Wednesday, 7 March 2012

ಚಪ್ಪರ ಮುಹೂರ್ತ


ಚಪ್ಪರ ಮುಹೂರ್ತ

ದೇವರಲ್ಲಿ ಪ್ರಾರ್ಥನೆ

 ಕಾಲುದೀಪ, ಕಲಶ, ಬಾಳೆ ಹೂ, ನಿಂಬೆಗಾತ್ರದ 5 ಮಣ್ಣಿನ ಉಂಡೆಗಳು, 5 ಲೋಟಗಳು (ಮೇಲ್ ನೀರಿನ ಕಳಸ),
5 ಬಣ್ಣಗಳು  ತೆಂಗಿನಕಾಯಿ, ಬಾಳೆಹಣ್ಣು, ಊದುಬತ್ತಿ,ಲೋಬಾನ, ವೀಳ್ಯದೆಲೆ, ಅಡಿಕೆ ಇತ್ಯಾದಿಗಳೊಂದಿಗೆ ಹುಡುಗಿಯನ್ನು ಚಪ್ಪರ ಮುಹೂರ್ತ ಮಾಡುವ ಜಾಗಕ್ಕೆ ಕರೆದುಕೊಂಡು ಬರುವುದು
  ನೈರುತ್ಯ ದಿಕ್ಕಿನಲ್ಲಿ (ಕನ್ನಿ ಮೂಲೆ) ಹಾಲೆ ಗೆಲ್ಲು ಅಥವಾ ಅತ್ತಿ ಗೆಲ್ಲನ್ನು ನೆಡಬೇಕು

ಹುಡುಗಿಯ ತಾಯಿ ಹಾಲೆಕಂಬಕ್ಕೆ ಗಂಧ, ಅರಿಶಿನ ಕುಂಕುಮ ಹಚ್ಚಿ, ಹೂವು ಹಾಕಿ ಊದುಬತ್ತಿ ಹಚ್ಚಬೇಕು

ಜೇಡಿ ಅಥವಾ ಬಿಳಿಬಣ್ಣದಿಂದ ಹಾಲೆ ಗೆಲ್ಲಿಗೆ 5 ಗೆರೆ ಎಳೆಯಬೇಕು. ಲೋಬಾನ ಹಾಕಬೇಕು. ತೆಂಗಿನ ಕಾಯಿಯನ್ನು ಒಡೆದು ನೀರನ್ನು ಹಾಲೆ ಗೆಲ್ಲಿಗೆ ಹಾಕಬೇಕು. ತೆಂಗಿನ ಕಾಯಿಯನ್ನು ಹಾಲೆಕಂಬದ ಬುಡದಲ್ಲಿ ಇಡಬೇಕು.
ಸಿದ್ಧಪಡಿಸಿಟ್ಟ 5 ಮೇಲ್ನೀರಿನ ಕಳಸಗಳಲ್ಲಿ ಒಂದನ್ನು ಎತ್ತಿ ಎಡ ಅಂಗೈಲಿಟ್ಟು ಬಲಕೈಯಲ್ಲಿ ಒಂದು ಮಣ್ಣಿನ ಉಂಡೆಯನ್ನು ಹಿಡಿದು ಎರಡನ್ನೂ ಹುಡುಗಿಗೆ ಮುಟ್ಟಿಸಿ ಮಣ್ಣಿನ ಉಂಡೆಯನ್ನು ಕಂಬದ ಬುಡಕ್ಕೆ ಹಾಕಿ ಲೋಟದಲ್ಲಿದ್ದ ಬಾಳೆ ಹೂವಿಂದ ಒಂದನ್ನು ಹುಡುಗಿಯ ತಲೆಗೆ ಮುಡಿಸಿ ಕೈಯಲ್ಲಿದ್ದ ಕಳಸವನ್ನು ಬಲಕೈಯಿಂದ ಮುಚ್ಚಿ ಕಲಶ ಹಿಡಿಯುವವರಿಗೆ ಮೊದಲು ನೀಡಬೇಕು. ಉಳಿದ 4 ಮೇಲ್ನೀರಿನ ಕಳಸಗಳನ್ನೂ ಇದೇ ರೀತಿ ಮಾಡಿ ಮುತ್ತೈದೆಯರಿಗೆ ನೀಡಬೇಕು. ಅದರಲ್ಲಿರುವ ಬಾಳೆ ಹೂವನ್ನು ಅವರು ಮುಡಿಯಬೇಕು.
ಗಂಧಾಕ್ಷತೆಯನ್ನು ಹುಡುಗಿಯ ಹಣೆಗೆ ಹಚ್ಚಬೇಕು. ಹುಡುಗಿಯನ್ನು ಒಳಗೆ ಕರೆದುಕೊಂಡು ಹೋಗುವಾಗ 5 ಬಣ್ಣಗಳಿಂದ ಬಾಗಿಲಿಗೆ ಒಂದೊಂದು ಗೆರೆ ಎಳೆಯಬೇಕು.
  ಕೋಣೆಯ ಪೂರ್ವದಿಕ್ಕಿನ ಗೋಡೆಗೆ ಬಾಸಿಂಗ ತೊಂಡ್ಲ ಕಾಲುದೀಪ ಕಲಶ ಮತ್ತು ಸೂರ್ಯ ಚಂದ್ರ ಇವುಗಳನ್ನು ಬರೆಯಬೇಕು. ನಂತರ ಎಲ್ಲರಿಗೂ ಬಳೆ, ಹೂವು, ಅರಿಶಿನ ಕುಂಕುಮ ನೀಡಬೇಕು.

 
ಉದ್ದಿನ ಮುಹೂರ್ತ:

ರಂಗೋಲಿ ಮಾವಿನ ಎಲೆ ಹೂವುಗಳಿಂದ ಅಲಂಕರಿಸಿದ ಬೀಸುವ ಕಲ್ಲು, 5 ಲೋಟ ಇಡಿ ಉದ್ದು ರೆಡಿಮಾಡಿಕೊಳ್ಳಬೇಕು.ಹುಡುಗಿಯನ್ನು ದೀಪ ಕಲಶ ಸಹಿತ ಕರೆದುಕೊಂಡು ಬರಬೇಕು

ಹುಡುಗಿಯ ತಾಯಿ ಬೊಗಸೆಯಲ್ಲಿ ಉದ್ದನ್ನು ತಗೊಂಡು ಹುಡುಗಿಗೆ ಮುಟ್ಟಿಸಿ ಬೀಸುವ ಕಲ್ಲಿಗೆ ಹಾಕಬೇಕು ಹೀಗೆ 5ಸಲ ಮಾಡಬೇಕು. ಬಳಿಕ ಇತರ ಮುತ್ತೈದೆಯರೂ ಇದೇ ರೀತಿ ಮಾಡಬೇಕು.

ಅರಿಶಿನೆಣ್ಣೆ:
ತೆಂಗಿನೆಣ್ಣೆ ಮತ್ತು ನೀರಲ್ಲಿ ಬೆರೆಸಿದ ಅರಿಶಿನವನ್ನು ಒಂದು ಬಟ್ಟಲಲ್ಲಿ ರೆಡಿಮಾಡಿಕೊಳ್ಳಬೇಕು. ಒಂದು ಕೋಲನ್ನು ಅಲಂಕರಿಸಿ ಅದರ ತುದಿಗೆ 5 ಮಾವಿನ ಎಲೆಗಳನ್ನು ಕಟ್ಟಬೇಕು. ಮೊದಲು ಹುಡುಗಿಯ ತಾಯಿ ಮಾವಿನ ಎಲೆಯಿಂದ ಅರಿಶಿನ ತೆಗೆದುಕೊಂಡು ಮೊದಲು ಪಾದ, ಮೊಣಕಾಲು, ಮೊಣಕೈ,ಭುಜ, ಹಣೆ ಮತ್ತು ನೆತ್ತಿಗೆ ಹಚ್ಚಬೇಕು ಹೀಗೆ 5 ಸಲ ಮಾಡಬೇಕು
ನಂತರ ಸೇಸೆ ಹಾಕಬೇಕು .
ಕಳಸದವರು ಅರಶಿನೆಣ್ಣೆ ಮಾಡಿ ಸೇಸೆ ಹಾಕಬೇಕು

ಇತರ ಮುತ್ತೈದೆಯರು ಅರಿಶಿನೆಣ್ಣೆ ಮಾಡಿ ಸೇಸೆ ಹಾಕಬೇಕು 

ರಾಮಕ್ಷತ್ರಿಯ ಸಮಾಜದ ಮದುವೆಯ ವಿಧಿವಿಧಾನಗಳು

ಮದುವೆ ನಿಶ್ಚಿತಾರ್ಥ
ದೇವರಲ್ಲಿ ಪ್ರಾರ್ಥನೆ

ಕಳಸ ಸಹಿತ ಮನೆಯಿಂದ ಛತ್ರಕ್ಕೆ ಹೊರಡುವುದು
ವರನಿಗೆ ಸ್ವಾಗತ
ವರನ ತಂದೆ ತಾಯಿ ಬಂಧು ಬಾಂಧವರಿಗೆ ವಧುವಿನ ಕಡೆಯವರಿಂದ ಸ್ವಾಗತ

ಹುಡುಗಿಯನ್ನು ಕಳಸ ಸಹಿತ ಮಂಟಪಕ್ಕೆ ಕರೆತರುವುದು.

