ಅವರು ಒಬ್ಬರನ್ನೊಬ್ಬರು ಹುಚ್ಚರಂತೆ
ಪ್ರೀತಿಸುತ್ತಿದ್ದರು. ಪ್ರೀತಿ ಹೆಚ್ಚಾಗಿ ಹುಚ್ಚರಂತೆ ಕಿತ್ತಾಡುತ್ತಿದ್ದರು. ಅಂದು
ಇದ್ದಕ್ಕಿದ್ದ ಹಾಗೆ ಸಣ್ಣ ವಿಷಯಕ್ಕೆ ಪ್ರಾರಂಭವಾದ ಜಗಳ
ಅತಿರೇಕಕ್ಕೆ ಹೋಗಲಾರಂಭಿಸಿತು. ಎಲ್ಲಾ ಭಾಷೆಗಳೂ ಬಂದು ಹೋದವು. ಕೊನೆಗೆ ಇನ್ನು ಇಲ್ಲಿ
ಇರೋದ್ರಲ್ಲಿ ಅರ್ಥವಿಲ್ಲ. ಅಂದ್ಕೊಂಡವಳೇ ಅವಳು ಕೈಗೆ ಸಿಕ್ಕ ಬಟ್ಟೆಬರೆಗಳನ್ನು ತುಂಬಿಕೊಂಡು
ಹೊರಟುಬಿಟ್ಟಳು.
ಅವಳು:
ಪ್ರಪಂಚದಲ್ಲಿ ಇವ್ರು ಒಬ್ರೇನಾ ಕೆಲ್ಸಕ್ಕೆ ಹೋಗೋದು. ಮನೇಲಿ ಬಸಿರು ಹುಡುಗಿ ಒಬ್ಬಳೇ ಇರುತ್ತಾಳೆ
ಅನ್ನೋ ಜ್ಞಾನ ಬೇಡ್ವಾ. ಫೋನ್ ಮಾಡಿದ್ರೆ ಕಟ್ ಮಾಡ್ತಾರೆ. ಅಷ್ಟೂ ಕನ್ಸರ್ನ್ ಇಲ್ಲದ ಮೇಲೆ
ಇವರಿಗೆ ಮದ್ವೆ ಯಾಕೆ ಬೇಕಾಗಿತ್ತು ಮನೆ ಸಂಸಾರ ಎಲ್ಲ ಯಾಕೆ ಬೇಕು. ಮದ್ವೆ ಆದ ಹೊಸದರಲ್ಲಿ ಏನು
ಚಿನ್ನ ರನ್ನ ಅಂತ ಮುದ್ದಾಡಿದ್ದೇ ಮುದ್ದಾಡಿದ್ದು. ಇದು ಮೊದಲನೇ ಸಲ ಅಲ್ಲ. ರಿಪೀಟ್ ಆಗುತ್ತಲೇ
ಇದೆ. ಎಷ್ಟೂಂತ ಸಹಿಸೋದು. ನಿನ್ನೆಯಂತೂ ಯಾವುದೋ ಪಾರ್ಟಿ ಇತ್ತೂಂತ ಹನ್ನೊಂದು ಗಂಟೆ ರಾತ್ರಿ
ಬಂದಿದ್ದಾರೆ. ಮೊಬೈಲ್ಗೆ ಕಾಲ್ ಮಾಡಿದ್ರೆ ಸ್ವಿಚ್ ಆಫ್. ಯಾಕೆ ಲೇಟ್ ಅಂತ ಕೇಳಿದ್ದು ತಪ್ಪಾ? ಅದ್ನೇ
ದೊಡ್ಡದು ಮಾಡಿ ಹೇಗೆ ಕೂಗಾಡಿದ್ರು. ನನ್ನಿಷ್ಟ ಕಣೆ ಇದು ನನ್ಮನೆ. ಎಷ್ಟೊತ್ತಿಗಾದ್ರೂ ಬರ್ತೇನೆ
ಎಷ್ಟೊತ್ತಿಗಾದ್ರೂ ಹೋಗ್ತೇನೆ. ಪಾರ್ಟೀಲೀ ಒಂದು ಪೆಗ್ ಹಾಕಿದ್ರು ಅನ್ಸುತ್ತೆ. ಇಲ್ಲಾಂದ್ರೆ ಈ ತರಹ ಮಾತಾಡ್ತಿರಲಿಲ್ಲ. ಹೆಂಡತಿಯಾಗಿ ನನ್ಗೆ
ಅಷ್ಟೂ ಸ್ವಾತಂತ್ರ್ಯ ಇಲ್ವಾ. ಮಾಡ್ತೀನಿ ಸರಿಯಾಗಿ. ಒಬ್ಬರೇ ಇದ್ದು ಅನುಭವಿಸಲಿ ಗೊತ್ತಾಗತ್ತೆ. ಅವರೇ
ಬಂದು ಗೋಗರೆದ್ರೂ ಹೋಗ್ಬಾರದು.
