Thursday, 6 June 2013

ಕುರೂಪಿ


ಯಾಕೋ ಅವನಿಗೂ ಸೌಂದರ್ಯಕ್ಕೂ ಆಗಿಬರುತ್ತಿಲ್ಲ ಅಂತ ಕಾಣ್ಸುತ್ತೆ. ಅಮ್ಮನಿಗೆ ವನು ಮತ್ತು ಅಕ್ಕ ಇಬ್ಬರು ಮಕ್ಕಳು. ಅಕ್ಕನ ವಯಸ್ಸು 30ರ ಹತ್ತಿರ ಬರುತ್ತಿದ್ದರೂ ಮದುವೆಯಾಗುವ ಯಾವ ಸೂಚನೆಯೂ ಕಂಡು ಬರುತ್ತಿಲ್ಲ.. ಅವನಿಗೆ 28 ಇರಬಹುದು. ಒಂದು ಎದುರು ಬದುರು ಅಂದರೆ ಒಂದು ತರೋದು ಒಂದು ಕೊಡೋ ಸಂಬಂಧ ಬಂದಿತ್ತು. ಅಮ್ಮ ಹೇಳುತ್ತಿದ್ದರು ಹುಡುಗಿ ನೋಡಲು ಅಷ್ಟು ಚೆನ್ನಾಗಿಲ್ಲ ಆದರೆ ಏನು ಮಾಡೋದು ನಮ್ಮ ಹುಡುಗಿ ಆಚೆ ಹೋಗಬೇಕಾದ್ರೆ ಒಪ್ಪಲೇ ಬೇಕು ಅಂತ. ಗಂಡನನ್ನು ಕಳಕೊಂಡ ಅಮ್ಮನಿಗೆ ಒಮ್ಮೆ ಮಗಳ ಮದುವೆ ಮಾಡಿ ಮುಗಿಸಿದ್ದರೆ ಸಾಕಾಗಿತ್ತು. ಬೇರೆ ಉಪಾಯವಿಲ್ಲದೆ ಹುಡುಗಿಯ ಮುಖವನ್ನೂ ನೋಡದೆ ಅವನು ಅಕ್ಕನಿಗಾಗಿ ಮದುವೆಗೆ ಒಪ್ಪಿದ್ದ. ಹುಡುಗಿ ಮನೆಯಲ್ಲೂ ಇದೇ ಸಮಸ್ಯೆ. ಆ ಹುಡುಗ ಕೂಡಾ ತಂಗಿಗೋಸ್ಕರ 30 ಅವನ ಅಕ್ಕನನ್ನು ಮದುವೆಯಾಗಲು ಒಪ್ಪಿದ್ದ.  ಯಾವುದೇ ಸಂಬಂಧ ಬಂದರೂ ಆಗುತ್ತಿರಲಿಲ್ಲ. ಕೊನೆಗೂ ಅಕ್ಕನ ಮದುವೆ ತನ್ನಿಂದ ಆಗುವಂತೆ ಆಯಿತಲ್ಲ ಎಂದು ದೊಡ್ಡ ತ್ಯಾಗಿ ಅನ್ನುವಂತೆ ಅವನು ಬೀಗುತ್ತಿದ್ದ.

 ಮದುವೆಯ ಸಿದ್ಧತೆ ನಡೆದಿತ್ತು. ಎರಡೂ ಮನೆಯವರು ಖರ್ಚನ್ನು ಅರ್ಧ ಅರ್ಧ ಹಂಚಿಕೊಳ್ಳುವುದಾಗಿ ಮಾತಾಯಿತು. ಎರಡು ಮಂಟಪ ಹಾಕಲಾಗಿತ್ತು. ಗಂಡಿನ ಕಡೆಯವರು ಹೆಣ್ಣಿನ ಕಡೆಯವರು ಅಂತ ಏನೂ ಇರಲಿಲ್ಲ. ಎಲ್ಲರೂ ಓಡಾಡುತ್ತಿದ್ದರು. ಅಕ್ಕ ಹಿರಿಯಳಾಗಿದ್ದರಿಂದ ಅವಳ ಮದುವೆ ಮೊದಲು ಆಯಿತು. ನಂತರ ಹತ್ತು ನಿಮಿಷ ಬಿಟ್ಟು ಅವನ  ಮದುವೆ. ಅಂತರಪಟ ಸರಿಯುತ್ತಿದ್ದಂತೆ ಅವನ ಉತ್ಸಾಹವೆಲ್ಲ ಜರ್ರನೆ ಇಳಿಯಿತು. ಹುಡುಗಿ ಚೆನ್ನಾಗಿಲ್ಲ ಅಂತ ಅಮ್ಮ ಹೇಳಿದ್ದರು. ಆದ್ರೆ ಇಷ್ಟು ಕೆಟ್ಟದಾಗಿ ಅಸಹ್ಯವಾಗಿ ಇರಬಹುದು ಅಂತ ಅವನು ಊಹಿಸಿರಲಿಲ್ಲ. ಸಣಕಲು ದೇಹ, ಇದ್ದಲಿನಂತಹ ಬಣ್ಣ ಗೂನು ಬೆನ್ನು ಜೊತೆಗೆ ಹಲ್ಲುಬ್ಬು. ಯಾಂತ್ರಿಕವಾಗಿ ಮದುವೆ ಏನೋ ನಡೆಯಿತು. ಆದರೆ ನಂತರ ಏನೂ ನಡೆಯಲಿಲ್ಲ.

ಇವರ ನಡುವಿನ ಸಂಬಂಧದ ಅರಿವಾಗಿ ಒಂದು ದಿನ ಅಮ್ಮನೂ ಕೊರಗಿ ಕೊರಗಿ ಸತ್ತಳು. ಅವನು ಆಫೀಸಿನಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಗೀತಾ ಜೊತೆ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದ. ಅವಳಿಗಿನ್ನೂ ಮದುವೆಯಾಗಿರಲಿಲ್ಲ. ಅವಳ ಕೊತೆಗಿನ ಸ್ನೇಹ ಪ್ರೇಮವಾಗಿ ಮಾರ್ಪಟ್ಟಿತ್ತು.  ಅವನ ವಿಷಯ ಎಲ್ಲಾ ತಿಳಿದಿದ್ದರೂ ಅವಳು ಅವನನ್ನು ಪ್ರೇಮಿಸಿದ್ದಳು. ಕೊನೆಗೆ ಒಬ್ಬರನ್ನೊಬ್ಬರು ಬಿಡಲಾರದ ಸ್ಥಿತಿ ತಲುಪಿದರು. ಸಂಜೆ ಸುತ್ತಾಡಲು ಹೋಗೋದು ಮನೆಗೆ ದಿನಾ ತಡವಾಗಿ ಹೋಗೋದು ಅಭ್ಯಾಸವಾಗಿ ಹೋಯಿತು.

 ಪಾಪ ಆ ಹುಡುಗೀದು ಏನು ತಪ್ಪು. ಅವಳೇನಾದರೂ ಬಯಸಿ ಕುರೂಪಿಯಾಗಿದ್ದಳೆ ಎಂಬ ಯೋನೆಯನ್ನೂ ಮಾಡದೆ ಡೈವೋರ್ಸ್ ಗೆ ಅಪ್ಲೈ ಮಾಡಿದ. ವಿಷಯ ತಿಳಿದ ಅವರ ಮನೆಯಲ್ಲಿ ಅವನ ಅಕ್ಕನಿಗೆ ಕಿರುಕುಳ ಕೊಡಲು ಆರಂಭಿಸಿದ್ದರು. ಕೊನೆಗೆ ಒಂದು ದಿನ ಮಗಳಿಗಿಲ್ಲದ ಬಾಳು ನಿನಗೂ ಇಲ್ಲ ಎಂದು ಬಸಿರಾಗಿದ್ದ ಅಕ್ಕನನ್ನು ತವರಿಗೆ ದಬ್ಬಿದರು. ಅವನ ಅಕ್ಕ ಗಂಡು ಮಗುವಿಗೆ ಜನ್ಮ ನೀಡಿದಳು. ಅಕ್ಕನನ್ನೂ ಅವಳ ಮಗನನ್ನೂ ನೋಡಿಕೊಳ್ಳುವ ಜವಾಬ್ದಾರಿ ಕೂಡಾ ಅವನದಾಯಿತು. ಈ ಹುಡುಗಿ ಮೊದಲೇ ತವರು ಸೇರಿದ್ದಳು.  ಅವಳಿಂದ ಡೈವೋರ್ಸ್ ಸಿಕ್ಕಿ ಗೀತಾ ಜೊತೆ ಮದವೇನೂ ಆಯಿತು. ಒಬ್ಬ ಮಗಳೂ ಹುಟ್ಟಿದಳು.

