿಳಿದ ಅವರ ಮನೆಯಲ್ಲಿ ಅವನ ಅಕ್ಕನಿಗೆ ಕಿರುಕುಳ ಕೊಡಲು ಆರಂಭಿಸಿದ್ದರು. ಕೊನೆಗೆ ಒಂದು ದಿನ ಮಗಳಿಗಿಲ್ಲದ ಬಾಳು ನಿನಗೂ ಇಲ್ಲ ಎಂದು ಬಸಿರಾಗಿದ್ದ ಅಕ್ಕನನ್ನು ತವರಿಗೆ ದಬ್ಬಿದರು. ಅವನ ಅಕ್ಕ ಗಂಡು ಮಗುವಿಗೆ ಜನ್ಮ ನೀಡಿದಳು. ಅಕ್ಕನನ್ನೂ ಅವಳ ಮಗನನ್ನೂ ನೋಡಿಕೊಳ್ಳುವ ಜವಾಬ್ದಾರಿ ಕೂಡಾ ಅವನದಾಯಿತು. ಈ ಹುಡುಗಿ ಮೊದಲೇ ತವರು ಸೇರಿದ್ದಳು.  ಅವಳಿಂದ ಡೈವೋರ್ಸ್ ಸಿಕ್ಕಿ ಗೀತಾ ಜೊತೆ ಮದವೇನೂ ಆಯಿತು. ಒಬ್ಬ ಮಗಳೂ ಹುಟ್ಟಿದಳು.

ಇದ್ದಕ್ಕಿದ್ದಂತೆ ಗೀತಾಗೆ ತೊನ್ನು ರೋಗ ಆವರಿಸಿತು. ಕೈಯಲ್ಲಿ ಕಾಲಲ್ಲಿ ಪ್ರಾರಂಭವಾದ ರೋಗ ಮುಖದವರೆಗೂ ಹರಡಿತು. ಯಾವ ಔಷಧಿಯೂ ನಾಟಲಿಲ್ಲ. ಕೈಯನ್ನು ತುಂಬುತೋಳಿನ ಬ್ಲೌಸ್ ಧರಿಸಿ ಸೆರಗು ಹೊದ್ದುಕೊಂಡು ಮುಚ್ಚಲು ಪ್ರಯತ್ತಿಸುತ್ತಿದ್ದಳು. ಆದರೆ ಮುಖದ ತುಂಬಾ ಹರಡಿದ್ದ ತೊನ್ನು ರೋಗವನ್ನು ಯಾವುದರಿಂದ ಮರೆಮಾಚಲು ಸಾಧ್ಯ? ನಾಳೆ ಮಗಳನ್ನು ಯಾರು ಮದುವೆಯಾಗುತ್ತಾರೆ ಎಂದು ಅವಳು ಕೊರಗಲು ಪ್ರಾರಂಭಿಸಿದಳು. ಸಣಕಲು ಕಡ್ಡಿ, ಮುಖದ ತುಂಬಾ ಬಿಳಿ ಕಲೆ. ಅವನಿಗೆ ಅವಳ ಮೇಲೆ ಅಸಹ್ಯ ಮೂಡಲು ಪ್ರಾರಂಭವಾಯಿತು. ಏನು ಮಾಡಲಿ ಇವಳಿಗೂ ಡೈವೋರ್ಸ್ ಕೊಡಲಾ. ಅವಳಿಗೆ ಕಪ್ಪೆಂದು ಡೈವೋರ್ಸ್ ಕೊಟ್ಟಿದ್ದಾಯಿತು. ಇವಳಿಗೆ ಬಿಳಿ ಜಾಸ್ತಿ ಆಯಿತು ಅಂತ ಡೈವೋರ್ಸ್ ಕೊಡಲಾ. ಮಗಳು ಕಣ್ಮುಂದೆ ಬಂದಳು. ಮಗಳನ್ನು ತುಂಬಾ ಪ್ರೀತಿಸುತ್ತಿದ್ದ ಅವನು ಡೈವೋರ್ಸ್ ಯೋಚನೆಯನ್ನು ಕೈಬಿಟ್ಟ.

