ಯಾಕೋ ಕ್ಲಾಸ್ ತೆಗೆದುಕೊಳ್ಳಲು
ಮನಸ್ಸಾಗಲಿಲ್ಲ. ಇಂದು ಕ್ಲಾಸ್ ತಗೊಳ್ಳೋದಿಲ್ಲ.
ನಿಮಗೆ ನನ್ನ ಜೀವನದಲ್ಲಾದ ಒಂದು ತಿರುವನ್ನು ಹೇಳುತ್ತೇನೆ ಕೇಳುತ್ತೀರಾ ಅಂತ ಮಕ್ಕಳನ್ನು
ಕೇಳಿದೆ. ಎಲ್ಲರೂ ಓ.ಕೆ., ಹೇಳಿ ಸರ್ ಅಂದ್ರು. ಎಲ್ಲಿಂದ ಶುರುಮಾಡಲಿ ಅಂತ ಒಂದು ನಿಮಿಷ ಯೋಚಿಸಿ, ನಂತರ ಹೇಳಲು ಶುರುಮಾಡಿದೆ.
ನಾವು ಮೂರು ಜನ ಮಕ್ಕಳು. ನಾನು 2ನೇ
ಪಿ.ಯು.ಸಿ. ವಿಜ್ಞಾನ ಓದುತ್ತಿದ್ದೆ. ನನ್ನ ತಂದೆಯವರು ನನ್ನನ್ನು ಇಂಜಿನಿಯರ್ ಮಾಡಬೇಕು ಅಂತ
ತುಂಬಾ ಆಸೆ ಇಟ್ಟುಕೊಂಡಿದ್ದರು. ನನ್ನ ತಂಗಿ 10ನೇ ತರಗತಿ ಹಾಗೂ ತಮ್ಮ 7ನೇ ತರಗತಿಯಲ್ಲಿ
ಓದುತ್ತಿದ್ದರು. ಎಲ್ಲರಿಗೂ ಪಬ್ಲಿಕ್ ಪರೀಕ್ಷೆ.
ನಮ್ಮದು ಮಧ್ಯಮ ವರ್ಗದ ಕುಟುಂಬ. ಅಪ್ಪ
ನಮಗಾಗಿ ತುಂಬಾ ಕಷ್ಟ ಪಡುತ್ತಿದ್ದರು. ಏನಾದರೂ ಮಾಡಿ ಇಂಜಿನಿಯರ್ ಮಾಡಲೇ ಬೇಕು ಅಂತ ನನ್ನನ್ನು
ಟ್ಯೂಷನ್ ಗೂ ಸೇರಿಸಿದ್ದರು. ನಮಗೆ ಹುಡುಗಾಟ. ಕಾಲೇಜಿಗೆ ಸೇರಿದ ತಕ್ಷಣ ನಾವೇನೋ ದೊಡ್ಡ
ಮನುಷ್ಯರಾದಂತೆ, ಸ್ವತಂತ್ರರಾದಂತೆ ನಡೆದುಕೊಳ್ಳಲು ಆರಂಭಿಸಿದ್ದೆವು. ನಮ್ಮ ವರ್ತನೆ, ಸ್ಟೈಲ್
ಎಲ್ಲದರಲ್ಲೂ ಬದಲಾವಣೆಯಾಗಿತ್ತು. ಕಾಲೇಜಿಗೆ ಬಂಕ್ ಮಾಡಿ ಫಿಲಂಗೆ ಹೋಗುವುದು, ಸುತ್ತಾಡೋದು
ಸಾಮಾನ್ಯವಾಗಿತ್ತು. ಲೈಫ್ ಎಂಜಾಯ್ ಮಾಡೋದು ಅಂತಾರಲ್ಲ ಹಾಗೆ. ಮನೆಗೆ ಬಂದು ಅಮ್ಮನನ್ನು
ದುಡ್ಡಿಗಾಗಿ ಪೀಡಿಸುತ್ತಿದ್ದೆ. ಅಮ್ಮ ತಾನು ಕೂಡಿಟ್ಟ ದುಡ್ಡನ್ನು ಅಪ್ಪನಿಗೆ ಗೊತ್ತಾಗದಂತೆ
ಕೊಡುತ್ತಿದ್ದಳು. ಓದೋದ್ರಲ್ಲಿ ಗಮನ ಕಡಿಮೆಯಾಗಿತ್ತು.
