Friday 14 December 2012

ಸ್ನೇಹಿತ


     ಬೆಳಿಗ್ಗೆ ಸುಮಾರು 9.00 ಗಂಟೆ ಸಮಯ. ಆಫೀಸಿಗೆ ಹೋಗಲು ರೆಡಿಯಾಗುತ್ತಿದ್ದೆ. ಸಾಲ ವಸೂಲಾತಿ ವಾಹನ ಎಂದು ಬೋರ್ಡ್ ಹಾಕಿಕೊಂಡ ಒಂದು ಮೆಟಡೋರ್ ಮನೆಯ ಮುಂದೆ ಬಂದು ನಿಂತಿತು. ಮೂರು ನಾಲ್ಕು ಜನ ಇಳಿದು ಬಂದವರೇ ಮನೆಯೊಳಗೆ ನುಗ್ಗಿದರು. ಮೇಡಂ, ನಿಮ್ಮ ಯಜಮಾನರು ಒಬ್ಬರಿಗೆ ನಮ್ಮ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳಲು ಶೂರಿಟಿ ಹಾಕಿದ್ದಾರೆ. ಅವರು ಲೋನ್ ಕಟ್ಟಲಿಲ್ಲ. ಅದಕ್ಕೆ ನಿಮ್ಮ ಮನೆಯ ಹತ್ತಿರ ಬಂದಿದ್ದೇವೆ. ಇನ್ನು ಒಂದು ವಾರ ಬಿಟ್ಟು ಪುನ: ಬರುತ್ತೇವೆ. ಆಗ ಲೋನ್ ಕಂತು ಕಟ್ಟಿರಬೇಕು ಇಲ್ಲದಿದ್ದಲ್ಲಿ ನಿಮ್ಮ ಮನೆಯಲ್ಲಿರೋ ಸಾಮಾನನ್ನೆಲ್ಲ ಆಚೆ ಹಾಕಬೇಕಾಗುತ್ತದೆ ಎಂದು ಹೆದರಿಸಿದರು. ನನಗೆ ಒಮ್ಮೆಲೆ ಮೈ ಎಲ್ಲಾ ಉರಿದು ಹೋಯಿತು. ನೋಡ್ರಿ ಯಾರು ಲೋನ್ ತಗೊಂಡಿದ್ದಾರೋ ಅವರನ್ನು ಹೋಗಿ ಕೇಳಿ. ಇಲ್ಲಾಂದ್ರೆ ಶೂರಿಟಿ ಹಾಕಿರೋರನ್ನ ಹೋಗಿ ಕೇಳಿ. ಹೆಂಗಸರು ಮಾತ್ರ ಮನೇಲಿರೋ ಹೊತ್ನಲ್ಲಿ ಬಂದು ನಮ್ಮನ್ನು ಏನು ಕೇಳೋದು ಎಂದು ಜೋರು ಮಾಡಿದೆ. ನೆರೆಹೊರೆಯವರೆಲ್ಲ ಆಚೆ ಬಂದು ನೋಡುತ್ತಿದ್ದರು. ಯಾರಿಗೂ ಏನು ವಿಷಯ ಎಂದು ಗೊತ್ತಿಲ್ಲದೆ ಯಾರೂ ಮಾತಾಡಲು ಮುಂದೆ ಬರಲಿಲ್ಲ. ನನಗೇ ಗೊತ್ತಿರಲಿಲ್ಲ. ಇನ್ನು ಅವರಿಗೆ ಹೇಗೆ ಗೊತ್ತಾಗ್ಬೇಕು. ಮರ್ಯಾದೆಗೆ ಹೆದರೋ ಜನ ನಾವು. ತೀರಾ ಅವಮಾನವಾದಂತಾಗಿ ಕಣ್ಣಲ್ಲಿ ನೀರು ತುಂಬೋಕೆ ಶುರುವಾಯಿತು.

 

     ಲೋನ್ ತಗೊಂಡಿರೋ ಆ ಪುಣ್ಯಾತ್ಮನ್ನ ಕೇಳೋಕೆ ಹೋದ್ರೆ ಅವನು ಕೈಗೇ ಸಿಗೋದಿಲ್ಲ. ಇನ್ನು ಅವನ ಹೆಂಡತಿ ಹತ್ತಿರ ಕೇಳಿದ್ರೆ ನಾನೇನು ಮಾಡಲಿ ನನ್ನ ಹತ್ರ ಒಂದು ಪೈಸೇನೂ ಇಲ್ಲ. ಇದಕ್ಕೂ ಹೆಚ್ಚಾಗಿ ಫೋರ್ಸ್ ಮಾಡಿದ್ರೆ ಮೇಲಿಂದ ಬಿದ್ದು ಸತ್ತು ಹೋಗ್ತೀನಿ ಅಂತ ಹೆದರಿಸ್ತಾಳೆ. ಲೋನ್ ತಗೊಳ್ಳೋವಾಗ ಈ ಬುದ್ಧಿ ಎಲ್ಲಾ ಎಲ್ಲಿ ಹೋಗಿತ್ತೋ. ಇನ್ನು ಇನ್ನೊಬ್ಬ ಶೂರಿಟಿ ಹಾಕಿರೋರ ಮನೆ ಹತ್ರ ಹೋದ್ರೆ ನಮ್ಮಷ್ಟು ಗಾತ್ರದ ನಾಯಿನಾ ಛೂ ಬಿಡ್ತಾರೆ. ನೋಡ್ರಿ ಮೇಡಂ ನೀವು ಏನು ಮಾಡ್ತಿರೋ ನಮ್ಗೆ ಗೊತ್ತಿಲ್ಲ. ಪುನ: ಬರುವಾಗ ಪೋಲೀಸ್ ಜೊತೇಲಿ ಬರುತ್ತೇವೆ ಅಂತ ಹೆದರಿಸಿದ್ರು.  ನಂಗೂ ಯಾಕೋ ರೇಗೋಯ್ತು. ಯಾರೂ ನೋಡಿರದ ಪೋಲೀಸ್ ಕರಕೊಂಡು ಬನ್ನಿ ಹೋಗ್ರಿ ಅಂತ ದಬಾಯಿಸಿದೆ. ಸಿಕ್ಕಾಪಟ್ಟೆ ಟೆನ್ಶನ್ ಮಾಡ್ಕೊಂಡು ಲೋನ್ ತಗೊಂಡವ್ನಿಗೆ, ನಮ್ಮೆಜಮಾನ್ರಿಗೆ ಬಯ್ಕೋತಾ ಆಫೀಸಿಗೆ ಹೋದೆ.

 

     ಸಂಜೆ ಆಫೀಸ್ ನಿಂದ ಬಂದವಳೇ ಈ ವಿಷಯವನ್ನ ಮೊದಲೇ ನಂಗೆ ಯಾಕೆ ಹೇಳಲಿಲ್ಲ ಅಂತ ಯಜಮಾನರನ್ನ ಚೆನ್ನಾಗಿ ತರಾಟೆಗೆ ತಗೊಂಡೆ. ನೋಟೀಸು ಬಂದಿರೋ ವಿಷಯವನ್ನ ನನ್ನಿಂದ ಮುಚ್ಚಿಟ್ಟಿದ್ದರು. ಕೊನೆಗೆ ನೋಡ್ರೀ ಅದು ಎಷ್ಟು ಲೋನ್ ಅಂತ ಹೇಳಿ. ನಾನು ತಂದು ಕೊಡುತ್ತೀನಿ. ಮೊದಲು ಅದನ್ನು ಕಟ್ಟಿ. ಇನ್ನೊಂದು ಸಲ ಆ ಸಾಲ ವಸೂಲಾತಿ ವಾಹನ ನಮ್ಮ ಮನೆ ಮುಂದೆ ಬರಬಾರದು ಅಂತ ಹೇಳಿದೆ. ಕೊನೆಗೆ ನಾನು ದುಡ್ಡು ತಂದು ಕೊಟ್ಟಿದ್ದೂ ಆಯಿತು. ಅವರು ಕಟ್ಟಿದ್ದೂ ಆಯಿತು. ಅವರ ಸ್ನೇಹಿತ ಮಾತ್ರ ತಲೆಮರೆಸಿಕೊಂಡು ಸುತ್ತಾಡುತ್ತಲೇ ಇದ್ದ. ಸ್ನೇಹಿತರೇ ನಿಮಗೂ ಇಂತಹ ಅನುಭವವಾಗಿರಬಹುದು. ಇದ್ದರೆ ಇಂತಹ ಸ್ನೇಹಿತರಿರಬೇಕು ಅಲ್ವಾ?