ಕಾಯಾ ವಾಚಾ ಮನಸಾ ಸಪ್ತಪದಿ ತುಳಿದು ಒಂದು ದಿನವೂ ಅವಳ ಜೊತೆ ಸಂಸಾರ ಮಾಡಲಿಲ್ಲ. ಅವಳ ಜೀವನವನ್ನೇ ನಾಶ ಮಾಡಿದ ತನಗೆ ದೇವರು ತಕ್ಕ ಶಿಕ್ಷೆಯನ್ನೇ ಕೊಟ್ಟಿದ್ದಾನೆ. ಅನುಭವಿಸಲೇಬೇಕು. ಕೊನೇ ಪಕ್ಷ ತನ್ನಿಂದ ಹಾಳಾದ ಅವಳ ಜೀವನವನ್ನು ಕಿಂಚಿತ್ತಾದರೂ ಸರಿಪಡಿಸುವ ಯೋಚನೆಯನ್ನಾದರೂ ಮಾಡಬೇಕಿತ್ತು. ಅದನ್ನೂ ಮಾಡಲಿಲ್ಲ ಎಂದು ಆ ಹುಡುಗಿಯನ್ನು ನೆನೆದು ನಿಟ್ಟುಸಿರು ಬಿಟ್ಟ. ಜೀವನದಲ್ಲಿ ಸೌಂದರ್ಯವೇ ಖಂಡಿತಾ ಮುಖ್ಯವಲ್ಲ ಎಂದು ಪಶ್ಚಾತಾಪ ಪಟ್ಟ. ಅವಳಿಗೆ ಡೈವೋರ್ಸ್ ಕೊಟ್ಟು ತಪ್ಪು ಮಾಡಿದೆ. ಈಗ ಇವಳನ್ನಾದರೂ ಚೆನ್ನಾಗಿ ನೋಡಿಕೊಳ್ಳಬೇಕು. ಗಂಡನಾದವನ ಆಸರೆ ಇದ್ದಲ್ಲಿ ಅವಳ ಮನೋಸ್ಥೈರ್ಯ ಹೆಚ್ಚಾಗುವುದು. ತಾನೂ ಕೂಡಾ ಅಸಡ್ಡೆ ತೋರಿಸಿದಲ್ಲಿ ಇವಳನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಬಾರದು. ಅವಳಲ್ಲಿ ಮಾಡಿದ ತಪ್ಪನ್ನು ಇವಳಲ್ಲಿ ಸರಿಪಡಿಸಿಕೊಳ್ಳಬೇಕು ಎಂಬ ಯೋಚನೆ ಬಂದಾಗ ಮನಸ್ಸು ಹಗುರವಾಯಿತು.

*****

Thursday, 28 June 2012

ಕಿರಾತಕ


     ನಾವು ಆರು ಜನ ಮಕ್ಕಳು. ನಾನೇ ಹಿರಿ ಮಗಳು. ಇಬ್ಬರು ತಮ್ಮಂದಿರು ಹಾಗೂ ಮೂರು ಜನ ತಂಗಿಯರು. ಅಪ್ಪ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ಬರುತ್ತಾ ದಿನಾ ಕುಡಿದು ಬರುತ್ತಿದ್ದರು. ಕಿತ್ತು ತಿನ್ನುವ ಬಡತನ. ದಿನ ಬೆಳಗಾದರೆ ಜಗಳ. ಕಾಯಿಲೆ ಮಲಗಿರುವ ಅಜ್ಜಿ (ಅಪ್ಪನ ಅಮ್ಮ) ಕೂಡಾ ನಮ್ಮ ಜೊತೇಲಿದ್ದರು. ಕಾಯಿಲೆ ಮಲಗಿದ್ದರೂ ಬಾಯಿ ಏನೂ ಕಡಿಮೆ ಇರಲಿಲ್ಲ. ಅಮ್ಮನ ಜೊತೆ ದಿನಾ ಜಗಳವಾಡುತ್ತಿದ್ದರು. ನಾನು ಎಸ್.ಎಸ್.ಎಲ್.ಸಿ. ಮುಗಿಸಿ ಟೈಪಿಂಗ್ ಮಾಡಿಕೊಂಡಿದ್ದೆ. ಎಷ್ಟೇ ಬಡತನವಿದ್ದರೂ ಹೆಣ್ಣುಮಕ್ಕಳನ್ನು ಮದುವೆ ಮಾಡದೆ ಮನೇಲಿ ಇಟ್ಟುಕೊಳ್ಳಲು ಆಗುವುದಿಲ್ಲವಲ್ಲಾ. ಯಾರೋ ಗಂಡು ತೋರಿಸಿದರು. ನನ್ನ ಮದುವೇನೂ ಆಯಿತು.