7ನೇ ತರಗತಿಯಲ್ಲಿ ಓದುತ್ತಿದ್ದ ತಮ್ಮನ
ರಿಸಲ್ಟ್ ಬಂದಿತ್ತು. ಅವನು ಫೇಲಾಗಿದ್ದ. ಅಪ್ಪ ಅವನಿಗೆ ಚೆನ್ನಾಗಿ ಬೈದು ಬಾಸುಂಡೆ ಬರುವ ತರಹ
ಬಾರಿಸಿದರು. ಅದಾದ 15 ದಿನಗಳಿಗೆ ಎಸ್.ಎಸ್.ಎಲ್.ಸಿ. ಓದುತ್ತಿದ್ದ ತಂಗಿಯ ರಿಸಲ್ಟ್ ಬಂದಿತ್ತು.
ಅವಳೂ ಫೇಲಾಗಿದ್ದಳು. ಅಪ್ಪ, ಯಾಕಮ್ಮಾ ಹೀಗೆ ಮಾಡಿದೆ ಅಂದರು ಅಷ್ಟೆ ಬೇರೇನೂ ಹೇಳಲಿಲ್ಲ. ನನಗೆ
ಭಯವಾಗಲು ಶುರುವಾಗಿತ್ತು. ಕೊನೆಗೆ ನನ್ನ ರಿಸಲ್ಟ್ ಕೂಡಾ ಬಂತು. ಅಂದುಕೊಂಡಿದ್ದಂತೆ ನಾನೂ
ಫೇಲಾಗಿದ್ದೆ. ಹೆದರುತ್ತಾ ಮನೆಗೆ ಬಂದೆ. ಮನೆಯಲ್ಲಿ ಆವಾಗಲೇ ನನ್ನ ರಿಸಲ್ಟ್ ಬಗ್ಗೆ
ತಿಳಿದಿತ್ತು. ಅಪ್ಪ ಒಂದು ಮಾತೂ ಆಡಲಿಲ್ಲ. ಅದೇ ನನ್ನನ್ನು ಚುಚ್ಚಿದ್ದು. ಒಂದಾದ ಮೇಲೆ ಒಂದು
ಷಾಕ್ ಅವರನ್ನು ಮಾತಾಡದಂತೆ ಮಾಡಿತ್ತು. ಅವರು ತಮ್ಮನಿಗೆ ಹೊಡೆದ ಹಾಗೆ ನನಗೂ ಹೊಡೆದಿದ್ದಲ್ಲಿ
ನನಗೆ ನೋವಾಗುತ್ತಿರಲಿಲ್ಲ. ಅದಾಗಿ ಒಂದು ವಾರದಲ್ಲಿ ಅಪ್ಪ ಇಹಲೋಕ ತ್ಯಜಿಸಿದ್ದರು. ನನಗೆ ದಿಕ್ಕು
ತೋಚದಂತಾಯಿತು. ಅಪ್ಪನ ಸಾವಿಗೆ ನಾನೇ ಕಾರಣ ಅಂತ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯತೊಡಗಿದೆ.
ನಂತರ ನನ್ನ ಜೀವನಶೈಲಿ ಸಂಪೂರ್ಣ
ಬದಲಾಯಿತು. ಕಾಲ್ ಸೆಂಟರ್ ನಲ್ಲಿ ಹೋಗಿ ಕೆಲಸಕ್ಕೆ ಸೇರಿಕೊಂಡೆ. ಟ್ಯೂಷನ್ ಗೆ ಸೇರಿ ಪಿ.ಯು.ಸಿ.
ಕಂಪ್ಲೀಟ್ ಮಾಡಿದೆ. ನಂತರ ಬಿ.ಎಸ್.ಸಿ., ಕಂಪ್ಯೂಟರ್ ಕೋರ್ಸ್ ಗಳನ್ನೆಲ್ಲ ಮಾಡಿಕೊಂಡೆ. ನನ್ನ
ಗುರಿ ಒಂದೇ ಇದ್ದುದು. ಅಪ್ಪ ಆಸೆ ಪಟ್ಟಂತೆ ಜೀವನದಲ್ಲಿ ಮುಂದೆ ಬರಬೇಕು. ಏನಾದರೂ ಸಾಧಿಸಬೇಕು
ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತಮ್ಮ ತಂಗಿಯನ್ನು ಚೆನ್ನಾಗಿ ಓದಿಸಬೇಕು.