ಇದ್ದಕ್ಕಿದ್ದಂತೆ ಗೀತಾಗೆ ತೊನ್ನು ರೋಗ ಆವರಿಸಿತು. ಕೈಯಲ್ಲಿ ಕಾಲಲ್ಲಿ ಪ್ರಾರಂಭವಾದ ರೋಗ ಮುಖದವರೆಗೂ ಹರಡಿತು. ಯಾವ ಔಷಧಿಯೂ ನಾಟಲಿಲ್ಲ. ಕೈಯನ್ನು ತುಂಬುತೋಳಿನ ಬ್ಲೌಸ್ ಧರಿಸಿ ಸೆರಗು ಹೊದ್ದುಕೊಂಡು ಮುಚ್ಚಲು ಪ್ರಯತ್ತಿಸುತ್ತಿದ್ದಳು. ಆದರೆ ಮುಖದ ತುಂಬಾ ಹರಡಿದ್ದ ತೊನ್ನು ರೋಗವನ್ನು ಯಾವುದರಿಂದ ಮರೆಮಾಚಲು ಸಾಧ್ಯ? ನಾಳೆ ಮಗಳನ್ನು ಯಾರು ಮದುವೆಯಾಗುತ್ತಾರೆ ಎಂದು ಅವಳು ಕೊರಗಲು ಪ್ರಾರಂಭಿಸಿದಳು. ಸಣಕಲು ಕಡ್ಡಿ, ಮುಖದ ತುಂಬಾ ಬಿಳಿ ಕಲೆ. ಅವನಿಗೆ ಅವಳ ಮೇಲೆ ಅಸಹ್ಯ ಮೂಡಲು ಪ್ರಾರಂಭವಾಯಿತು. ಏನು ಮಾಡಲಿ ಇವಳಿಗೂ ಡೈವೋರ್ಸ್ ಕೊಡಲಾ. ಅವಳಿಗೆ ಕಪ್ಪೆಂದು ಡೈವೋರ್ಸ್ ಕೊಟ್ಟಿದ್ದಾಯಿತು. ಇವಳಿಗೆ ಬಿಳಿ ಜಾಸ್ತಿ ಆಯಿತು ಅಂತ ಡೈವೋರ್ಸ್ ಕೊಡಲಾ. ಮಗಳು ಕಣ್ಮುಂದೆ ಬಂದಳು. ಮಗಳನ್ನು ತುಂಬಾ ಪ್ರೀತಿಸುತ್ತಿದ್ದ ಅವನು ಡೈವೋರ್ಸ್ ಯೋಚನೆಯನ್ನು ಕೈಬಿಟ್ಟ.

ಕಾಯಾ ವಾಚಾ ಮನಸಾ ಸಪ್ತಪದಿ ತುಳಿದು ಒಂದು ದಿನವೂ ಅವಳ ಜೊತೆ ಸಂಸಾರ ಮಾಡಲಿಲ್ಲ. ಅವಳ ಜೀವನವನ್ನೇ ನಾಶ ಮಾಡಿದ ತನಗೆ ದೇವರು ತಕ್ಕ ಶಿಕ್ಷೆಯನ್ನೇ ಕೊಟ್ಟಿದ್ದಾನೆ. ಅನುಭವಿಸಲೇಬೇಕು. ಕೊನೇ ಪಕ್ಷ ತನ್ನಿಂದ ಹಾಳಾದ ಅವಳ ಜೀವನವನ್ನು ಕಿಂಚಿತ್ತಾದರೂ ಸರಿಪಡಿಸುವ ಯೋಚನೆಯನ್ನಾದರೂ ಮಾಡಬೇಕಿತ್ತು. ಅದನ್ನೂ ಮಾಡಲಿಲ್ಲ ಎಂದು ಆ ಹುಡುಗಿಯನ್ನು ನೆನೆದು ನಿಟ್ಟುಸಿರು ಬಿಟ್ಟ. ಜೀವನದಲ್ಲಿ ಸೌಂದರ್ಯವೇ ಖಂಡಿತಾ ಮುಖ್ಯವಲ್ಲ ಎಂದು ಪಶ್ಚಾತಾಪ ಪಟ್ಟ. ಅವಳಿಗೆ ಡೈವೋರ್ಸ್ ಕೊಟ್ಟು ತಪ್ಪು ಮಾಡಿದೆ. ಈಗ ಇವಳನ್ನಾದರೂ ಚೆನ್ನಾಗಿ ನೋಡಿಕೊಳ್ಳಬೇಕು. ಗಂಡನಾದವನ ಆಸರೆ ಇದ್ದಲ್ಲಿ ಅವಳ ಮನೋಸ್ಥೈರ್ಯ ಹೆಚ್ಚಾಗುವುದು. ತಾನೂ ಕೂಡಾ ಅಸಡ್ಡೆ ತೋರಿಸಿದಲ್ಲಿ ಇವಳನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಬಾರದು. ಅವಳಲ್ಲಿ ಮಾಡಿದ ತಪ್ಪನ್ನು ಇವಳಲ್ಲಿ ಸರಿಪಡಿಸಿಕೊಳ್ಳಬೇಕು ಎಂಬ ಯೋಚನೆ ಬಂದಾಗ ಮನಸ್ಸು ಹಗುರವಾಯಿತು.

*****

Tuesday, 22 January 2013

ಪುನರಪಿ ಜನನಂ....


ಪುನರಪಿ ಜನನಂ ಪುನರಪಿ ಮರಣಂ ಇದು ಸೃಷ್ಟಿಯ ನಿಯಮ.

ಮೃತ್ಯು ನಂತರ ಜೀವಾತ್ಮವು ಸೂಕ್ಷ್ಮ ಶರೀರ ಧಾರಣೆ ಮಾಡಿ ಪಾಪ ಪುಣ್ಯಗಳ ಫಲವಾಗಿ ಸ್ವರ್ಗ ಅಥವಾ ನರಕವನ್ನು ಅನುಭವಿಸುತ್ತದೆ. ನಂತರ ಅದರ ಪುನರ್ಜನ್ಮವಾಗುತ್ತದೆ ಅಥವಾ ಮೋಕ್ಷ ಪ್ರಾಪ್ತಿಯಾಗುತ್ತದೆ. ಕೇವಲ ಮನುಷ್ಯನಿಗೆ ಮಾತ್ರ ಮರಣ ನಂತರ ಸೂಕ್ಷ್ಮ ಶರೀರ ಪ್ರಾಪ್ತಿಯಾಗುತ್ತದೆ. ಇಹಲೋಕ ಹಾಗೂ ಪರಲೋಕದಲ್ಲಿಯೂ ಶುಭ ಮತ್ತು ಅಶುಭ ಕರ್ಮಗಳ ಶುಭ ಮತ್ತು ಅಶುಭ ಫಲಗಳನ್ನು ಮನುಷ್ಯ ಅನುಭವಿಸುತ್ತಾನೆ.

ಸ್ತ್ರೀ ಮತ್ತು ಪುರುಷನ ಸಂಭೋಗದಿಂದ ತಾಯಿಯ ಗರ್ಭದಲ್ಲಿ ಜೀವಿಯ ಉತ್ಪತ್ತಿಯಾಗುತ್ತದೆ. ದೈವ ಪ್ರೇರಣೆಯಿಂದ ಆ ಜೀವಿಗೆ ಶರೀರ ಪ್ರಾಪ್ತಿ ಹೊಂದಲು ಒಂದು ತಿಂಗಳಲ್ಲಿ ಶಿರ, ಎರಡು ತಿಂಗಳಲ್ಲಿ ತೋಳು ಇತ್ಯಾದಿ ಶರೀರದ ಅಂಗಗಳು, 3ನೇ ತಿಂಗಳಲ್ಲಿ ಉಗುರು, ರೋಮ, ಅಸ್ತಿ, ಚರ್ಮ ಹಾಗೂ ಲಿಂಗ, 4ನೇ ತಿಂಗಳಲ್ಲಿ ರಕ್ತಮಾಂಸ, 5ನೇ ತಿಂಗಳಲ್ಲಿ ಹಸಿವು, ದಾಹ ಜನ್ಮ ತಳೆಯುತ್ತವೆ. 6ನೇ ತಿಂಗಳಲ್ಲಿ ಜರಾಯುವಿನಲ್ಲಿ ಸುತ್ತಿಕೊಂಡ ಜೀವ ತಾಯಿಯ ಎಡಗರ್ಭದಲ್ಲಿ ತಿರುಗುತ್ತದೆ. (ಜರಾಯು ಅಂದ್ರೆ ಬೆಳವಣಿಗೆಯಾಗುತ್ತಿರುವ ಭ್ರೂಣವನ್ನು ಗರ್ಭಾಶಯದ ಭಿತ್ತಿಗೆ ಜೋಡಿಸುವ ಒಂದು ಅಂಗ. ಇದು ತಾಯಿಯಿಂದ ರಕ್ತದ ಪೂರೈಕೆ, ವ್ಯರ್ಥ ಪದಾರ್ಥಗಳ ವಿಸರ್ಜನೆ ಹಾಗೂ ಅನಿಲದ ವಿನಿಮಯ ಮಾಡುತ್ತದೆ).