      ನನ್ನ ಗಂಡನಾದವನು ದೀರ್ಘಕಾಲದ ಅಸ್ತಮಾ ಕಾಯಿಲೆಯಿಂದ ನರಳುತ್ತಿದ್ದುದು ಮದುವೆಯಾದ ಮೇಲೆ ಗೊತ್ತಾಯಿತು. ನಾನು ಮೋಸ ಹೋಗಿದ್ದೆ. ಎಲ್ಲರಿಗೂ ಈ ವಿಷಯ ಮೊದಲೇ ಗೊತ್ತಿದ್ದರೂ ಮದುವೆಯಾದ ಮೇಲೆ ಸರಿ ಹೋಗಬಹುದು ಎಂದು ನನಗೆ ತಿಳಿಸದೆ ಮದುವೆ ಮಾಡಿ ಮುಗಿಸಿದ್ದರು. ನಂತರ ಇತ್ತ ಕಡೆ ಇಣುಕಿಯೂ ನೋಡಲಿಲ್ಲ. ಅನಾರೋಗ್ಯ ಗಂಡನನ್ನು ಕಟ್ಟಿಕೊಂಡು ಪಡಬಾರದ ಕಷ್ಟಗಳನ್ನೆಲ್ಲ ಅನುಭವಿಸಿದೆ. ಒಮ್ಮೊಮ್ಮೆ ಅವನು ಉಸಿರು ಎಳೀವಾಗ ಭಯವಾಗುತ್ತಿತ್ತು. ಅವನ ಆರೋಗ್ಯ ಸರಿಹೋಗಲು ಯಾರು ಏನು ಹೇಳುತ್ತಾರೋ ಹೋಮಿಯೋಪತಿ, ಆಯುರ್ವೇದ ಎಲ್ಲಾ ಚಿಕಿತ್ಸೆಯನ್ನೂ ಕೊಡಿಸಿದೆ. ಏನೂ ಪ್ರಯೋಜನವಾಗಲಿಲ್ಲ.

     ಯಾರ ಪುಣ್ಯದಿಂದಲೋ ನನಗೆ ಸರಕಾರಿ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಸಿಕ್ಕಿತು. ಅನಾರೋಗ್ಯವಿದ್ದರೂ ನನ್ನ ಗಂಡನಲ್ಲಿ ರಸಿಕತೆಗೆ ಏನೂ ಕಡಿಮೆ ಇರಲಿಲ್ಲ. ಕಾರಣ ಒಬ್ಬಳು ಮಗಳು ಹುಟ್ಟಿದಳು. ಅವರು ಸೇವಿಸುತ್ತಿದ್ದ ಔಷಧಿಯಿಂದ ಇರಬಹುದು ಮಗು ಬುದ್ಧಿಮಾಂದ್ಯವಾಗಿ ಹುಟ್ಟಿತ್ತು. ಅನಾರೋಗ್ಯ ಪತಿ ಜೊತೇಲಿ ಈ ಬುದ್ಧಿಮಾಂದ್ಯ ಮಗು ದೇವರು ನನ್ನ ಹಣೇಲಿ ಸುಖವನ್ನೇ ಬರೆದಿರಲಿಲ್ಲವೇನೋ. ನನಗೆ ಜೀವನವೇ ರೋಸಿಹೋಗಿತ್ತು.

     ಈ ಮಧ್ಯೆ ಆಫೀಸ್ ನಲ್ಲಿ ಬಾಸ್ ಅನ್ನಿಸಿಕೊಂಡವನು ಕಿರಿಕಿರಿ ಮಾಡಲು ಆರಂಭಿಸಿದ್ದ. ನಮ್ಮ ಮನೆಯ ವಿಷಯವನ್ನೆಲ್ಲಾ ತಿಳ್ಕೊಂಡುಬಿಟ್ಟಿದ್ದ ಅವನು ನನಗೆ ಸಹಾಯ ಮಾಡುವಂತೆ ಬರುತ್ತಿದ್ದ. ಮೊದಮೊದಲು ಕೋಪ, ಜಗಳದಿಂದ ಪ್ರಾರಂಭವಾದುದು ಕೊನೆಗೆ ನಮ್ಮಿಬ್ಬರ ಸಂಬಂಧ ಪ್ರೇಮವಾಗಿ ಮಾರ್ಪಟ್ಟಿತ್ತು. ನಾನು ನನ್ನನ್ನು ಅವನಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡು ಬಿಟ್ಟೆ. ಗಂಡನಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಕೊನೆಗೆ ನನ್ನ ಗಂಡನಿಗೆ ನನ್ನ ಹಾಗೂ ಬಾಸ್ ನಡುವಿನ ಸಂಬಂಧ ಹೇಗೋ ತಿಳಿದು ಹೋಗಿ ಜಗಳವಾಡಲು ಪ್ರಾರಂಭಿಸಿದ. ಏನೂ ಪ್ರಯೋಜನವಿಲ್ಲ ಎಂದು ತಿಳಿದಾಗ ಮಾನಸಿಕವಾಗಿ ತುಂಬಾ ಕುಗ್ಗಿ ಹೋದ ಅವನ ಕಾಯಿಲೆ ಉಲ್ಬಣವಾಗತೊಡಗಿತು. ಆಸ್ಪತ್ರೆಗೆ ಸೇರಿಸಿದೆ. ಒಂದು ದಿನ ಆಸ್ಪತ್ರೆಯಲ್ಲೇ ಸತ್ತುಹೋದ.