ವರನ ತಾಯಿ 5 ಬಗೆಯ ಹೂವು ಮತ್ತು ತಾವು ತಂದಿರುವ ಸೀರೆಯನ್ನು ಹುಡುಗಿಗೆ ನೀಡುವುದು

ವರನ ಕಡೆಯವರು ಹೂ ಮುಡಿಸುವುದು

ವರನ ತಾಯಿ ತಾವು ತಂದಿರುವ ಚಿನ್ನವನ್ನು ಹಾಕುವುದು

ವರನ ತಾಯಿ ಆರತಿ ಮಾಡುವುದು.

ಹುಡುಗಿಯ ತಾಯಿ ಆರತಿ ಮಾಡುವುದು

ಹುಡುಗಿಯ ಕಡೆಯವರಿಂದ ಆರತಿ
ಹುಡುಗನ ಕಡೆಯವರಿಂದ ಆರತಿ

ಹುಡುಗನನ್ನು ಮಂಟಪಕ್ಕೆ ಸ್ವಾಗತಿಸುವುದು

ಎರಡೂ ಕಡೆಯವರು ಎದುರುಬದುರಾಗಿ ನಿಂತು ಕುಲದೇವರಲ್ಲಿ ಪ್ರಾರ್ಥಿಸಿ ವರನ ಜಾತಕ, ವಧುವಿನ ಜಾತಕ 5 ವೀಳ್ಯದೆಲೆ, ಅಡಿಕೆ, ಹಣ್ಣುಗಳನ್ನಿಟ್ಟ ಹರಿವಾಣವನ್ನು ವಧುವಿನ ತಂದೆ ವರನ ತಂದೆಗೆ ನೀಡುವುದು.

ಹುಡುಗ ಉಂಗುರ ತೊಡಿಸುವುದು

ಹುಡುಗಿ ಉಂಗುರ ಹಾಕುವುದು







Monday, 5 March 2012

ತಿರುವು


ಯಾಕೋ ಕ್ಲಾಸ್ ತೆಗೆದುಕೊಳ್ಳಲು ಮನಸ್ಸಾಗಲಿಲ್ಲ.  ಇಂದು ಕ್ಲಾಸ್ ತಗೊಳ್ಳೋದಿಲ್ಲ. ನಿಮಗೆ ನನ್ನ ಜೀವನದಲ್ಲಾದ ಒಂದು ತಿರುವನ್ನು ಹೇಳುತ್ತೇನೆ ಕೇಳುತ್ತೀರಾ ಅಂತ ಮಕ್ಕಳನ್ನು ಕೇಳಿದೆ. ಎಲ್ಲರೂ ಓ.ಕೆ., ಹೇಳಿ ಸರ್ ಅಂದ್ರು. ಎಲ್ಲಿಂದ ಶುರುಮಾಡಲಿ ಅಂತ ಒಂದು ನಿಮಿಷ ಯೋಚಿಸಿ,  ನಂತರ ಹೇಳಲು ಶುರುಮಾಡಿದೆ.

ನಾವು ಮೂರು ಜನ ಮಕ್ಕಳು. ನಾನು 2ನೇ ಪಿ.ಯು.ಸಿ. ವಿಜ್ಞಾನ ಓದುತ್ತಿದ್ದೆ. ನನ್ನ ತಂದೆಯವರು ನನ್ನನ್ನು ಇಂಜಿನಿಯರ್ ಮಾಡಬೇಕು ಅಂತ ತುಂಬಾ ಆಸೆ ಇಟ್ಟುಕೊಂಡಿದ್ದರು. ನನ್ನ ತಂಗಿ 10ನೇ ತರಗತಿ ಹಾಗೂ ತಮ್ಮ 7ನೇ ತರಗತಿಯಲ್ಲಿ ಓದುತ್ತಿದ್ದರು. ಎಲ್ಲರಿಗೂ ಪಬ್ಲಿಕ್ ಪರೀಕ್ಷೆ. 

ನಮ್ಮದು ಮಧ್ಯಮ ವರ್ಗದ ಕುಟುಂಬ. ಅಪ್ಪ ನಮಗಾಗಿ ತುಂಬಾ ಕಷ್ಟ ಪಡುತ್ತಿದ್ದರು. ಏನಾದರೂ ಮಾಡಿ ಇಂಜಿನಿಯರ್ ಮಾಡಲೇ ಬೇಕು ಅಂತ ನನ್ನನ್ನು ಟ್ಯೂಷನ್ ಗೂ ಸೇರಿಸಿದ್ದರು. ನಮಗೆ ಹುಡುಗಾಟ. ಕಾಲೇಜಿಗೆ ಸೇರಿದ ತಕ್ಷಣ ನಾವೇನೋ ದೊಡ್ಡ ಮನುಷ್ಯರಾದಂತೆ, ಸ್ವತಂತ್ರರಾದಂತೆ ನಡೆದುಕೊಳ್ಳಲು ಆರಂಭಿಸಿದ್ದೆವು. ನಮ್ಮ ವರ್ತನೆ, ಸ್ಟೈಲ್ ಎಲ್ಲದರಲ್ಲೂ ಬದಲಾವಣೆಯಾಗಿತ್ತು. ಕಾಲೇಜಿಗೆ ಬಂಕ್ ಮಾಡಿ ಫಿಲಂಗೆ ಹೋಗುವುದು, ಸುತ್ತಾಡೋದು ಸಾಮಾನ್ಯವಾಗಿತ್ತು. ಲೈಫ್ ಎಂಜಾಯ್ ಮಾಡೋದು ಅಂತಾರಲ್ಲ ಹಾಗೆ. ಮನೆಗೆ ಬಂದು ಅಮ್ಮನನ್ನು ದುಡ್ಡಿಗಾಗಿ ಪೀಡಿಸುತ್ತಿದ್ದೆ. ಅಮ್ಮ ತಾನು ಕೂಡಿಟ್ಟ ದುಡ್ಡನ್ನು ಅಪ್ಪನಿಗೆ ಗೊತ್ತಾಗದಂತೆ ಕೊಡುತ್ತಿದ್ದಳು. ಓದೋದ್ರಲ್ಲಿ ಗಮನ ಕಡಿಮೆಯಾಗಿತ್ತು.

