Saturday 21 December 2013

ಕೃಷ್ಣ ಕೃಷ್ಣ


ಅದೊಂದು ಆಶ್ರಮ. ಅಲ್ಲಿ ಗಂಡಸರು ಹೆಂಗಸರು, ಹದಿಹರೆಯದವರು ಮಧ್ಯ ವಯಸ್ಸಿನವರು ವಯಸ್ಸಾದವರು ಹೀಗೆ ಎಲ್ಲ ಜಾಯಮಾನದವರೂ ಇದ್ದರು. ಗಂಡಸರು ಎದುರಾದಲ್ಲಿ ‘ಕೃಷ್ಣ ಕೃಷ್ಣ’ ಅನ್ನುತ್ತಿದ್ದರು. ಹೆಂಗಸರಾದಲ್ಲಿ ‘ರಾಧೆ ರಾಧೆ’ ಅನ್ನುತ್ತಿದ್ದರು. ಹೆಸರು ಹಿಡಿದು ಯಾರೂ ಕೂಗುತ್ತಿರಲಿಲ್ಲ. ಕಡ್ಡಾಯವೆಂಬಂತೆ ಎಲ್ಲರ ಕೈಯಲ್ಲೂ ಜಪಮಾಲೆ ಇದ್ದೇ ಇರುತ್ತಿತ್ತು.

ಅಪ್ಪ ಅಮ್ಮನಿಗೆ ಅವಳು ಒಬ್ಬಳೇ ಮಗಳು. ಅತಿ ಮುದ್ದಿನಿಂದ ಸಾಕಿದ್ದರು. ಅವಳಿಗೆ ಚಿಕ್ಕಂದಿನಿಂದಲೇ ದೇವರ ಬಗ್ಗೆ ಅತೀ ಆಸಕ್ತಿ.  ದಿನಗಳೆದಂತೆ ಅದು ಜಾಸ್ತಿಯಾಗತೊಡಗಿತು. ಊಟ ತಿಂಡಿ ಬಿಟ್ಟು ಉಪವಾಸ ಮಾಡುತ್ತಿದ್ದಳು. ಇಡೀ ದಿನ ನಿರಾಹಾರ ಇರುತ್ತಿದ್ದಳು. ದೇವಸ್ಥಾನಕ್ಕೆ ತಪ್ಪದೆ ಹೋಗುತ್ತಿದ್ದಳು. ಆಧ್ಯಾತ್ಮದ ಬಗ್ಗೆ ಎಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಹಾಜರಿರುತ್ತಿದ್ದಳು. ಅವಳು ಆಶ್ರಮದ ಸ್ವಾಮೀಜಿಯವರಿಂದ ಪ್ರೇರೇಪಿತಳಾಗಿದ್ದಳು. ಸ್ವಾಮೀಜಿಯವರ ಒಂದು ಪ್ರವಚನವನ್ನೂ ಮಿಸ್ ಮಾಡುತ್ತಿರಲಿಲ್ಲ. ದೇವರಿಗೆ ನೈವೇದ್ಯ ಮಾಡದೆ ತಾನು ತಿನ್ನುತ್ತಿರಲಿಲ್ಲ. ದೇವರಿಗೆ ನೈವೇದ್ಯ ಮಾಡದೆ ತಿಂದಲ್ಲಿ ಅದು ಮಣ್ಣು ತಿಂದ ಹಾಗೆ ಅನ್ನುತ್ತಿದ್ದಳು. ಅವಳಿಗೆ ಬೇಜಾರಾಗಬಾರದೆಂದು ಏನೇ ಅಡುಗೆ ಮಾಡಿದರೂ ಮೊದಲು ಸ್ವಲ್ಪ ದೇವರಿಗೆ ಎತ್ತಿಟ್ಟು ಆಮೇಲೆ ಮನೆಮಂದಿ ಎಲ್ಲಾ ತಿನ್ನುತ್ತಿದ್ದೆವು.