     ಈಗ ರಾಜಾರೋಷವಾಗಿ ಬಾಸ್ ಮನಗೆ ಬರಲಾರಂಭಿಸಿದ. ಬುದ್ಧಿಮಾಂದ್ಯ ಮಗುವಿಗೆ ಅವನನ್ನೇ ಅಪ್ಪ ಎಂದು ಕರೆಯುವಂತೆ ಹೇಳಿಕೊಟ್ಟಿದ್ದೆ. ಮಗುವನ್ನು ಮನೆಯೊಳಗೆ ಕೂಡಿಹಾಕಿ ಬೀಗ ಹಾಕಿ ಆಫೀಸಿಗೆ ಹೋಗುತ್ತಿದ್ದೆ. ಆಪೀಸ್ ಮನೆಗೆ ಹತ್ತಿರವಿದ್ದುದರಿಂದ ಮಧ್ಯಾಹ್ನ ಊಟದ ಸಮಯದಲ್ಲೂ ಮನೆಗೆ ಬರುತ್ತಿದ್ದೆ. ಅವನು ಕೂಡಾ ಹೊತ್ತಲ್ಲದ ಹೊತ್ತಲ್ಲಿ ಮನೆಗೆ ಬರುತ್ತಿದ್ದನಾದ್ದರಿಂದ ಅವನಲ್ಲೂ ಮನೆಯ ಒಂದು ಕೀ ಇತ್ತು. ಗಂಡನಿಂದ ಅನುಭವಿಸದಿದ್ದ ಎಲ್ಲಾ ಸುಖವನ್ನೂ ಅವನಿಂದ ಅನುಭವಿಸಿದೆ. ಒಟ್ಟಾರೆ ಹೇಳಬೇಕೂಂದ್ರೆ ನಾನು ಈಗ ಸುಖವಾಗಿದ್ದೆ.