*****

Wednesday 12 September 2012

ಮಾಯೆ


ಒಂದು ದಿನ ನಾರದರು ನಾರಾಯಣನಲ್ಲಿ ಕೇಳಿದರು ಈ ‘ಮಾಯೆ’ ಅಂದರೇನು? ನಾರಾಯಣ ಏನೂ ಮಾತಾಡಲಿಲ್ಲ. ಒಂದು ಬಂಗಾರದ ಬಿಂದಿಗೆ ನೀಡಿ ಭೂಲೋಕಕ್ಕೆ ಹೋಗಿ ಇದರಲ್ಲಿ ಒಂದು ಬಿಂದಿಗೆ ನೀರು ತೆಗೆದುಕೊಂಡು ಬಾ ಎಂದು ಹೇಳಿದ. ನಾರದರಿಗೆ ಏನೂ ಅರ್ಥವಾಗಲಿಲ್ಲ. ಬಿಂದಿಗೆ ತೆಗೆದುಕೊಂಡು ಭೂಲೋಕಕ್ಕೆ ನಡೆದರು. ಇನ್ನೇನು ಕೊಳದಿಂದ ನೀರು ತೆಗೆದುಕೊಳ್ಳಬೇಕು ಅಷ್ಟರಲ್ಲಿ ರಂಭೆ ಮೇನಕೆಯರನ್ನು ಮೀರಿಸಿದ ಒಬ್ಬ ಕನ್ಯೆ ಬಿಂದಿಗೆ ಹಿಡ್ಕೊಂಡು ಬರೋದನ್ನ ನೋಡಿದರು. ಅಂತಹ ಸೌಂದರ್ಯವತಿಯನ್ನು ಅವರು ಯಾವತ್ತೂ ನೋಡಿರಲಿಲ್ಲ. ಯಾರೀ ಸುಂದರಿ ಅಂದುಕೊಂಡವರೇ ಬಿಟ್ಟ ಕಣ್ಣು ಬಿಟ್ಟಂತಯೇ ಒಂದೇ ಸಮನೆ ಅವಳನ್ನೇ ನೋಡಲಾರಂಭಿಸಿದರು. ಅವಳೂ ಕೂಡಾ ಇವರನ್ನು ನೋಡಿದಳು. ಮೊದಲ ನೋಟದಲ್ಲೇ ಪ್ರೇಮಾಂಕುರವಾಗಿ ಇಬ್ಬರೂ ಗಾಂಧರ್ವ ವಿವಾಹವಾದರು. ಇಬ್ಬರೂ ಒಂದು ಕುಟೀರ ಕಟ್ಟಿಕೊಂಡು ಸಂಸಾರ ಪ್ರಾರಂಭಿಸಿದರು. ಕ್ರಮೇಣ ಅವರಿಗೆ ಇಬ್ಬರು ಗಂಡುಮಕ್ಕಳಾದರು.

        ಒಂದು ದಿನ ನಾರದರು ವಾಯು ವಿಹಾರಕ್ಕೆಂದು ಹೆಂಡತಿ ಮಕ್ಕಳನ್ನು ಕರೆದುಕೊಂಡು ಸಮುದ್ರತೀರಕ್ಕೆ ಹೋದರು. ಮಕ್ಕಳು ಮರಳಲ್ಲಿ ಆಟವಾಡುತ್ತಿದ್ದರು. ನೋಡನೋಡುತ್ತಿದ್ದಂತೆಯೇ ಒಂದು ಅಲೆ ಬಂದು ಚಿಕ್ಕ ಮಗನನ್ನು ಎಳ್ಕೊಂಡು ಹೋಯಿತು. ಎಲ್ಲರೂ ಹೋ ಎಂದು ಕಿರುಚಾಡಿದರು. ಅವರ ಪತ್ನಿ ಒಂದೇ ಸಮನೆ ಅಳಲು ಪ್ರಾರಂಭಿಸಿದಳು. ಅಷ್ಟರಲ್ಲಿ ಇನ್ನೊಂದು ಅಲೆ ಬಂದು ಇನ್ನೊಬ್ಬ ಮಗನನ್ನೂ ಎಳ್ಕೊಂಡು ಹೋಯಿತು. ಈಗ ಅವರ ಅಳು ಮುಗಿಲು ಮುಟ್ಟುವಂತಿತ್ತು. ಪತ್ನಿಯನ್ನು ಸಮಾಧಾನ ಮಾಡುತ್ತಿದ್ದಂತೆಯೇ ಇನ್ನೊಂದು ಅಲೆ ಬಂದು ಅವಳನ್ನೂ ಎಳ್ಕೊಂಡು ಹೋಯಿತು. ನಾರದರಿಗೆ ಏನೂ ಮಾಡಲೂ ತೋಚಲಿಲ್ಲ. ಇನ್ನೂ ಇಲ್ಲಿಯೇ ಇದ್ದರೆ ನನ್ನನ್ನೂ ಅಲೆ ಬಂದು ಎಳ್ಕೊಂಡು ಹೋಗಬಹುದು ಅಂತ ಅಲ್ಲಿಂದ ನಿಧಾನವಾಗಿ ಎದ್ದು ಹೊರಟರು. ಆಗ ಅಲ್ಲಿ ನಾರಾಯಣ ಪ್ರತ್ಯಕ್ಷನಾಗಿ ಏನು ನಾರದ, ಒಂದು ಬಿಂದಿಗೆ ನೀರು ತರಲು ಇಷ್ಟು ಸಮಯವೇ ಎಂದು ಕೇಳಿದ. ನಾರದರು ಚಾಚೂ ಬಿಡದಂಗೆ ಎಲ್ಲಾ ಕಥೆಯನ್ನೂ ಹೇಳಿದರು. ನಾರಾಯಣ ನೀನು ನನ್ನಲ್ಲಿ ಮಾಯೆ ಎಂದರೇನು ಎಂದು ಕೇಳಿದೆ. ಆಗ ನಾನು ಹೇಳಲಿಲ್ಲ. ಈಗ ನಿನಗೆ ಗೊತ್ತಾಗಿರಬಹುದು. ಒಂದು ಬಿಂದಿಗೆ ನೀರು ತರಲು ಬಂದಾಗಿನಿಂದ ಇಲ್ಲಿಯವರೆಗೂ ನಿನ್ನ ಬದುಕಿನಲ್ಲಿ ಏನೇನು ನಡೆಯಿತೋ ಅದುವೇ ‘ಮಾಯೆ’ ಎಂದು ಹೇಳಿದ.

*****

Friday 24 August 2012

ಮಾನವೀಯತೆ


ಪ್ರತಿ ಭಾನುವಾರ ನಾವು ಯೂನಿವರ್ಸಿಟಿ ಗ್ರೌಂಡ್ ನಲ್ಲಿ ಕ್ರಿಕೆಟ್ ಆಡಲು ಹೋಗುತ್ತಿದ್ದೆವು. ನಮ್ಮದು ಕಾಲೇಜು ಹುಡುಗರ ಟೀಮು. ಅದಕ್ಕೆ ನಾನು ಮುಖಂಡ. ಇನ್ನೊಂದು ವಾರಾಂತ್ಯ ಕಳೆಯಲು ಬರುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರುಗಳ ಟೀಮು. ಅದರ ಮುಖಂಡ ಐಬಿಎಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಆಜಾನುಬಾಹು. ಅವನ ಹೆಸರು ಕಾರ್ತಿಕ್. ನನಗೂ ಅವನಿಗೂ ಯಾವಾಗಲೂ ಎಣ್ಣೆ ಸೀಗೇಕಾಯಿ. ಒಮ್ಮೊಮ್ಮೆ ಕೈಕೈ ಮಿಲಾಯಿಸುವವರೆಗೂ ಕಿತ್ತಾಡುತ್ತಿದ್ದೆವು. ಅವರು ಸೀನಿಯರ್ ಎಂಬುದನ್ನೂ ಮರೆತು ಬಾಯಿಗೆ ಬಂದ ಹಾಗೆ ಬಯ್ಯುತ್ತಿದ್ದೆವು. ಒಟ್ಟಾರೆ ಅವರು ಪಾಕಿಸ್ತಾನ ನಾವು ಇಂಡಿಯಾ ಅನ್ನೋ ತರಹ ಆಡುತ್ತಿದ್ದೆವು.