ಮನೆಯಲ್ಲಿ ಇದ್ದರೆ ಶ್ರದ್ಧೆ ಭಕ್ತಿಯಿಂದ ದೇವರ ಧ್ಯಾನ ಮಾಡಲಾಗುತ್ತಿಲ್ಲ. ಆಶ್ರಮದಲ್ಲಿಯೇ ಇದ್ದರೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ 24 ಗಂಟೆಯೂ ಭಗವಂತನ ಸೇವೆ ಮಾಡಬಹುದು ಎಂದು ನಿರ್ಧರಿಸಿ ಒಂದು ದಿನ ಅಪ್ಪ ಅಮ್ಮ ಎಷ್ಟು ಹೇಳಿದರೂ ಕೇಳದೆ ಆಶ್ರಮದಲ್ಲಿರಲು ನಿರ್ಧರಿಸಿ ಹೋಗಿಯೇ ಬಿಟ್ಟಳು. ಮನೆಯಲ್ಲಿಯೇ ಪೂಜೆ ಮಾಡಲು ನಿನಗೆ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತೇವೆ  ಎಂದು ಎಷ್ಟು ಗೋಗರೆದರೂ ಕೇಳಲಿಲ್ಲ. ಅಪ್ಪ ಅಮ್ಮ ಆಶ್ರಮಕ್ಕೆ ತೆರಳಿ ಸ್ವಾಮೀಜಿಯವರ ಕಾಲು ಹಿಡಿದು ಮಗಳನ್ನು ವಾಪಸ್ಸು ಮನೆಗೆ ಬರುವಂತೆ ಮಾಡಿ ಎಂದು ಕಣ್ಣೀರಿಟ್ಟರು. ‘’ಕೃಷ್ಣ ಕೃಷ್ಣ, ಎಲ್ಲಾ ಅವನಿಚ್ಛೆ. ಅವನ ಆಣತಿಯಂತೆ ನಾವು ನಡೆಯಲೇ ಬೇಕು. ನಾನೂ ಬುದ್ಧಿ ಹೇಳುತ್ತೇನೆ. ಆದರೆ ಕೇಳುವ ಸ್ಥಿತಿಯಲ್ಲಿ ಈಗ ಅವಳಿಲ್ಲ. ಅವನಿಚ್ಛೆ ಇದ್ದಲ್ಲಿ ಸ್ವಲ್ಪ ಸಮಯದ ನಂತರ ಅವಳೇ ಬರುತ್ತಾಳೆ’’ ಅಂತ ಹೇಳಿ ಕಳುಹಿಸಿಬಿಟ್ಟರು.

ಅಂದು ಅವಳ ಮದುವೆ. ಅವನು ಆಶ್ರಮದಲ್ಲಿಯೇ ಇರುವ ಇನ್ನೊಬ್ಬ ಭಕ್ತ. ಅವಳನ್ನು ಮದುವೆಯಾಗುವುದಾಗಿ ಸ್ವಾಮೀಜಿಯವರಲ್ಲಿ ತನ್ನ ಆಸೆ ವ್ಯಕ್ತಪಡಿಸಿದ್ದ. ಅವರಿಗೂ ಸರಿ ಅನ್ನಿಸಿತ್ತು. ಅವಳಿಗೆ ತಿಳಿ ಹೇಳಿ ಒಪ್ಪಿಸಿದ್ದರು. ಅವನಿಗೆ ಹಿಂದು ಮುಂದು ಯಾರೂ ಇರಲಿಲ್ಲ. ಸ್ವಾಮೀಜಿ ಅವಳ ಅಪ್ಪ ಅಮ್ಮನನ್ನು ಕರೆಸಿ ಎಲ್ಲಾ ವಿಷಯವನ್ನು ತಿಳಿಸಿದರು. ಅವರಿಗೂ ಬೇರೆ ಆಯ್ಕೆ ಇರಲಿಲ್ಲ. ಸಧ್ಯ ಮದುವೆ ಮಾಡಿಕೊಳ್ಳಲಾದರೂ ಒಪ್ಪಿದಳಲ್ಲ ಎಂದು ಅವರೂ ನಕಾರವೆತ್ತಲಿಲ್ಲ. ಅವನಿಗೂ ಅವಳಿಗೂ ಆಶ್ರಮದಲ್ಲಿ ಹಾರ ಬದಲಾಯಿಸಲಾಯಿತು. ಈ ರೀತಿ ಮದುವೆಯಾದ ದಂಪತಿಗಳಿಗಾಗಿ ಆಶ್ರಮದಲ್ಲಿ ಚಿಕ್ಕ ಚಿಕ್ಕ ಕುಟೀರಗಳಿದ್ದವು. ಸ್ವಾಮೀಜಿ ಇವರಿಗೂ ಒಂದು ಕುಟೀರದಲ್ಲಿ ಇರಲು ವ್ಯವಸ್ಥೆ ಮಾಡಿದರು.

