ತಕ್ಷಣ ನೋಡಿದಾಗ ಅದೊಂದು
ಮರದ ಕೊರಡಿಗೆ ಬಿಳಿ ಬಟ್ಟೆ ಹೊದಿಸಿದಂತೆ ಕಾಣುತ್ತಿತ್ತು. ಆದರೆ, ಅದೊಂದು
ಹೆಣ. ಸುಮಾರು 5 ಅಥವಾ 6 ವಯಸ್ಸಿನ ಮಗುವಿನ ಹೆಣ. ಮುಖ ಮಾತ್ರ ಕಾಣುವಂತೆ ಅದರ ಮೇಲೆ ಬಿಳಿ ಬಟ್ಟೆ
ಹೊದಿಸಿದ್ದರು. ಮುಖ ಕಪ್ಪುಗಟ್ಟಿತ್ತು. ಅದು ಯಾವಾಗ ಸತ್ತಿತ್ತೋ ದೇವರೇ ಬಲ್ಲ. ಕಣ್ಣುಗುಡ್ಡೆ
ಈಚೆ ಬಂದಿತ್ತು. ಕಣ್ಣು ಮುಚ್ಚಿರಲಿಲ್ಲ. ಸಾವಿನ ಕ್ಷಣ ತುಂಬಾ ಒದ್ದಾಡಿರಬೇಕು. ಕೈಕಾಲುಗಳು ಸೆಟೆದು
ನಿಂತಿದ್ದವು. ನೋಡಲು ತುಂಬಾ ಸಂಕಟವಾಗುತ್ತಿತ್ತು. ಎಲ್ಲರ ಕಣ್ಣಲ್ಲೂ ನೀರು. ಮಗುವಿನ ತಾಯಿಗಾಗಿ
ಕಾಯುತ್ತಿದ್ದರು. ಅವಳು ತುಂಬು ಗರ್ಭಿಣಿ. ಹೆರಿಗೆಗೆಂದು ತಾಯಿ ಮನೆಗೆ ಹೋಗಿದ್ದಳು. ಅವಳಿಗೆ
ಎರಡು ಗಂಡು ಮಕ್ಕಳು. ಒಂದು ಈಗ ಸತ್ತು ಹೋದ ದೊಡ್ಡ ಮಗ. ಇನ್ನೊಬ್ಬ ಮೂರು ವರ್ಷದ ಮಗ. ಈಗ ಮೂರನೇ
ಮಗುವಿಗೆ ಗರ್ಭಿಣಿ.
ಹುಟ್ಟುವಾಗ ಮಗು
ಚೆನ್ನಾಗಿಯೇ ಇತ್ತು. ಓಡಾಡಿಕೊಂಡಿದ್ದ ಮಗುವಿಗೆ ಒಂದು ವರ್ಷವಾದಾಗ ಒಂದು ದಿನ ವಿಪರೀತ ಜ್ವರ
ಬಂದಿತ್ತು. ಡಾಕ್ಟರ್ ಮಗುವಿಗೆ ಇಂಜೆಕ್ಷನ್ ಚುಚ್ಚಿದ್ದರು ಅಷ್ಟೆ. ಅಲ್ಲಿಯವರೆಗೆ ಚೆನ್ನಾಗಿಯೇ
ಇದ್ದ ಮಗು ಆಮೇಲೆ ಉಸಿರಾಡುವುದು ಒಂದನ್ನು ಬಿಟ್ಟು ಬೇರೆ ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ.
ಅದೊಂದು ಜೀವಂತ ಶವವಾಗಿ ಬಿಟ್ಟಿತ್ತು. ಮಗು ಮೊದಲಿನಂತಾಗಬಹುದು ಎಂದು ಕಂಡ ಕಂಡ ಡಾಕ್ಟರುಗಳಲ್ಲಿ
ಹೋಗಿ ಟ್ರೀಟ್ ಮೆಂಟ್ ಕೊಡಿಸಿದರು. ಕಂಡ ಕಂಡ ದೇವಸ್ಥಾನಗಳಿಗೆ ಹೋದರು. ಏನೂ ಪ್ರಯೋಜನವಾಗಲಿಲ್ಲ.