       ಅಂದು ಕೂಡಾ ಕ್ರಿಕೆಟ್ ಆಡಲು ಬೆಳಿಗ್ಗೆ 6.00 ಗಂಟೆಗೇ ಟೀ ಕುಡಿದು ಮನೆ ಬಿಟ್ಟಿದ್ದೆ. ಮೊದಲ ಆಟ ನಾವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡೆವು. ಮೊದಲ ಮ್ಯಾಚ್ ನಲ್ಲಿ ನಾವೇ ಗೆದ್ದೆವು. ಇನ್ನೊಂದು ಮ್ಯಾಚ್ ಅವರು ಆಡುತ್ತಿದ್ದರು. ನಾವು ಫೀಲ್ಡಿಂಗ್ ಮಾಡುತ್ತಿದ್ದೆವು. ನಾನು ಬೌಂಡರಿ ಲೈನ್ ನಲ್ಲಿ ನಿಂತಿದ್ದೆ. ಕಾರ್ತಿಕ್ ಆಡುತ್ತಿದ್ದ. ನಮ್ಮ ಟೀಮಿನ ಎಲ್ಲರೂ ಕ್ಯಾಚ್ ಎಂದು ಕಿರುಚುತ್ತಾ ಗುಂಪುಗೂಡಿದರು. ನನಗೆ ಏನಾಗುತ್ತಿದೆ ಎಂದು ಗೊತ್ತಾಗಲಿಲ್ಲ. ಕಣ್ಣು ಮಂಜುಮಂಜಾಗುತ್ತಿತ್ತು. ಏನೂ ಕಾಣಿಸುತ್ತಿರಲಿಲ್ಲ. ನಾನು ಕಣ್ಣು ಕತ್ತಲಿಟ್ಟು ಬಿದ್ದುಬಿಟ್ಟಿದ್ದೆ. ಕಾರ್ತಿಕ್  ಔಟ್ ಆದ ಖುಷಿಯಲ್ಲಿ ನನ್ನನ್ನು ಯಾರೂ ಗಮನಿಸಲಿಲ್ಲ.

ಕಾರ್ತಿಕ್ ಓಡಿ ಬಂದವನೇ ನನ್ನನ್ನು ಎತ್ತಿ ತನ್ನ ತೊಡೆ ಮೇಲೆ ಮಲಗಿಸಿ ಮುಖಕ್ಕೆ ನೀರು ಹಾಕಿ ಗಾಳಿ ಬೀಸಿದ. ತನ್ನ ಕರ್ಚೀಪ್ ನಿಂದ ತರುಚಿದ ಗಾಯದಿಂದ ಒಸರುತ್ತಿದ್ದ ರಕ್ತವನ್ನು ಒರೆಸಿದ. ನಾನು ಕಣ್ಣು ಬಿಡುತ್ತಿದ್ದಂತೆ ನಾನು ಕಾರ್ತಿಕ್ ನ ತೊಡೆ ಮೇಲೆ ಮಲಗಿದ್ದೆ. ಎಲ್ಲಾ ವಿಷಯ ನಿಧಾನವಾಗಿ ತಿಳಿಯಿತು. ಎಲ್ಲರಿಗೂ ಮಂಕು ಕವಿದಂತಾಗಿ ಆಟವನ್ನು ನಿಲ್ಲಿಸಿ ಎಲ್ಲರೂ ಹೊರಟರು. ಕಾರ್ತಿಕ್ ಏನೂ ಆಗಿಲ್ಲ. ರೆಸ್ಟ್ ತಗೊ ಎಂದು ಹೇಳಿ ನನ್ನ ಬೆನ್ನು ನೇವರಿಸಿದ. ಸ್ನೇಹಿತ ಗಾಡಿಯಲ್ಲಿ ಮನೆವರೆಗೂ ಬಿಟ್ಟು ಹೋದ. ನಾನು ಮನೆಗೆ ಬಂದವನೇ ಅಮ್ಮನಲ್ಲಿ ಎಲ್ಲಾ ವಿಷಯವನ್ನು ಹೇಳಿದೆ. ಯಾವ ತಾಯಿ ಹೆತ್ತ ಮಗನೋ ಅವನ ಹೊಟ್ಟೆ ತಣ್ಣಗಿರಲಿ ಎಂದು ಅಮ್ಮ ಹರಸಿದಳು. ನನ್ನನು ಡಾಕ್ಟರಲ್ಲಿ ಕರಕೊಂಡುಹೋದಳು.

*****

Monday 13 August 2012

ಆದಿತ್ಯ


ಕೆಲವು ಮಂದಿ ನಮಗೆ ಗೊತ್ತಿಲ್ಲದೇನೇ ನಮ್ಮ ಹೃದಯದಲ್ಲಿ ಸ್ಥಾನ ಪಡಕೊಂಡು ಬಿಡುತ್ತಾರೆ. ಅಂತಹವರಲ್ಲಿ ನನ್ನ ಹೃದಯದಲ್ಲಿ ಸ್ಥಾನ ಪಡಕೊಂಡ ಒಬ್ಬ ಹುಡುಗ ಆದಿತ್ಯ ನಾಡಿಗ್. ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ಸ್ಟಾರ್ ಸಿಂಗರ್ ಪ್ರೋಗ್ರಾಂ ನಲ್ಲಿ ಫೈನಲ್ ವರೆಗೂ ತಲುಪಿದ್ದ ಹುಡುಗ. ಅವನ ಒಂದು ಪ್ರೋಗ್ರಾಂ ಅನ್ನೂ ಬಿಡದೆ ನೋಡುತ್ತಿದ್ದೆ. ಪ್ರತಿ ದಿನ ನೋಡುವಾಗಲೂ ಆದಿತ್ಯ ಸೆಲೆಕ್ಟ್ ಆಗಲಿ ಎಂದು ದೇವರಲ್ಲಿ ಬೇಡುತ್ತಿದ್ದೆ. ಉಜ್ವಲ ಭವಿಷ್ಯವನ್ನು ಹೊಂದಿದ್ದ ಶಿವಮೊಗ್ಗದ ಹುಡುಗ ಕಳೆದ ನವೆಂಬರ್ ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಮೊದಲು ನಂಬಲಿಲ್ಲ. ನಿಜಾ ಎಂದು ಗೊತ್ತಾದಾಗ ಅಳುವನ್ನು ಹತ್ತಿಕ್ಕಲಾಗಲಿಲ್ಲ. ಯಾವ ತಾಯಿ ಹೆತ್ತ ಮಗನೋ. ಬಂಧು ಅಲ್ಲ ಬಳಗ ಅಲ್ಲ. ಮುಖತ: ಒಮ್ಮೆಯೂ ನೋಡಿಲ್ಲ. ಬರೀ ಟಿವಿ ಪ್ರೋಗ್ರಾಂನಲ್ಲಿ ನೋಡಿದ ಹುಡುಗ. ಆದರೆ, ಹೊಟ್ಟೆಯಲ್ಲಿ ಕರುಳು ಕಿವುಚಿದಂತೆ ವಿಪರೀತ ಸಂಕಟವಾಗುತ್ತಿತ್ತು. ಇನ್ನು ಅವನ ಹೆತ್ತವರನ್ನು ಆ ದೇವರೆ ಕಾಪಾಡಬೇಕು.

ಏನೇ ಆಗಲಿ ಆದಿತ್ಯ ನೀನು ಹೀಗೆ ಮಾಡಬಾರದಿತ್ತು. ಎಲ್ಲರೂ ನಿನ್ಮೇಲೆ ಎಷ್ಟು ಭರವಸೆ ಇಟ್ಟಿದ್ದರು. ನಂಬಿದ ಎಲ್ಲರಿಗೂ ಮೋಸ ಮಾಡಿಬಿಟ್ಟೆಯಲ್ಲ ಆದಿತ್ಯ. ಅಪ್ಪ ಹೇಳಿದ್ರಲ್ಲಿ ಏನು ತಪ್ಪಿತ್ತು  ಹೆತ್ತವರು ಯಾವಾಗಲೂ ಮಕ್ಕಳ ಒಳ್ಳೇದನ್ನೇ ಬಯಸೋದು. ನಾನಾಗಿದ್ದರೂ ಅದನ್ನೇ ಹೇಳುತ್ತಿದ್ದೆ. ಮೊದಲು ಡಿಗ್ರಿ ಕಂಪ್ಲೀಟ್ ಮಾಡು ಮತ್ತೆ ಏನಾದ್ರೂ ಮಾಡ್ಕೊ ಅಂತ. ಹೆತ್ತವರ ಸಂಕಟ ನಿಮ್ಗೆ ಹೇಗೆ ಗೊತ್ತಾಗ್ಬೇಕು ಸಾಯೋವರೆಗೂ ಕಣ್ಣೀರಲ್ಲಿ ಕೈ ತೊಳೆಯೋ ತರ ಮಾಡಿಬಿಟ್ಟೆಯಲ್ಲ. ಈಗ ಏನು ಸಾಧಿಸಿದೆ. ಒಂದು ವರ್ಷ ಕಾದಿದ್ದರೆ ಡಿಗ್ರಿನೂ ಕಂಪ್ಲೀಟ್ ಆಗುತ್ತಿತ್ತು. ಅವಕಾಶಾನೂ ಹುಡ್ಕೊಂಡು ಬರುತ್ತಿತ್ತು. ಆದರೆ ಅಲ್ಲೀವರೆಗೂ ಕಾಯೋ ತಾಳ್ಮೆ ನಿನಗಿರಲಿಲ್ಲವಲ್ಲ.