ಮಧ್ಯಾಹ್ನದ ಪೂಜೆಗೆಂದು ಹೊರಟವಳು ಯಾಕೋ ತಲೆ ತಿರುಗಿದಂತಾಗಲು ಮುಂದಕ್ಕೆ ಹೋಗಲಾರದೆ ಅವಳು ಕುಟೀರಕ್ಕೆ ವಾಪಸ್ಸಾದಳು. ಕುಟೀರದ ಒಳಗೆ ಪ್ರವೇಶಿಸುತ್ತಿದ್ದಂತೆ ಅವಳು ಕಂಡ ದೃಶ್ಯ ಅದನ್ನು ವಿವರಿಸೋದು ಅಸಾಧ್ಯ. ಅದೊಂದು ಊಹಾತೀತ ಅಸಹನೀಯ ಅಸಹ್ಯ ದೃಶ್ಯ. ಆ ಹುಡುಗಿ ಕೂಡಾ ಆಶ್ರಮದ ಒಬ್ಬ ಭಕ್ತೆ. ಅವನೊಂದಿಗೆ ಆ ಹುಡುಗಿ ಅದೆಂಥಾ ಸ್ಥಿತಿಯಲ್ಲಿದ್ದಳೆಂದರೆ ಅದನ್ನು ಕಂಡ ಅವಳು ಮೂರ್ಛೆ ಹೋಗದಿರೋದು ಹೆಚ್ಚು. ಅವಳು ಈ ದೃಶ್ಯ ನೋಡಲಾರದೆ ತಿರುಗಿ ನಿಂತುಬಿಟ್ಟಳು. ಆ ಹುಡುಗಿ ಅವಸರವಸರವಾಗಿ ಸೀರೆ ಸುತ್ತಿಕೊಂಡು ಹೊರಗೋಡಿದಳು. ಇವಳು ಮಾತಾಡದೆ ತನ್ನ ಬಟ್ಟೆಬರೆಗಳನ್ನು ಬ್ಯಾಗ್ ನಲ್ಲಿ ತುಂಬಲಾರಂಭಿಸಿದಳು. ಅವನು ಹೇಳುತ್ತಲಿದ್ದ ‘’ನಾನವಳಲ್ಲಿ ರಾಧೆಯನ್ನು ಕಂಡೆ. ಇದರಲ್ಲಿ ನನ್ನ ತಪ್ಪು ಏನೂ ಇಲ್ಲ. ನೀನೂ ರಾಧೆ ಅವಳೂ ರಾಧೆ ಇಬ್ಬರಲ್ಲೂ ನಾನು ರಾಧೆಯನ್ನ ಕಂಡೆ’’. ನಾಳೆ ದಿನ ಇನ್ನೊಬ್ಬ ರಾಧೆನೂ ಕಾಣಬಹುದು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಬ್ಯಾಗ್ ಎತ್ತಿಕೊಂಡು ಅವಳು ಹೊರಟೇ ಬಿಟ್ಟಳು.

ಮನೆಗೆ ಬಂದವಳೇ ‘’ಅಮ್ಮಾ ನಾನು ತಪ್ಪು ಮಾಡಿಬಿಟ್ಟೆ. ಆವತ್ತು ನಿನ್ನ ಮಾತು ಕೇಳಿದ್ದರೆ ನನಗೆ ಈ ಸ್ಥಿತಿ ಬರುತ್ತಿರಲಿಲ್ಲ. ನನ್ನ ಕ್ಷಮಿಸಮ್ಮಾ’’ ಅನ್ನುತ್ತಾ ಅಮ್ಮನ ಕಾಲು ಹಿಡ್ಕೊಂಡು ಒಂದೇ ಸಮನೆ ಗೋಳಾಡಲಾರಂಭಿಸಿದಳು. ಸಮಾಧಾನ ಆಗುವವರೆಗೂ ಅಳಲಿ ಎಂದು ಅವಳಮ್ಮ ಸುಮ್ಮನಿದ್ದುಬಿಟ್ಟಳು. ಕೃಷ್ಣ ಕೃಷ್ಣ. ಏನು ನಿನ್ನ ಲೀಲೆ. ಅಂದು ಸ್ವಾಮೀಜಿ ಹೇಳಿದ ‘’ಅವನಿಚ್ಛೆ ಇದ್ದಲ್ಲಿ ಸ್ವಲ್ಪ ಸಮಯದ ನಂತರ ಅವಳೇ ಬರುತ್ತಾಳೆ’’ ಅನ್ನುವ ಮಾತನ್ನು ಅವಳಮ್ಮ ನೆನಪಿಸಿಕೊಂಡಳು. ಮುಂದಿನ ಮಗಳ ಜೀವನದ ಬಗ್ಗೆ ಯೋಚಿಸಲಾರಂಭಿಸಿದಳು.
*****