ಮಗುವಿಗೆ ಎರಡು
ವರ್ಷವಾಗುತ್ತಿದ್ದಂತೆ ಅವಳು ಪುನ: ಗರ್ಭಿಣಿಯಾಗಿದ್ದಳು. ಇಬ್ಬರೂ ಕೆಲಸಕ್ಕೆ
ಹೋಗುತ್ತಿದ್ದುದರಿಂದ ಮನಸ್ಸಿಲ್ಲದ ಮನಸ್ಸಿನಿಂದ ಮಗುವನ್ನು ಆಶ್ರಮಕ್ಕೆ ಸೇರಿಸಿದರು. ಆ ಸೇವಾ
ಸಂಸ್ಥೆಯ ಮುಖ್ಯಸ್ಥೆ ಇಂತಹ ಒಂದು ಮಗುವನ್ನು ಕಳೆದುಕೊಂಡ ದು:ಖದಲ್ಲಿ ಮಗುವಿನ ನೆನಪಾರ್ಥ ಈ
ಸಂಸ್ಥೆಯನ್ನು ಪ್ರಾರಂಬಿಸಿದ್ದರು. ಅನುಕೂಲಸ್ಥರಾಗಿದ್ದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ತಿಂಗಳಿಗೆ
ಇಷ್ಟು ದುಡ್ಡು ಅಂತ ತೆಗೆದುಕೊಳ್ಳುತ್ತಿದ್ದರು. ತೀರಾ ಬಡವರಿದ್ದಲ್ಲಿ ಉಚಿತವಾಗಿಯೇ
ನೋಡಿಕೊಳ್ಳುತ್ತಿದ್ದರು. ಇವರು ಮಗುವನ್ನು ಆ ಸೇವಾ ಸಂಸ್ಥೆಯಲ್ಲಿ ಬಿಟ್ಟು ತಿಂಗಳಿಗೊಮ್ಮೆ
ನೋಡಿಕೊಂಡು ಬರುತ್ತಿದ್ದರು. ತಿಂಗಳು ಕಳೆಯುತ್ತಿದ್ದಂತೆ ಇನ್ನೊಂದು ಗಂಡುಮಗುವಿನ ತಾಯಿಯಾದಳು. ಈ
ಮಗುವಿನ ಆರೈಕೆಯಲ್ಲಿ ದೊಡ್ಡ ಮಗನ ಕಡೆಗೆ ಗಮನ ಕಡಿಮೆಯಾಗತೊಡಗಿತು. ತಿಂಗಳಿಗೊಮ್ಮೆ ಆಶ್ರಮಕ್ಕೆ
ಹೋಗುತ್ತಿದ್ದವರು ಮೂರು ತಿಂಗಳಿಗೊಮ್ಮೆ ಅಥವಾ ನಾಲ್ಕು ತಿಂಗಳಿಗೊಮ್ಮೆ ಹೋಗಲು ಶುರುಮಾಡಿದರು.
ಕೊನೆಗೆ ಅದೂ ಕಡಿಮೆಯಾಯಿತು. ದೊಡ್ಡ ಮಗನ ಮೇಲಿದ್ದ ಪ್ರೀತಿ ವಾತ್ಸಲ್ಯ ಎಲ್ಲಾ ಚಿಕ್ಕ ಮಗನ ಕಡೆಗೆ
ಹರಿಯತೊಡಗಿತು.
ಈ ಮಧ್ಯೆ ಮೂರನೆ ಮಗುವಿಗೆ
ಗರ್ಭಿಣಿಯಾದಳು. ಸರ್ಕಾರಿ ಕೆಲಸದಲ್ಲಿದ್ದುದರಿಂದ ಎರಡು ಜೀವಂತ ಮಕ್ಕಳಿದ್ದಲ್ಲಿ ಮೂರನೆಯ
ಮಗುವಿಗೆ ಹೆರಿಗೆ ರಜೆ, ವೈದ್ಯಕೀಯ ಮರುಪಾವತಿ ಯಾವ ಸೌಲಭ್ಯವೂ ಸಿಗೋದಿಲ್ಲ. ಅವಳು
ಯೋಚಿಸತೊಡಗಿದಳು. ಆ ಮಗು ಇದ್ದರೂ ಒಂದೆ ಸತ್ತರೂ ಒಂದೇ. ಈಗಾಗಲೇ ಅದು ಜೀವಂತ ಶವ. ಆಶ್ರಮಕ್ಕೆ
ಮಕ್ಕಳನ್ನು ನೋಡಲು ಪ್ರತಿದಿನ ಡಾಕ್ಟರ್ ಬರುತ್ತಿದ್ದರು. ಒಂದು ದಿನ ಮಗುವನ್ನು ಎತ್ತಿಕೊಂಡು
ಆಶ್ರಮಕ್ಕೆ ಹೋಗಿ ಡಾಕ್ಟರನ್ನು ಭೇಟಿ ಮಾಡಿದಳು. ಆಶ್ರಮದಲ್ಲಿದ್ದ ಮಗನಿಗೆ ದಯಾಮರಣ ನೀಡುವಂತೆ
ಕೋರಿದಳು. ಹೊಟ್ಟೆಯಲ್ಲೊಂದು ಮಗು, ಕಂಕುಳಲ್ಲೊಂದು ಮಗು ಡಾಕ್ಟರಿಗೆ ಏನನ್ನಿಸಿತೋ ಯೋಚಿಸಲು
ಸ್ವಲ್ಪ ಕಾಲಾವಕಾಶ ಕೇಳಿದರು.
ಮಗು ಸತ್ತು ಹೋಗಿತ್ತು.
ನೋಡಲು ಬಂದ ಎಲ್ಲರ ಕಣ್ಣಲ್ಲೂ ನೀರು. ಆದರೆ ಆ ತಾಯಿ ಮಾತ್ರ ಭಾವನೆಯನ್ನು ಕಳೆದುಕೊಂಡಂತಿದ್ದಳು.
ಯಾರೋ ಅನ್ನುತ್ತಿದ್ದರು ‘’ಅತ್ತು ಬಿಡು ಮಗೂ, ಗರ್ಭಿಣಿ ಹೆಂಗಸು ಮನಸ್ಸಲ್ಲೇ ಅದುಮಿಟ್ಟುಕೊಂಡರೆ
ಕಷ್ಟ’’ ಅಂತ. ಏನು ಮಾಡಿದರೂ ಕಣ್ಣಲ್ಲಿ ಒಂದು ತೊಟ್ಟೂ ನೀರು ಬರಲಿಲ್ಲ. ಕಾರಣ ಅವಳಿಗೆ ಮಾತ್ರ
ಗೊತ್ತಿತ್ತು. ಸ್ವಲ್ಪ ದಿನಗಳ ತರುವಾಯ ಮೂರನೇ ಮಗುವಿನ
ತಾಯಿಯಾದಳು. ಅಲ್ಲಲ್ಲ ಎರಡನೇ ಮಗು.
*****