ಇಂತಹ ಘಟನೆಯಿಂದ ಹೆತ್ತವರು, ಮಕ್ಕಳು ಏನೇ ತಪ್ಪು ಮಾಡಿದ್ರೂ ಕೈ ಎತ್ತೋದಿರಲಿ ಜೋರು ಮಾಡೋಕೂ ಹೆದರೋ ಪರಿಸ್ಥಿತಿ ಬಂದಿದೆ ಗೊತ್ತಾ. ಏನಾದ್ರೂ ಮಾಡ್ಕೊಳ್ಳಲಿ ಕಣ್ಮುಂದೆ ಇದ್ರೆ ಸಾಕು ಅನ್ನೋ ಸ್ಥಿತಿ ತಲುಪಿದ್ದಾರೆ. ಇರೋದು ಒಂದು ತಪ್ಪಿದ್ರೆ ಎರಡು. ಮಾತೆತ್ತಿದ್ರೆ ಮನೆ ಬಿಟ್ಟು ಹೋಗ್ತೀನಿ ಇಲ್ಲಾ ಸೂಸೈಡ್ ಮಾಡ್ಕೋತ್ತೀನಿ ಅಂತ ಹೆದರಿಸಿದ್ರೆ ಪಾಪ ಅವ್ರು ತಾನೇ ಏನು ಮಾಡ್ತಾರೆ.

ಮೊನ್ನೆ ಮೊನ್ನೆ ಮಂಗಳೂರಲ್ಲಿ ಒಂದು ರೇವ್ ಪಾರ್ಟಿ ಹಗರಣ ನಡೆಯಿತು. ಕೊನೆಗೆ ಬೆರಳು ತೋರಿಸಿದ್ದು ಯಾರಿಗೆ ಗೊತ್ತಾ. ಅರೆಬರೆ ಬಟ್ಟೆ ಹಾಕ್ಕೊಂಡು ಪಾರ್ಟಿ ಮಾಡುತ್ತಿದ್ದರಲ್ಲ ಅವರ ಹೆತ್ತವರಿಗೆ. ಮೊದಲೇ ಅಪ್ಪ ಅಮ್ಮ ಹೊಡೆದಿದ್ರೆ ಈಗ ಯಾರಿಂದಲೋ ಏಟು ತಿನ್ಬೇಕಾಗಿತ್ತಾ. ಆ ತರಹ ಬಟ್ಟೆ ಹಾಕ್ಕೊಂಡು ಬಂದಿದ್ರಲ್ಲ ಅವ್ರ ಅಪ್ಪ ಅಮ್ಮ ಏನು ಮಾಡುತ್ತಿದ್ದರು ಅಂತ ಕಮೆಂಟ್ ಮಾಡಿದ್ದೇ ಮಾಡಿದ್ದು. ಆದರೆ ಅವರು ಅಪ್ಪಅಮ್ಮನ ಮಾತು ಕೇಳೋ ಸ್ಥಿತೀಲಿ ಇದ್ದಾರಾ. ಅಲ್ಲಿಗೆ ಹೋದ್ಮೇಲೆ ಬಟ್ಟೆ ಚೇಂಜ್ ಮಾಡಿರಬಹುದಲ್ಲಾ. ಬುದ್ಧಿಗೆ ಏನಾದ್ರೂ ಒಂದೇಟು ಹೊಡೆದು, ಅದಕ್ಕೇ ಅವನು ಯಾ ಅವಳು ಆತ್ಮಹತ್ಯೆ ಮಾಡ್ಕೊಂಡ್ರೆ ಅದಕ್ಕೂ ಹೆತ್ತವರನ್ನೇ ಹೊಣೆ ಮಾಡುತ್ತಾರೆ ವಯಸ್ಸಿಗೆ ಬಂದ ಮಕ್ಕಳಿಗೆ ಯಾರಾದ್ರೂ ಹೊಡೀತಾರಾ? ಅಂತ.

ಮಕ್ಕಳೆ ಪರೀಕ್ಷೆಯಲ್ಲಿ ಫೇಲ್ ಆದ್ರೆ ಇನ್ನೊಂದು ಸಲ ಪ್ರಯತ್ತಿಸಬಹುದಲ್ಲಾ. ಲವ್ ಫೇಲ್ಯೂರ್ ಆದ್ರೆ ಏನಂತೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಅಪ್ಪ ಅಮ್ಮ ಇದ್ದಾರಲ್ಲ. ಸ್ವಲ್ಪ ದಿನ ಆದ್ಮೇಲೆ ಎಲ್ಲಾ ಮರೆಯಬಹುದಲ್ಲ. ಗಂಡ ಪ್ರೀತಿಸದಿದ್ರೆ ಏನಂತೆ ಮಕ್ಕಳಿದ್ದಾರಲ್ಲ ಪ್ರೀತಿಸೋಕೆ. ದೇವರು ಒಂದು ಕೈಯಿಂದ ಕಿತ್ತುಕೊಂಡ್ರೆ ಇನ್ನೊಂದು ಕೈಯಿಂದ ನೀಡುತ್ತಾನಂತೆ. ಒಂದು ಬಾಗಿಲು ಮುಚ್ಚಿದ್ರೆ ಇನ್ನೊಂದು ಬಾಗಿಲು ತೆರೆದಿರುತ್ತಂತೆ. ಭಗವದ್ಗೀತೆ ಹೇಳುವಂತೆ ಜೀವನದಲ್ಲಿ ಏನಾಗಬೇಕು ಎಲ್ಲವೂ ಮೊದಲೇ ನಿರ್ಣಯವಾಗಿರುತ್ತದೆ. ನಾವು ನಿಮಿತ್ತ ಮಾತ್ರ. ಆತ್ಮಹತ್ಯೆ ಮಾಡಿಕೊಂಡ್ರೆ ಕರ್ಮ ಎಲ್ಲಾ ಮುಗೀತು ಬಿಡುಗಡೆ ಸಿಕ್ತು ಅಂತ ತಿಳ್ಕೊಳ್ಳೋದು ತಪ್ಪು. ಪ್ರಸ್ತುತ ದೇಹದಿಂದ ಬೇರೆಯಾಗಿರಬಹುದು ಅಷ್ಟೆ. ಆತ್ಮಹತ್ಯೆ ಮಾಡಿಕೊಂಡ ಪಾಪವನ್ನೂ ಸೇರಿಸಿ ಹಿಂದಿನ ಪ್ರಾರಬ್ಧವನ್ನು ಅನುಭವಿಸುವಂತೆ ಇನ್ನೊಂದು ನೀಚ ಜನ್ಮವನ್ನು ನೀಡುತ್ತಾನೆ ಭಗವಂತ. ಆದರೆ, ಮಾನವ ಜನ್ಮ ಮಾತ್ರ ಖಂಡಿತಾ ನೀಡೋದಿಲ್ಲ. ಅದಕ್ಕೇ ದಾಸರು ಹೇಳಿರೋದು ಮಾನವ ಜನ್ಮ ದೊಡ್ಡದು ಹಾಳು ಮಾಡದಿರಿ ಹುಚ್ಚಪ್ಪಗಳಿರಾ ಅಂತ. 

ಇಲ್ಲಿ ನನಗೆ ಸ್ವಾಮಿ ಸುಖಬೋಧಾನಂದಜೀ ಅವರು ಹೇಳಿದ ಒಂದು ಘಟನೆ ನೆನಪಾಗುತ್ತದೆ. ಖ್ಯಾತ ವಿಂಬಲ್ಡನ್ ಆಟಗಾರನಿಗೆ ಏಡ್ಸ್ ರೋಗ ಬಂದು ಅದರಿಂದಲೇ ಆತ ತೀರಿಕೊಂಡ. ಅವನ ಅನಾರೋಗ್ಯದ ಪರಿಸ್ಥಿತಿಯಲ್ಲಿ ಒಬ್ಬ ಕೇಳಿದ, ನನಗೇ ಯಾಕೆ ಹೀಗಾಯಿತು ಅಂತ ನಿನಗೆ ಅನಿಸುವುದಿಲ್ಲವೆ? ಅವನು ಹೀಗೆ ಉತ್ತರಿಸಿದ. ಈ ಪ್ರಪಂಚದಲ್ಲಿ ಬಿಲಿಯಗಟ್ಟಳೆ ಜನರಿದ್ದಾರೆ. ಅವರ ಪೈಕಿ ಕೆಲವು ಮಿಲಿಯ ಜನರಿಗಷ್ಟೇ ಟೆನ್ನಿಸ್ ಗೊತ್ತು. ಅಂತಹವರ ಪೈಕಿ 10 ಸಾವಿರ ಮಂದಿ ವೃತ್ತಿಪರ ಆಟಗಾರರಾಗುತ್ತಾರೆ. ಅವರಲ್ಲಿ ಒಂದು ಸಾವಿರ ಮಂದಿ ಅಂತರಾಷ್ಟ್ರೀಯ ಮಟ್ಟಕ್ಕೆ ಬರುತ್ತಾರೆ. ಅವರ ಪೈಕಿ 30 ಮಂದಿ ವಿಂಬಲ್ಡನ್ ಆಯ್ಕೆಯಾಗುತ್ತಾರೆ. ಅವರಲ್ಲಿ 8 ಮಂದಿ ಸೆಮಿಫೈನಲ್ ತಲುಪುತ್ತಾರೆ. ಆ 8 ಮಂದಿಯಲ್ಲಿ ಇಬ್ಬರಷ್ಟೇ ಫೈನಲ್ ಗೆ ಬರುತ್ತಾರೆ. ಅಂತಹ ಇಬ್ಬರಲ್ಲಿ ನಾನು ಒಬ್ಬ ಆಗಿದ್ದೆ ಹಾಗೂ ನಾನೇ ಗೆದ್ದೆ. ಆಗ ನಾನು ಭಗವಂತನಲ್ಲಿ ನನಗೆ ಏಕೆ ಹೀಗಾಯಿತು ಅಂತ ಕೇಳಲಿಲ್ಲ. ಈಗಲೂ ಕೇಳುವುದಿಲ್ಲ. ಆದ್ದರಿಂದ ಜೀವನದಲ್ಲಿ ಬಂದದ್ದನ್ನು ಬಂದ ಹಾಗೇ ಸ್ವೀಕರಿಸೋದನ್ನ ರೂಢಿ ಮಾಡಿಕೊಳ್ಳೋಣ.

