ಮೂರು ಹೊತ್ತು ಓದು ಓದು ಅಂತ ತಲೆ ತಿನ್ತಾರೆ. ಮಾಡೋಕೆ ಇವ್ರಿಗೆ
ಬೇರೇನೂ ಕೆಲ್ಸ ಇಲ್ವಾ. ಇವತ್ತಂತೂ ಯಾವತ್ತೂ ನನ್ನ ಮೇಲೆ ಕೈಮಾಡದಿದ್ದ ಅಪ್ಪ ಕೂಡಾ ಅಮ್ಮನ ಮಾತು
ಕೇಳ್ಕೊಂಡು ಒಂದೇಟು ಹೊಡೆದೇ ಬಿಟ್ರು. ನಂಗಂತೂ
ಸಖತ್ತಾಗಿ ಕೋಪ ಬಂದಿತ್ತು. ಏನು ಅಂದ್ಕೊಂಡಿದ್ದಾರೆ ಇವ್ರೆಲ್ಲ ನನ್ನ. ಪ್ರಪಂಚದಲ್ಲಿ ಓದೋದು ಬಿಟ್ರೆ ಬೇರೇನೂ ಇಲ್ವಾ.
ಇವ್ರೆಲ್ಲಾ ಓದಿ ಕಡಿದು ಕಟ್ಟೆ ಹಾಕಿರೋದು ನಂಗೊತ್ತಿಲ್ವಾ. ಅವ್ನು ನೋಡು ಅಷ್ಟು ಮಾರ್ಕ್
ತಗೊಂಡಿದ್ದಾನೆ. ಇವ್ನು ನೋಡು ಇಷ್ಟು ಮಾರ್ಕ್ ತಗೊಂಡಿದ್ದಾನೆ. ನೀನೂ ಇದ್ದೀಯಾ..
ಕೇಳಿ ಕೇಳಿ ತಲೆ ಚಿಟ್ಟು ಹಿಡಿದು ಹೋಗ್ತಾ ಇದೆ. ಮಾಡ್ತೀನಿ
ಇವ್ರಿಗೆ ಚೆನ್ನಾಗಿ ಬುದ್ಧಿ ಕಲಿಸ್ತೀನಿ ಅಂದುಕೊಂಡು ರಾತ್ರಿ ಊಟ ಮಾಡದೇನೆ ಮಲಗಿಬಿಟ್ಟೆ.
ಬೆಳಿಗ್ಗೆ ಹೊಟ್ಟೆ ಚುರುಗುಟ್ಟುತ್ತಿತ್ತು. ಯಾವಾಗ ತಿಂಡಿಗೆ ಕರೀತಾಳೆ ಅಂತ ಓರೆಕಣ್ಣಿನಿಂದ
ಅಮ್ಮನನ್ನು ನೋಡುತ್ತಲೇ ಇದ್ದೆ. ಹುಸಿಮುನಿಸಿನಿಂದಲೇ ಅಮ್ಮ ಮಾಡಿಟ್ಟ ಪೂರಿ ಸಾಗು ಚೆನ್ನಾಗೇ
ಹೊಡೆದೆ. ಅಮ್ಮನೂ ಬಿಗುಮಾನದಿಂದ ಮಾತಾಡಿಸಲಿಲ್ಲ.
ಸ್ಕೂಲ್ ಗೆ ಯೂನಿಫಾರಂ ಹಾಕುವಾಗ ಷರ್ಟ್ ಹಾಕೋಕೆ ಮುಂಚೆ ಒಳಗೆ ಒಂದು ಟಿ-ಷರ್ಟ್ ಹಾಕ್ಕೊಂಡೆ.