7ನೇ ತರಗತಿಯಲ್ಲಿ ಓದುತ್ತಿದ್ದ ತಮ್ಮನ ರಿಸಲ್ಟ್ ಬಂದಿತ್ತು. ಅವನು ಫೇಲಾಗಿದ್ದ. ಅಪ್ಪ ಅವನಿಗೆ ಚೆನ್ನಾಗಿ ಬೈದು ಬಾಸುಂಡೆ ಬರುವ ತರಹ ಬಾರಿಸಿದರು. ಅದಾದ 15 ದಿನಗಳಿಗೆ ಎಸ್.ಎಸ್.ಎಲ್.ಸಿ. ಓದುತ್ತಿದ್ದ ತಂಗಿಯ ರಿಸಲ್ಟ್ ಬಂದಿತ್ತು. ಅವಳೂ ಫೇಲಾಗಿದ್ದಳು. ಅಪ್ಪ, ಯಾಕಮ್ಮಾ ಹೀಗೆ ಮಾಡಿದೆ ಅಂದರು ಅಷ್ಟೆ ಬೇರೇನೂ ಹೇಳಲಿಲ್ಲ. ನನಗೆ ಭಯವಾಗಲು ಶುರುವಾಗಿತ್ತು. ಕೊನೆಗೆ ನನ್ನ ರಿಸಲ್ಟ್ ಕೂಡಾ ಬಂತು. ಅಂದುಕೊಂಡಿದ್ದಂತೆ ನಾನೂ ಫೇಲಾಗಿದ್ದೆ. ಹೆದರುತ್ತಾ ಮನೆಗೆ ಬಂದೆ. ಮನೆಯಲ್ಲಿ ಆವಾಗಲೇ ನನ್ನ ರಿಸಲ್ಟ್ ಬಗ್ಗೆ ತಿಳಿದಿತ್ತು. ಅಪ್ಪ ಒಂದು ಮಾತೂ ಆಡಲಿಲ್ಲ. ಅದೇ ನನ್ನನ್ನು ಚುಚ್ಚಿದ್ದು. ಒಂದಾದ ಮೇಲೆ ಒಂದು ಷಾಕ್ ಅವರನ್ನು ಮಾತಾಡದಂತೆ ಮಾಡಿತ್ತು. ಅವರು ತಮ್ಮನಿಗೆ ಹೊಡೆದ ಹಾಗೆ ನನಗೂ ಹೊಡೆದಿದ್ದಲ್ಲಿ ನನಗೆ ನೋವಾಗುತ್ತಿರಲಿಲ್ಲ. ಅದಾಗಿ ಒಂದು ವಾರದಲ್ಲಿ ಅಪ್ಪ ಇಹಲೋಕ ತ್ಯಜಿಸಿದ್ದರು. ನನಗೆ ದಿಕ್ಕು ತೋಚದಂತಾಯಿತು. ಅಪ್ಪನ ಸಾವಿಗೆ ನಾನೇ ಕಾರಣ ಅಂತ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯತೊಡಗಿದೆ.

ನಂತರ ನನ್ನ ಜೀವನಶೈಲಿ ಸಂಪೂರ್ಣ ಬದಲಾಯಿತು. ಕಾಲ್ ಸೆಂಟರ್ ನಲ್ಲಿ ಹೋಗಿ ಕೆಲಸಕ್ಕೆ ಸೇರಿಕೊಂಡೆ. ಟ್ಯೂಷನ್ ಗೆ ಸೇರಿ ಪಿ.ಯು.ಸಿ. ಕಂಪ್ಲೀಟ್ ಮಾಡಿದೆ. ನಂತರ ಬಿ.ಎಸ್.ಸಿ., ಕಂಪ್ಯೂಟರ್ ಕೋರ್ಸ್ ಗಳನ್ನೆಲ್ಲ ಮಾಡಿಕೊಂಡೆ. ನನ್ನ ಗುರಿ ಒಂದೇ ಇದ್ದುದು. ಅಪ್ಪ ಆಸೆ ಪಟ್ಟಂತೆ ಜೀವನದಲ್ಲಿ ಮುಂದೆ ಬರಬೇಕು. ಏನಾದರೂ ಸಾಧಿಸಬೇಕು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತಮ್ಮ ತಂಗಿಯನ್ನು ಚೆನ್ನಾಗಿ ಓದಿಸಬೇಕು.

ಸ್ವತಂತ್ರವಾಗಿ ಒಂದು ಸಾಫ್ಟ್ ವೇರ್ ಕಂಪೆನಿ ಶುರುಮಾಡಿದೆ. ಮೊದಮೊದಲು ಎಡವಿದರೂ ಆಮೇಲೆ ಸುಧಾರಿಸಿತ್ತು. ಇಂದು ನಮ್ಮ ಕಂಪೆನಿಯಲ್ಲಿ ಇಂಜಿನಿಯರುಗಳೂ ಸೇರಿದಂತೆ ಸುಮಾರು 200 ಜನ ಕೆಲಸ ಮಾಡುತ್ತಿದ್ದಾರೆ. ಇಲ್ಲಿಗೂ ಬಂದು ಕಂಪ್ಯೂಟರ್ ಕ್ಲಾಸ್ ತಗೊಳ್ತಾ ಇದ್ದೀನಿ. ಇಂದು ನಾನೊಬ್ಬ ಬ್ಯುಸಿ ಮನುಷ್ಯ. ಇಂದು ನನಗೆ ತೃಪ್ತಿ ಇದೆ. ಆದರೆ ಅಂದು ನಾನು ಪಿ.ಯು.ಸಿ.ಯಲ್ಲಿ ಪಾಸ್ ಆಗಿ ಇಂಜಿನಿಯರಿಂಗ್ ಸೇರಿಕೊಂಡಿದ್ದರೆ ಬಹುಷ: ಅಪ್ಪ ಸಾಯುತ್ತಿರಲಿಲ್ಲ ಅನ್ನುವ ಕೊರಗು ನನ್ನನ್ನು ಕಾಡುತ್ತಲೇ ಇದೆ. ಸಾಯೋಕೆ ಮುಂಚಿನ ಅಪ್ಪನ ಆ ಸತ್ವಹೀನ ಮುಖ ನನ್ನ ಕಣ್ಮುಂದೆ ಸುಳಿದಾಡುತ್ತಲೇ ಇದೆ.

ಡಿಯರ್ ಸ್ಟುಡೆಂಟ್ಸ್, ನಿಮಗೆ ಈ ವಿಷಯ ಯಾಕೆ ಹೇಳುತ್ತಿದ್ದೇನೆ ಅಂದ್ರೆ ಕೆಲವೊಮ್ಮೆ ಕ್ಷಣಿಕ ಸಂತೋಷಕ್ಕಾಗಿ ನಾವು ಜೀವನದಲ್ಲಿ ಮತ್ತೆ ಪಡೆದುಕೊಳ್ಳಲಾರದಂತಹ ಮಹತ್ತರವಾದುದನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು. ಹೆತ್ತವರ ಆಸೆಯನ್ನು ಸಾಧ್ಯವಾದಷ್ಟು ಈಡೇರಿಸಲು ಪ್ರಯತ್ನಿಸಿ. ಅವರ ಆಸೆಗೆ ಯಾವತ್ತೂ ಮಣ್ಣೆರಚಲು ಪ್ರಯತ್ನಿಸಬೇಡಿ ಆಮೇಲೆ ಜೀವನಪರ್ಯಂತ ನೋವನುಭವಿಸಬೇಕಾಗಬಹುದು. ಇದನ್ನು ಕೇಳಿ ನಿಮ್ಮಲ್ಲೇನಾದರೂ ಕಿಂಚಿತ್ ಬದಲಾವಣೆಯಾದಲ್ಲಿ ಬಹುಷ: ನನ್ನ ತಂದೆಯವರ ಆತ್ಮಕ್ಕೆ ಶಾಂತಿ ಸಿಗಬಹುದು ಅಂತ ನಾನು ಭಾವಿಸುತ್ತೇನೆ.

ಕ್ಲಾಸ್ ತುಂಬಾ ಮೌನ ಆವರಿಸಿತ್ತು. ತುಂಬಿ ಬಂದ ಕಣ್ಣೀರನ್ನು ಯಾರಿಗೂ ಕಾಣದಂತೆ ಒರೆಸಿಕೊಳ್ಳುತ್ತಾ ಮಕ್ಕಳಿಗೆ ಬೈ ಬೈ  ಹೇಳಿ ಹೊರಹೋದೆ.

Wednesday, 29 February 2012

ಜೋಷ್


ಮೂರು ಹೊತ್ತು ಓದು ಓದು ಅಂತ ತಲೆ ತಿನ್ತಾರೆ. ಮಾಡೋಕೆ ಇವ್ರಿಗೆ ಬೇರೇನೂ ಕೆಲ್ಸ ಇಲ್ವಾ. ಇವತ್ತಂತೂ ಯಾವತ್ತೂ ನನ್ನ ಮೇಲೆ ಕೈಮಾಡದಿದ್ದ ಅಪ್ಪ ಕೂಡಾ ಅಮ್ಮನ ಮಾತು ಕೇಳ್ಕೊಂಡು ಒಂದೇಟು ಹೊಡೆದೇ ಬಿಟ್ರು.  ನಂಗಂತೂ ಸಖತ್ತಾಗಿ ಕೋಪ ಬಂದಿತ್ತು. ಏನು ಅಂದ್ಕೊಂಡಿದ್ದಾರೆ ಇವ್ರೆಲ್ಲ ನನ್ನ.   ಪ್ರಪಂಚದಲ್ಲಿ ಓದೋದು ಬಿಟ್ರೆ ಬೇರೇನೂ ಇಲ್ವಾ. ಇವ್ರೆಲ್ಲಾ ಓದಿ ಕಡಿದು ಕಟ್ಟೆ ಹಾಕಿರೋದು ನಂಗೊತ್ತಿಲ್ವಾ. ಅವ್ನು ನೋಡು ಅಷ್ಟು ಮಾರ್ಕ್ ತಗೊಂಡಿದ್ದಾನೆ. ಇವ್ನು ನೋಡು ಇಷ್ಟು ಮಾರ್ಕ್ ತಗೊಂಡಿದ್ದಾನೆ. ನೀನೂ ಇದ್ದೀಯಾ..