ತಾಯಿಯಿಂದ ತಿಂದ ಕುಡಿದ ಅನ್ನಾದಿಗಳಿಂದ ಆ ಜೀವವು ಮಲಮೂತ್ರದ ದುರ್ಗಂಧಯುಕ್ತ ಗುಂಡಿಯ ರೂಪದ ಗರ್ಭಾಶಯದಲ್ಲಿ ಮಲಗಿರುತ್ತದೆ. ಅಲ್ಲಿ ಹಸಿದ ಅನ್ಯ ಕ್ರಿಮಿಗಳಿಂದ ಆ ಜೀವಿಯ ಅಂಗಗಳು ಕಚ್ಚಲ್ಪಡುತ್ತದೆ. ತಾಯಿಯ ಮೂಲಕ ಸೇವಿಸಲ್ಪಡುವ ಒಗರು, ಉಪ್ಪು, ಖಾರ, ಹುಳಿ ಪದಾರ್ಥಗಳ ಅತಿ ಉತ್ತೇಜಕ ಸ್ಪರ್ಶದಿಂದ ಜೀವಿಯ ಎಲ್ಲಾ ಅಂಗಗಳಲ್ಲಿ ವೇದನೆ ಉಂಟಾಗುತ್ತದೆ. ಜರಾಯುವಿನಿಂದ ಸುತ್ತಿಕೊಂಡ ಆ ಜೀವ ಹೊರಗಿನಿಂದ ಕರುಳುಗಳಿಂದ ಆವರಿಸಲ್ಪಟ್ಟಿರುತ್ತದೆ. ಆ ಜೀವವು ತನ್ನ ಅಂಗಗಳಿಂದ ಚಲಿಸಲು ಅಸಮರ್ಥವಾಗಿ ಪಂಜರದಲ್ಲಿನ ಪಕ್ಷಿಯಂತೆ ತಾಯಿಯ ಉದರದಲ್ಲಿ ಶಿರವನ್ನು ಒತ್ತಿ ತಟಸ್ಥವಾಗಿರುತ್ತದೆ. ಭಗವಂತನ ಕೃಪೆಯಿಂದ ತನ್ನ ನೂರಾರು ಜನ್ಮಗಳ ಕರ್ಮಗಳನ್ನು ಸ್ವರಿಸುತ್ತ ಆ ಗರ್ಭಸ್ಥ ಜೀವ ನಿಟ್ಟುಸಿರು ಬಿಡುತ್ತದೆ. ಭಯಭೀತವಾಗಿ ಕೈಜೋಡಿಸಿ ತನ್ನನ್ನು ತಾಯಿಯ ಗರ್ಭದಲ್ಲಿ ಹಾಕಿದ ಭಗವಂತನ ಸ್ಮರಣೆ ಮಾಡುತ್ತದೆ. ಒಂದು ವೇಳೆ ಈ ಗರ್ಭವನ್ನು ದಾಟಿ ನಾನು ಹೊರಗೆ ಬಂದರೆ, ನಿನ್ನ ಚರಣ ಸೇವೆ ಮಾಡುವೆ ಮತ್ತು ಮುಕ್ತಿ ಪ್ರಾಪ್ತಿಯಾಗುವಂತಹ ಕಾರ್ಯದಲ್ಲಿ ತೊಡಗುವೆ. ಮಲಮೂತ್ರದ ಬಾವಿಯಲ್ಲಿ ಬಿದ್ದಿರುವ ಹಾಗೂ ಜಠರಾಗ್ನಿಯಿಂದ ದಗ್ಧನಾಗಿರುವ ನನ್ನನ್ನು ಒಂದು ಸಲ ಈ ಗರ್ಭವನ್ನು ದಾಟಿ ಹೊರಗೆ ಬರುವಂತೆ ಮಾಡು ಎಂದು ತನಗೆ ವಿಶೇಷ ಜ್ಞಾನವನ್ನು ನೀಡಿರುವ ಭಗವಂತನನ್ನು ಶರಣು ಹೋಗುತ್ತದೆ.

10ನೇ ತಿಂಗಳಲ್ಲಿ ಪ್ರಸೂತಿ ಮಾರ್ಗದ ದ್ವಾರದ ಕೆಳಗೆ ಶಿರ ಮಾಡಿ ಕೂಡಲೇ ಕೆಳಗೆ ಬೀಳಿಸಲಾದ ಆ ಜೀವ ಅತ್ಯಂತ ಕಠಿಣತೆಯಿಂದ ಹೊರಗೆ ಬರುತ್ತದೆ. ಆ ಸಮಯ ಅದಕ್ಕೆ ಉಸಿರಾಡಲು ಆಗುವುದಿಲ್ಲ ಹಾಗೂ ನೆನಪು ನಷ್ಟವಾಗಿ ಹೋಗುತ್ತದೆ. ಜ್ಞಾನ ನಷ್ಟವಾಗಿ ಹೋಗುವ ಕಾರಣ ಅತ್ಯಧಿಕ ರೋಧನ ಮಾಡತೊಡಗುತ್ತದೆ. ಜೀವಿ ಗರ್ಭದಿಂದ ಹೊರಬಂದಾಗ ವೈಷ್ಣವಿ ಮಾಯೆಯ ಸ್ವರ್ಶದಿಂದ ಎಲ್ಲವನ್ನೂ ಮರೆತುಬಿಡುತ್ತದೆ. ಮಾಯೆಯ ಹಿಡಿತದಲ್ಲಿ ಈ ಬದುಕನ್ನೇ ಶಾಶ್ವತ ಎಂದು ತಿಳಿದ ಜೀವಾತ್ಮ ಬದುಕಿನುದ್ದಕ್ಕೂ ತಪ್ಪುಗಳನ್ನು ಮಾಡುತ್ತಾ ಬರುತ್ತದೆ.

ಶಾಸ್ತ್ರಗಳು ಹೇಳುವಂತೆ ಭೂಮಿಯಲ್ಲಿ 84ಲಕ್ಷ ಯೋನಿಗಳಿವೆ. ಈ ಎಲ್ಲಾ ಯೋನಿಗಳಲ್ಲಿ ಜನ್ಮ ತಾಳಿದ ನಂತರ ಮನುಷ್ಯ ಜನ್ಮ ಪ್ರಾಪ್ತಿಯಾಗುತ್ತದೆ. ಪಂಚೇಂದ್ರಿಯಗಳು ಪರಿಪೂರ್ಣವಾಗಿದ್ದು, ರೂಪ, ರಸ, ಗಂಧ, ಸ್ಪರ್ಶ, ಶಬ್ಧಗಳನ್ನು ಅನುಭವಿಸುವ ಯೋಗ್ಯತೆ ಮನುಷ್ಯ ಜನ್ಮದಲ್ಲಿ ಮಾತ್ರ ಇರುತ್ತದೆ. ಮಾನವ ಜನ್ಮದ ಮಹತ್ವವನ್ನು ಅರಿತು ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯಗಳನ್ನು ಮೀರಿ ಬಾಳಿದರೆ ಪುನರಪಿ ಜನನಂ ಪುನರಪಿ ಮರಣಂ ಎಂಬ ಜನ್ಮಾಂತರದ ಬಂಧನದಿಂದ ಬಿಡಿಸಿಕೊಂಡು ಮೋಕ್ಷ ಸಾಧಿಸಬಹುದು. ಕರ್ಮಯೋಗ, ಭಕ್ತಿಯೋಗ ಹಾಗೂ ಜ್ಞಾನಯೋಗ ದಿಂದ ಇದು ಸಾಧ್ಯ.