*****


Thursday 28 June 2012

ಕಿರಾತಕ


     ನಾವು ಆರು ಜನ ಮಕ್ಕಳು. ನಾನೇ ಹಿರಿ ಮಗಳು. ಇಬ್ಬರು ತಮ್ಮಂದಿರು ಹಾಗೂ ಮೂರು ಜನ ತಂಗಿಯರು. ಅಪ್ಪ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ಬರುತ್ತಾ ದಿನಾ ಕುಡಿದು ಬರುತ್ತಿದ್ದರು. ಕಿತ್ತು ತಿನ್ನುವ ಬಡತನ. ದಿನ ಬೆಳಗಾದರೆ ಜಗಳ. ಕಾಯಿಲೆ ಮಲಗಿರುವ ಅಜ್ಜಿ (ಅಪ್ಪನ ಅಮ್ಮ) ಕೂಡಾ ನಮ್ಮ ಜೊತೇಲಿದ್ದರು. ಕಾಯಿಲೆ ಮಲಗಿದ್ದರೂ ಬಾಯಿ ಏನೂ ಕಡಿಮೆ ಇರಲಿಲ್ಲ. ಅಮ್ಮನ ಜೊತೆ ದಿನಾ ಜಗಳವಾಡುತ್ತಿದ್ದರು. ನಾನು ಎಸ್.ಎಸ್.ಎಲ್.ಸಿ. ಮುಗಿಸಿ ಟೈಪಿಂಗ್ ಮಾಡಿಕೊಂಡಿದ್ದೆ. ಎಷ್ಟೇ ಬಡತನವಿದ್ದರೂ ಹೆಣ್ಣುಮಕ್ಕಳನ್ನು ಮದುವೆ ಮಾಡದೆ ಮನೇಲಿ ಇಟ್ಟುಕೊಳ್ಳಲು ಆಗುವುದಿಲ್ಲವಲ್ಲಾ. ಯಾರೋ ಗಂಡು ತೋರಿಸಿದರು. ನನ್ನ ಮದುವೇನೂ ಆಯಿತು.

      ನನ್ನ ಗಂಡನಾದವನು ದೀರ್ಘಕಾಲದ ಅಸ್ತಮಾ ಕಾಯಿಲೆಯಿಂದ ನರಳುತ್ತಿದ್ದುದು ಮದುವೆಯಾದ ಮೇಲೆ ಗೊತ್ತಾಯಿತು. ನಾನು ಮೋಸ ಹೋಗಿದ್ದೆ. ಎಲ್ಲರಿಗೂ ಈ ವಿಷಯ ಮೊದಲೇ ಗೊತ್ತಿದ್ದರೂ ಮದುವೆಯಾದ ಮೇಲೆ ಸರಿ ಹೋಗಬಹುದು ಎಂದು ನನಗೆ ತಿಳಿಸದೆ ಮದುವೆ ಮಾಡಿ ಮುಗಿಸಿದ್ದರು. ನಂತರ ಇತ್ತ ಕಡೆ ಇಣುಕಿಯೂ ನೋಡಲಿಲ್ಲ. ಅನಾರೋಗ್ಯ ಗಂಡನನ್ನು ಕಟ್ಟಿಕೊಂಡು ಪಡಬಾರದ ಕಷ್ಟಗಳನ್ನೆಲ್ಲ ಅನುಭವಿಸಿದೆ. ಒಮ್ಮೊಮ್ಮೆ ಅವನು ಉಸಿರು ಎಳೀವಾಗ ಭಯವಾಗುತ್ತಿತ್ತು. ಅವನ ಆರೋಗ್ಯ ಸರಿಹೋಗಲು ಯಾರು ಏನು ಹೇಳುತ್ತಾರೋ ಹೋಮಿಯೋಪತಿ, ಆಯುರ್ವೇದ ಎಲ್ಲಾ ಚಿಕಿತ್ಸೆಯನ್ನೂ ಕೊಡಿಸಿದೆ. ಏನೂ ಪ್ರಯೋಜನವಾಗಲಿಲ್ಲ.

     ಯಾರ ಪುಣ್ಯದಿಂದಲೋ ನನಗೆ ಸರಕಾರಿ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಸಿಕ್ಕಿತು. ಅನಾರೋಗ್ಯವಿದ್ದರೂ ನನ್ನ ಗಂಡನಲ್ಲಿ ರಸಿಕತೆಗೆ ಏನೂ ಕಡಿಮೆ ಇರಲಿಲ್ಲ. ಕಾರಣ ಒಬ್ಬಳು ಮಗಳು ಹುಟ್ಟಿದಳು. ಅವರು ಸೇವಿಸುತ್ತಿದ್ದ ಔಷಧಿಯಿಂದ ಇರಬಹುದು ಮಗು ಬುದ್ಧಿಮಾಂದ್ಯವಾಗಿ ಹುಟ್ಟಿತ್ತು. ಅನಾರೋಗ್ಯ ಪತಿ ಜೊತೇಲಿ ಈ ಬುದ್ಧಿಮಾಂದ್ಯ ಮಗು ದೇವರು ನನ್ನ ಹಣೇಲಿ ಸುಖವನ್ನೇ ಬರೆದಿರಲಿಲ್ಲವೇನೋ. ನನಗೆ ಜೀವನವೇ ರೋಸಿಹೋಗಿತ್ತು.

     ಈ ಮಧ್ಯೆ ಆಫೀಸ್ ನಲ್ಲಿ ಬಾಸ್ ಅನ್ನಿಸಿಕೊಂಡವನು ಕಿರಿಕಿರಿ ಮಾಡಲು ಆರಂಭಿಸಿದ್ದ. ನಮ್ಮ ಮನೆಯ ವಿಷಯವನ್ನೆಲ್ಲಾ ತಿಳ್ಕೊಂಡುಬಿಟ್ಟಿದ್ದ ಅವನು ನನಗೆ ಸಹಾಯ ಮಾಡುವಂತೆ ಬರುತ್ತಿದ್ದ. ಮೊದಮೊದಲು ಕೋಪ, ಜಗಳದಿಂದ ಪ್ರಾರಂಭವಾದುದು ಕೊನೆಗೆ ನಮ್ಮಿಬ್ಬರ ಸಂಬಂಧ ಪ್ರೇಮವಾಗಿ ಮಾರ್ಪಟ್ಟಿತ್ತು. ನಾನು ನನ್ನನ್ನು ಅವನಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡು ಬಿಟ್ಟೆ. ಗಂಡನಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಕೊನೆಗೆ ನನ್ನ ಗಂಡನಿಗೆ ನನ್ನ ಹಾಗೂ ಬಾಸ್ ನಡುವಿನ ಸಂಬಂಧ ಹೇಗೋ ತಿಳಿದು ಹೋಗಿ ಜಗಳವಾಡಲು ಪ್ರಾರಂಭಿಸಿದ. ಏನೂ ಪ್ರಯೋಜನವಿಲ್ಲ ಎಂದು ತಿಳಿದಾಗ ಮಾನಸಿಕವಾಗಿ ತುಂಬಾ ಕುಗ್ಗಿ ಹೋದ ಅವನ ಕಾಯಿಲೆ ಉಲ್ಬಣವಾಗತೊಡಗಿತು. ಆಸ್ಪತ್ರೆಗೆ ಸೇರಿಸಿದೆ. ಒಂದು ದಿನ ಆಸ್ಪತ್ರೆಯಲ್ಲೇ ಸತ್ತುಹೋದ.