ಕೇಳಿ ಕೇಳಿ ತಲೆ ಚಿಟ್ಟು ಹಿಡಿದು ಹೋಗ್ತಾ ಇದೆ. ಮಾಡ್ತೀನಿ ಇವ್ರಿಗೆ ಚೆನ್ನಾಗಿ ಬುದ್ಧಿ ಕಲಿಸ್ತೀನಿ ಅಂದುಕೊಂಡು ರಾತ್ರಿ ಊಟ ಮಾಡದೇನೆ ಮಲಗಿಬಿಟ್ಟೆ. ಬೆಳಿಗ್ಗೆ ಹೊಟ್ಟೆ ಚುರುಗುಟ್ಟುತ್ತಿತ್ತು. ಯಾವಾಗ ತಿಂಡಿಗೆ ಕರೀತಾಳೆ ಅಂತ ಓರೆಕಣ್ಣಿನಿಂದ ಅಮ್ಮನನ್ನು ನೋಡುತ್ತಲೇ ಇದ್ದೆ. ಹುಸಿಮುನಿಸಿನಿಂದಲೇ ಅಮ್ಮ ಮಾಡಿಟ್ಟ ಪೂರಿ ಸಾಗು ಚೆನ್ನಾಗೇ ಹೊಡೆದೆ.  ಅಮ್ಮನೂ ಬಿಗುಮಾನದಿಂದ ಮಾತಾಡಿಸಲಿಲ್ಲ. ಸ್ಕೂಲ್ ಗೆ ಯೂನಿಫಾರಂ ಹಾಕುವಾಗ ಷರ್ಟ್ ಹಾಕೋಕೆ ಮುಂಚೆ ಒಳಗೆ ಒಂದು ಟಿ-ಷರ್ಟ್ ಹಾಕ್ಕೊಂಡೆ. ಮಾಮೂಲಿನಂತೆಯೇ ಸ್ಕೂಲ್ ಗೆ ಹೊರಟೆ. ಸಂಜೆ ಸ್ಕೂಲ್ ಬಿಟ್ಟಾಕ್ಷಣ ಯಾರಿಗೂ ಸಂಶಯ ಬರದಿರಲೆಂದು ಮಾಮೂಲಿನಂತೆಯೇ ಎಲ್ಲರಿಗೂ ಬೈ ಬೈ ಹೇಳಿ ಹೊರಟೆ. ಒಬ್ಬನೇ ಹೋಗಲು ಭಯವಾಗಿ ಹಳೆಯ ಮನೆಯ ಹತ್ತಿರದ ಫ್ರೆಂಡ್ ಸ್ಕೂಲ್ ಹತ್ತಿರ ಹೋಗಿ ಅವನನ್ನೂ ಕರೆದುಕೊಂಡು ಹೊರಟೆ. ಯೂನಿಫಾರಂ ಷರ್ಟ್ ಬಿಚ್ಚಿ ಬ್ಯಾಗ್ ಒಳಗೆ ಹಾಕಿದೆ. ಮನೆಯಿಂದ ಬರುತ್ತಾ ಅಮ್ಮ ಆಗಾಗ್ಗ ಕೊಡುತ್ತಿದ್ದ ಪಾಕೆಟ್ ಮನಿ ತೆಗೆದುಕೊಂಡು ಬಂದಿದ್ದೆ. ಇಬ್ಬರೂ ಪಾನಿಪುರಿ, ಮಸಾಲೆಪುರಿ, ಬೇಲ್ ಪುರಿ ಎಲ್ಲಾ ಒಂದೊಂದು ಪ್ಲೇಟ್ ಹೊಡೆದೆವು. ಸಮಯ ಹೋಗ್ತಾನೇ ಇಲ್ಲ. ಹತ್ತಿರದಲ್ಲಿದ್ದ ಪಾರ್ಕ್ ನಲ್ಲಿ ಸ್ವಲ್ಪ ಹೊತ್ತು ಕಳೆದೆವು. ನಂತರ ಇಬ್ಬರೂ ಸೆಕೆಂಡ್ ಷೋ ಕನ್ನಡ ಸಿನೆಮಾ ನೋಡಲು ಥಿಯೇಟರ್ ನಲ್ಲಿ ಹೋಗಿ ಕುಳಿತೆವು. ಜೋಷ್ ಫಿಲಂ.  ಥತ್ ತೆರೀಕೆ ಇಲ್ಲೂ ಇದೇ ಕಥೇನಾ. ನೋಡಲು ಮನಸ್ಸಾಗಲಿಲ್ಲ.

ಕಣ್ಮುಚ್ಚಿ ನಿಧಾನವಾಗಿ ಯೋಚಿಸುತ್ತಾ ಕುಳಿತೆ. ಏನೋ ಒಂಥರಾ ಭಯ, ಆತಂಕ, ಹೊಟ್ಟೆಯಲ್ಲಿ ತಳಮಳ ಆಗಲು ಶುರುವಾಯಿತು. ದು:ಖ ಉಮ್ಮಳಿಸಿ ಬರಲಾರಂಭಿಸಿತು. ಇದ್ರಲ್ಲಿ ಅಪ್ಪ ಅಮ್ಮಂದು ಏನು ತಪ್ಪಿದೆ. ಮಗ ಚೆನ್ನಾಗಿ ಓದಲಿ ಅಂತ ಅವರು ಆಸೆ ಪಡೋದು ತಪ್ಪಾ. ನನಗೋಸ್ಕರ ಎಷ್ಟೆಲ್ಲ ಕಷ್ಟಪಡ್ತಾರೆ ಒಂದೇಟು ಹಾಕುವ ಅಧಿಕಾರಾನೂ ಅವ್ರಿಗೆ ಇಲ್ವಾ. ಇನ್ನೇನು ಪ್ರಿಪರೇಟರಿ ಎಕ್ಸಾಮ್ ಹತ್ತಿರ ಬರ್ತಾ ಇದೆ. ನಾನು ಹೆಚ್ಚು ಅಂಕ ತಗೊಂಡ್ರೆ ನನಗೆ, ಸ್ಕೂಲ್ ಗೆ, ಅಪ್ಪ ಅಮ್ಮಂಗೆ ಎಲ್ಲರಿಗೂ ಹೆಮ್ಮೆ ಅಲ್ವಾ. ಮುಂದೆ ಯೋಚಿಸಲಾಗಲಿಲ್ಲ. ಮನೆಯಲ್ಲಿ ಎಷ್ಟು ಗಲಾಟೆ ಬಿದ್ದಿರಬಹುದು. ಒಂದು ಕ್ಷಣ ಅಳುತ್ತಿರುವ ಅಮ್ಮನ ಮುಖ ಕಣ್ಮುಂದೆ ಸುಳಿಯಿತು. ಅಪ್ಪ ಎಲ್ಲೆಲ್ಲಿ ನನ್ನನ್ನು ಹುಡುಕುತ್ತಿರಬಹುದು. ಸ್ಕೂಲ್ ಹತ್ತಿರ, ಟ್ಯೂಷನ್ ಕ್ಲಾಸ್ ಹತ್ತಿರ, ಫ್ರೆಂಡ್ಸ್ ಹತ್ತಿರ ಎಲ್ಲಾ ವಿಚಾರಿಸಿ ಸುಳಿವು ಸಿಗದಿದ್ದಾಗ ಎಷ್ಟು ಆತಂಕ ಆಗಿರಬಹುದು.  ಛೆ. ನಾನೆಂತಹ ಮಗ. ನನ್ಮೇಲೆ ಎಷ್ಟು ಆಸೆ ಇಟ್ಟುಕೊಂಡಿದ್ದರು. ಸಂಜೆ ಸ್ಕೂಲಿಂದ ಬರ್ತಾ ಇದ್ದ ಹಾಗೆ ಮಗ ಹಸಿದಿರುತ್ತಾನೆ ಅಂತ ಬಿಸಿಬಿಸಿ ಬಜ್ಜಿ, ಬೋಂಡಾ ಮಾಡಿ ಕಾಯುತ್ತಿದ್ದ ಅಮ್ಮ ಕಣ್ಮುಂದೆ ಬಂದಳು. ಅಮ್ಮಾ ನನ್ನನ್ನು ಕ್ಷಮಿಸಮ್ಮಾ. ದಿನಾ ಟ್ಯೂಷನ್ ನಿಂದ ಮಗ ನಡ್ಕೊಂಡು ಸುಸ್ತಾಗಿ ಬರುತ್ತಾನಂತ ಸ್ಕೂಟರ್ ನಲ್ಲಿ ಕಾಯುತ್ತಿದ್ದ ಅಪ್ಪ ಕಣ್ಮುಂದೆ ಬಂದರು. ನನ್ನನ್ನ ಕ್ಷಮಿಸ್ತೀಯಾ ಅಪ್ಪಾ. ಇನ್ಯಾವತ್ತೂ ಇಂತಹ ತಪ್ಪು ಮಾಡೋದಿಲ್ಲ. ಮನೆ ಬಿಟ್ಟು ಹೊರಡುವಾಗ ಇದ್ದ ಜೋಷ್ ಎಲ್ಲ ಝರ್ ಅಂತ ಇಳಿದಿತ್ತು.