(ಕೃಪೆ:ಗರುಡ ಪುರಾಣ)

*****

 

Friday, 11 January 2013

ಬದುಕಿನ ಪಾಠ


      ಎಲ್ಲಾ ಫ್ರೆಂಡ್ಸ್ ಹತ್ತಿರಾನೂ ಬೈಕ್ ಇದೆ.  ಬರ್ತಡೇ ಮುಂಚೆ ನನಗೆ ಬೈಕ್ ಕೊಡಿಸಲೇ ಬೇಕು ಎಂದು ಹಠ ಹಿಡಿದು ಬೈಕ್ ತೆಗೆಸಿಕೊಂಡಿದ್ದೆ. ನಮ್ಮದು ಮಧ್ಯಮ ವರ್ಗದ ಕುಟುಂಬ. ಅಪ್ಪ ಲೋನ್ ಮಾಡಿ ಬೈಕ್ ಕೊಡಿಸಿದ್ದರು. ಕಾಲೇಜಿಗೆ ರಜೆ ಇದ್ದ ಕಾರಣ ನಾಲ್ಕು ಬೈಕ್ ಗಳಲ್ಲಿ ಎಂಟು ಜನ ಜಾಲಿ ರೈಡ್ ಹೊರಟಿದ್ದೆವು. ಫಾಸ್ಟ್ ಆಗಿ ಬರುತ್ತಿದ್ದುದನ್ನು ನೋಡಿ ಪಿ.ಸಿ. ನಿಲ್ಲಿಸುವಂತೆ ಸೂಚಿಸಿದ. ಎರಡು ಬೈಕ್ ಗಳಲ್ಲಿ ಇದ್ದವರು ತಪ್ಪಿಸಿಕೊಂಡು ಮುಂದಕ್ಕೆ ಹೊರಟು ಹೋದರು. ನಾನು ಮತ್ತು ಇನ್ನೊಬ್ಬ ಫ್ರೆಂಡ್ ಸಿಕ್ಕಿ ಹಾಕಿಕೊಂಡೆವು. ಪಿ.ಸಿ. ಡಾಕ್ಯುಮೆಂಟ್ ತೋರಿಸಲು ಹೇಳಿದ. ಎಲ್ಲಾ ಕರೆಕ್ಟ್ ಆಗಿ ಇದ್ದುದರಿಂದ ಏನೂ ಮಾಡಲಾಗದೆ ಕೀ ಕಿತ್ತುಕೊಂಡ. ನಾವು ಕೀ ಯಾಕೆ ಕಿತ್ತುಕೊಳ್ಳುತ್ತೀರಿ ಎಂದು ಗಲಾಟೆ ಮಾಡಲು ಪ್ರಾರಂಭಿಸಿದೆವು. ಮುಂದೆ ಹೋಗಿದ್ದ ಫ್ರೆಂಡ್ಸ್ ಕೂಡಾ ಬೈಕ್ ನಿಲ್ಲಿಸಿ ಬಂದು ನಮ್ಮ ಜೊತೆ ಸೇರಿಕೊಂಡರು. ಎರಡು ಬೈಕ್ ಗಳನ್ನು ಸ್ಟೇಷನ್ ಗೆ ತಗೊಂಡು ಹೋದರು. ನಾಳೆ ಕೋರ್ಟಿಗೆ ಬನ್ನಿ ಎಂದು ಹೇಳಿ ನಮ್ಮನ್ನು ಕಳುಹಿಸಿಬಿಟ್ಟರು. ಬಸ್ ಹತ್ತಿ ಕುಳಿತವನೇ ಯೋಚಿಸತೊಡಗಿದೆ. ಅಪ್ಪ ಎಷ್ಟು ಕಷ್ಟಪಟ್ಟು ಬೈಕ್ ಕೊಡಿಸಿದ್ರು. ನಿಧಾನವಾಗಿ ಓಡಿಸು, ಹೆಲ್ಮೆಟ್ ಹಾಕ್ಕೊಂಡು ಹೋಗು. ಲೈಸೆನ್ಸ್ ಗಾಡಿಯಲ್ಲಿ ಇಟ್ಟುಕೋ ಅಂತ ಒಂದಿನಾನೂ ಬಿಡದೆ ಹೇಳುತ್ತಿದ್ದರೂ ನಾನು ಕಿವಿ ಮೇಲೆ ಹಾಕ್ಕೊಳ್ಳುತ್ತಿರಲಿಲ್ಲ.  ಮನೆಗೆ ಬಂದ ತಕ್ಷಣ ಅಳು ತಡೆಯಲಾಗಲಿಲ್ಲ. ಜೋರಾಗಿ ಅತ್ತುಬಿಟ್ಟೆ. ಅಪ್ಪ ಅಮ್ಮ ಇಬ್ಬರೂ ಗಾಬರಿಯಾಗಿ ಮೊದ್ಲು ಅಳೋದು ನಿಲ್ಸು ಏನಾಯ್ತು ಅಂತ ಹೇಳು ಗಾಡಿ ಎಲ್ಲಿ ಅಂತ ಕೇಳುತ್ತಿದ್ದರು. ಅಳುತ್ತಲೇ ವಿಷಯ ತಿಳಿಸಿದೆ. ಎಲ್ಲಾ ಸಮಸ್ಯೆಗೂ ಒಂದು ಪರಿಹಾರ ಇರುತ್ತೆ. ನಾಳೆ ಹೋಗಿ ನೋಡೋಣ ಈಗ ಊಟ ಮಾಡಿ ಮಲಕ್ಕೋ ಎಂದು ಸಮಾಧಾನಪಡಿಸಿದ್ರು.


      ಮರುದಿನ ಅಪ್ಪನ ಜೊತೆ ಸ್ಟೇಷನ್ ಗೆ ಹೋದೆ.  ಪಿ.ಸಿ. ಅಪ್ಪನಲ್ಲಿ ಹುಡುಗ್ರಿಗೆ ಸ್ವಲ್ಪ ಭಯ ಇರ್ಬೇಕು ಸರ್ ನಮ್ಗೇ ರೋಪ್ ಹಾಕ್ತಾರೆ. ರಿಕ್ವೆಸ್ಟ್ ಮಾಡಿದ್ರೆ ಬಿಡ್ತಿದ್ದೆವು. ಅದ್ಕೆ ಸ್ವಲ್ಪ ಹೆದರಿಸ್ಲಿಕ್ಕೆ ಹೀಗೆ ಮಾಡಿದೆವು. ಈಗ ಕೇಸ್ ಫೈಲ್ ಮಾಡಿ ಆಗಿದೆ. ಏನೂ ಮಾಡಲಿಕ್ಕೆ ಆಗೋದಿಲ್ಲ. ನೀವು ಒಂದು ಕೆಲ್ಸ ಮಾಡಿ ನನ್ಗೆ ಗೊತ್ತಿರೋ ಲಾಯರ್ ಒಬ್ರು ಇದ್ದಾರೆ ಅವರ ನಂಬರ್ ಕೋಡ್ತೀನಿ ಅವರನ್ನ ಮೀಟ್ ಮಾಡಿ ಅಂತ ಹೇಳಿ ನಂಬರ್ ಕೊಟ್ರು. ಲಾಯರ್ ಗೆ ಇದೆಲ್ಲ ಮಾಮೂಲು. ಕೋರ್ಟಿಗೆ ಕರ್ಕೊಂಡು ಹೋದ್ರು. ಹೋಗುವಾಗ ಒಂದಷ್ಟು ಬುದ್ಧಿಮಾತು ಹೇಳಿದ್ರು. ಕೋರ್ಟಲ್ಲಿ ನಮ್ಮನ್ನು ಕುಳಿತುಕೊಳ್ಳೋದಕ್ಕೆ ಹೇಳಿ ಒಳಗೆ ಹೋಗಿ ಏನೋ ಮಾತಾಡಿದ್ರು. ಮತ್ತೆ ಬಂದು ಎರಡು ಸಾವಿರ ಕೊಡಲು ಹೇಳಿದ್ರು. ಅಪ್ಪ ಮಾತಾಡದೆ ಎರಡು ಸಾವಿರ ಕೊಟ್ರು. ಮಧ್ಯಾಹ್ನ ಬಂದು ಗಾಡಿ ತಗೊಂಡು ಹೋಗಲು ಹೇಳಿದ್ರು. ಈ ಸಲ  ಬರ್ತಡೇ ಪಾರ್ಟಿಗೆ ಅಪ್ಪನ ಹತ್ರ ದುಡ್ಡು ಕೇಳಬಾರದು ಅಂತ ನಿರ್ಣಯ ಮಾಡಿಕೊಂಡೆ.  ಲಾಯರ್ ಪಿ.ಸಿ.ಗೆ ಪೋನ್ ನಲ್ಲಿ ಹೇಳುತ್ತಿದ್ದರು. ನಾಳೆಯಿಂದ ನೋಡ್ಕೊಂಡು ಸ್ವಲ್ಪ ಜೋರಾಗಿರೋ ಪಾರ್ಟಿಗಳ್ನ ಹಿಡ್ದು ಕಳುಹಿಸಪ್ಪ.

