ಇತ್ತೀಚೆಗೆ ಎಲ್ಲಾ
ಬ್ಲೌಸುಗಳೂ ತುಂಬಾ ಬಿಗಿಯುತ್ತಿತ್ತು. ನಾನೇನೂ ದಪ್ಪ ಆಗಿರಲಿಲ್ಲ. ಮೊದಲಿದ್ದ ಹಾಗೇ ಇದ್ದೆ.
ಆದರೆ ಬ್ಲೌಸ್ ಯಾಕೆ ಟೈಟ್ ಆಗುತ್ತಿದೆ ಅರ್ಥವಾಗಲಿಲ್ಲ. ಬ್ಲೌಸ್ ಕಳಚಿ ಕನ್ನಡಿ ಮುಂದೆ ನಿಂತೆ. ದಷ್ಟಪುಷ್ಟವಾದ
ಸ್ತನಗಳು. ಬಲಗೈಯನ್ನು ಮೇಲಕ್ಕೆತ್ತಿ ಎಡಗೈಯಿಂದ ಬಲ ಸ್ತನವನ್ನೂ, ಎಡಗೈಯನ್ನು ಮೇಲಕ್ಕೆತ್ತಿ
ಬಲಗೈಯಿಂದ ಎಡ ಸ್ತನವನ್ನೂ ಒತ್ತಿ ಒತ್ತಿ ನೋಡಲಾರಂಭಿಸಿದೆ. ಏನೂ ಗೊತ್ತಾಗಲಿಲ್ಲ.
ಒಂದು ದಿನ ಎಡಗೈ
ಎತ್ತಲಾಗದಷ್ಟು ನೋವಾಗಲಾರಂಭಿಸಿತು. ಡಾಕ್ಟರಲ್ಲಿ ಹೋದಾಗ ಸ್ತನ ಕ್ಯಾನ್ಸರ್ ಇರುವುದು
ಗೊತ್ತಾಯಿತು. 3-4 ಡಾಕ್ಟರನ್ನು ಕನ್ಸಲ್ಟ್
ಮಾಡಿದೆವು. ಎಲ್ಲಾ ಕಡೆ ಒಂದೇ ರಿಸಲ್ಟ್. ಕೊನೆಗೆ ಬೆಂಗಳೂರು ಅನ್ಕಾಲಜಿ ಆಸ್ಪತ್ರೆಯಲ್ಲಿ
ಅಡ್ಮಿಟ್ ಆದೆ. ಮುಲಾಜಿಲ್ಲದೆ ಎಡಸ್ತನವನ್ನು ಕತ್ತರಿಸಿ ಹಾಕಿದರು. ಅಂದು ನಾನು ಅನುಭವಿಸಿದ ನೋವು,
ಸಂಕಟ ಯಾರಿಗೂ ಬೇಡ. ಆಮೇಲೆ ತಿಂಗಳಿಗೊಂದರಂತೆ ಒಟ್ಟು 6 ಕಿಮೋ ತೆಗೆದುಕೊಳ್ಳಬೇಕು ಅಂದ್ರು. ಅದರಂತೆ
ತಿಂಗಳಿಗೊಮ್ಮೆ ಕಿಮೋ ತಗೊಳ್ಳಲು ಆರಂಭಿಸಿದೆ. 3-4 ಕಿಮೋ ತಗೊಳ್ಳೊವರೆಗೂ ಸರಿಯಾಗೇ ಇದ್ದೆ. ಆಮೇಲೆ ಕಿಮೋ
ತಗೊಳ್ಳಲು ಆಸ್ಪತ್ರೆಗೆ ಹೋಗ್ಬೇಕು ಅಂದ್ರೆ ಚಳಿ ಸುರುವಾಗುತ್ತಿತ್ತು. ಕಿಮೋ ತಗೊಂಡ ಒಂದು ವಾರ
ತುಂಬಾ ಹಿಂಸೆ ಆಗುತ್ತಿತ್ತು. ಏನು ತಗೊಂಡರೂ ವಾಂತಿ ಆಗುತ್ತಿತ್ತು. ಒಂದು ದಿನ ತಲೆಗೆ ಸ್ನಾನ
ಮಾಡಿ ಬಂದು ತಲೆ ಒರೆಸಿದ್ರೆ ಕೂದಲೆಲ್ಲಾ ಟವೆಲ್ ನಲ್ಲಿ ಬಂದಿತ್ತು. ನಾನು ಬೋಡಿ ಆಗಿದ್ದೆ. 6 ರಿಂದ
8 ಕಿಮೋ ಆಯಿತು. ಇನ್ನೂ 4 ಕಿಮೋ ತಗೋಬೇಕು ಅಂದ್ರು. ಔಷಧಿಯ ಪರಿಣಾಮ ಮೈಯೆಲ್ಲಾ ಕಪ್ಪಾಗಿತ್ತು
