ಮಗಳನ್ನು ಎಳಕ್ಕೊಂಡು
ಬಂದವಳೇ, ನೋಡಿ ಅಕ್ಕ ಎಂತ ಕೆಲಸ ಮಾಡ್ಕೊಂಡವ್ಳೆ. ನಮ್ ಮರ್ಯಾದೆ ಎಲ್ಲ ಕಳೆದ್ಲು. ನಾನೀಗ ಏನು
ಮಾಡ್ಲಿ. ಏನು ಮಾಡ್ಬೇಕು ಅಂತಾನೇ ಗೊತ್ತಾಗ್ತಿಲ್ಲ. ಈಗ ನೀವೇ ನನ್ಗೆ ಸಹಾಯ ಮಾಡ್ಬೇಕು ಅಂತ ಮನೆ ಕೆಲಸದವಳು ಅಳುತ್ತಾ ಕಾಲು ಹಿಡ್ಕೊಂಡು ಬಿಟ್ಳು.
ನಾನು ಅವಳನ್ನು ಕೈಹಿಡಿದೆತ್ತಿ ಮೊದಲು ಕಣ್ಣೊರಸಿಕೊ, ನಿಧಾನವಾಗಿ ಏನಾಯ್ತು ಅಂತ ಬಿಡಿಸಿ ಹೇಳು
ಅಂದೆ. ಅವಳು ಮಗಳ ತಲೆಗೊಂದು ಮೊಟಕಿ, ಹೇಳಲಾರಂಭಿಸಿದಳು.
ನಮ್ ಯಜಮಾನಪ್ಪನ ಅಕ್ಕನ್
ಮಗ ಯಾವ್ದೋ ಕಂಪ್ನೀಲಿ ಕೆಲ್ಸ ಸಿಕ್ತು ಅಂತ ಬೆಂಗ್ಳೂರಿಗೆ ಬಂದವ್ನೆ. ನಮ್ ಯಜಮಾನಪ್ಪ ಅಲ್ಲಿ
ಇಲ್ಲಿ ಯಾಕೆ ಇರ್ತೀಯಾ ನಮ್ಮನೇಲೆ ಇರು ಅಂತ ಹೇಳ್ದ. ಹೆಣ್ಮಕ್ಳು ಇರೋ ಮನೆ ಅಂತ ನನ್ಗೆ ಅವ್ನನ್ನ
ಮನೇಲಿ ಇಟ್ಕೋಳ್ಳೋಕೆ ಇಷ್ಟ ಇರ್ಲಿಲ್ಲ. ಅವ್ನ ಬುದ್ಧೀನೂ ಸರಿ ಇರ್ಲಿಲ್ಲ. ಇವ್ಳು ಗಾರ್ಮೆಂಟ್
ಕಂಪ್ನೀಗೆ ಕೆಲ್ಸಕ್ಕೆ ಹೋಗುತ್ತಿದ್ದಳು. ನಾನು ನಿಮ್ಮನೆ ಕೆಲ್ಸ ಮುಗಿಸ್ಕೊಂಡು ಛತ್ರದ ಕೆಲಸಕ್ಕೆ
ಹೋಗುತ್ತಿದ್ದೆ. ಹಗಲಿಡೀ ಮನೇಲಿ ಯಾರೂ
ಇರ್ತಿರ್ಲಿಲ್ಲ. ಒಂದಿನ ಇವ್ನು ಬಂದವ್ನೇ
ನಾನಿವಳನ್ನ ಮದ್ವೆ ಆಗ್ತೀನಿ ಅಂದ. ನಾನು ಆಗೋದಿಲ್ಲಪ್ಪಾ ನಾವು ಅವ್ಳಿಗೆ ಬೇರೆ ಗಂಡು
ನೋಡಿದ್ದೇವೆ ಅಂದೆ. ಅವ್ನು ಅದನ್ನೇ ಮನಸ್ಸಲ್ಲಿಟ್ಟು ಇಂತಾ ಕೆಲ್ಸ ಮಾಡವ್ನೆ. ಈಗ ಹೇಗೆ ಕೊಡಲ್ಲ
ಅಂತ ಹೇಳ್ತಾರೆ ನಾನೂ ನೋಡ್ತೀನಿ ಅಂತ ಹೇಳ್ತವ್ನೆ. ಹಂಗೂ ತೆಗ್ಸಿ ಬಿಡೋಣ ಅಂತ ಆಸ್ಪತ್ರೆಗೆ ಕರ್ಕೊಂಡು
ಹೋಗಿದ್ದೆ. ಡಾಕುಟ್ರು ಆಗ್ಲೇ 5 ತಿಂಗ್ಳು ಆಗೈತೆ. ಈಗ ಏನಾದ್ರೂ ತೆಗಿಸಿದ್ರೆ ಜೀವಕ್ಕೆ ಅಪಾಯ.