*****

 

Friday, 14 December 2012

ಸ್ನೇಹಿತ


     ಬೆಳಿಗ್ಗೆ ಸುಮಾರು 9.00 ಗಂಟೆ ಸಮಯ. ಆಫೀಸಿಗೆ ಹೋಗಲು ರೆಡಿಯಾಗುತ್ತಿದ್ದೆ. ಸಾಲ ವಸೂಲಾತಿ ವಾಹನ ಎಂದು ಬೋರ್ಡ್ ಹಾಕಿಕೊಂಡ ಒಂದು ಮೆಟಡೋರ್ ಮನೆಯ ಮುಂದೆ ಬಂದು ನಿಂತಿತು. ಮೂರು ನಾಲ್ಕು ಜನ ಇಳಿದು ಬಂದವರೇ ಮನೆಯೊಳಗೆ ನುಗ್ಗಿದರು. ಮೇಡಂ, ನಿಮ್ಮ ಯಜಮಾನರು ಒಬ್ಬರಿಗೆ ನಮ್ಮ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳಲು ಶೂರಿಟಿ ಹಾಕಿದ್ದಾರೆ. ಅವರು ಲೋನ್ ಕಟ್ಟಲಿಲ್ಲ. ಅದಕ್ಕೆ ನಿಮ್ಮ ಮನೆಯ ಹತ್ತಿರ ಬಂದಿದ್ದೇವೆ. ಇನ್ನು ಒಂದು ವಾರ ಬಿಟ್ಟು ಪುನ: ಬರುತ್ತೇವೆ. ಆಗ ಲೋನ್ ಕಂತು ಕಟ್ಟಿರಬೇಕು ಇಲ್ಲದಿದ್ದಲ್ಲಿ ನಿಮ್ಮ ಮನೆಯಲ್ಲಿರೋ ಸಾಮಾನನ್ನೆಲ್ಲ ಆಚೆ ಹಾಕಬೇಕಾಗುತ್ತದೆ ಎಂದು ಹೆದರಿಸಿದರು. ನನಗೆ ಒಮ್ಮೆಲೆ ಮೈ ಎಲ್ಲಾ ಉರಿದು ಹೋಯಿತು. ನೋಡ್ರಿ ಯಾರು ಲೋನ್ ತಗೊಂಡಿದ್ದಾರೋ ಅವರನ್ನು ಹೋಗಿ ಕೇಳಿ. ಇಲ್ಲಾಂದ್ರೆ ಶೂರಿಟಿ ಹಾಕಿರೋರನ್ನ ಹೋಗಿ ಕೇಳಿ. ಹೆಂಗಸರು ಮಾತ್ರ ಮನೇಲಿರೋ ಹೊತ್ನಲ್ಲಿ ಬಂದು ನಮ್ಮನ್ನು ಏನು ಕೇಳೋದು ಎಂದು ಜೋರು ಮಾಡಿದೆ. ನೆರೆಹೊರೆಯವರೆಲ್ಲ ಆಚೆ ಬಂದು ನೋಡುತ್ತಿದ್ದರು. ಯಾರಿಗೂ ಏನು ವಿಷಯ ಎಂದು ಗೊತ್ತಿಲ್ಲದೆ ಯಾರೂ ಮಾತಾಡಲು ಮುಂದೆ ಬರಲಿಲ್ಲ. ನನಗೇ ಗೊತ್ತಿರಲಿಲ್ಲ. ಇನ್ನು ಅವರಿಗೆ ಹೇಗೆ ಗೊತ್ತಾಗ್ಬೇಕು. ಮರ್ಯಾದೆಗೆ ಹೆದರೋ ಜನ ನಾವು. ತೀರಾ ಅವಮಾನವಾದಂತಾಗಿ ಕಣ್ಣಲ್ಲಿ ನೀರು ತುಂಬೋಕೆ ಶುರುವಾಯಿತು.

 

     ಲೋನ್ ತಗೊಂಡಿರೋ ಆ ಪುಣ್ಯಾತ್ಮನ್ನ ಕೇಳೋಕೆ ಹೋದ್ರೆ ಅವನು ಕೈಗೇ ಸಿಗೋದಿಲ್ಲ. ಇನ್ನು ಅವನ ಹೆಂಡತಿ ಹತ್ತಿರ ಕೇಳಿದ್ರೆ ನಾನೇನು ಮಾಡಲಿ ನನ್ನ ಹತ್ರ ಒಂದು ಪೈಸೇನೂ ಇಲ್ಲ. ಇದಕ್ಕೂ ಹೆಚ್ಚಾಗಿ ಫೋರ್ಸ್ ಮಾಡಿದ್ರೆ ಮೇಲಿಂದ ಬಿದ್ದು ಸತ್ತು ಹೋಗ್ತೀನಿ ಅಂತ ಹೆದರಿಸ್ತಾಳೆ. ಲೋನ್ ತಗೊಳ್ಳೋವಾಗ ಈ ಬುದ್ಧಿ ಎಲ್ಲಾ ಎಲ್ಲಿ ಹೋಗಿತ್ತೋ. ಇನ್ನು ಇನ್ನೊಬ್ಬ ಶೂರಿಟಿ ಹಾಕಿರೋರ ಮನೆ ಹತ್ರ ಹೋದ್ರೆ ನಮ್ಮಷ್ಟು ಗಾತ್ರದ ನಾಯಿನಾ ಛೂ ಬಿಡ್ತಾರೆ. ನೋಡ್ರಿ ಮೇಡಂ ನೀವು ಏನು ಮಾಡ್ತಿರೋ ನಮ್ಗೆ ಗೊತ್ತಿಲ್ಲ. ಪುನ: ಬರುವಾಗ ಪೋಲೀಸ್ ಜೊತೇಲಿ ಬರುತ್ತೇವೆ ಅಂತ ಹೆದರಿಸಿದ್ರು.  ನಂಗೂ ಯಾಕೋ ರೇಗೋಯ್ತು. ಯಾರೂ ನೋಡಿರದ ಪೋಲೀಸ್ ಕರಕೊಂಡು ಬನ್ನಿ ಹೋಗ್ರಿ ಅಂತ ದಬಾಯಿಸಿದೆ. ಸಿಕ್ಕಾಪಟ್ಟೆ ಟೆನ್ಶನ್ ಮಾಡ್ಕೊಂಡು ಲೋನ್ ತಗೊಂಡವ್ನಿಗೆ, ನಮ್ಮೆಜಮಾನ್ರಿಗೆ ಬಯ್ಕೋತಾ ಆಫೀಸಿಗೆ ಹೋದೆ.

 

     ಸಂಜೆ ಆಫೀಸ್ ನಿಂದ ಬಂದವಳೇ ಈ ವಿಷಯವನ್ನ ಮೊದಲೇ ನಂಗೆ ಯಾಕೆ ಹೇಳಲಿಲ್ಲ ಅಂತ ಯಜಮಾನರನ್ನ ಚೆನ್ನಾಗಿ ತರಾಟೆಗೆ ತಗೊಂಡೆ. ನೋಟೀಸು ಬಂದಿರೋ ವಿಷಯವನ್ನ ನನ್ನಿಂದ ಮುಚ್ಚಿಟ್ಟಿದ್ದರು. ಕೊನೆಗೆ ನೋಡ್ರೀ ಅದು ಎಷ್ಟು ಲೋನ್ ಅಂತ ಹೇಳಿ. ನಾನು ತಂದು ಕೊಡುತ್ತೀನಿ. ಮೊದಲು ಅದನ್ನು ಕಟ್ಟಿ. ಇನ್ನೊಂದು ಸಲ ಆ ಸಾಲ ವಸೂಲಾತಿ ವಾಹನ ನಮ್ಮ ಮನೆ ಮುಂದೆ ಬರಬಾರದು ಅಂತ ಹೇಳಿದೆ. ಕೊನೆಗೆ ನಾನು ದುಡ್ಡು ತಂದು ಕೊಟ್ಟಿದ್ದೂ ಆಯಿತು. ಅವರು ಕಟ್ಟಿದ್ದೂ ಆಯಿತು. ಅವರ ಸ್ನೇಹಿತ ಮಾತ್ರ ತಲೆಮರೆಸಿಕೊಂಡು ಸುತ್ತಾಡುತ್ತಲೇ ಇದ್ದ. ಸ್ನೇಹಿತರೇ ನಿಮಗೂ ಇಂತಹ ಅನುಭವವಾಗಿರಬಹುದು. ಇದ್ದರೆ ಇಂತಹ ಸ್ನೇಹಿತರಿರಬೇಕು ಅಲ್ವಾ?

*****

Wednesday, 12 September 2012

ಮಾಯೆ


ಒಂದು ದಿನ ನಾರದರು ನಾರಾಯಣನಲ್ಲಿ ಕೇಳಿದರು ಈ ‘ಮಾಯೆ’ ಅಂದರೇನು? ನಾರಾಯಣ ಏನೂ ಮಾತಾಡಲಿಲ್ಲ. ಒಂದು ಬಂಗಾರದ ಬಿಂದಿಗೆ ನೀಡಿ ಭೂಲೋಕಕ್ಕೆ ಹೋಗಿ ಇದರಲ್ಲಿ ಒಂದು ಬಿಂದಿಗೆ ನೀರು ತೆಗೆದುಕೊಂಡು ಬಾ ಎಂದು ಹೇಳಿದ. ನಾರದರಿಗೆ ಏನೂ ಅರ್ಥವಾಗಲಿಲ್ಲ. ಬಿಂದಿಗೆ ತೆಗೆದುಕೊಂಡು ಭೂಲೋಕಕ್ಕೆ ನಡೆದರು. ಇನ್ನೇನು ಕೊಳದಿಂದ ನೀರು ತೆಗೆದುಕೊಳ್ಳಬೇಕು ಅಷ್ಟರಲ್ಲಿ ರಂಭೆ ಮೇನಕೆಯರನ್ನು ಮೀರಿಸಿದ ಒಬ್ಬ ಕನ್ಯೆ ಬಿಂದಿಗೆ ಹಿಡ್ಕೊಂಡು ಬರೋದನ್ನ ನೋಡಿದರು. ಅಂತಹ ಸೌಂದರ್ಯವತಿಯನ್ನು ಅವರು ಯಾವತ್ತೂ ನೋಡಿರಲಿಲ್ಲ. ಯಾರೀ ಸುಂದರಿ ಅಂದುಕೊಂಡವರೇ ಬಿಟ್ಟ ಕಣ್ಣು ಬಿಟ್ಟಂತಯೇ ಒಂದೇ ಸಮನೆ ಅವಳನ್ನೇ ನೋಡಲಾರಂಭಿಸಿದರು. ಅವಳೂ ಕೂಡಾ ಇವರನ್ನು ನೋಡಿದಳು. ಮೊದಲ ನೋಟದಲ್ಲೇ ಪ್ರೇಮಾಂಕುರವಾಗಿ ಇಬ್ಬರೂ ಗಾಂಧರ್ವ ವಿವಾಹವಾದರು. ಇಬ್ಬರೂ ಒಂದು ಕುಟೀರ ಕಟ್ಟಿಕೊಂಡು ಸಂಸಾರ ಪ್ರಾರಂಭಿಸಿದರು. ಕ್ರಮೇಣ ಅವರಿಗೆ ಇಬ್ಬರು ಗಂಡುಮಕ್ಕಳಾದರು.