      ಒಂದು ದಿನ ಸಂಜೆ ಆಫೀಸ್ ನಿಂದ ಮನೆಗೆ ಬಂದು ಬೀಗ ತೆಗೆದು ಒಳಗೆ ಹೋದೆ. ರೂಮಿಗೆ ಹೋದವಳೇ ಅಲ್ಲಿನ ದೃಶ್ಯ ಕಂಡು ಒಂದು ಕ್ಷಣ ದಂಗಾದೆ. ಸತ್ತ ಹೆಣದಂತೆ ಮಲಗಿದ್ದ ನನ್ನ ಬುದ್ಧಿಮಾಂದ್ಯ ಕಂದಮ್ಮನ ಎರಡೂ ಕಣ್ಣುಗಳೂ ಮೇಲೆ ನೋಡುತ್ತಿದ್ದುವು. ಮೈಮೇಲೆ ಒಂದು ಚೂರು ಬಟ್ಟೆ ಇರಲಿಲ್ಲ. ಹಾಸಿಗೆ ಮೇಲೆ ಹಾಸಿದ್ದ ಬಿಳಿ ಬೆಡ್ ಸ್ಪ್ರೆಡ್ ರಕ್ತಸಿಕ್ತವಾಗಿತ್ತು. ಮಗುವನ್ನು ಎತ್ತಿಕೊಂಡವಳೇ ಆಸ್ಪತ್ರೆಗೆ ಓಡಿದೆ. ಡಾಕ್ಟರ್ ತುಂಬಾ ಪ್ರಯತ್ನಪಟ್ಟರಾದರೂ ಏನೂ ಪ್ರಯೋಜನವಾಗಲಿಲ್ಲ. ಮಗು ಸತ್ತುಹೋಗಿತ್ತು. ಪೋಲೀಸ್ ಕಂಪ್ಲೇಂಟ್ ಕೊಟ್ಟೆ. ಯಾರ ಮೇಲಾದರೂ ಸಂಶಯವಿದೆಯಾ ಎಂದು ವಿಚಾರಿಸಿದರು. ನಾನು ಬಾಸ್ ಹೆಸರು ಹೇಳಿದೆ. ಬೇರೆ ಯಾರು ಮನೆಯೊಳಗೆ ಬರಲು ಸಾಧ್ಯವಿರಲಿಲ್ಲ. ಕಾರಣ ನನ್ನನ್ನು ಬಿಟ್ಟು ಅವನಲ್ಲಿ ಮಾತ್ರ ಮನೆಯ ಕೀ ಇದ್ದುದು. ಅವನ ಕೆಲಸ ಮುಗಿದ ಮೇಲೆ ಮನೆಯ ಕೀ ಹಾಕಿಕೊಂಡು ಹೋಗಿದ್ದ.  ಅವನು ಮಾಡಿದ ತಪ್ಪಿಗೆ ಈಗ ಕಂಬಿ ಎಣಿಸುತ್ತಿದ್ದಾನೆ. ನಾನೂ ಕೂಡಾ ಕರುಳ ಕುಡಿಯನ್ನು ಕಳಕೊಂಡು ಮಾಡಿರೋ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇನೆ.

*****

Tuesday, 5 June 2012

ಇದು ಕಥೆಯಲ್ಲ...


                                                                                          

        ದೂರದರ್ಶನದಲ್ಲಿ ಸತ್ಯಮೇವ ಜಯತೆ ಪ್ರಸಾರವಾಗುತ್ತಿತ್ತು. ಒಬ್ಬೊಬ್ಬ ಹೆಣ್ಣು ಮಗಳೂ ತಮ್ಮ ಜೀವನದಲ್ಲಾದ ನೋವಿನ ಅನುಭವಗಳನ್ನು ಬಿಚ್ಚಿಡುತ್ತಿದ್ದರು. ಇಂತಹ ಘಟನೆಗಳು ಬರೀ ಸಿನೆಮಾದಲ್ಲಿ ಅಥವಾ ಕಥೆಗಳಲ್ಲಿ ಮಾತ್ರ ಸಂಭವಿಸಲು ಸಾಧ್ಯ ಅಂದುಕೊಂಡವರಿಗೆ ಇಂತಹ ಕಟುಕರೂ ಇರಲು ಸಾಧ್ಯಾನಾ ಎಂದು ಆಶ್ಚರ್ಯವಾಗಬಹುದು. ಖಂಡಿತಾ ಇದ್ದಾರೆ ಅನ್ನೋದಕ್ಕೆ ದಿನನಿತ್ಯ ಇದೇ ರೀತಿ ಹಿಂಸೆಯನ್ನನುಭವಿಸುತ್ತಿರಬಹುದಾದ ಸಾವಿರಾರು ಹೆಣ್ಣುಮಕ್ಕಳ ಜೊತೆ ನಾನು ಕೂಡಾ ಒಂದು ಸಾಕ್ಷಿ.

ಅಪ್ಪ ಸರ್ಕಾರಿ ಕೆಲಸದಲ್ಲಿದ್ದುದರಿಂದ ಅಪ್ಪ ತೀರಿ ಹೋದ ನಂತರ ಅನುಕಂಪದ ಆಧಾರದ ಮೇಲೆ ನನಗೆ ಅಪ್ಪನ ಕೆಲಸ ದೊರೆತ್ತಿತ್ತು. ಅಲ್ಲಿ ಸಹೋದ್ಯೋಗಿಯ ಸ್ನೇಹಿತನ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೇಮವಾಗಿತ್ತು. ಅವನು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದ ಅಂದರೆ ನೀನು ನನ್ನನ್ನು ಮದುವೆ ಆಗದಿದ್ದಲ್ಲಿ ನಾನು ಸತ್ತೇ ಹೋಗುತ್ತೀನಿ ಅನ್ನುವಷ್ಟರ ಮಟ್ಟಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದ. ನಾನು ಬಲೆಗೆ ಬಿದ್ದಿದ್ದೆ. ಅಮ್ಮ, ಸಂಬಂಧಿಕರು ಮೊದಲು ಮದುವೆಗೆ ವಿರೋಧ ವ್ಯಕ್ತಪಡಿಸಿದರೂ ಕೊನೆಗೆ ನನ್ನ ಹಠಕ್ಕೆ ಒಪ್ಪಲೇಬೇಕಾಯಿತು.