     ಈಗ ರಾಜಾರೋಷವಾಗಿ ಬಾಸ್ ಮನಗೆ ಬರಲಾರಂಭಿಸಿದ. ಬುದ್ಧಿಮಾಂದ್ಯ ಮಗುವಿಗೆ ಅವನನ್ನೇ ಅಪ್ಪ ಎಂದು ಕರೆಯುವಂತೆ ಹೇಳಿಕೊಟ್ಟಿದ್ದೆ. ಮಗುವನ್ನು ಮನೆಯೊಳಗೆ ಕೂಡಿಹಾಕಿ ಬೀಗ ಹಾಕಿ ಆಫೀಸಿಗೆ ಹೋಗುತ್ತಿದ್ದೆ. ಆಪೀಸ್ ಮನೆಗೆ ಹತ್ತಿರವಿದ್ದುದರಿಂದ ಮಧ್ಯಾಹ್ನ ಊಟದ ಸಮಯದಲ್ಲೂ ಮನೆಗೆ ಬರುತ್ತಿದ್ದೆ. ಅವನು ಕೂಡಾ ಹೊತ್ತಲ್ಲದ ಹೊತ್ತಲ್ಲಿ ಮನೆಗೆ ಬರುತ್ತಿದ್ದನಾದ್ದರಿಂದ ಅವನಲ್ಲೂ ಮನೆಯ ಒಂದು ಕೀ ಇತ್ತು. ಗಂಡನಿಂದ ಅನುಭವಿಸದಿದ್ದ ಎಲ್ಲಾ ಸುಖವನ್ನೂ ಅವನಿಂದ ಅನುಭವಿಸಿದೆ. ಒಟ್ಟಾರೆ ಹೇಳಬೇಕೂಂದ್ರೆ ನಾನು ಈಗ ಸುಖವಾಗಿದ್ದೆ.

      ಒಂದು ದಿನ ಸಂಜೆ ಆಫೀಸ್ ನಿಂದ ಮನೆಗೆ ಬಂದು ಬೀಗ ತೆಗೆದು ಒಳಗೆ ಹೋದೆ. ರೂಮಿಗೆ ಹೋದವಳೇ ಅಲ್ಲಿನ ದೃಶ್ಯ ಕಂಡು ಒಂದು ಕ್ಷಣ ದಂಗಾದೆ. ಸತ್ತ ಹೆಣದಂತೆ ಮಲಗಿದ್ದ ನನ್ನ ಬುದ್ಧಿಮಾಂದ್ಯ ಕಂದಮ್ಮನ ಎರಡೂ ಕಣ್ಣುಗಳೂ ಮೇಲೆ ನೋಡುತ್ತಿದ್ದುವು. ಮೈಮೇಲೆ ಒಂದು ಚೂರು ಬಟ್ಟೆ ಇರಲಿಲ್ಲ. ಹಾಸಿಗೆ ಮೇಲೆ ಹಾಸಿದ್ದ ಬಿಳಿ ಬೆಡ್ ಸ್ಪ್ರೆಡ್ ರಕ್ತಸಿಕ್ತವಾಗಿತ್ತು. ಮಗುವನ್ನು ಎತ್ತಿಕೊಂಡವಳೇ ಆಸ್ಪತ್ರೆಗೆ ಓಡಿದೆ. ಡಾಕ್ಟರ್ ತುಂಬಾ ಪ್ರಯತ್ನಪಟ್ಟರಾದರೂ ಏನೂ ಪ್ರಯೋಜನವಾಗಲಿಲ್ಲ. ಮಗು ಸತ್ತುಹೋಗಿತ್ತು. ಪೋಲೀಸ್ ಕಂಪ್ಲೇಂಟ್ ಕೊಟ್ಟೆ. ಯಾರ ಮೇಲಾದರೂ ಸಂಶಯವಿದೆಯಾ ಎಂದು ವಿಚಾರಿಸಿದರು. ನಾನು ಬಾಸ್ ಹೆಸರು ಹೇಳಿದೆ. ಬೇರೆ ಯಾರು ಮನೆಯೊಳಗೆ ಬರಲು ಸಾಧ್ಯವಿರಲಿಲ್ಲ. ಕಾರಣ ನನ್ನನ್ನು ಬಿಟ್ಟು ಅವನಲ್ಲಿ ಮಾತ್ರ ಮನೆಯ ಕೀ ಇದ್ದುದು. ಅವನ ಕೆಲಸ ಮುಗಿದ ಮೇಲೆ ಮನೆಯ ಕೀ ಹಾಕಿಕೊಂಡು ಹೋಗಿದ್ದ.  ಅವನು ಮಾಡಿದ ತಪ್ಪಿಗೆ ಈಗ ಕಂಬಿ ಎಣಿಸುತ್ತಿದ್ದಾನೆ. ನಾನೂ ಕೂಡಾ ಕರುಳ ಕುಡಿಯನ್ನು ಕಳಕೊಂಡು ಮಾಡಿರೋ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇನೆ.

*****

Tuesday 5 June 2012

ಇದು ಕಥೆಯಲ್ಲ...


                                                                                          

        ದೂರದರ್ಶನದಲ್ಲಿ ಸತ್ಯಮೇವ ಜಯತೆ ಪ್ರಸಾರವಾಗುತ್ತಿತ್ತು. ಒಬ್ಬೊಬ್ಬ ಹೆಣ್ಣು ಮಗಳೂ ತಮ್ಮ ಜೀವನದಲ್ಲಾದ ನೋವಿನ ಅನುಭವಗಳನ್ನು ಬಿಚ್ಚಿಡುತ್ತಿದ್ದರು. ಇಂತಹ ಘಟನೆಗಳು ಬರೀ ಸಿನೆಮಾದಲ್ಲಿ ಅಥವಾ ಕಥೆಗಳಲ್ಲಿ ಮಾತ್ರ ಸಂಭವಿಸಲು ಸಾಧ್ಯ ಅಂದುಕೊಂಡವರಿಗೆ ಇಂತಹ ಕಟುಕರೂ ಇರಲು ಸಾಧ್ಯಾನಾ ಎಂದು ಆಶ್ಚರ್ಯವಾಗಬಹುದು. ಖಂಡಿತಾ ಇದ್ದಾರೆ ಅನ್ನೋದಕ್ಕೆ ದಿನನಿತ್ಯ ಇದೇ ರೀತಿ ಹಿಂಸೆಯನ್ನನುಭವಿಸುತ್ತಿರಬಹುದಾದ ಸಾವಿರಾರು ಹೆಣ್ಣುಮಕ್ಕಳ ಜೊತೆ ನಾನು ಕೂಡಾ ಒಂದು ಸಾಕ್ಷಿ.

ಅಪ್ಪ ಸರ್ಕಾರಿ ಕೆಲಸದಲ್ಲಿದ್ದುದರಿಂದ ಅಪ್ಪ ತೀರಿ ಹೋದ ನಂತರ ಅನುಕಂಪದ ಆಧಾರದ ಮೇಲೆ ನನಗೆ ಅಪ್ಪನ ಕೆಲಸ ದೊರೆತ್ತಿತ್ತು. ಅಲ್ಲಿ ಸಹೋದ್ಯೋಗಿಯ ಸ್ನೇಹಿತನ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೇಮವಾಗಿತ್ತು. ಅವನು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದ ಅಂದರೆ ನೀನು ನನ್ನನ್ನು ಮದುವೆ ಆಗದಿದ್ದಲ್ಲಿ ನಾನು ಸತ್ತೇ ಹೋಗುತ್ತೀನಿ ಅನ್ನುವಷ್ಟರ ಮಟ್ಟಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದ. ನಾನು ಬಲೆಗೆ ಬಿದ್ದಿದ್ದೆ. ಅಮ್ಮ, ಸಂಬಂಧಿಕರು ಮೊದಲು ಮದುವೆಗೆ ವಿರೋಧ ವ್ಯಕ್ತಪಡಿಸಿದರೂ ಕೊನೆಗೆ ನನ್ನ ಹಠಕ್ಕೆ ಒಪ್ಪಲೇಬೇಕಾಯಿತು.