ಸ್ವತಂತ್ರವಾಗಿ ಒಂದು ಸಾಫ್ಟ್ ವೇರ್
ಕಂಪೆನಿ ಶುರುಮಾಡಿದೆ. ಮೊದಮೊದಲು ಎಡವಿದರೂ ಆಮೇಲೆ ಸುಧಾರಿಸಿತ್ತು. ಇಂದು ನಮ್ಮ ಕಂಪೆನಿಯಲ್ಲಿ
ಇಂಜಿನಿಯರುಗಳೂ ಸೇರಿದಂತೆ ಸುಮಾರು 200 ಜನ ಕೆಲಸ ಮಾಡುತ್ತಿದ್ದಾರೆ. ಇಲ್ಲಿಗೂ ಬಂದು ಕಂಪ್ಯೂಟರ್
ಕ್ಲಾಸ್ ತಗೊಳ್ತಾ ಇದ್ದೀನಿ. ಇಂದು ನಾನೊಬ್ಬ ಬ್ಯುಸಿ ಮನುಷ್ಯ. ಇಂದು ನನಗೆ ತೃಪ್ತಿ ಇದೆ. ಆದರೆ
ಅಂದು ನಾನು ಪಿ.ಯು.ಸಿ.ಯಲ್ಲಿ ಪಾಸ್ ಆಗಿ ಇಂಜಿನಿಯರಿಂಗ್ ಸೇರಿಕೊಂಡಿದ್ದರೆ ಬಹುಷ: ಅಪ್ಪ
ಸಾಯುತ್ತಿರಲಿಲ್ಲ ಅನ್ನುವ ಕೊರಗು ನನ್ನನ್ನು ಕಾಡುತ್ತಲೇ ಇದೆ. ಸಾಯೋಕೆ ಮುಂಚಿನ ಅಪ್ಪನ ಆ
ಸತ್ವಹೀನ ಮುಖ ನನ್ನ ಕಣ್ಮುಂದೆ ಸುಳಿದಾಡುತ್ತಲೇ ಇದೆ.
ಡಿಯರ್ ಸ್ಟುಡೆಂಟ್ಸ್, ನಿಮಗೆ ಈ ವಿಷಯ
ಯಾಕೆ ಹೇಳುತ್ತಿದ್ದೇನೆ ಅಂದ್ರೆ ಕೆಲವೊಮ್ಮೆ ಕ್ಷಣಿಕ ಸಂತೋಷಕ್ಕಾಗಿ ನಾವು ಜೀವನದಲ್ಲಿ ಮತ್ತೆ
ಪಡೆದುಕೊಳ್ಳಲಾರದಂತಹ ಮಹತ್ತರವಾದುದನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು. ಹೆತ್ತವರ
ಆಸೆಯನ್ನು ಸಾಧ್ಯವಾದಷ್ಟು ಈಡೇರಿಸಲು ಪ್ರಯತ್ನಿಸಿ. ಅವರ ಆಸೆಗೆ ಯಾವತ್ತೂ ಮಣ್ಣೆರಚಲು
ಪ್ರಯತ್ನಿಸಬೇಡಿ ಆಮೇಲೆ ಜೀವನಪರ್ಯಂತ ನೋವನುಭವಿಸಬೇಕಾಗಬಹುದು. ಇದನ್ನು ಕೇಳಿ ನಿಮ್ಮಲ್ಲೇನಾದರೂ
ಕಿಂಚಿತ್ ಬದಲಾವಣೆಯಾದಲ್ಲಿ ಬಹುಷ: ನನ್ನ ತಂದೆಯವರ ಆತ್ಮಕ್ಕೆ ಶಾಂತಿ ಸಿಗಬಹುದು ಅಂತ ನಾನು
ಭಾವಿಸುತ್ತೇನೆ.
ಕ್ಲಾಸ್ ತುಂಬಾ ಮೌನ ಆವರಿಸಿತ್ತು. ತುಂಬಿ
ಬಂದ ಕಣ್ಣೀರನ್ನು ಯಾರಿಗೂ ಕಾಣದಂತೆ ಒರೆಸಿಕೊಳ್ಳುತ್ತಾ ಮಕ್ಕಳಿಗೆ ಬೈ ಬೈ ಹೇಳಿ ಹೊರಹೋದೆ.
No comments:
Post a Comment