          ಮದುವೆಯಾದ ಮೊದಲ ದಿನವೇ ಅವನು ತನ್ನ ಬಣ್ಣ ಬದಲಾಯಿಸಲಾರಂಭಿಸಿದ್ದ. ಮದುವೆಗೆ ಮೊದಲು ಚಿನ್ನ, ಬಂಗಾರ ಅನ್ನುತ್ತಿದ್ದವನ ಎರಡನೇ ಮುಖದ ಪರಿಚಯವಾಗತೊಡಗಿತ್ತು. ದುಡ್ಡು ಬಿಟ್ಟರೆ ನನ್ನಿಂದ ಹೊಸದೇನೂ ಪಡೆದುಕೊಳ್ಳುವುದಿರಲಿಲ್ಲ. ಎಲ್ಲವನ್ನೂ ಮದುವೆಗೆ ಮುಂಚೇನೆ ಪಡೆದುಕೊಂಡಾಗಿತ್ತು. ನನ್ನಿಂದ ದುಡ್ಡನ್ನು ಹೇಗೆ ಪಡಕೋಬೇಕು ಅಂತ ಅವನು ಚೆನ್ನಾಗಿ ಅರಿತಿದ್ದ. ಅವನು ಕುಡೀತಾನೆ ಅಂತ ನನಗೆ ಗೊತ್ತಿತ್ತು. ಆದರೆ ಅದಕ್ಕೆ ದಾಸನಾಗಿದ್ದ ಅಂತ ಗೊತ್ತಿರಲಿಲ್ಲ. ನಾನು ಪ್ಯೂರ್ ವೆಜಿಟೇರಿಯನ್. ಅವನು ಹಸಿ ಮಾಂಸ ತಂದು ಅಡುಗೆ ಮಾಡುವಂತೆ ಹಿಂಸಿಸುತ್ತಿದ್ದ. ನನಗೆ ಕೈಯಲ್ಲಿ ಮುಟ್ಟುವುದಿರಲಿ ಅದನ್ನು ನೋಡಿದ್ರೇನೆ ವಾಕರಿಕೆ ಬರುತ್ತಿತ್ತು. ಮಾಡದಿದ್ದಲ್ಲಿ ಜುಟ್ಟು ಹಿಡ್ಕೊಂಡು ಬಾಸುಂಡೆ ಬರುವಂತೆ ಬಾರಿಸುತ್ತಿದ್ದ. ಮದುವೆ ಆದ ಮೇಲೆ ಕೆಲಸಕ್ಕೆ ಹೋಗೋದನ್ನೇ ನಿಲ್ಲಿಸಿಬಿಟ್ಟ. ಎಲ್ಲಿ ಬಚ್ಚಿಟ್ಟರೂ, ಒಂದು ಪೈಸೇನೂ ಬಿಡದಂಗೆ ಎತ್ಕೊಂಡು ಹೋಗುತ್ತಿದ್ದ.

ಅಮ್ಮನೂ ಕೆಲಸಕ್ಕೆ ಹೋಗುತ್ತಿದ್ದುದರಿಂದ ನನ್ನ ಮದುವೆಗೆಂದು ಹೇರಳವಾಗಿಯೇ ಚಿನ್ನ ಮಾಡಿಸಿಟ್ಟಿದ್ದರು. ತಾಳಿ ಒಂದನ್ನು ಬಿಟ್ಟು ಎಲ್ಲವನ್ನೂ ಮಾರಿಕೊಂಡ್ಬಿಟ್ಟ. ಅಮ್ಮ ಎಷ್ಟು ಬೇಡವೆಂದರೂ ಕೇಳದೆ ಅವನ ಹಿಂದೆ ಓಡಿ ಬಂದಿದ್ದಕ್ಕೆ ತಕ್ಕ ಶಿಕ್ಷೆಯಾಗಿತ್ತು. ಈ ಮಧ್ಯೆ ಗರ್ಭಿಣಿಯಾದೆ. ಆದರೂ ಅವನು ಕೊಡುತ್ತಿದ್ದ ಹಿಂಸೆ ಏನೂ ಕಡಿಮೆ ಆಗಲಿಲ್ಲ. ಒಂದು ದಿನ ಹೆಣ್ಣು ಮಗುವಿಗೆ ಜನ್ಮ ನೀಡಿದೆ. ಹೆಣ್ಣು ಮಗುವಾದುದಕ್ಕೆ ಹಿಂಸೆ ಇನ್ನೂ ಜಾಸ್ತಿ ಆಯಿತು. ಮಗುವಿಗೆ ಏನಾದರೂ ಮಾಡಬಹುದು ಎಂದು ಮಗುವನ್ನು ಕೈಯಲ್ಲೇ ಹಿಡ್ಕೊಂಡು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ.