          ಮದುವೆಯಾದ ಮೊದಲ ದಿನವೇ ಅವನು ತನ್ನ ಬಣ್ಣ ಬದಲಾಯಿಸಲಾರಂಭಿಸಿದ್ದ. ಮದುವೆಗೆ ಮೊದಲು ಚಿನ್ನ, ಬಂಗಾರ ಅನ್ನುತ್ತಿದ್ದವನ ಎರಡನೇ ಮುಖದ ಪರಿಚಯವಾಗತೊಡಗಿತ್ತು. ದುಡ್ಡು ಬಿಟ್ಟರೆ ನನ್ನಿಂದ ಹೊಸದೇನೂ ಪಡೆದುಕೊಳ್ಳುವುದಿರಲಿಲ್ಲ. ಎಲ್ಲವನ್ನೂ ಮದುವೆಗೆ ಮುಂಚೇನೆ ಪಡೆದುಕೊಂಡಾಗಿತ್ತು. ನನ್ನಿಂದ ದುಡ್ಡನ್ನು ಹೇಗೆ ಪಡಕೋಬೇಕು ಅಂತ ಅವನು ಚೆನ್ನಾಗಿ ಅರಿತಿದ್ದ. ಅವನು ಕುಡೀತಾನೆ ಅಂತ ನನಗೆ ಗೊತ್ತಿತ್ತು. ಆದರೆ ಅದಕ್ಕೆ ದಾಸನಾಗಿದ್ದ ಅಂತ ಗೊತ್ತಿರಲಿಲ್ಲ. ನಾನು ಪ್ಯೂರ್ ವೆಜಿಟೇರಿಯನ್. ಅವನು ಹಸಿ ಮಾಂಸ ತಂದು ಅಡುಗೆ ಮಾಡುವಂತೆ ಹಿಂಸಿಸುತ್ತಿದ್ದ. ನನಗೆ ಕೈಯಲ್ಲಿ ಮುಟ್ಟುವುದಿರಲಿ ಅದನ್ನು ನೋಡಿದ್ರೇನೆ ವಾಕರಿಕೆ ಬರುತ್ತಿತ್ತು. ಮಾಡದಿದ್ದಲ್ಲಿ ಜುಟ್ಟು ಹಿಡ್ಕೊಂಡು ಬಾಸುಂಡೆ ಬರುವಂತೆ ಬಾರಿಸುತ್ತಿದ್ದ. ಮದುವೆ ಆದ ಮೇಲೆ ಕೆಲಸಕ್ಕೆ ಹೋಗೋದನ್ನೇ ನಿಲ್ಲಿಸಿಬಿಟ್ಟ. ಎಲ್ಲಿ ಬಚ್ಚಿಟ್ಟರೂ, ಒಂದು ಪೈಸೇನೂ ಬಿಡದಂಗೆ ಎತ್ಕೊಂಡು ಹೋಗುತ್ತಿದ್ದ.

ಅಮ್ಮನೂ ಕೆಲಸಕ್ಕೆ ಹೋಗುತ್ತಿದ್ದುದರಿಂದ ನನ್ನ ಮದುವೆಗೆಂದು ಹೇರಳವಾಗಿಯೇ ಚಿನ್ನ ಮಾಡಿಸಿಟ್ಟಿದ್ದರು. ತಾಳಿ ಒಂದನ್ನು ಬಿಟ್ಟು ಎಲ್ಲವನ್ನೂ ಮಾರಿಕೊಂಡ್ಬಿಟ್ಟ. ಅಮ್ಮ ಎಷ್ಟು ಬೇಡವೆಂದರೂ ಕೇಳದೆ ಅವನ ಹಿಂದೆ ಓಡಿ ಬಂದಿದ್ದಕ್ಕೆ ತಕ್ಕ ಶಿಕ್ಷೆಯಾಗಿತ್ತು. ಈ ಮಧ್ಯೆ ಗರ್ಭಿಣಿಯಾದೆ. ಆದರೂ ಅವನು ಕೊಡುತ್ತಿದ್ದ ಹಿಂಸೆ ಏನೂ ಕಡಿಮೆ ಆಗಲಿಲ್ಲ. ಒಂದು ದಿನ ಹೆಣ್ಣು ಮಗುವಿಗೆ ಜನ್ಮ ನೀಡಿದೆ. ಹೆಣ್ಣು ಮಗುವಾದುದಕ್ಕೆ ಹಿಂಸೆ ಇನ್ನೂ ಜಾಸ್ತಿ ಆಯಿತು. ಮಗುವಿಗೆ ಏನಾದರೂ ಮಾಡಬಹುದು ಎಂದು ಮಗುವನ್ನು ಕೈಯಲ್ಲೇ ಹಿಡ್ಕೊಂಡು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ.

          ಒಂದು ಚಿಕ್ಕ ಹುಳು ಕೂಡಾ ಅದರ ಮೇಲೆ ಸುಮ್ಮನೆ ಒಂದು ಕಡ್ಡಿ ಇಟ್ಟರೆ ಅದರಿಂದ ಬಿಡಿಸಿಕೊಳ್ಳಲು ಹೇಗೆ ಒದ್ದಾಡುತ್ತದೆ. ನಾನ್ಯಾಕೆ ಹೀಗೆ ಇವನ ಹಿಂಸೆ ಸಹಿಸಿಕೊಂಡು ಇವನೊಂದಿಗೆ ಇದ್ದೇನೆ ಹೇಗಿದ್ದವಳು ಹೇಗಾದೆ ಅಂತ ನನ್ನ ಮೇಲೆ ನನಗೇ ಬೇಜಾರಾಗುತ್ತಿತ್ತು. ಆದರೆ ಅವನನ್ನು ಬಿಟ್ಟು ನಾನು ಹೋಗೋದಾದ್ರೂ ಎಲ್ಲಿಗೆ. ಅಮ್ಮನಿಗೆ ಈ ವಯಸ್ಸಲ್ಲಿ ಯಾಕೆ ನೋವು ಕೊಡಲಿ ಅಂತ ಅವನ ಹಿಂಸೆ ಸಹಿಸಿಕೊಂಡು ಸುಮ್ಮನಿರುತ್ತಿದ್ದೆ.

ಒಂದು ದಿನ ಮಗುವನ್ನು ಕೆಳಗೆ ಮಲಗಿಸಿ ಅಡುಗೆ ಮನೆಯಲ್ಲಿ ಏನೋ ಮಾಡುತ್ತಿದ್ದೆ. ಅವನು ಕುಡಿದು ತೂರಾಡುತ್ತಾ ಬಂದವನೇ, ಇವ್ಳಿಗೆ ಒಂದು ಗಂಡು ಮಗುವನ್ನ ಹೆರೋಕಾಗ್ಲಿಲ್ಲ. ಈ ಕರೀ ಮೂಟೇನ ಹೆತ್ತಿದ್ದಾಳೆ ಅಂದವನೇ ಮಗುವನ್ನ ಕಾಲಿನಿಂದ ಫುಟ್ ಬಾಲ್ ಒದೆಯುವಂತೆ ಒದ್ದ. ಅವನು ತಳ್ಳಿದ ರಭಸಕ್ಕೆ ಮಗುವಿನ ತಲೆ ಗೋಡೆಗೆ ತಗುಲಿ ಮಗು ಕಿಟಾರನೆ ಕಿರುಚಲಾರಂಭಿಸಿತು. ದೇವರ ದಯೆಯಿಂದ ಏನೂ ಆಗಲಿಲ್ಲ. ನನಗೆ ಎಲ್ಲಿಂದ ಬಂತೋ ಶಕ್ತಿ ಗೊತ್ತಾಗ್ಲಿಲ್ಲ. ಮಗುವನ್ನು ಎತ್ತಿಕೊಂಡವಳೇ ಅವನನ್ನು ಒಂದೇ ಕೈಯಿಂದ ಹಿಡಿದು ತಳ್ಳಿಬಿಟ್ಟೆ. ಮೊದಲೇ ತೂರಾಡುತ್ತಿದ್ದವನು ಅಲ್ಲಿಯೇ ಮಲಕ್ಕೊಂಡು ಬಿಟ್ಟ. ಮಗುವನ್ನು ಎತ್ತಿಕೊಂಡವಳೇ ಬದುಕಿದೆಯಾ ಬಡಜೀವ ಅಂತ ಸಿಕ್ಕಿದ ಆಟೋ ಹತ್ತಿ ಅಮ್ಮನ ಮನೆಗೆ ಬಂದೆ. ಅಮ್ಮನಿಗೆ ಅವನ ಬಗ್ಗೆ ಎಲ್ಲವನ್ನೂ ಹೇಳಿರಲಿಲ್ಲ. ಹೇಗೆ ಹೇಳಲಿ ನಾನೇ ಇಷ್ಟಪಟ್ಟು ಅವನೊಂದಿಗೆ ಓಡಿ ಬಂದವಳು. ಈಗ ಅಮ್ಮನನ್ನು ಬಿಟ್ಟು ನನಗೆ ಯಾರೂ ಇರಲಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಾ ಅಮ್ಮನಲ್ಲಿ ಎಲ್ಲವನ್ನೂ ಹೇಳಿದೆ. ಅಮ್ಮ ಮೌನವಾಗಿ ಅಳುತ್ತಾ ನನ್ನನ್ನು ತಬ್ಬಿಕೊಂಡು ಸಮಾಧಾನಪಡಿಸುತ್ತಿದ್ದರು.

