ಅಂದು ನನ್ನ ಮಗುವಿನ
ನಾಮಕರಣ. 9 ತಿಂಗಳಿಗೆ ನಾಮಕರಣ ಮಾಡಲು ನಿಶ್ಚಯಿಸಿ ನೆಂಟರಿಷ್ಟರನ್ನೆಲ್ಲಾ ಆಹ್ವಾನಿಸಿದ್ದೆವು.
ಎಲ್ಲೆಲ್ಲೂ ಸಂತಸ ಸಂಭ್ರಮ ತುಳುಕಾಡುತ್ತಿತ್ತು. ಎಲ್ಲರೂ ಮಗುವನ್ನು ಹೊಗಳುವವರೇ. ಮದುವೆಯಾಗಿ 15
ವರ್ಷಗಳ ನಂತರ ಹುಟ್ಟಿದ ಗಂಡು ಮಗು. ಅಮ್ಮನಿಗಂತೂ ಸಂತೋಷದಿಂದ ಕಾಲು ನೆಲದ ಮೇಲೇ ನಿಲ್ಲುತ್ತಿರಲಿಲ್ಲ.
‘’ನನ್ನ ಮಗನೂ ಚಿಕ್ಕೋನಿರೋವಾಗ ಹೀಗೇ ಇದ್ದ. ಕಣ್ಣು ಮೂಗು ಎಲ್ಲಾ ನನ್ನ ಮಗನ ತರಾನೇ ಇದೆ’’ ಎಂದು
ಎಲ್ಲರಿಗೂ ಮಗುವನ್ನು ತೋರಿಸಿದ್ದೇ ತೋರಿಸಿದ್ದು. ಅವರ ಸ್ನೇಹಿತೆಯರು ಕೂಡಾ ‘’ಹೌದು ಕಣ್ರೀ
ಡಿಟ್ಟೋ ನಿಮ್ಮ ಮಗನ ತರಾನೇ ಇದ್ದಾನೆ’’ ಅಂತಿದ್ರು.
ಅಂದು ನನ್ನವಳ ವರ್ತನೆ
ಸ್ವಲ್ಪ ವಿಚಿತ್ರವಾಗಿತ್ತು. ನನ್ನನ್ನು ತಬ್ಬಿಕೊಂಡವಳೇ ಗೊಳೋ ಎಂದು ಅಳಲು ಶುರು ಮಾಡಿದಳು. ‘’ನನ್ನಿಂದ
ಒಂದು ತಪ್ಪಾಗಿದೆ. ಕ್ಷಮಿಸಲಾರದ ತಪ್ಪು ಅದು. ಆದ್ರೂ ಕ್ಷಮಿಸಿ ಅಂತ ನಾಚಿಕೆ ಬಿಟ್ಟು ಕೇಳುತ್ತಿದ್ದೀನಿ.
ಕ್ಷಮಿಸ್ತೀರಿ ಅಲ್ವಾ’’ ಅಂತ ಅಳುತ್ತಲೇ ಕೇಳಿದ್ಲು. ‘’ಮೊದಲು ಕಣ್ಣೊರಸಿಕೊಂಡು ಏನಾಯ್ತು ಅಂತ
ಹೇಳು’’ ಅಂದೆ.
ಕೆಎಎಸ್ ಆಫೀಸರ್ ಆಗಿದ್ದ
ನನಗೆ ಓಡಾಡಲು ಸರ್ಕಾರದಿಂದ ಅಂಬಾಸಿಡರ್ ಕಾರ್ ಕೊಟ್ಟಿದ್ದರು. ಕುಮಾರ್ ಅಂತ ಕಾರಿನ ಡ್ರೈವರ್. ತುಂಬಾ ಒಳ್ಳೆಯ
ಹುಡುಗ. ಒತ್ತಾಯ ಮಾಡಿ ಕರೆದ್ರೆ ಮಾತ್ರ ಮನೆ
ಒಳಗೆ ಬರುತ್ತಿದ್ದ. ನನ್ನವಳು ಶಾಪಿಂಗ್ ಹೋಗಬೇಕಾದ್ರೆ ಕುಮಾರ್ ಗೆ ಹೇಳಿ ಕಳುಹಿಸುತ್ತಿದ್ದಳು. ಅಂದು
ನನ್ನವಳು ಶಾಪಿಂಗ್ ಮುಗಿಸಿಕೊಂಡು ಬಂದವಳು ಕುಮಾರ್ ಗೆ ಶಾಪಿಂಗ್ ಮಾಡಿದ ಸಾಮಾನನ್ನು ಸ್ವಲ್ಪ
ಒಳಗೆ ತಂದು ಕೊಡುತ್ತೀಯಾಪ್ಪಾ ಅಂತ ಕೇಳಿದಳು. ಅವನು ಒಂದೊಂದೇ ಸಾಮಾನನ್ನು ಮನೆ ಒಳಗೆ ತಂದು
ಇಡುತ್ತಿದ್ದ. ಮನೆಯಲ್ಲಿ ಇಬ್ಬರನ್ನು ಬಿಟ್ಟರೆ ಯಾರೂ ಇಲ್ಲ. ಅವಳಿಗೆ ಏನನಿಸಿತೋ ಏನೋ
ಇದ್ದಕ್ಕಿದ್ದಂತೆ ಅವನ ಕೈ ಹಿಡಕೊಂಡವಳೇ ನನಗೆ ಒಂದು ಸಹಾಯ ಮಾಡುತ್ತೀಯಾಪ್ಪಾ ಅಂತ ಕೇಳಿದಳು.