ಮತ್ತೆ ಅಲ್ಲಿ ಕುಳಿತುಕೊಳ್ಳಲಾಗಲಿಲ್ಲ. ಬ್ಯಾಗ್ ತಗಲಾಕಿಕೊಂಡು ಎದ್ದು ಹೊರಗೋಡಿದೆ. ಜೊತೇಗಿದ್ದ ಸ್ನೇಹಿತನೂ ನನ್ನ ಹಿಂದೆ ಒಡೋಡಿ ಬರಲಾರಂಭಿಸಿದ. ಬಹುಷ: ಅವನಿಗೂ ನನ್ನ ತರಹಾನೇ ಅನ್ನಿಸಿರಬಹುದೇನೋ. ಟೆಲಿಫೋನ್ ಬೂತ್ ಕಂಡಾಕ್ಷಣ ಮನೆಗೆ ಡಯಲ್ ಮಾಡಲಾರಂಭಿಸಿದೆ. ಫೋನ್ ಗೇ ಕಾಯುತ್ತಿದ್ದಂತೆ ಕುಳಿತ ಅಮ್ಮನ ಸ್ವರ ಕೇಳುತ್ತಿದ್ದಂತೆ ಸ್ವರ ಹೊರಡಲಿಲ್ಲ. ಮೆಜೆಸ್ಟಿಕ್ ನಲ್ಲಿ ಇದ್ದೇನೆ. ಬರುತ್ತಿದ್ದೇನೆ ಅಂತ ಹೇಳಿ ಫೋನ್ ಇಟ್ಟುಬಿಟ್ಟೆ. ಯಾವಾಗ ಮನೆ ಸೇರ್ತೀನೋ ಅಂತ ಚಡಪಡಿಸಲಾರಂಭಿಸಿದೆ. ಕ್ಷಣವೂ ಯುಗವೆನಿಸುತ್ತಿತ್ತು. ಅತ್ತ ಕಡೆಯಿಂದ ಅಮ್ಮ ಅಳುತ್ತಿರುವ ಸ್ವರ ಕಿವಿಯಲ್ಲಿ ಗುಂಯ್ ಗುಡುತ್ತಲೇ ಇತ್ತು.

ಮಗು


ಪ್ರಪಂಚ ನೋಡೋಕೆ ನನ್ನಮ್ಮ ನನಗೆ ಅವಕಾಶಾನೇ ನೀಡಲಿಲ್ಲ. ಈ ಜಗತ್ತನ್ನು ಕಾಣೋಕೆ ಮುಂಚೇನೆ ನಾನು ಇಹಲೋಕ ತ್ಯಜಿಸಿದ್ದೆ. ಹಿಂದಿನ ಜನ್ಮದಲ್ಲಿ ನಾನೇನು ಕರ್ಮ ಮಾಡಿದ್ದೆನೋ. ಎಲ್ಲ ಅಪ್ಪ ಅಮ್ಮಂದಿರು ಮಗುವಿನ ಮುಖ ಯಾವಾಗ ನೋಡುತ್ತೇವೋ, ಅದು ಯಾವಾಗ ಕಣ್ಣು ಬಿಡುತ್ತೋ ಅಂತ ಕಾತರದಿಂದ ಕಾಯುತ್ತಿದ್ದರೆ, ನನ್ನಮ್ಮ, ಇದು ಯಾಕಾದ್ರೂ ಹುಟ್ಟುತ್ತೋ ಯಾರಿಗೆ ಬೇಕಾಗಿತ್ತು ದರಿದ್ರ ಪಿಂಡ ಅಂತ ನನ್ನನ್ನು ಹೊಟ್ಟೇಲಿದ್ದಾಗಿಂದಲೇ ಹಿಂಸಿಸುತ್ತಿದ್ದಳು. ತನ್ನ ಕ್ಷಣಿಕ ಸುಖಕ್ಕಾಗಿ ಅವಳು ನನ್ನನ್ನು ಬಲಿಕೊಟ್ಟಳು. ಹುಟ್ಟಿದ ತಕ್ಷಣವೇ ಬಟ್ಟೆಯಲ್ಲಿ ಸುತ್ತಿ ತೊಟ್ಟಿಗೆ ಎಸೀವಾಗ ಅವಳಿಗೆ ತನ್ನ ಭವಿಷ್ಯದ ಬಗ್ಗೆ ಬಿಟ್ಟು ಬೇರೇನೂ ಗೋಚರಿಸಲಿಲ್ಲ.

ಯಾಕಮ್ಮಾ ಹೀಗೆ ಮಾಡಿದೆ. ಹೀಗೆ ಮಾಡಲು ನಿನಗೆ ಮನಸ್ಸಾದರೂ ಹೇಗೆ ಬಂತು. ನಾನು ಏನಮ್ಮ ತಪ್ಪು ಮಾಡಿದ್ದೆ. ತೊಟ್ಟೀಗೆ ಎಸೀವಾಗ ಕರುಳ ಕುಡಿಯನ್ನು ನಾಯಿ ನರಿ ತಿನ್ನಬಹುದು ಅಂತ ನಿನಗೆ ಅನಿಸಲಿಲ್ವಾ. ಒಂಭತ್ತು ತಿಂಗಳು ನಿನ್ನ ಹೊಟ್ಟೇಲಿ ಬೆಚ್ಚಗಿದ್ದ ನಾನು ಚಳೀಲಿ ನಡುಗಬಹುದು ಅಂತ ನಿನಗೆ ಕಿಂಚಿತ್ತೂ ಅನ್ನಿಸಲಿಲ್ವಾ. ಸಾಯೋಕೆ ಮುಂಚೆ ನಾನು ಅದೆಷ್ಟು ಯಾತನೆ ಅನುಭವಿಸಿದೆ ಗೊತ್ತಾ.  ಹಸಿವೆಯಿಂದ ಕಂಗಾಲಾಗಿ ತೊಟ್ಟು ಹಾಲಿಗಾಗಿ ಅದೆಷ್ಟು ಕಿರುಚಿದೆ ಗೊತ್ತಾ. ಒಂದು ದೇವಸ್ಥಾನದ ಮುಂದೆ ಅಥವಾ ಅನಾಥಾಶ್ರಮದ ಮುಂದೆಯಾದರೂ ನನ್ನನ್ನು ಎಸೀಬಾರದಿತ್ತಾ ಅಮ್ಮ. ಆಗ ನನಗೆ ಬದುಕು ನೀಡಿ ಒಳ್ಳೆಯವರು ಇನ್ನೂ ಪ್ರಪಂಚದಲ್ಲಿ ಇದ್ದಾರೆ ಅನ್ನೋದನ್ನ ಯಾರಾದ್ರೂ ರುಜುವಾತು ಮಾಡುತ್ತಿದ್ದರು.