        ಒಂದು ದಿನ ನಾರದರು ವಾಯು ವಿಹಾರಕ್ಕೆಂದು ಹೆಂಡತಿ ಮಕ್ಕಳನ್ನು ಕರೆದುಕೊಂಡು ಸಮುದ್ರತೀರಕ್ಕೆ ಹೋದರು. ಮಕ್ಕಳು ಮರಳಲ್ಲಿ ಆಟವಾಡುತ್ತಿದ್ದರು. ನೋಡನೋಡುತ್ತಿದ್ದಂತೆಯೇ ಒಂದು ಅಲೆ ಬಂದು ಚಿಕ್ಕ ಮಗನನ್ನು ಎಳ್ಕೊಂಡು ಹೋಯಿತು. ಎಲ್ಲರೂ ಹೋ ಎಂದು ಕಿರುಚಾಡಿದರು. ಅವರ ಪತ್ನಿ ಒಂದೇ ಸಮನೆ ಅಳಲು ಪ್ರಾರಂಭಿಸಿದಳು. ಅಷ್ಟರಲ್ಲಿ ಇನ್ನೊಂದು ಅಲೆ ಬಂದು ಇನ್ನೊಬ್ಬ ಮಗನನ್ನೂ ಎಳ್ಕೊಂಡು ಹೋಯಿತು. ಈಗ ಅವರ ಅಳು ಮುಗಿಲು ಮುಟ್ಟುವಂತಿತ್ತು. ಪತ್ನಿಯನ್ನು ಸಮಾಧಾನ ಮಾಡುತ್ತಿದ್ದಂತೆಯೇ ಇನ್ನೊಂದು ಅಲೆ ಬಂದು ಅವಳನ್ನೂ ಎಳ್ಕೊಂಡು ಹೋಯಿತು. ನಾರದರಿಗೆ ಏನೂ ಮಾಡಲೂ ತೋಚಲಿಲ್ಲ. ಇನ್ನೂ ಇಲ್ಲಿಯೇ ಇದ್ದರೆ ನನ್ನನ್ನೂ ಅಲೆ ಬಂದು ಎಳ್ಕೊಂಡು ಹೋಗಬಹುದು ಅಂತ ಅಲ್ಲಿಂದ ನಿಧಾನವಾಗಿ ಎದ್ದು ಹೊರಟರು. ಆಗ ಅಲ್ಲಿ ನಾರಾಯಣ ಪ್ರತ್ಯಕ್ಷನಾಗಿ ಏನು ನಾರದ, ಒಂದು ಬಿಂದಿಗೆ ನೀರು ತರಲು ಇಷ್ಟು ಸಮಯವೇ ಎಂದು ಕೇಳಿದ. ನಾರದರು ಚಾಚೂ ಬಿಡದಂಗೆ ಎಲ್ಲಾ ಕಥೆಯನ್ನೂ ಹೇಳಿದರು. ನಾರಾಯಣ ನೀನು ನನ್ನಲ್ಲಿ ಮಾಯೆ ಎಂದರೇನು ಎಂದು ಕೇಳಿದೆ. ಆಗ ನಾನು ಹೇಳಲಿಲ್ಲ. ಈಗ ನಿನಗೆ ಗೊತ್ತಾಗಿರಬಹುದು. ಒಂದು ಬಿಂದಿಗೆ ನೀರು ತರಲು ಬಂದಾಗಿನಿಂದ ಇಲ್ಲಿಯವರೆಗೂ ನಿನ್ನ ಬದುಕಿನಲ್ಲಿ ಏನೇನು ನಡೆಯಿತೋ ಅದುವೇ ‘ಮಾಯೆ’ ಎಂದು ಹೇಳಿದ.

*****

Friday, 24 August 2012

ಮಾನವೀಯತೆ


ಪ್ರತಿ ಭಾನುವಾರ ನಾವು ಯೂನಿವರ್ಸಿಟಿ ಗ್ರೌಂಡ್ ನಲ್ಲಿ ಕ್ರಿಕೆಟ್ ಆಡಲು ಹೋಗುತ್ತಿದ್ದೆವು. ನಮ್ಮದು ಕಾಲೇಜು ಹುಡುಗರ ಟೀಮು. ಅದಕ್ಕೆ ನಾನು ಮುಖಂಡ. ಇನ್ನೊಂದು ವಾರಾಂತ್ಯ ಕಳೆಯಲು ಬರುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರುಗಳ ಟೀಮು. ಅದರ ಮುಖಂಡ ಐಬಿಎಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಆಜಾನುಬಾಹು. ಅವನ ಹೆಸರು ಕಾರ್ತಿಕ್. ನನಗೂ ಅವನಿಗೂ ಯಾವಾಗಲೂ ಎಣ್ಣೆ ಸೀಗೇಕಾಯಿ. ಒಮ್ಮೊಮ್ಮೆ ಕೈಕೈ ಮಿಲಾಯಿಸುವವರೆಗೂ ಕಿತ್ತಾಡುತ್ತಿದ್ದೆವು. ಅವರು ಸೀನಿಯರ್ ಎಂಬುದನ್ನೂ ಮರೆತು ಬಾಯಿಗೆ ಬಂದ ಹಾಗೆ ಬಯ್ಯುತ್ತಿದ್ದೆವು. ಒಟ್ಟಾರೆ ಅವರು ಪಾಕಿಸ್ತಾನ ನಾವು ಇಂಡಿಯಾ ಅನ್ನೋ ತರಹ ಆಡುತ್ತಿದ್ದೆವು.

       ಅಂದು ಕೂಡಾ ಕ್ರಿಕೆಟ್ ಆಡಲು ಬೆಳಿಗ್ಗೆ 6.00 ಗಂಟೆಗೇ ಟೀ ಕುಡಿದು ಮನೆ ಬಿಟ್ಟಿದ್ದೆ. ಮೊದಲ ಆಟ ನಾವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡೆವು. ಮೊದಲ ಮ್ಯಾಚ್ ನಲ್ಲಿ ನಾವೇ ಗೆದ್ದೆವು. ಇನ್ನೊಂದು ಮ್ಯಾಚ್ ಅವರು ಆಡುತ್ತಿದ್ದರು. ನಾವು ಫೀಲ್ಡಿಂಗ್ ಮಾಡುತ್ತಿದ್ದೆವು. ನಾನು ಬೌಂಡರಿ ಲೈನ್ ನಲ್ಲಿ ನಿಂತಿದ್ದೆ. ಕಾರ್ತಿಕ್ ಆಡುತ್ತಿದ್ದ. ನಮ್ಮ ಟೀಮಿನ ಎಲ್ಲರೂ ಕ್ಯಾಚ್ ಎಂದು ಕಿರುಚುತ್ತಾ ಗುಂಪುಗೂಡಿದರು. ನನಗೆ ಏನಾಗುತ್ತಿದೆ ಎಂದು ಗೊತ್ತಾಗಲಿಲ್ಲ. ಕಣ್ಣು ಮಂಜುಮಂಜಾಗುತ್ತಿತ್ತು. ಏನೂ ಕಾಣಿಸುತ್ತಿರಲಿಲ್ಲ. ನಾನು ಕಣ್ಣು ಕತ್ತಲಿಟ್ಟು ಬಿದ್ದುಬಿಟ್ಟಿದ್ದೆ. ಕಾರ್ತಿಕ್  ಔಟ್ ಆದ ಖುಷಿಯಲ್ಲಿ ನನ್ನನ್ನು ಯಾರೂ ಗಮನಿಸಲಿಲ್ಲ.