          ಒಂದು ಚಿಕ್ಕ ಹುಳು ಕೂಡಾ ಅದರ ಮೇಲೆ ಸುಮ್ಮನೆ ಒಂದು ಕಡ್ಡಿ ಇಟ್ಟರೆ ಅದರಿಂದ ಬಿಡಿಸಿಕೊಳ್ಳಲು ಹೇಗೆ ಒದ್ದಾಡುತ್ತದೆ. ನಾನ್ಯಾಕೆ ಹೀಗೆ ಇವನ ಹಿಂಸೆ ಸಹಿಸಿಕೊಂಡು ಇವನೊಂದಿಗೆ ಇದ್ದೇನೆ ಹೇಗಿದ್ದವಳು ಹೇಗಾದೆ ಅಂತ ನನ್ನ ಮೇಲೆ ನನಗೇ ಬೇಜಾರಾಗುತ್ತಿತ್ತು. ಆದರೆ ಅವನನ್ನು ಬಿಟ್ಟು ನಾನು ಹೋಗೋದಾದ್ರೂ ಎಲ್ಲಿಗೆ. ಅಮ್ಮನಿಗೆ ಈ ವಯಸ್ಸಲ್ಲಿ ಯಾಕೆ ನೋವು ಕೊಡಲಿ ಅಂತ ಅವನ ಹಿಂಸೆ ಸಹಿಸಿಕೊಂಡು ಸುಮ್ಮನಿರುತ್ತಿದ್ದೆ.

ಒಂದು ದಿನ ಮಗುವನ್ನು ಕೆಳಗೆ ಮಲಗಿಸಿ ಅಡುಗೆ ಮನೆಯಲ್ಲಿ ಏನೋ ಮಾಡುತ್ತಿದ್ದೆ. ಅವನು ಕುಡಿದು ತೂರಾಡುತ್ತಾ ಬಂದವನೇ, ಇವ್ಳಿಗೆ ಒಂದು ಗಂಡು ಮಗುವನ್ನ ಹೆರೋಕಾಗ್ಲಿಲ್ಲ. ಈ ಕರೀ ಮೂಟೇನ ಹೆತ್ತಿದ್ದಾಳೆ ಅಂದವನೇ ಮಗುವನ್ನ ಕಾಲಿನಿಂದ ಫುಟ್ ಬಾಲ್ ಒದೆಯುವಂತೆ ಒದ್ದ. ಅವನು ತಳ್ಳಿದ ರಭಸಕ್ಕೆ ಮಗುವಿನ ತಲೆ ಗೋಡೆಗೆ ತಗುಲಿ ಮಗು ಕಿಟಾರನೆ ಕಿರುಚಲಾರಂಭಿಸಿತು. ದೇವರ ದಯೆಯಿಂದ ಏನೂ ಆಗಲಿಲ್ಲ. ನನಗೆ ಎಲ್ಲಿಂದ ಬಂತೋ ಶಕ್ತಿ ಗೊತ್ತಾಗ್ಲಿಲ್ಲ. ಮಗುವನ್ನು ಎತ್ತಿಕೊಂಡವಳೇ ಅವನನ್ನು ಒಂದೇ ಕೈಯಿಂದ ಹಿಡಿದು ತಳ್ಳಿಬಿಟ್ಟೆ. ಮೊದಲೇ ತೂರಾಡುತ್ತಿದ್ದವನು ಅಲ್ಲಿಯೇ ಮಲಕ್ಕೊಂಡು ಬಿಟ್ಟ. ಮಗುವನ್ನು ಎತ್ತಿಕೊಂಡವಳೇ ಬದುಕಿದೆಯಾ ಬಡಜೀವ ಅಂತ ಸಿಕ್ಕಿದ ಆಟೋ ಹತ್ತಿ ಅಮ್ಮನ ಮನೆಗೆ ಬಂದೆ. ಅಮ್ಮನಿಗೆ ಅವನ ಬಗ್ಗೆ ಎಲ್ಲವನ್ನೂ ಹೇಳಿರಲಿಲ್ಲ. ಹೇಗೆ ಹೇಳಲಿ ನಾನೇ ಇಷ್ಟಪಟ್ಟು ಅವನೊಂದಿಗೆ ಓಡಿ ಬಂದವಳು. ಈಗ ಅಮ್ಮನನ್ನು ಬಿಟ್ಟು ನನಗೆ ಯಾರೂ ಇರಲಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಾ ಅಮ್ಮನಲ್ಲಿ ಎಲ್ಲವನ್ನೂ ಹೇಳಿದೆ. ಅಮ್ಮ ಮೌನವಾಗಿ ಅಳುತ್ತಾ ನನ್ನನ್ನು ತಬ್ಬಿಕೊಂಡು ಸಮಾಧಾನಪಡಿಸುತ್ತಿದ್ದರು.

