ನಾವು ಆರು ಜನ ಮಕ್ಕಳು. ನಾನೇ ಹಿರಿ ಮಗಳು. ಇಬ್ಬರು
ತಮ್ಮಂದಿರು ಹಾಗೂ ಮೂರು ಜನ ತಂಗಿಯರು. ಅಪ್ಪ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ರಾತ್ರಿ ಕೆಲಸ
ಮುಗಿಸಿ ಬರುತ್ತಾ ದಿನಾ ಕುಡಿದು ಬರುತ್ತಿದ್ದರು. ಕಿತ್ತು ತಿನ್ನುವ ಬಡತನ. ದಿನ ಬೆಳಗಾದರೆ ಜಗಳ.
ಕಾಯಿಲೆ ಮಲಗಿರುವ ಅಜ್ಜಿ (ಅಪ್ಪನ ಅಮ್ಮ) ಕೂಡಾ ನಮ್ಮ ಜೊತೇಲಿದ್ದರು. ಕಾಯಿಲೆ ಮಲಗಿದ್ದರೂ ಬಾಯಿ
ಏನೂ ಕಡಿಮೆ ಇರಲಿಲ್ಲ. ಅಮ್ಮನ ಜೊತೆ ದಿನಾ ಜಗಳವಾಡುತ್ತಿದ್ದರು. ನಾನು ಎಸ್.ಎಸ್.ಎಲ್.ಸಿ.
ಮುಗಿಸಿ ಟೈಪಿಂಗ್ ಮಾಡಿಕೊಂಡಿದ್ದೆ. ಎಷ್ಟೇ ಬಡತನವಿದ್ದರೂ ಹೆಣ್ಣುಮಕ್ಕಳನ್ನು ಮದುವೆ ಮಾಡದೆ ಮನೇಲಿ
ಇಟ್ಟುಕೊಳ್ಳಲು ಆಗುವುದಿಲ್ಲವಲ್ಲಾ. ಯಾರೋ ಗಂಡು ತೋರಿಸಿದರು. ನನ್ನ ಮದುವೇನೂ ಆಯಿತು.
ಯಾರ ಪುಣ್ಯದಿಂದಲೋ ನನಗೆ ಸರಕಾರಿ ಕಚೇರಿಯಲ್ಲಿ
ಟೈಪಿಸ್ಟ್ ಆಗಿ ಕೆಲಸ ಸಿಕ್ಕಿತು. ಅನಾರೋಗ್ಯವಿದ್ದರೂ ನನ್ನ ಗಂಡನಲ್ಲಿ ರಸಿಕತೆಗೆ ಏನೂ ಕಡಿಮೆ
ಇರಲಿಲ್ಲ. ಕಾರಣ ಒಬ್ಬಳು ಮಗಳು ಹುಟ್ಟಿದಳು. ಅವರು ಸೇವಿಸುತ್ತಿದ್ದ ಔಷಧಿಯಿಂದ ಇರಬಹುದು ಮಗು
ಬುದ್ಧಿಮಾಂದ್ಯವಾಗಿ ಹುಟ್ಟಿತ್ತು. ಅನಾರೋಗ್ಯ ಪತಿ ಜೊತೇಲಿ ಈ ಬುದ್ಧಿಮಾಂದ್ಯ ಮಗು ದೇವರು ನನ್ನ
ಹಣೇಲಿ ಸುಖವನ್ನೇ ಬರೆದಿರಲಿಲ್ಲವೇನೋ. ನನಗೆ ಜೀವನವೇ ರೋಸಿಹೋಗಿತ್ತು.
ಈ ಮಧ್ಯೆ ಆಫೀಸ್ ನಲ್ಲಿ ಬಾಸ್ ಅನ್ನಿಸಿಕೊಂಡವನು
ಕಿರಿಕಿರಿ ಮಾಡಲು ಆರಂಭಿಸಿದ್ದ. ನಮ್ಮ ಮನೆಯ ವಿಷಯವನ್ನೆಲ್ಲಾ ತಿಳ್ಕೊಂಡುಬಿಟ್ಟಿದ್ದ ಅವನು ನನಗೆ
ಸಹಾಯ ಮಾಡುವಂತೆ ಬರುತ್ತಿದ್ದ. ಮೊದಮೊದಲು ಕೋಪ, ಜಗಳದಿಂದ ಪ್ರಾರಂಭವಾದುದು ಕೊನೆಗೆ ನಮ್ಮಿಬ್ಬರ
ಸಂಬಂಧ ಪ್ರೇಮವಾಗಿ ಮಾರ್ಪಟ್ಟಿತ್ತು. ನಾನು ನನ್ನನ್ನು ಅವನಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡು
ಬಿಟ್ಟೆ. ಗಂಡನಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಕೊನೆಗೆ ನನ್ನ ಗಂಡನಿಗೆ ನನ್ನ ಹಾಗೂ ಬಾಸ್
ನಡುವಿನ ಸಂಬಂಧ ಹೇಗೋ ತಿಳಿದು ಹೋಗಿ ಜಗಳವಾಡಲು ಪ್ರಾರಂಭಿಸಿದ. ಏನೂ ಪ್ರಯೋಜನವಿಲ್ಲ ಎಂದು ತಿಳಿದಾಗ
ಮಾನಸಿಕವಾಗಿ ತುಂಬಾ ಕುಗ್ಗಿ ಹೋದ ಅವನ ಕಾಯಿಲೆ ಉಲ್ಬಣವಾಗತೊಡಗಿತು. ಆಸ್ಪತ್ರೆಗೆ ಸೇರಿಸಿದೆ.
ಒಂದು ದಿನ ಆಸ್ಪತ್ರೆಯಲ್ಲೇ ಸತ್ತುಹೋದ.
ಈಗ ರಾಜಾರೋಷವಾಗಿ ಬಾಸ್ ಮನಗೆ ಬರಲಾರಂಭಿಸಿದ.
ಬುದ್ಧಿಮಾಂದ್ಯ ಮಗುವಿಗೆ ಅವನನ್ನೇ ಅಪ್ಪ ಎಂದು ಕರೆಯುವಂತೆ ಹೇಳಿಕೊಟ್ಟಿದ್ದೆ. ಮಗುವನ್ನು
ಮನೆಯೊಳಗೆ ಕೂಡಿಹಾಕಿ ಬೀಗ ಹಾಕಿ ಆಫೀಸಿಗೆ ಹೋಗುತ್ತಿದ್ದೆ. ಆಪೀಸ್ ಮನೆಗೆ ಹತ್ತಿರವಿದ್ದುದರಿಂದ
ಮಧ್ಯಾಹ್ನ ಊಟದ ಸಮಯದಲ್ಲೂ ಮನೆಗೆ ಬರುತ್ತಿದ್ದೆ. ಅವನು ಕೂಡಾ ಹೊತ್ತಲ್ಲದ ಹೊತ್ತಲ್ಲಿ ಮನೆಗೆ
ಬರುತ್ತಿದ್ದನಾದ್ದರಿಂದ ಅವನಲ್ಲೂ ಮನೆಯ ಒಂದು ಕೀ ಇತ್ತು. ಗಂಡನಿಂದ ಅನುಭವಿಸದಿದ್ದ ಎಲ್ಲಾ
ಸುಖವನ್ನೂ ಅವನಿಂದ ಅನುಭವಿಸಿದೆ. ಒಟ್ಟಾರೆ ಹೇಳಬೇಕೂಂದ್ರೆ ನಾನು ಈಗ ಸುಖವಾಗಿದ್ದೆ.
*****
No comments:
Post a Comment