ನನ್ನನ್ನು ಏನು ಉದ್ದೇಶವಿಟ್ಟು ತೊಟ್ಟೀಗೆ ಎಸೆದಿಯೋ ಆ ಉದ್ದೇಶ ಆದಷ್ಟು ಬೇಗ ಫಲಿಸಲಿ. ಆದರೆ, ಮುಂದೊಂದು ದಿನ ನೀನು ಪುನ: ಪ್ರಸವ ವೇದನೆ ಅನುಭವಿಸುತ್ತೀಯಲ್ಲ, ಆ ಸಂದರ್ಭದಲ್ಲಿ ಒಂದು ಕ್ಷಣ ಖಂಡಿತಾ ನನ್ನನ್ನು ನೆನಪಿಸಿಕೊಳ್ಳುವೆ… ಆಗ ನಾನು ನಿನ್ನ ಮನಸ್ಸಿನ ಒಂದು ಕಪ್ಪು ಚುಕ್ಕೆಯಾಗಿ ಪ್ರತಿ ಕ್ಷಣ ಧುತ್ತೆಂದು ಎದುರು ಬಂದು ನಿಲ್ಲುವೆ…

ನನ್ನ ಅಮ್ಮನಂತಹ ಅಮ್ಮಂದಿರೇ, ದಯವಿಟ್ಟು ನಮ್ಮನ್ನು ಬದುಕಲು ಬಿಡಿ. ಕಣ್ಣು ತೆರೆದು ಪ್ರಪಂಚ ನೋಡಲು ನಮಗೆ ಅವಕಾಶ ಮಾಡಿಕೊಡಿ. ನಿಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಬಲಿಕೊಡಬೇಡಿ ದಯವಿಟ್ಟು…

Friday, 24 February 2012

ಪುತ್ತೂರು ಶ್ರೀ ಮಹಾಲಿಂಗೇಶ್ವರ




ಪುತ್ತೂರಿನ ಮಹತೋಬಾರ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಸುಮಾರು 11-12ನೇ ಶತಮಾನದ ಹಳೆಯ ದೇವಸ್ಥಾನ. ಮಹಾಲಿಂಗೇಶ್ವರ ದೇವಸ್ಥಾನದ ಮುಂದೆ ಇರುವ ಸ್ಮಶಾನ ಇಲ್ಲಿನ ವಿಶೇಷ. ಕಾಶಿ ಬಿಟ್ಟರೆ ಬಹುಷ: ಶಿವನ ದೇವಸ್ಥಾನದ ಮುಂದೆ ಸ್ಮಶಾನ ಬೇರೆಲ್ಲೂ ಕಾಣಸಿಗಲಾರದು.

ದೇವಸ್ಥಾನದ ಸುತ್ತಮುತ್ತ ಆನೆ ಬರುವ ಹಾಗಿಲ್ಲ. ಆಕಸ್ಮಾತ್ ಬಂದಲ್ಲಿ ಅವುಗಳಿಗೆ ಸಾವು ಖಚಿತ ಅನ್ನೋ ಪ್ರತೀತಿ ಇದೆ. ಇದಕ್ಕೆ ಒಂದು ಕಥೆ ಇದೆ. ಒಮ್ಮೆ ಗೋವಿಂದ ಭಟ್ಟರು ಅನ್ನೋ ಬ್ರಾಹ್ಮಣರು ಪೂಜೆ ಮಾಡಲೆಂದು ಒಂದು ಶಿವಲಿಂಗವನ್ನು ಈಗ ದೇವಸ್ಥಾನ ಇರುವ ಜಾಗದಲ್ಲಿ ಮರೆತು ನೆಲದ ಮೇಲಿಟ್ಟರಂತೆ. ಭೂಸ್ಪರ್ಶವಾದ ಶಿವಲಿಂಗವು ಎಷ್ಟು ಎಳೆದರೂ ಮೇಲೇಳಲಿಲ್ಲವಂತೆ. ಆಗ ಅದನ್ನು ಎಳೆಯಲು ಆನೆಯನ್ನು ಕರೆಸಿದರಂತೆ. ಶಿವಲಿಂಗಕ್ಕೆ ಹಗ್ಗ ಕಟ್ಟಿ ಎಳೆಯುತ್ತಿದ್ದಂತೆ ಶಿವಲಿಂಗವು ದೊಡ್ಡದಾಗತೊಡಗಿತಂತೆ. ಅದೇ ಮಹಾಲಿಂಗವಾಗಿ ಮಹಾಲಿಂಗೇಶ್ವರ ಆಯಿತು. ರಭಸವಾಗಿ ಶಿವಲಿಂಗವನ್ನು ಎಳೆಯುತ್ತಿದ್ದ ಆನೆ ಛಿದ್ರಛಿದ್ರವಾಗಿ ದೂರ ದೂರ ಎಸೆಯಲ್ಪಟ್ಟಿತು. ಅದರ ಒಂದೊಂದು ಅಂಗ ಬಿದ್ದ ಒಂದೊಂದು ಸ್ಥಳಕ್ಕೆ ಒಂದೊಂದು ಹೆಸರು ಹುಟ್ಟಿಕೊಂಡಿತು. ಕೊಂಬು ಬಿದ್ದ ಕಡೆ ಕೊಂಬೆಟ್ಟು. ತಲೆ ಬಿದ್ದ ಕಡೆ ತಾಳೆಪಾಡಿ, ಕೈ ಬಿದ್ದ ಕಡೆ ಕೇಪಳ, ಬಾಲ ಬಿದ್ದಲ್ಲಿ ಬೀದಿಮಜಲು ಎಂದು ಹೆಸರಾಯಿತು. ಈ ಪವಾಡವನ್ನು ಕಂಡ, ಅಂದು ಪುತ್ತೂರನ್ನು ಆಳುತ್ತಿದ್ದ ಬಂಗರಾಜ ದೇವರಿಗೆ ಗುಡಿ ಕಟ್ಟಿಸಿದನಂತೆ.  

ಮಹಾಲಿಂಗೇಶ್ವರ ಗುಡಿಯ ಮುಂದೆ ಮೂರು ಕಾಲುಗಳ್ಳುಳ್ಳ ನಂದಿ ಇದೆ. ಇದಕ್ಕೂ ಒಂದು ಕಥೆ ಇದೆ. ರೈತರು ಹೊಲದಲ್ಲಿ ಬೆಳೆದಿದ್ದ ಪೈರನ್ನು ದಿನಾ ಒಂದು ಬಸವ ಬಂದು ಹಾಳು ಮಾಡುತ್ತಿತ್ತಂತೆ. ಒಂದು ದಿನ ರೈತ ಕಾದು ಕುಳಿತು ಬಸವನ ಕಾಲಿಗೆ ಹೊಡೆದ ರಭಸಕ್ಕೆ ಕಾಲು ಮುರಿದು ಹೋಯಿತಂತೆ. ಮೂರು ಕಾಲುಗಳಲ್ಲಿ ಅಳುತ್ತಾ ಮಹಾಲಿಂಗೇಶ್ವರನ ಮುಂದೆ ಬಂದ ಬಸವನಿಗೆ, ಮುಂದೆ ನಿನಗೆ ಯಾರಿಂದಲೂ ತೊಂದರೆ ಆಗುವುದಿಲ್ಲ ಬದಲಾಗಿ ನನ್ನ ಜೊತೆಗೆ ನಿನ್ನನ್ನೂ ಪೂಜಿಸುವಂತಾಗಲಿ ಎಂದು ಕಲ್ಲಾಗಿ ಮಾಡಿಬಿಟ್ಟನಂತೆ. ಮಹಾಲಿಂಗೇಶ್ವರನ ಎದುರು ಇರುವ ನಂದಿಗೆ ಒಂದು ಕಾಲು ಮುರಿದುಹೋದುದನ್ನು ಈಗಲೂ ಗಮನಿಸಬಹುದು. ಮುರಿದ ಕಾಲು ಈಗಲೂ ಕಲ್ಲಾಗಿ ಹೊಲದ ಮಧ್ಯೆ ಇದೆ ಎಂದು ಪ್ರತೀತಿ.

ಕ್ರಮೇಣ ಶಾಸ್ತ್ರೋಕ್ತವಾಗಿ ಪೂಜಾವಿಧಿಗಳೊಂದಿಗೆ ಪರಿವಾರ ದೇವತೆಗಳಾದ ಪಾರ್ವತಿ, ಸುಬ್ರಮಣ್ಯ, ಗಣೇಶ ಹಾಗೂ ದೈವಗಳನ್ನು ಪ್ರತಿಷ್ಟಾಪಿಸಲಾಯಿತು. ದೇವಸ್ಥಾನದ ಮುಂಭಾಗದಲ್ಲಿ ನಾಗ, ಅಯ್ಯಪ್ಪ ಹಾಗೂ ನವಗ್ರಹಗಳ ಗುಡಿಗಳನ್ನು ನಿರ್ಮಿಸಲಾಯಿತು.