ಕಾರ್ತಿಕ್ ಓಡಿ ಬಂದವನೇ ನನ್ನನ್ನು ಎತ್ತಿ ತನ್ನ ತೊಡೆ ಮೇಲೆ ಮಲಗಿಸಿ ಮುಖಕ್ಕೆ ನೀರು ಹಾಕಿ ಗಾಳಿ ಬೀಸಿದ. ತನ್ನ ಕರ್ಚೀಪ್ ನಿಂದ ತರುಚಿದ ಗಾಯದಿಂದ ಒಸರುತ್ತಿದ್ದ ರಕ್ತವನ್ನು ಒರೆಸಿದ. ನಾನು ಕಣ್ಣು ಬಿಡುತ್ತಿದ್ದಂತೆ ನಾನು ಕಾರ್ತಿಕ್ ನ ತೊಡೆ ಮೇಲೆ ಮಲಗಿದ್ದೆ. ಎಲ್ಲಾ ವಿಷಯ ನಿಧಾನವಾಗಿ ತಿಳಿಯಿತು. ಎಲ್ಲರಿಗೂ ಮಂಕು ಕವಿದಂತಾಗಿ ಆಟವನ್ನು ನಿಲ್ಲಿಸಿ ಎಲ್ಲರೂ ಹೊರಟರು. ಕಾರ್ತಿಕ್ ಏನೂ ಆಗಿಲ್ಲ. ರೆಸ್ಟ್ ತಗೊ ಎಂದು ಹೇಳಿ ನನ್ನ ಬೆನ್ನು ನೇವರಿಸಿದ. ಸ್ನೇಹಿತ ಗಾಡಿಯಲ್ಲಿ ಮನೆವರೆಗೂ ಬಿಟ್ಟು ಹೋದ. ನಾನು ಮನೆಗೆ ಬಂದವನೇ ಅಮ್ಮನಲ್ಲಿ ಎಲ್ಲಾ ವಿಷಯವನ್ನು ಹೇಳಿದೆ. ಯಾವ ತಾಯಿ ಹೆತ್ತ ಮಗನೋ ಅವನ ಹೊಟ್ಟೆ ತಣ್ಣಗಿರಲಿ ಎಂದು ಅಮ್ಮ ಹರಸಿದಳು. ನನ್ನನು ಡಾಕ್ಟರಲ್ಲಿ ಕರಕೊಂಡುಹೋದಳು.

*****

Monday, 13 August 2012

ಆದಿತ್ಯ


ಕೆಲವು ಮಂದಿ ನಮಗೆ ಗೊತ್ತಿಲ್ಲದೇನೇ ನಮ್ಮ ಹೃದಯದಲ್ಲಿ ಸ್ಥಾನ ಪಡಕೊಂಡು ಬಿಡುತ್ತಾರೆ. ಅಂತಹವರಲ್ಲಿ ನನ್ನ ಹೃದಯದಲ್ಲಿ ಸ್ಥಾನ ಪಡಕೊಂಡ ಒಬ್ಬ ಹುಡುಗ ಆದಿತ್ಯ ನಾಡಿಗ್. ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ಸ್ಟಾರ್ ಸಿಂಗರ್ ಪ್ರೋಗ್ರಾಂ ನಲ್ಲಿ ಫೈನಲ್ ವರೆಗೂ ತಲುಪಿದ್ದ ಹುಡುಗ. ಅವನ ಒಂದು ಪ್ರೋಗ್ರಾಂ ಅನ್ನೂ ಬಿಡದೆ ನೋಡುತ್ತಿದ್ದೆ. ಪ್ರತಿ ದಿನ ನೋಡುವಾಗಲೂ ಆದಿತ್ಯ ಸೆಲೆಕ್ಟ್ ಆಗಲಿ ಎಂದು ದೇವರಲ್ಲಿ ಬೇಡುತ್ತಿದ್ದೆ. ಉಜ್ವಲ ಭವಿಷ್ಯವನ್ನು ಹೊಂದಿದ್ದ ಶಿವಮೊಗ್ಗದ ಹುಡುಗ ಕಳೆದ ನವೆಂಬರ್ ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಮೊದಲು ನಂಬಲಿಲ್ಲ. ನಿಜಾ ಎಂದು ಗೊತ್ತಾದಾಗ ಅಳುವನ್ನು ಹತ್ತಿಕ್ಕಲಾಗಲಿಲ್ಲ. ಯಾವ ತಾಯಿ ಹೆತ್ತ ಮಗನೋ. ಬಂಧು ಅಲ್ಲ ಬಳಗ ಅಲ್ಲ. ಮುಖತ: ಒಮ್ಮೆಯೂ ನೋಡಿಲ್ಲ. ಬರೀ ಟಿವಿ ಪ್ರೋಗ್ರಾಂನಲ್ಲಿ ನೋಡಿದ ಹುಡುಗ. ಆದರೆ, ಹೊಟ್ಟೆಯಲ್ಲಿ ಕರುಳು ಕಿವುಚಿದಂತೆ ವಿಪರೀತ ಸಂಕಟವಾಗುತ್ತಿತ್ತು. ಇನ್ನು ಅವನ ಹೆತ್ತವರನ್ನು ಆ ದೇವರೆ ಕಾಪಾಡಬೇಕು.

ಏನೇ ಆಗಲಿ ಆದಿತ್ಯ ನೀನು ಹೀಗೆ ಮಾಡಬಾರದಿತ್ತು. ಎಲ್ಲರೂ ನಿನ್ಮೇಲೆ ಎಷ್ಟು ಭರವಸೆ ಇಟ್ಟಿದ್ದರು. ನಂಬಿದ ಎಲ್ಲರಿಗೂ ಮೋಸ ಮಾಡಿಬಿಟ್ಟೆಯಲ್ಲ ಆದಿತ್ಯ. ಅಪ್ಪ ಹೇಳಿದ್ರಲ್ಲಿ ಏನು ತಪ್ಪಿತ್ತು  ಹೆತ್ತವರು ಯಾವಾಗಲೂ ಮಕ್ಕಳ ಒಳ್ಳೇದನ್ನೇ ಬಯಸೋದು. ನಾನಾಗಿದ್ದರೂ ಅದನ್ನೇ ಹೇಳುತ್ತಿದ್ದೆ. ಮೊದಲು ಡಿಗ್ರಿ ಕಂಪ್ಲೀಟ್ ಮಾಡು ಮತ್ತೆ ಏನಾದ್ರೂ ಮಾಡ್ಕೊ ಅಂತ. ಹೆತ್ತವರ ಸಂಕಟ ನಿಮ್ಗೆ ಹೇಗೆ ಗೊತ್ತಾಗ್ಬೇಕು ಸಾಯೋವರೆಗೂ ಕಣ್ಣೀರಲ್ಲಿ ಕೈ ತೊಳೆಯೋ ತರ ಮಾಡಿಬಿಟ್ಟೆಯಲ್ಲ. ಈಗ ಏನು ಸಾಧಿಸಿದೆ. ಒಂದು ವರ್ಷ ಕಾದಿದ್ದರೆ ಡಿಗ್ರಿನೂ ಕಂಪ್ಲೀಟ್ ಆಗುತ್ತಿತ್ತು. ಅವಕಾಶಾನೂ ಹುಡ್ಕೊಂಡು ಬರುತ್ತಿತ್ತು. ಆದರೆ ಅಲ್ಲೀವರೆಗೂ ಕಾಯೋ ತಾಳ್ಮೆ ನಿನಗಿರಲಿಲ್ಲವಲ್ಲ.

ಇಂತಹ ಘಟನೆಯಿಂದ ಹೆತ್ತವರು, ಮಕ್ಕಳು ಏನೇ ತಪ್ಪು ಮಾಡಿದ್ರೂ ಕೈ ಎತ್ತೋದಿರಲಿ ಜೋರು ಮಾಡೋಕೂ ಹೆದರೋ ಪರಿಸ್ಥಿತಿ ಬಂದಿದೆ ಗೊತ್ತಾ. ಏನಾದ್ರೂ ಮಾಡ್ಕೊಳ್ಳಲಿ ಕಣ್ಮುಂದೆ ಇದ್ರೆ ಸಾಕು ಅನ್ನೋ ಸ್ಥಿತಿ ತಲುಪಿದ್ದಾರೆ. ಇರೋದು ಒಂದು ತಪ್ಪಿದ್ರೆ ಎರಡು. ಮಾತೆತ್ತಿದ್ರೆ ಮನೆ ಬಿಟ್ಟು ಹೋಗ್ತೀನಿ ಇಲ್ಲಾ ಸೂಸೈಡ್ ಮಾಡ್ಕೋತ್ತೀನಿ ಅಂತ ಹೆದರಿಸಿದ್ರೆ ಪಾಪ ಅವ್ರು ತಾನೇ ಏನು ಮಾಡ್ತಾರೆ.