ಜೊತೆಗೆ ಗುಳ್ಳೆಗಳು. ತಲೆ ಹುಬ್ಬು ಕಣ್ಣು ರೆಪ್ಪೆ ಎಲ್ಲೂ ಕೂದಲಿನ ಸುಳಿವಿಲ್ಲ. ಕನ್ನಡಿ ಮುಂದೆ
ನಿಂತುಕೊಳ್ಳಲೂ ಭಯಪಡುವಂತಾಯಿತು. ಒಂದೊಮ್ಮೆ ಕಾಲೇಜಿಗೆ ಹೋಗುತ್ತಿರಬೇಕಾದರೆ ಹುಡುಗರ ಹಿಂಡೇ
ಹಿಂದಿನಿಂದ ಬರುತ್ತಿತ್ತು. ಸ್ನೇಹಿತೆಯರೆಲ್ಲ ಏನು ಸೆಕ್ಸಿ ಆಗಿದ್ದೀಯ ಕಣೆ ಅಂತ
ರೇಗಿಸುತ್ತಿದ್ದರು. ನನಗಾಗ ಹೆಮ್ಮೆ ಅನಿಸುತ್ತಿತ್ತು. ಅವರುಗಳು ಒಳಗೊಳಗೆ ಕುರುಬುತ್ತಿದ್ದರು. ಅದೆಲ್ಲಾ
ಒಮ್ಮೆ ಕಣ್ಣ ಮುಂದೆ ಹಾದು ಹೋಯಿತು.
ಅಪ್ಪನನ್ನು ಕಳಕೊಂಡ ಅಮ್ಮನಿಗೆ
ಇಳಿವಯಸ್ಸಿನಲ್ಲಿ ನಾನು ಸೇವೆ ಮಾಡಬೇಕಾಗಿದ್ದ ಸಮಯ ಅವಳಿಂದ ಸೇವೆ ಮಾಡಿಸಿಕೊಳ್ಳಬೇಕಾಗಿ
ಬಂದಿದ್ದು ನನ್ನ ದುರಾದೃಷ್ಟ. ನನ್ನನ್ನು ನೋಡಿಕೊಳ್ಳುವುದರ ಜೊತೆಗೆ ವಿಷಯ ತಿಳಿದು ನನ್ನನ್ನು
ನೋಡಲೆಂದು ಊರಿನಿಂದ ಬರುತ್ತಿದ್ದ ಸಂಬಂಧಿಕರನ್ನೂ ಸುಧಾರಿಸಬೇಕಿತ್ತು. ನನಗೆ ಅಳಲು ಕಣ್ಣಲ್ಲಿ
ನೀರು ಕೂಡಾ ಬತ್ತಿ ಹೋಗಿತ್ತು. ಎಲ್ಲಿತ್ತು ಈ ಹಾಳು ಕಾಯಿಲೆ. ಎಷ್ಟು ಜನರಿಗೆ ನನ್ನಿಂದ ತೊಂದರೆ.
ಅದರ ಬದಲು ಹಾರ್ಟ್ ಅಟ್ಯಾಕ್ ಆದ್ರು ಆಗಬಾರದಿತ್ತಾ ಅನ್ನಿಸುತ್ತಿತ್ತು.
ಆ ಸಮಯದಲ್ಲಿ ಬಂದವಳು
ರಾಜೇಶ್ವರಿ. ಸುಮಾರು 12 ವರ್ಷಗಳ ಹಿಂದೆ ಅವಳೂ ಕೂಡಾ ಇದೇ ಕಾಯಿಲೆಯಿಂದ ನರಳುತ್ತಿದ್ದವಳು. ಆದರೆ
ಅವಳಿಗೆ ಸಾಂತ್ವನ ಹೇಳುವವರಾಗಲಿ ಸೇವೆ ಮಾಡುವವರಾಗಲಿ ಯಾರೂ ಇರಲಿಲ್ಲ. ಅವಳಿಗೆ ಇದ್ದುದು ಒಂದೇ
ಅದು ವಿಲ್ ಪವರ್. ಕಾಯಿಲೆಯಿಂದ ಗುಣಮುಖಳಾಗುತ್ತಿದ್ದಂತೆ ಅವಳು ನಿರ್ಧರಿಸಿದ್ದಳು. ಈ
ಕಾಯಿಲೆಯಿಂದ ನರಳುವ ಯಾರಿಗಾದರೂ ತನ್ನಿಂದಾದ ಸಹಾಯ ಮಾಡಬೇಕು ಎಂದು. ಯಾರಿಗಾದರೂ ಈ ಕಾಯಿಲೆ ಇರುವ
ವಿಷಯ ತಿಳಿದ ತಕ್ಷಣ ಎಷ್ಟೇ ದೂರವಾದ್ರೂ ಸರಿ ಅವರಲ್ಲಿಗೆ ಹೋಗಿ ಸಾಂತ್ವನ ಹೇಳುತ್ತಿದ್ದಳು.