ದೇವಸ್ಥಾನದ ಹಿಂದೆ ನಿತ್ಯ ಹರಿದ್ವರ್ಣದ ಒಂದು ಕೆರೆ ಇದೆ. ಇಲ್ಲಿ ನಡೆಯುವ ತೆಪ್ಪೋತ್ಸವ ಮಹತ್ವಪೂರ್ಣವಾದುದು. ಕಾರ್ತೀಕ ಮಾಸದಲ್ಲಿ ದೇವಸ್ಥಾನ ಹಾಗೂ ಕೆರೆಯ ಸುತ್ತಲೂ ದೀಪಗಳನ್ನು ಹಚ್ಚಿ ಲಕ್ಷದೀಪೋತ್ಸವ ಆಚರಿಸಲಾಗುತ್ತದೆ. ಈ ಕೆರೆಯಲ್ಲಿ ಹಿಂದೆ ಮುತ್ತು ಬೆಳೆಯುತ್ತಿತ್ತಂತೆ. ಇದಕ್ಕೂ ಒಂದು ಕಥೆ ಇದೆ. ದೇವಸ್ಥಾನದ ಹಿಂದೆ ಕೆರೆ ನಿರ್ಮಿಸುತ್ತಿರುವಾಗ ಎಷ್ಟು ಆಳ ಅಗೆದರೂ ನೀರು ಬರಲಿಲ್ಲವಂತೆ. ಅದಕ್ಕೆ ವರುಣನ ಪೂಜೆಗೈದು ಬ್ರಾಹ್ಮಣರಿಗೆ ಕೆರೆಯಲ್ಲಿ ಅನ್ನಸಂತರ್ಪಣೆ ಮಾಡಲಾಯಿತಂತೆ. ಅವರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರೂ ತುಂಬಲಾರಂಭಿಸಿದಾಗ ಅವರು ಊಟ ಬಿಟ್ಟು ಓಡಿದರಂತೆ. ಅವರ ಎಲೆಯಲ್ಲಿದ್ದ ಅನ್ನದ ಅಗಳುಗಳು ಮುತ್ತಾಗಿ ಪರಿವರ್ತನೆಗೊಂಡವಂತೆ. ಮುತ್ತು ಸಿಗೋ ಊರಿಗೆ ಮುತ್ತೂರು ಎಂಬ ಹೆಸರು ಬಂತು. ಕ್ರಮೇಣ ಜನರ ಬಾಯಲ್ಲಿ ಮುತ್ತೂರು, ಪುತ್ತೂರು ಆಯಿತು.


ಇಲ್ಲಿ ಏಪ್ರಿಲ್ ನಲ್ಲಿ ನಡೆಯುವ ಜಾತ್ರೆ ತುಂಬಾ ವಿಶೇಷ. ಏಪ್ರಿಲ್ 1ನೇ ತಾರೀಕಿಗೆ ಗೊನೆ ಕಡಿಯುವುದು. 10ನೇ ತಾರೀಕಿಗೆ ಕೊಡಿ ಏರುವುದು. 16ನೇ ತಾರೀಕಿಗೆ ಮಹಾರಥೋತ್ಸವ. ರಥೋತ್ಸವಕ್ಕೆ ಮುನ್ನ ಬೆಡಿಕಂಬ ಎಂಬ ಹೆಸರಿನಲ್ಲಿ ಸುಡುಮದ್ದುಗಳ ಪ್ರದರ್ಶನ. 18ನೇ ತಾರೀಕಿಗೆ ಕೊಡಿ ಇಳಿಯುವುದು. ಕೊಡಿ ಏರಿದ ನಂತರ ಇಳಿಯುವವರೆಗೆ ಪುತ್ತೂರಿನ ಜನ ಊರು ಬಿಟ್ಟು ಬೇರೆಡೆ ಹೋಗುವುದಿಲ್ಲ ಹಾಗೂ ಮಾಂಸಾಹಾರ ಸೇವಿಸುವುದಿಲ್ಲ. ಈ ದಿನಗಳಲ್ಲಿ ದೇವರಿಗೆ ಊರು ಪ್ರದಕ್ಷಿಣೆ ಹಾಕಿಸಿ ಕಟ್ಟೆ ಪೂಜೆ ಮಾಡಿಸಲಾಗುತ್ತದೆ.

ಜಯ ಕರ್ನಾಟಕ ಸಂಸ್ಥಾಪಕ ಶ್ರೀ ಮುತ್ತಪ್ಪ ರೈ ರವರು 2010 ರಲ್ಲಿ ಸುಮಾರು 1.00 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ 71 ಅಡಿ ಎತ್ತರ, 55 ಟನ್ ಭಾರವಿರುವ ತೇಗದ ಮರದ ಬ್ರಹ್ಮರಥವನ್ನು ಮಹಾಲಿಂಗೇಶ್ವರನಿಗೆ ಸಮರ್ಪಿಸಿದರು ಹಾಗೂ  2012 ರಲ್ಲಿ ಸುಮಾರು 22.00 ಲಕ್ಷ ರೂ. ವೆಚ್ಚದಲ್ಲಿ, ಬ್ರಹ್ಮರಥದ ಸಂರಕ್ಷಣೆಗೆಂದು ಬ್ರಹ್ಮರಥ ಮಂದಿರ ನಿರ್ಮಿಸಿ ಅರ್ಪಿಸಿದರು.


ಸುಮಾರು ರೂ.14.00 ಕೋಟಿಗಳ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ನಡೆದು ದೇವಾಲಯವು ಪುನರ್ ನಿರ್ಮಾಣಗೊಂಡಿದೆ. ನಾನಾ ಸಂಘ ಸಂಸ್ಥೆಗಳು ಕರಸೇವೆ ನಡೆಸಲು ನಾ ಮುಂದೆ ತಾ ಮುಂದೆ ಎಂದು ಕರಸೇವೆಯಲ್ಲಿ ತೊಡಗಿಸಿಕೊಂಡಿದ್ದು ಒಂದು ಇತಿಹಾಸವೇ ಸರಿ. 2013ರ ಮೇ ತಿಂಗಳ 5ನೇ ತಾರೀಕಿನಿಂದ 16 ರವರೆಗೆ ವಿಜ್ರಂಭಣೆಯಿಂದ ಬ್ರಹ್ಮಕಲಶೋತ್ಸವ ನಡೆದು, ಮೇ  13ರಂದು ಪರಿವಾರ ದೇವತೆಗಳೊಂದಿಗೆ ಮಹಾಲಿಂಗೇಶ್ವರ ದೇವರ ಪ್ರತಿಷ್ಠೆ ಕಾರ್ಯ ನಿರ್ವಿಘ್ನವಾಗಿ ನೆರವೇರಿದೆ.

 

ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಗರ್ಭಗುಡಿಯಲ್ಲಿ ತಾಮ್ರದ ತಂಬಿಗೆಯಲ್ಲಿ ತುಂಬಿಟ್ಟ ಚಿನ್ನದ ನಾಣ್ಯಗಳು ದೊರೆತಿದ್ದು ಕೂಡಾ ಒಂದು ಇತಿಹಾಸ. ಇದೇ ರೀತಿ ದೇವಸ್ಥಾನದ ಜೀರ್ಣೋದ್ಧಾರ ಸಮಯದಲ್ಲಿ ಅನೇಕ ಪವಾಡಗಳು ನಡೆದಿವೆ.

ಮಹಾಲಿಂಗೇಶ್ವರ ದೇವರನ್ನು ಬಹಳವಾಗಿ ನಂಬಿರುವ ಮುತ್ತಪ್ಪ ರೈ ರವರಿಗೆ ಆ ದೇವರ ಪವಾಡಗಳಲ್ಲಿ ಅಪಾರ ನಂಬಿಕೆ. ಇದೇ ರೀತಿ ಶ್ರೀ ದೇವರ ಅನುಗ್ರಹದಿಂದ ಅನೇಕರಿಗೆ ಅನೇಕ ಪವಾಡಗಳ ಅನುಭವವಾಗಿದೆ. ಬೇಡಿಬಂದವರ ಕಷ್ಟಗಳನ್ನು ನಿವಾರಿಸುವ, ತುಂಬಾ ಕಾರಣಿಕ ಇರುವ ಹತ್ತೂರ ಒಡೆಯ ಪುತ್ತೂರಿನ ಮಹಾಲಿಂಗೇಶ್ವರ ದೇವರಲ್ಲಿ ಪುತ್ತೂರಿನ ಜನತೆಗೆ ಅಪಾರ ನಂಬಿಕೆ. ಅಂತೆಯೇ ಪುತ್ತೂರಲ್ಲಿ ಹುಟ್ಟಿ ಬೆಳೆದು ಬೇರೆಡೆ ನೆಲೆಸಿರುವವರಿಗೆ ಕೂಡಾ. ದೇವಸ್ಥಾನದಲ್ಲಿ ಪ್ರತಿದಿನ ಊಟದ (ಪ್ರಸಾದ) ವ್ಯವಸ್ಥೆ ಇದೆ.
 
ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಲ್ಲಿ ಪುತ್ತೂರಿಗೆ ಒಮ್ಮೆ ಭೇಟಿ ಕೊಟ್ಟು ಮಹಾತೋಬಾರ್ ಶ್ರೀ ಮಹಾಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಲು ಮರೆಯದಿರಿ.                                                          (ಸಂಗ್ರಹ) 



*****


Tuesday, 21 February 2012

ನಾ ಕಂಡ ಒಂದು ಮದುವೆ


ಕೆಲಸ ಅರಸಿಕೊಂಡು ಬರುವ ಬಿಜಾಪುರದವರು ನಮ್ಮ ಮನೆಗೆ ಸ್ವಲ್ಪ ದೂರದಲ್ಲಿ ಟೆಂಟ್ ಹಾಕಿಕೊಂಡಿದ್ದರು. ನಮ್ಮ ಮನೆಯ ಟ್ಯಾರಿಸ್ ಮೇಲೆ ನಿಂತರೆ ಅವರ ಟೆಂಟ್ ಗಳು ಕಾಣುತ್ತಿತ್ತು. ಸಾಯಂಕಾಲ ಆಯಿತೂಂದ್ರೆ ರೊಟ್ಟಿ ತಟ್ಟೋ ಕೆಲ್ಸ. ಗ್ರಾನೈಟ್ ಕಲ್ಲಿನ ಮೇಲೆ ಜೋಳದ ರೊಟ್ಟಿ ತಟ್ಟೋದೇ ಒಂದು ಚೆಂದ.

ಒಂದು ದಿನ ಟ್ಯಾರಿಸ್ ಮೇಲೆ ನಿಂತುಕೊಂಡಿದ್ದೆವು. ಟೆಂಟ್ ಗಳಲ್ಲಿ ಬೆಳಕು ಕಾಣಿಸುತ್ತಿತ್ತು. ಎದುರು ಮನೆಯಿಂದ ಕೇಬಲ್ ಎಳೆದು ಎರಡು ಟ್ಯೂಬ್ ಲೈಟ್ ಹಾಕಲಾಗಿತ್ತು. ಒಂದು ಟೆಂಟ್ನ ಒಂದು ಪುಟ್ಟ ಹುಡುಗಿ ಸುಮಾರು 15-16 ವರ್ಷ ಇರಬಹುದು. ಅದಕ್ಕೆ ಸೀರೆ ಉಡಿಸಲಾಗಿತ್ತು. ಇನ್ನೊಂದು ಟೆಂಟ್ ನಿಂದ ಒಬ್ಬ ಹುಡುಗ ಒಂದು ಪಂಚೆ ಬಿಳಿ ಷರ್ಟ್ ಹಾಕಿ ರೆಡಿ ಆಗಿದ್ದ. ಇಬ್ಬರ ಕೈಯಲ್ಲಿ ಒಂದೊಂದು ಕಾಕಡ ಹೂವಿನ ಹಾರ. ಇಬ್ಬರೂ ಹಾರ ಬದಲಾಯಿಸಿಕೊಂಡರು. ಅಷ್ಟೆ ಮದುವೆ ಆಯಿತು. ಫೋಟೋಗ್ರಾಫರ್ ಒಂದು ಗ್ರೂಫ್ ಫೋಟೋ ತೆಗೆದ.  ನಂತರ ಮುಯ್ಯಿ. ಒಬ್ಬ ಒಂದು ಪುಸ್ತಕ ಪೆನ್ ಇಟ್ಟುಕೊಂಡು ನಿಂತಿದ್ದ. ಒಬ್ಬ ಬಂದವನೇ ಸಂಗಪ್ಪ 10 ರೂಪಾಯಿ ಅಂದ. ಇವನು ಬರಕೊಂಡ. ಇನ್ನೊಬ್ಬ ಬಂದ ಭೀಮಪ್ಪ 5 ರೂಪಾಯಿ. ಬಾಳಪ್ಪ 5 ರೂಪಾಯಿ.. ಧರಮಪ್ಪ 5 ರೂಪಾಯಿ ಹೀಗೆ ಒಬ್ಬೊಬ್ಬರು ಬಂದವರೇ ಕೂಗಿ ಹೇಳುತ್ತಿದ್ದರು. ಇವನು ಬರಕೊಳ್ಳುತ್ತಿದ್ದ.

ಆಮೇಲೆ ಊಟ. ಕೆಲವು ಹೆಂಗಸರು ರೊಟ್ಟಿ ತರಹನೇ ಏನೋ ತಟ್ಟುತ್ತಿದ್ದರು. ಬಹುಷ: ಒಬ್ಬಟ್ಟು ಇರಬಹುದು. ನೆಂಟರಿಷ್ಟರು ಸೇರಿದ್ದರು. ಎಲ್ಲರಿಗೂ ನೆಲದ ಮೇಲೆ ಕೂಡಿಸಿ ಮುತ್ತುಗದ ಎಲೆ ಹಾಕಲಾಯಿತು. ಒಂದೊಂದು ಒಬ್ಬಟ್ಟು ಹಾಕಲಾಯಿತು. ಆಮೇಲೆ ಅನ್ನ, ಸಾರು. ಅಷ್ಟೆ. ಮದುವೆ ಮುಗಿಯಿತು.

ಕೆಲವು ಮದುವೆಗಳಲ್ಲಿ ತಟ್ಟೆಯಲ್ಲಿ, ಎಲೆಯಲ್ಲಿ ವೇಸ್ಟ್ ಮಾಡುವ ಆಹಾರದಲ್ಲಿ ಇಂತಹ ಎಷ್ಟು ಮದುವೆಗಳನ್ನು ಮಾಡಬಹುದಲ್ವಾ? ತಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಯಾಕೆ ಹಾಕಿಸಿಕೊಳ್ಳಬಾರದು?  ತಮಗೆ ಇಷ್ಟವಿಲ್ಲದನ್ನು ಹಾಕೋಕೆ ಮುಂಚೇನೆ ಬೇಡ ಅಂತ ಹೇಳಬಹುದಲ್ಲಾ. ಎಲೆ ತುಂಬಾ ಹಾಕಿಸಿಕೊಂಡು ಕಾಟಾಚಾರಕ್ಕೆ ತಿಂದಂತೆ ಮಾಡಿ ಉಳಿದದ್ದನ್ನು ವೇಸ್ಟ್ ಮಾಡುವುದು ಅದೇನು ಹೆಚ್ಚುಗಾರಿಕೆ? ಆಕಸ್ಮಾತ್ ಉಳಿದರೂ ಅನಾಥಾಶ್ರಮಕ್ಕೆ ನೀಡಬಹುದಲ್ಲಾ. ಆ ಒಂದು ದಿನವಾದರೂ ಅನಾಥ ಮಕ್ಕಳ ಹೊಟ್ಟೆ ತುಂಬಿದ ನಗುವಿಗೆ ಕಾರಣರಾಗಬಹುದಲ್ಲಾ. ಈಗಿನ ಕಾಲದಲ್ಲಿ ಬೆಲೆ ಏರಿಕೆಯಿಂದಾಗಿ ಯಾವುದರ ಬೆಲೆಯೂ ಕಡಿಮೆ ಇಲ್ಲ. ಮದುವೆ ಮಾಡಿಸುವವರು ಕೂಡಾ ಸಿಕ್ಕಾಪಟ್ಟೆ ಐಟಂಗಳನ್ನು ಮಾಡಿಸದೆ ಅವಶ್ಯಕವಾದಷ್ಟು ಮಾತ್ರ ಮಾಡಿಸುವುದು ಸೂಕ್ತ ಅಂತ ಅನ್ನಿಸುವುದಿಲ್ಲವೇ?