ತುಂಬಾ ಖರ್ಚು ಆಗ್ತೈತೆ ಅಂತ ಹೇಳುದ್ರು. ನೀವೇ ಹೇಳಿ ಅಕ್ಕ ನಾನೀಗ ಏನು ಮಾಡ್ಲಿ.
ನಿನ್ನ ಮಗಳ ಈಗಿನ
ಪರಿಸ್ಥಿತಿ ನೋಡಿದ್ರೆ ಅವಳನ್ನು ಬೇರೆ ಯಾರೂ ಮದುವೆ ಆಗೋದು ಸಾಧ್ಯ ಇಲ್ಲ. ತೆಗ್ಸೋ ಆಲೋಚನೆ
ಬಿಟ್ಟು ಬಿಡು. ಆ ಹುಡುಗನನ್ನು ಕರ್ಕೊಂಡು ಬಾ ನಾನು ಅವನಲ್ಲಿ ಮಾತ್ನಾಡ್ತೀನಿ ಅಂತ ಹೇಳಿದೆ.
ಅದರಂತೆ ಅವನನ್ನ ಕರ್ಕೊಂಡು ಬಂದಳು. ಅವನು ಕೆಲವು ಬೇಡಿಕೆಗಳನ್ನಿಟ್ಟ. ಸರಿ ನಾನು ಅದನ್ನೆಲ್ಲ
ನೋಡ್ಕೋತೀನಿ ಅಂದೆ. ಮದುವೆಗೆ ದಿನ ಗೊತ್ತಾಯಿತು. ಮದುವೇನೂ ಆಯಿತು. ಅವರಿಗೆ ಬೇರೆ ಮನೆ ಮಾಡಿ
ಕೊಡಲಾಯಿತು. ಹೊಸ ಮನೆಯಲ್ಲಿ ಹೊಸ ಸಂಸಾರ ಶುರು ಮಾಡಿದರು.
ಚಾಪೆ ಹಾಸಿಕೊಂಡು
ಮಲಗಿದ್ದ ಅವಳು ಸೂರು ನೋಡುತ್ತಾ ಹೊಟ್ಟೆಯ ಮೇಲೆ ಮೆಲ್ಲಗೆ ಕೈಯಾಡಿಸುತ್ತಾ ಯೋಚಿಸುತ್ತಿದ್ದಳು. ಆಗಾಗ್ಗೆ
ಗಾರ್ಮೆಂಟ್ ಕಂಪೆನಿಗೆ ಬರುತ್ತಿದ್ದ ಕಂಪೆನಿಯ ಯಜಮಾನನ ಮಗ ಇವಳ ಸೌಂದರ್ಯ ಕಂಡು ಆಸಕ್ತನಾಗಿದ್ದ.
ಅವಳು ಅದನ್ನೇ ಪ್ರೀತಿ ಅಂತ ತಿಳ್ಕೊಂಡು ಅವನ ಜೊತೆ ಸಲುಗೆಯಿಂದಿದ್ದಳು. ಸಿನೆಮಾದಲ್ಲಿ
ನಡೆಯುವಂತೆ ತನ್ನ ಜೀವನದಲ್ಲೂ ಪವಾಡ ನಡೆದು ಕಂಪೆನಿಯ ಒಡತಿ ಆಗಬಹುದು ಎಂದು ಕನಸು ಕಂಡ ಅವಳು ಅವನು
ಕೇಳಿದ್ದನ್ನೆಲ್ಲ ಕೊಟ್ಟಳು. ಅವಳು ಬಸುರಿ ಎಂದು ತಿಳಿಯುತ್ತಲೇ ಅವನು ಕಂಪೆನಿಗೆ ಬರೋದನ್ನೇ
ಬಿಟ್ಟುಬಿಟ್ಟ. ಏನೂ ಮಾಡಲು ತೋಚದೆ ತೊಳಲಾಡುತ್ತಿದ್ದಾಗ ತಾನು ಮದುವೆಯಾಗುವುದಾಗಿ ಮುಗ್ಧ ಅತ್ತೆ
ಮಗ ದಾರಿ ತೋರಿದ್ದ.
*****
No comments:
Post a Comment