ಆಮೇಲೆ ಅವನ ಮನೆಗೆ ಹೋಗಲಿಲ್ಲ. ಅವನು ಸರಿಹೋಗುತ್ತಾನೆ ಅನ್ನುವ ಸಣ್ಣ ಆಸೇನೂ ನನಗೆ ಇರಲಿಲ್ಲ. ಕುಡಿಯಲು ದುಡ್ಡು ಬೇಕಾಗಿತ್ತು. ಆಫೀಸ್ ಹತ್ತಿರ ಬಂದು ಹಿಂಸೆ ಕೊಡಲಾರಂಭಿಸಿದ. ಅಮ್ಮನ ಮನೆಯ ಹತ್ತಿರ ತೂರಾಡುತ್ತಾ ಬಂದು ಕೂಗಾಡುತ್ತಿದ್ದ. ಫೋನ್ ನಲ್ಲಿ ಅವಾಚ್ಯ ಶಬ್ಧಗಳಿಂದ ಬಯ್ಯುತ್ತಿದ್ದ. ನಮ್ಮ ಸಂಬಂಧಿಕರೊಬ್ಬರು ಎಸಿಪಿ ಇದ್ದರು. ಅವರು ಸ್ಠೇಷನ್ ಗೆ ಕರೆಸಿ ಹೆದರಿಸಿದ ನಂತರ ಆಫೀಸ್ ಹತ್ತಿರ ಮನೆಯ ಹತ್ತಿರ ಬರೋದನ್ನ ನಿಲ್ಲಿಸಿದ. ಆಮೇಲೆ ಡೈವೋರ್ಸ್ ಗೆ ಅಪ್ಲೈ ಮಾಡಿದೆ. ಸ್ನೇಹಿತರು ಇನ್ನೊಂದು ಮದುವೆ ಮಾಡುವ ಪ್ರಯತ್ನ ಮಾಡಿದರು. ಆದರೆ ನನ್ನ ಮುಂದೆ ಮಗಳ ಭವಿಷ್ಯ ಬಿಟ್ಟು ಬೇರೇನೂ ಇರಲಿಲ್ಲ.

ಈಗ ನನಗೆ ಹಣದ ಕೊರತೆ ಇಲ್ಲ. ಮಗಳನ್ನು ಚೆನ್ನಾಗಿಯೇ ಓದಿಸಿದೆ. ಅವಳ ಜೀವನ ನನ್ನ ತರಹ ಆಗಬಾರದು. ಅವಳು ಒಂದು ಒಳ್ಳೆಯ ಮನೆ ಸೇರಬೇಕು. ದಿನನಿತ್ಯ ದೇವರಲ್ಲಿ ಒಂದೇ ಪ್ರಾರ್ಥನೆ ಅವಳಿಗೆ ಒಳ್ಳೆಯ ಜೀವನ ಸಿಗಲಿ ಎಂದು. ದೇವರು ನನ್ನ ನಂಬಿಕೆ ಖಂಡಿತಾ ಹುಸಿ ಮಾಡೋದಿಲ್ಲ. ಯಾಕೇಂದ್ರೆ ಯಾವುದನ್ನೂ ಮುಚ್ಚಿಡದೆ ನಾವು ಹೇಳಿಕೊಳ್ಳೋದು ಭಗವಂತನಲ್ಲಿ ಮಾತ್ರ.

*****