ಮಾಮೂಲಿನಂತೆಯೇ ಸ್ಕೂಲ್ ಗೆ ಹೊರಟೆ. ಸಂಜೆ ಸ್ಕೂಲ್ ಬಿಟ್ಟಾಕ್ಷಣ ಯಾರಿಗೂ ಸಂಶಯ ಬರದಿರಲೆಂದು
ಮಾಮೂಲಿನಂತೆಯೇ ಎಲ್ಲರಿಗೂ ಬೈ ಬೈ ಹೇಳಿ ಹೊರಟೆ. ಒಬ್ಬನೇ ಹೋಗಲು ಭಯವಾಗಿ ಹಳೆಯ ಮನೆಯ ಹತ್ತಿರದ
ಫ್ರೆಂಡ್ ಸ್ಕೂಲ್ ಹತ್ತಿರ ಹೋಗಿ ಅವನನ್ನೂ ಕರೆದುಕೊಂಡು ಹೊರಟೆ. ಯೂನಿಫಾರಂ ಷರ್ಟ್ ಬಿಚ್ಚಿ
ಬ್ಯಾಗ್ ಒಳಗೆ ಹಾಕಿದೆ. ಮನೆಯಿಂದ ಬರುತ್ತಾ ಅಮ್ಮ ಆಗಾಗ್ಗ ಕೊಡುತ್ತಿದ್ದ ಪಾಕೆಟ್ ಮನಿ
ತೆಗೆದುಕೊಂಡು ಬಂದಿದ್ದೆ. ಇಬ್ಬರೂ ಪಾನಿಪುರಿ, ಮಸಾಲೆಪುರಿ, ಬೇಲ್ ಪುರಿ ಎಲ್ಲಾ ಒಂದೊಂದು
ಪ್ಲೇಟ್ ಹೊಡೆದೆವು. ಸಮಯ ಹೋಗ್ತಾನೇ ಇಲ್ಲ. ಹತ್ತಿರದಲ್ಲಿದ್ದ ಪಾರ್ಕ್ ನಲ್ಲಿ ಸ್ವಲ್ಪ ಹೊತ್ತು
ಕಳೆದೆವು. ನಂತರ ಇಬ್ಬರೂ ಸೆಕೆಂಡ್ ಷೋ ಕನ್ನಡ ಸಿನೆಮಾ ನೋಡಲು ಥಿಯೇಟರ್ ನಲ್ಲಿ ಹೋಗಿ ಕುಳಿತೆವು.
ಜೋಷ್ ಫಿಲಂ. ಥತ್ ತೆರೀಕೆ ಇಲ್ಲೂ ಇದೇ ಕಥೇನಾ.
ನೋಡಲು ಮನಸ್ಸಾಗಲಿಲ್ಲ.
ಕಣ್ಮುಚ್ಚಿ ನಿಧಾನವಾಗಿ ಯೋಚಿಸುತ್ತಾ ಕುಳಿತೆ. ಏನೋ ಒಂಥರಾ ಭಯ,
ಆತಂಕ, ಹೊಟ್ಟೆಯಲ್ಲಿ ತಳಮಳ ಆಗಲು ಶುರುವಾಯಿತು. ದು:ಖ ಉಮ್ಮಳಿಸಿ ಬರಲಾರಂಭಿಸಿತು. ಇದ್ರಲ್ಲಿ
ಅಪ್ಪ ಅಮ್ಮಂದು ಏನು ತಪ್ಪಿದೆ. ಮಗ ಚೆನ್ನಾಗಿ ಓದಲಿ ಅಂತ ಅವರು ಆಸೆ ಪಡೋದು ತಪ್ಪಾ. ನನಗೋಸ್ಕರ
ಎಷ್ಟೆಲ್ಲ ಕಷ್ಟಪಡ್ತಾರೆ ಒಂದೇಟು ಹಾಕುವ ಅಧಿಕಾರಾನೂ ಅವ್ರಿಗೆ ಇಲ್ವಾ. ಇನ್ನೇನು ಪ್ರಿಪರೇಟರಿ
ಎಕ್ಸಾಮ್ ಹತ್ತಿರ ಬರ್ತಾ ಇದೆ. ನಾನು ಹೆಚ್ಚು ಅಂಕ ತಗೊಂಡ್ರೆ ನನಗೆ, ಸ್ಕೂಲ್ ಗೆ, ಅಪ್ಪ
ಅಮ್ಮಂಗೆ ಎಲ್ಲರಿಗೂ ಹೆಮ್ಮೆ ಅಲ್ವಾ. ಮುಂದೆ ಯೋಚಿಸಲಾಗಲಿಲ್ಲ. ಮನೆಯಲ್ಲಿ ಎಷ್ಟು ಗಲಾಟೆ
ಬಿದ್ದಿರಬಹುದು. ಒಂದು ಕ್ಷಣ ಅಳುತ್ತಿರುವ ಅಮ್ಮನ ಮುಖ ಕಣ್ಮುಂದೆ ಸುಳಿಯಿತು. ಅಪ್ಪ ಎಲ್ಲೆಲ್ಲಿ
ನನ್ನನ್ನು ಹುಡುಕುತ್ತಿರಬಹುದು. ಸ್ಕೂಲ್ ಹತ್ತಿರ, ಟ್ಯೂಷನ್ ಕ್ಲಾಸ್ ಹತ್ತಿರ, ಫ್ರೆಂಡ್ಸ್
ಹತ್ತಿರ ಎಲ್ಲಾ ವಿಚಾರಿಸಿ ಸುಳಿವು ಸಿಗದಿದ್ದಾಗ ಎಷ್ಟು ಆತಂಕ ಆಗಿರಬಹುದು. ಛೆ. ನಾನೆಂತಹ ಮಗ. ನನ್ಮೇಲೆ ಎಷ್ಟು ಆಸೆ
ಇಟ್ಟುಕೊಂಡಿದ್ದರು. ಸಂಜೆ ಸ್ಕೂಲಿಂದ ಬರ್ತಾ ಇದ್ದ ಹಾಗೆ ಮಗ ಹಸಿದಿರುತ್ತಾನೆ ಅಂತ ಬಿಸಿಬಿಸಿ
ಬಜ್ಜಿ, ಬೋಂಡಾ ಮಾಡಿ ಕಾಯುತ್ತಿದ್ದ ಅಮ್ಮ ಕಣ್ಮುಂದೆ ಬಂದಳು. ಅಮ್ಮಾ ನನ್ನನ್ನು ಕ್ಷಮಿಸಮ್ಮಾ.