ಅವನು: ಏನು
ಕಿರಿ ಕಿರಿ ಮಾಡ್ತಾಳೆ. ಮೀಟಿಂಗ್ ಇದೆ ಊಟಾನೂ ಅಲ್ಲೇ ಇದೆ. ನನ್ನನ್ನು ಕಾಯ್ಬೇಡ ಅಂತ ಬೆಳಿಗ್ಗೆ ಹೋಗುವಾಗಲೇ
ಹೇಳಿ ಹೋಗಿದ್ದೆ. ಬಾಸ್ ಎಲ್ಲ ಜೊತೇಲಿರುವಾಗ ಬೇಡಾ ಅನ್ನೋದು ಚೆನ್ನಾಗಿರಲ್ಲ ಅಂತ ಒಂದು ಪೆಗ್
ತಗೊಂಡ್ನಪ್ಪ. ಅದೇ ದೊಡ್ಡ ತಪ್ಪಾ. ಅವ್ಳಿಗೆ ಇಷ್ಟ ಇಲ್ಲಾ ಅಂತ ಗೊತ್ತು. ಆದರೆ ಏನು ಮಾಡ್ಲಿ
ಎಲ್ರೂ ಹೆಂಡ್ತಿ ಗುಲಾಮ ಅಂತ ರೇಗಿಸಲ್ವಾ ಯಾರೂ ಮಾಡ್ದೇ ಇರೋ ತಪ್ಪು ನಾನು ಮಾಡಿದ್ನಾ. ಎಷ್ಟು
ಕನ್ವಿನ್ಸ್ ಮಾಡಿದ್ರೂ ಒಪ್ತಾ ಇಲ್ಲ. ಮೂರು ಹೊತ್ತೂ ಇವ್ಳ ಮುಂದೇನೇ ಕೂತ್ಕೊಂಡು ಇರೋಕೆ ಆಗುತ್ತಾ
ಮದ್ವೆ ಆದ ಮಾತ್ರಕ್ಕೆ ಫ್ರೆಂಡ್ಸ್ ಗಳನೆಲ್ಲ ಮರೆಯೋಕಾಗತ್ತಾ. ಅವ್ರೂ ಬೇಕು ತಾನೆ. ಗಂಡಸರು
ಅಂದ್ಮೇಲೆ ಸಾವಿರ ಕೆಲ್ಸ ಇರತ್ತೆ. ಮಾತೆತ್ತಿದ್ರೆ ಗಂಟುಮೂಟೆ ಕಟ್ಕೊಂಡು ಹೊರಡ್ತಾಳೆ. ಹೋಗ್ಲಿ ನನ್ನನ್ನು ಬಿಟ್ಟು ಎಷ್ಟು ದಿನ ಇರ್ತಾಳೋ ನಾನೂ
ನೋಡ್ತೀನಿ.
ಇಬ್ಬರೂ ಒಬ್ಬರಿಗೊಬ್ಬರು ಇನ್ನು
ಯಾವತ್ತೂ ದೂರವಾಗದಂತೆ ಬೆಸೆದುಕೊಂಡಿದ್ದರು. ಎರಡು ದಿನಗಳ ವಿರಹದ ನಂತರದ ಬೆಸುಗೆ. ತಬ್ಬಿಕೊಂಡಿದ್ದಂತಯೇ
ಅವಳ ತಲೆಗೆ ಮೆಲ್ಲಗೆ ಮೊಟಕಿ ಬಿಟ್ಟು ಹೋಗ್ತೀಯಾ ನನ್ನ ಎಷ್ಟು ಧೈರ್ಯ ನಿಂಗೆ ಇನ್ನೊಂದ್ಸಲ ಹೀಗೆ
ಮಾಡಿದ್ರೆ ನೋಡು ಏನು ಮಾಡ್ತೀನೀಂತ ನೀನು ವಾಪಸ್ಸು ಬರೋದ್ರೊಳಗೆ.. ಮುಂದೆ ಏನೂ ಹೇಳದಂತೆ ಅವಳು
ಅವನ ಬಾಯಿಯನ್ನು ಮುಚ್ಚಿದಳು. ನೀವು ಮಾತ್ರ ಇನ್ನೇನು. ನಾನು ಹೋಗ್ತಾ ಇರ್ಬೇಕಾದ್ರೆ ತಡೆಯೋದಲ್ವ.
ಹೋದ್ರೆ ಹೋಗ್ಲಿ ಅಂತ ಸುಮ್ನೆ ನೋಡ್ತಾ ಇದ್ರಿ. ಕೋಪ ಬರಲ್ವಾ. ತಬ್ಬಿಕೊಂಡಿದ್ದಂತೆಯೇ ಟಿವಿ ಆನ್
ಮಾಡಿದಳು. ಹಾಡು ಬರುತ್ತಿತ್ತು ಒಲವಿನ ಪೂಜೆಗೆ ಒಲವೇ ಮಂದಾರ ಒಲವೆ ಬದುಕಿನ ಬಂಗಾರ ಒಲವಿನ ನೆನಪೆ
ಹೃದಯಕೆ ಮಧುರ….. ವಾವ್ ಎಂತಹ ಸುಂದರ ಸಾಲುಗಳು ಇಬ್ಬರೂ
ಮುಸಿ ಮುಸಿ ನಕ್ಕರು. ಬೆಸುಗೆ ಇನ್ನೂ ಬಿಗಿಯಾಗತೊಡಗಿತು.
*****
No comments:
Post a Comment