ಮೊನ್ನೆ ಮೊನ್ನೆ ಮಂಗಳೂರಲ್ಲಿ ಒಂದು ರೇವ್ ಪಾರ್ಟಿ ಹಗರಣ ನಡೆಯಿತು. ಕೊನೆಗೆ ಬೆರಳು ತೋರಿಸಿದ್ದು ಯಾರಿಗೆ ಗೊತ್ತಾ. ಅರೆಬರೆ ಬಟ್ಟೆ ಹಾಕ್ಕೊಂಡು ಪಾರ್ಟಿ ಮಾಡುತ್ತಿದ್ದರಲ್ಲ ಅವರ ಹೆತ್ತವರಿಗೆ. ಮೊದಲೇ ಅಪ್ಪ ಅಮ್ಮ ಹೊಡೆದಿದ್ರೆ ಈಗ ಯಾರಿಂದಲೋ ಏಟು ತಿನ್ಬೇಕಾಗಿತ್ತಾ. ಆ ತರಹ ಬಟ್ಟೆ ಹಾಕ್ಕೊಂಡು ಬಂದಿದ್ರಲ್ಲ ಅವ್ರ ಅಪ್ಪ ಅಮ್ಮ ಏನು ಮಾಡುತ್ತಿದ್ದರು ಅಂತ ಕಮೆಂಟ್ ಮಾಡಿದ್ದೇ ಮಾಡಿದ್ದು. ಆದರೆ ಅವರು ಅಪ್ಪಅಮ್ಮನ ಮಾತು ಕೇಳೋ ಸ್ಥಿತೀಲಿ ಇದ್ದಾರಾ. ಅಲ್ಲಿಗೆ ಹೋದ್ಮೇಲೆ ಬಟ್ಟೆ ಚೇಂಜ್ ಮಾಡಿರಬಹುದಲ್ಲಾ. ಬುದ್ಧಿಗೆ ಏನಾದ್ರೂ ಒಂದೇಟು ಹೊಡೆದು, ಅದಕ್ಕೇ ಅವನು ಯಾ ಅವಳು ಆತ್ಮಹತ್ಯೆ ಮಾಡ್ಕೊಂಡ್ರೆ ಅದಕ್ಕೂ ಹೆತ್ತವರನ್ನೇ ಹೊಣೆ ಮಾಡುತ್ತಾರೆ ವಯಸ್ಸಿಗೆ ಬಂದ ಮಕ್ಕಳಿಗೆ ಯಾರಾದ್ರೂ ಹೊಡೀತಾರಾ? ಅಂತ.

ಮಕ್ಕಳೆ ಪರೀಕ್ಷೆಯಲ್ಲಿ ಫೇಲ್ ಆದ್ರೆ ಇನ್ನೊಂದು ಸಲ ಪ್ರಯತ್ತಿಸಬಹುದಲ್ಲಾ. ಲವ್ ಫೇಲ್ಯೂರ್ ಆದ್ರೆ ಏನಂತೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಅಪ್ಪ ಅಮ್ಮ ಇದ್ದಾರಲ್ಲ. ಸ್ವಲ್ಪ ದಿನ ಆದ್ಮೇಲೆ ಎಲ್ಲಾ ಮರೆಯಬಹುದಲ್ಲ. ಗಂಡ ಪ್ರೀತಿಸದಿದ್ರೆ ಏನಂತೆ ಮಕ್ಕಳಿದ್ದಾರಲ್ಲ ಪ್ರೀತಿಸೋಕೆ. ದೇವರು ಒಂದು ಕೈಯಿಂದ ಕಿತ್ತುಕೊಂಡ್ರೆ ಇನ್ನೊಂದು ಕೈಯಿಂದ ನೀಡುತ್ತಾನಂತೆ. ಒಂದು ಬಾಗಿಲು ಮುಚ್ಚಿದ್ರೆ ಇನ್ನೊಂದು ಬಾಗಿಲು ತೆರೆದಿರುತ್ತಂತೆ. ಭಗವದ್ಗೀತೆ ಹೇಳುವಂತೆ ಜೀವನದಲ್ಲಿ ಏನಾಗಬೇಕು ಎಲ್ಲವೂ ಮೊದಲೇ ನಿರ್ಣಯವಾಗಿರುತ್ತದೆ. ನಾವು ನಿಮಿತ್ತ ಮಾತ್ರ. ಆತ್ಮಹತ್ಯೆ ಮಾಡಿಕೊಂಡ್ರೆ ಕರ್ಮ ಎಲ್ಲಾ ಮುಗೀತು ಬಿಡುಗಡೆ ಸಿಕ್ತು ಅಂತ ತಿಳ್ಕೊಳ್ಳೋದು ತಪ್ಪು. ಪ್ರಸ್ತುತ ದೇಹದಿಂದ ಬೇರೆಯಾಗಿರಬಹುದು ಅಷ್ಟೆ. ಆತ್ಮಹತ್ಯೆ ಮಾಡಿಕೊಂಡ ಪಾಪವನ್ನೂ ಸೇರಿಸಿ ಹಿಂದಿನ ಪ್ರಾರಬ್ಧವನ್ನು ಅನುಭವಿಸುವಂತೆ ಇನ್ನೊಂದು ನೀಚ ಜನ್ಮವನ್ನು ನೀಡುತ್ತಾನೆ ಭಗವಂತ. ಆದರೆ, ಮಾನವ ಜನ್ಮ ಮಾತ್ರ ಖಂಡಿತಾ ನೀಡೋದಿಲ್ಲ. ಅದಕ್ಕೇ ದಾಸರು ಹೇಳಿರೋದು ಮಾನವ ಜನ್ಮ ದೊಡ್ಡದು ಹಾಳು ಮಾಡದಿರಿ ಹುಚ್ಚಪ್ಪಗಳಿರಾ ಅಂತ. 

ಇಲ್ಲಿ ನನಗೆ ಸ್ವಾಮಿ ಸುಖಬೋಧಾನಂದಜೀ ಅವರು ಹೇಳಿದ ಒಂದು ಘಟನೆ ನೆನಪಾಗುತ್ತದೆ. ಖ್ಯಾತ ವಿಂಬಲ್ಡನ್ ಆಟಗಾರನಿಗೆ ಏಡ್ಸ್ ರೋಗ ಬಂದು ಅದರಿಂದಲೇ ಆತ ತೀರಿಕೊಂಡ. ಅವನ ಅನಾರೋಗ್ಯದ ಪರಿಸ್ಥಿತಿಯಲ್ಲಿ ಒಬ್ಬ ಕೇಳಿದ, ನನಗೇ ಯಾಕೆ ಹೀಗಾಯಿತು ಅಂತ ನಿನಗೆ ಅನಿಸುವುದಿಲ್ಲವೆ? ಅವನು ಹೀಗೆ ಉತ್ತರಿಸಿದ. ಈ ಪ್ರಪಂಚದಲ್ಲಿ ಬಿಲಿಯಗಟ್ಟಳೆ ಜನರಿದ್ದಾರೆ. ಅವರ ಪೈಕಿ ಕೆಲವು ಮಿಲಿಯ ಜನರಿಗಷ್ಟೇ ಟೆನ್ನಿಸ್ ಗೊತ್ತು. ಅಂತಹವರ ಪೈಕಿ 10 ಸಾವಿರ ಮಂದಿ ವೃತ್ತಿಪರ ಆಟಗಾರರಾಗುತ್ತಾರೆ. ಅವರಲ್ಲಿ ಒಂದು ಸಾವಿರ ಮಂದಿ ಅಂತರಾಷ್ಟ್ರೀಯ ಮಟ್ಟಕ್ಕೆ ಬರುತ್ತಾರೆ. ಅವರ ಪೈಕಿ 30 ಮಂದಿ ವಿಂಬಲ್ಡನ್ ಆಯ್ಕೆಯಾಗುತ್ತಾರೆ. ಅವರಲ್ಲಿ 8 ಮಂದಿ ಸೆಮಿಫೈನಲ್ ತಲುಪುತ್ತಾರೆ. ಆ 8 ಮಂದಿಯಲ್ಲಿ ಇಬ್ಬರಷ್ಟೇ ಫೈನಲ್ ಗೆ ಬರುತ್ತಾರೆ. ಅಂತಹ ಇಬ್ಬರಲ್ಲಿ ನಾನು ಒಬ್ಬ ಆಗಿದ್ದೆ ಹಾಗೂ ನಾನೇ ಗೆದ್ದೆ. ಆಗ ನಾನು ಭಗವಂತನಲ್ಲಿ ನನಗೆ ಏಕೆ ಹೀಗಾಯಿತು ಅಂತ ಕೇಳಲಿಲ್ಲ. ಈಗಲೂ ಕೇಳುವುದಿಲ್ಲ. ಆದ್ದರಿಂದ ಜೀವನದಲ್ಲಿ ಬಂದದ್ದನ್ನು ಬಂದ ಹಾಗೇ ಸ್ವೀಕರಿಸೋದನ್ನ ರೂಢಿ ಮಾಡಿಕೊಳ್ಳೋಣ.

*****