ಜಾಸ್ತಿ ಮಾತಾಡದಿದ್ದ ಅವನು ಕಣ್ಣು ಪಿಳಿಪಿಳಿ ಬಿಡಲಾರಂಭಿಸಿದ. ಅವಳು ಇನ್ನೂ ಹತ್ತಿರ ಬಂದು, ‘’ನಿನಗೆ
ಗೊತ್ತೇ ಇದೆ ನನಗೆ ಮಕ್ಕಳಿಲ್ಲ ಎಂದು. ಬಂಜೆ ಅನ್ನಿಸಿಕೊಂಡು ಸಾಕಾಗಿದೆ. ನನ್ನಲ್ಲಿ ಮಕ್ಕಾಳಾಗೋ
ಎಲ್ಲಾ ಸಾಧ್ಯತೆ ಇದೆ. ನನಗೆ ತಾಯಿ ಆಗೋ ಭಾಗ್ಯ ಕರುಣಿಸುತ್ತೀಯಾಪ್ಪಾ. ನಿನ್ನ ಕೈ ಮುಗಿದು
ಬೇಡಿಕೊಳ್ಳುತ್ತೇನೆ. ಮತ್ತೆ ಯಾವತ್ತೂ ನಿನ್ನನ್ನು ಕಣ್ಣೆತ್ತಿ ಸಹಾ ನೋಡುವುದಿಲ್ಲ. ನೋಡು ನಿನಗೆ
ಒಪ್ಪಿಗೆ ಇದ್ದಲ್ಲಿ ನಾಳೆ ಇದೇ ಸಮಯಕ್ಕೆ ನೀನು ಇಲ್ಲಿ ಇರ್ತಿಯ. ಕಾಯುತ್ತಿರುತ್ತೇನೆ’’ ಅಂದಳು. ಮರುದಿನ
ಎಣ್ಣೆ ನೀರು ಸ್ನಾನ ಮಾಡಿ ಅವಳು ಅವನಿಗೋಸ್ಕರ ಕಾಯುತ್ತಿದ್ದಳು. ಅವನು ಸಂಕೋಚದಿಂದ ಹೆದರುತ್ತಲೇ
ಮನೆಯೊಳಗೆ ಕಾಲಿರಿಸಿದ. ಹುಚ್ಚು ಸಂತೋಷ ಜೊತೆಗೆ ಭಯ ಅವಳಲ್ಲಿ ಕಾಣುತ್ತಿತ್ತು. ಅವರಿಬ್ಬರಲ್ಲಿ
ಅದು ನಡೆದು ಹೋಗಿತ್ತು. ಅವಳು ಅಂದುಕೊಂಡಂತೆ ಮುಂದಿನ ತಿಂಗಳು ಅವಳು ಮುಟ್ಟಾಗಲಿಲ್ಲ. ಅಬ್ಬಾ ಕೊನೆಗೂ
ನಾನು ತಾಯಿಯಾಗುತ್ತಿದ್ದೇನೆ ಎಂದು ಎದೆ ಸಂತೋಷದಿಂದ ಬೀಗುತ್ತಿತ್ತು. ಜೊತೆಯಲ್ಲಿ ಈ ವಿಷಯ ಹೇಗೆ
ಹೇಳಲಿ ಅನ್ನುವ ಭಯ ಕೂಡಾ ಕಾಡುತ್ತಿತ್ತು.
ಅಂದು ಈ ವಿಷಯವನ್ನು ಚಾಚೂ
ತಪ್ಪದೆ ನನ್ನಲ್ಲಿ ಬಿಚ್ಚಿಟ್ಟಿದ್ದಳು. ತಲೆ ಬಿಸಿ ಆಗಿ ಒಂದು ಕ್ಷಣ ಏನೂ ಮಾಡಲು ತೋಚಲಿಲ್ಲ.