ದಿನಾ ಟ್ಯೂಷನ್ ನಿಂದ ಮಗ ನಡ್ಕೊಂಡು ಸುಸ್ತಾಗಿ ಬರುತ್ತಾನಂತ ಸ್ಕೂಟರ್ ನಲ್ಲಿ ಕಾಯುತ್ತಿದ್ದ
ಅಪ್ಪ ಕಣ್ಮುಂದೆ ಬಂದರು. ನನ್ನನ್ನ ಕ್ಷಮಿಸ್ತೀಯಾ ಅಪ್ಪಾ. ಇನ್ಯಾವತ್ತೂ ಇಂತಹ ತಪ್ಪು
ಮಾಡೋದಿಲ್ಲ. ಮನೆ ಬಿಟ್ಟು ಹೊರಡುವಾಗ ಇದ್ದ ಜೋಷ್ ಎಲ್ಲ ಝರ್ ಅಂತ ಇಳಿದಿತ್ತು.
ಮತ್ತೆ ಅಲ್ಲಿ ಕುಳಿತುಕೊಳ್ಳಲಾಗಲಿಲ್ಲ. ಬ್ಯಾಗ್ ತಗಲಾಕಿಕೊಂಡು
ಎದ್ದು ಹೊರಗೋಡಿದೆ. ಜೊತೇಗಿದ್ದ ಸ್ನೇಹಿತನೂ ನನ್ನ ಹಿಂದೆ ಒಡೋಡಿ ಬರಲಾರಂಭಿಸಿದ. ಬಹುಷ: ಅವನಿಗೂ
ನನ್ನ ತರಹಾನೇ ಅನ್ನಿಸಿರಬಹುದೇನೋ. ಟೆಲಿಫೋನ್ ಬೂತ್ ಕಂಡಾಕ್ಷಣ ಮನೆಗೆ ಡಯಲ್ ಮಾಡಲಾರಂಭಿಸಿದೆ.
ಫೋನ್ ಗೇ ಕಾಯುತ್ತಿದ್ದಂತೆ ಕುಳಿತ ಅಮ್ಮನ ಸ್ವರ ಕೇಳುತ್ತಿದ್ದಂತೆ ಸ್ವರ ಹೊರಡಲಿಲ್ಲ.
ಮೆಜೆಸ್ಟಿಕ್ ನಲ್ಲಿ ಇದ್ದೇನೆ. ಬರುತ್ತಿದ್ದೇನೆ ಅಂತ ಹೇಳಿ ಫೋನ್ ಇಟ್ಟುಬಿಟ್ಟೆ. ಯಾವಾಗ ಮನೆ
ಸೇರ್ತೀನೋ ಅಂತ ಚಡಪಡಿಸಲಾರಂಭಿಸಿದೆ. ಕ್ಷಣವೂ ಯುಗವೆನಿಸುತ್ತಿತ್ತು. ಅತ್ತ ಕಡೆಯಿಂದ ಅಮ್ಮ
ಅಳುತ್ತಿರುವ ಸ್ವರ ಕಿವಿಯಲ್ಲಿ ಗುಂಯ್ ಗುಡುತ್ತಲೇ ಇತ್ತು.