ತನ್ನಿಂದಾದ ಸಹಾಯ ಮಾಡುತ್ತಿದ್ದಳು. ವಿಷಯ ತಿಳಿದು ನನ್ನಲ್ಲಿಗೂ ಹುಡುಕಿಕೊಂಡು ಬಂದು ತನ್ನ
ಅನುಭವವನ್ನು ಹೇಳಿದಾಗ, ಎಲ್ಲಾ ಮುಗಿದು ಹೋಯಿತು ಎಂದು ಆತ್ಮವಿಶ್ವಾಸ ಕಳೆದುಕೊಂಡಂತಿದ್ದ ನನ್ನಲ್ಲೂ
ಕೊಂಚ ಬದಲಾವಣೆ ಆಗಲಾರಂಭಿಸಿತು. ನನ್ನಲ್ಲಿನ ಬದಲಾವಣೆ ಕಂಡು ಅಮ್ಮನಿಗೂ ಕೊಂಚ ಹಾಯೆನಿಸಿತ್ತು.
ಇಂದು ಸಂಪೂರ್ಣವಾಗಿ
ಹುಷಾರಾಗಿದ್ದೇನೆ. ಇಂದು ಕೂಡಾ ಬ್ಲೌಸ್ ಕಳಚಿ ಕನ್ನಡಿ ಮುಂದೆ ನಿಂತಿದ್ದೇನೆ. 8 ವರ್ಷದ ಮಗಳು
ನೋಡಿದವಳೇ ಬೆಚ್ಚಿ ಯಾಕಮ್ಮಾ ಹೀಗಿದೆ ನಿನ್ನ ಮೊಮ್ಮ ಏನಾಯ್ತಮ್ಮ ಎಂದು ಅಳಲಾರಂಭಿಸಿದಳು. ನಾನು
ಅವಳನ್ನು ತಬ್ಬಿಕೊಂಡವಳೇ ಅಳಬೇಡ ಕಂದಾ, ಅದರ ಮೇಲೆ ಗಾಯ ಆಗಿತ್ತು ಅದಕ್ಕೆ ಅದನ್ನ ಕಟ್
ಮಾಡಿದ್ದಾರೆ. ಸ್ವಲ್ಪ ದಿನ ಆದ ಮೇಲೆ ಬರುತ್ತೆ ಅಂತ ಸಮಾಧಾನಪಡಿಸಿದೆ. ಅಂದಿನಿಂದ ನಾನು ಕೂಡಾ
ರಾಜೇಶ್ವರಿಯ ಹಾದಿ ಹಿಡಿದೆ. ಯಾರಿಗಾದರೂ ಈ ಕಾಯಿಲೆ ಇರುವ ವಿಷಯ ತಿಳಿದಲ್ಲಿ ಹೋಗಿ ಅವರಲ್ಲಿ
ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಈ ಕಾಯಿಲೆ ಬಂದ್ರೆ ಸತ್ತೇ ಹೋಗುತ್ತಾರೆ ಎಂಬ ತಪ್ಪು ಕಲ್ಪನೆಯನ್ನು
ಹೋಗಲಾಡಿಸಲು ಪ್ರಾರಂಭಿಸಿದೆ. 40 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಮಮೋಗ್ರಫಿ
ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದೆ. ಈಗ
ನನ್ನಲ್ಲಿ ನನಗೆ ತೃಪ್ತಿ ಇದೆ. ಆತ್ಮವಿಶ್ವಾಸ ಒಂದಿದ್ದಲ್ಲಿ ಜೀವನದಲ್ಲಿ ಏನನ್ನಾದರೂ
ಗೆಲ್ಲಬಹುದು. ಆದರೂ ಕನ್ನಡಿ ಮುಂದೆ ನಿಂತಾಗಲೆಲ್ಲಾ ದೇವರಲ್ಲಿ ಬೇಡಿಕೊಳ್ಳುತ್ತೇನೆ ಈ ಕಾಯಿಲೆ
ಯಾರಿಗೂ ಬಾರದಿರಲಿ.
*****
No comments:
Post a Comment