ಕಣ್ಣು ಮುಚ್ಚಿಕೊಂಡು ನಿದ್ದೆ ಬಂದವನಂತೆ ಮಲಗಿ ಯೋಚಿಸತೊಡಗಿದೆ. ಇದರಲ್ಲಿ ಅವಳ ತಪ್ಪು ಏನೂ
ಇಲ್ಲ. ಬೇರೆ ಹೆಣ್ಣಾಗಿದ್ರೆ ಬಹುಷ: ನನ್ನಲ್ಲಿಯೇ ದೋಷವಿರುವುದನ್ನು ತಿಳಿದು ರಂಪ ಮಾಡಿ
ಎಲ್ಲರಿಗೂ ವಿಷಯ ಗೊತ್ತಾಗುವಂತೆ ಮಾಡಿ ನನ್ನ ಹಾಗೂ ನನ್ನ ಮನೆಯ ಮರ್ಯಾದೆ ತೆಗೆಯುತ್ತಿದ್ದಳು
ಅಥವಾ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಳ್ಳಬಹುದಿತ್ತು. ಇವಳು ಹಾಗೆ ಮಾಡಲಿಲ್ಲ ಎಲ್ಲಾ
ವಿಷಯವನ್ನು ಚಾಚೂ ತಪ್ಪದೆ ನನಗೆ ಒಪ್ಪಿಸಿದ್ದಾಳೆ. ಅನಾಥ ಮಗುವನ್ನು ದತ್ತು ತೆಗೆದುಕೊಳ್ಳುವ
ಬದಲು ಇದು ಬೆಟರ್ ಅಲ್ವಾ ನಾನು ಅತಿಯಾಗಿ
ಪ್ರೀತಿಸುವ ನನ್ನವಳ ರಕ್ತವನ್ನಾದರೂ ಹಂಚಿಕೊಳ್ಳುತ್ತಲ್ಲಾ ಆ ಮಗು. ಪುರಾಣ ಕಾಲದಲ್ಲೂ ಈ ರೀತಿ
ನಡೆದಿತ್ತಲ್ವಾ. ಧೃತರಾಷ್ಟ್ರ, ಪಾಂಡು, ವಿಧುರ ಹಾಗೂ ಪಾಂಡವರ ಜನನ ಕೂಡಾ ಇದೇ ರೀತಿ ಅಲ್ವಾ
ಆಗಿದ್ದು.
ಕುಮಾರ್ ನನ್ನು
ನೋಡಿದಾಗಲೆಲ್ಲಾ ಒಂಥರಾ ಹಿಂಸೆ ಆಗುತ್ತಿತ್ತು. ಅವನನ್ನು ಬೇರೆ ಊರಿಗೆ ವರ್ಗಾಯಿಸಿ ಆ ಜಾಗಕ್ಕೆ
ಬೇರೊಬ್ಬ ಡ್ರೈವರ್ ನನ್ನು ಬದಲಾಯಿಸಿದೆ. ಸ್ವಲ್ಪ ದಿನ ಅವಳ ಕಣ್ಣು ತಪ್ಪಿಸಿ ಓಡಾಡಿದೆ. ಅದನ್ನು
ಅವಳಿಂದ ಸಹಿಸಲಾಗುತ್ತಿರಲಿಲ್ಲ. ತುಂಬಾ ಕಷ್ಟ ಪಡುತ್ತಿದ್ದಳು. ಬಸುರಿ ಹುಡುಗಿ ನಾನು ಹೀಗೆ
ಮಾಡೋದು ಸರೀನಾ. ನಾನೂ ದೂರ ಮಾಡಿದ್ರೆ ಅವಳಿಗೆ ಯಾರಿದ್ದಾರೆ. ಮನಸ್ಸು ತಿಳಿಯಾಗಿ ಮನೆಗೆ ಬಂದವನೇ
ಅವಳನ್ನು ಅಪ್ಪಿಕೊಂಡು ಸಮಾಧಾನಪಡಿಸಿದೆ. ಡಾಕ್ಟರಲ್ಲಿ ಕರೆದುಕೊಂಡು ಹೋದೆ. ನಾನು, ಅವಳು ಹಾಗೂ
ಅವನು ಮೂವರು ಬಿಟ್ಟರೆ ಬೇರಾರಿಗೂ ಸತ್ಯ ಗೊತ್ತಾಗಲಿಲ್ಲ. ಗೊತ್ತಾಗೋದೂ ಇಲ್ಲ. ಗೊತ್ತಾಗೋದೂ ಬೇಡ.
ಇಂದು ನಾನು, ನನ್ನ ಹೆಂಡತಿ ಹಾಗೂ ನನ್ನ ಮಗ ನಮ್ಮ ಚಿಕ್ಕ ಸಂಸಾರ ತುಂಬಾ ಚೆನ್ನಾಗಿದೆ. ಯಾರ
ದೃಷ್ಟಿಯೂ ತಾಗದೆ ಇರಲಿ.
*****
No comments:
Post a Comment