ಆಮೇಲೆ ಅವನ ಮನೆಗೆ ಹೋಗಲಿಲ್ಲ. ಅವನು ಸರಿಹೋಗುತ್ತಾನೆ ಅನ್ನುವ ಸಣ್ಣ ಆಸೇನೂ ನನಗೆ ಇರಲಿಲ್ಲ. ಕುಡಿಯಲು ದುಡ್ಡು ಬೇಕಾಗಿತ್ತು. ಆಫೀಸ್ ಹತ್ತಿರ ಬಂದು ಹಿಂಸೆ ಕೊಡಲಾರಂಭಿಸಿದ. ಅಮ್ಮನ ಮನೆಯ ಹತ್ತಿರ ತೂರಾಡುತ್ತಾ ಬಂದು ಕೂಗಾಡುತ್ತಿದ್ದ. ಫೋನ್ ನಲ್ಲಿ ಅವಾಚ್ಯ ಶಬ್ಧಗಳಿಂದ ಬಯ್ಯುತ್ತಿದ್ದ. ನಮ್ಮ ಸಂಬಂಧಿಕರೊಬ್ಬರು ಎಸಿಪಿ ಇದ್ದರು. ಅವರು ಸ್ಠೇಷನ್ ಗೆ ಕರೆಸಿ ಹೆದರಿಸಿದ ನಂತರ ಆಫೀಸ್ ಹತ್ತಿರ ಮನೆಯ ಹತ್ತಿರ ಬರೋದನ್ನ ನಿಲ್ಲಿಸಿದ. ಆಮೇಲೆ ಡೈವೋರ್ಸ್ ಗೆ ಅಪ್ಲೈ ಮಾಡಿದೆ. ಸ್ನೇಹಿತರು ಇನ್ನೊಂದು ಮದುವೆ ಮಾಡುವ ಪ್ರಯತ್ನ ಮಾಡಿದರು. ಆದರೆ ನನ್ನ ಮುಂದೆ ಮಗಳ ಭವಿಷ್ಯ ಬಿಟ್ಟು ಬೇರೇನೂ ಇರಲಿಲ್ಲ.

ಈಗ ನನಗೆ ಹಣದ ಕೊರತೆ ಇಲ್ಲ. ಮಗಳನ್ನು ಚೆನ್ನಾಗಿಯೇ ಓದಿಸಿದೆ. ಅವಳ ಜೀವನ ನನ್ನ ತರಹ ಆಗಬಾರದು. ಅವಳು ಒಂದು ಒಳ್ಳೆಯ ಮನೆ ಸೇರಬೇಕು. ದಿನನಿತ್ಯ ದೇವರಲ್ಲಿ ಒಂದೇ ಪ್ರಾರ್ಥನೆ ಅವಳಿಗೆ ಒಳ್ಳೆಯ ಜೀವನ ಸಿಗಲಿ ಎಂದು. ದೇವರು ನನ್ನ ನಂಬಿಕೆ ಖಂಡಿತಾ ಹುಸಿ ಮಾಡೋದಿಲ್ಲ. ಯಾಕೇಂದ್ರೆ ಯಾವುದನ್ನೂ ಮುಚ್ಚಿಡದೆ ನಾವು ಹೇಳಿಕೊಳ್ಳೋದು ಭಗವಂತನಲ್ಲಿ ಮಾತ್ರ.

*****



                                               

Sunday 29 April 2012

ತುಡಿತ


ಅಪ್ಪನ ತಪ್ಪೋ ಅಮ್ಮನ ತಪ್ಪೋ ಗೊತ್ತಿಲ್ಲ. ನಾನಂತೂ ಒಬ್ಬಂಟಿಯಾಗಿಯೇ ಬೆಳೆದೆ. ಅಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಆ ಕಾಲದಲ್ಲಿ ಹೆಂಗಸರು ಕೆಲಸಕ್ಕೆ ಹೋಗುತ್ತಿದ್ದುದೇ ಕಡಿಮೆ. ಅಪ್ಪ ಸ್ಪುರದ್ರೂಪಿ ಅಂತ ಕೇಳಿದ್ದೆ. ಅಮ್ಮ ಸುಮಾರಾಗಿದ್ದರು. ಅಪ್ಪನ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹತ್ತು ಜನ ಮಕ್ಕಳು ದೊಡ್ಡ ಸಂಸಾರ. ಹಿಂದು ಮುಂದು ಯೋಚನೆ ಮಾಡದೆ ಮದುವೆಗೆ ಒಪ್ಪಿದ್ದರು. ಆದರೆ ಸಂಬಂಧ ಜಾಸ್ತಿ ದಿನ ಉಳಿಯಲಿಲ್ಲ. ಬಾಣಂತನಕ್ಕೆಂದು ತವರು ಮನೆಗೆ ಬಂದಿದ್ದ ಅಮ್ಮ 40 ದಿನಕ್ಕೆ ನನ್ನನ್ನು ಅಪ್ಪನ ಮನೆಗೆ ಕರೆದುಕೊಂಡು ಹೋದವರು ನನ್ನನ್ನು ಅಲ್ಲಿಯೇ ಬಿಟ್ಟು ತವರು ಮನೆಗೆ ವಾಪಸ್ಸು ಬಂದಿದ್ದರು. ಆಮೇಲೆ ಕೋರ್ಟ್ ಕಚೇರಿ ಡೈವೋರ್ಸ್ ಎಲ್ಲಾ ಆಯಿತು. ಡೈವೋರ್ಸ್ ದಿನದಂದು, 5 ವರ್ಷಗಳ ಬಳಿಕ ಮಗುವನ್ನು ತಂದೆ ಹತ್ತಿರ ಕರೆದುಕೊಂಡು ಹೋಗಬಹುದು. ಅಲ್ಲಿಯವರೆಗೆ ತಾಯಿಯ ಹತ್ತಿರ ಇರಬೇಕು ಎಂದು ತೀರ್ಪು ನೀಡಲಾಯಿತು. ಅಪ್ಪನ ಮನೆಯಲ್ಲಿ ನನ್ನನ್ನು ಬಿಟ್ಟು ಹೋದಾಗಿನಿಂದ ನನ್ನನ್ನು ನೋಡಿಕೊಳ್ಳುತ್ತಿದ್ದ ಅಪ್ಪಮ್ಮ ಡೈವೋರ್ಸ್ ದಿನ ನನ್ನನ್ನು ಅಮ್ಮನ ಹತ್ತಿರ ಕೊಡಬೇಕಾದ್ರೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರಂತೆ.  

ಅಪ್ಪ ಇನ್ನೊಂದು ಮದುವೆ ಆದರು. ಅವರಿಗೂ ಮೂರು ಮಕ್ಕಳಾದವು. 5 ವರ್ಷಗಳ ನಂತರ ನನ್ನನ್ನು ಕರೆದುಕೊಂಡು ಹೋಗುವುದಿರಲಿ ನನ್ನನ್ನು ಸಂಪೂರ್ಣ ಮರೆತೇ ಬಿಟ್ಟಿದ್ದರು. ಆದ್ದರಿಂದ ಅಮ್ಮನೊಂದಿಗೇ ಬೆಳೆದೆ. ಅಮ್ಮ ಅಪ್ಪನಿಲ್ಲದ ಕೊರತೆಯ ಅರಿವಾಗದಂತೆ ನನ್ನನ್ನು ಬೆಳೆಸಿದರು. ಬಹುಷ: ಅಪ್ಪನ ಮನೆಯಲ್ಲಿರುತ್ತಿದ್ದರೂ ನಾನು ಅಷ್ಟು ಚೆನ್ನಾಗಿ ಬೆಳೆಯುತ್ತಿರಲಿಲ್ಲವೇನೋ. ಕೇಳೋಕೆ ಮುಂಚೇನೇ ಎಲ್ಲಾ ನನಗೆ ದೊರಕುತ್ತಿತ್ತು. ಅಪ್ಪ ಜೊತೆಯಲ್ಲಿಲ್ಲ ಅನ್ನೋ ಕೊರತೆ ಬಿಟ್ಟರೆ ನನಗೆ ಬೇರಾವ ಯೋಚನೇನೂ ಇರಲಿಲ್ಲ.

ಆದರೆ ಸ್ಕೂಲ್ ಗೆ ಹೋಗಲು ಶುರು ಮಾಡಿದ ಮೇಲೆ ಒಬ್ಬೊಬ್ಬರು ಒಂದೊಂದು ಮಾತಾಡುತ್ತಿದ್ದರು. ಫ್ರೆಂಡ್ಸ್ ಎಲ್ಲ ಜೊತೇಲಿ ಸೇರಿ, ಅವನಿಗೆ ಅಪ್ಪ ಇಲ್ಲ ಅಂತೆ ಕಣೋ. ಅವನ ಅಮ್ಮ ಅಪ್ಪನನ್ನು ಬಿಟ್ಟು ಓಡಿ ಬಂದಿದ್ದಾರಂತೆ ಕಣೋ. ಏನೇನೋ ಮಾತಾಡಿಕೊಳ್ಳುತ್ತಿದ್ದರು. ಕೆಲವು ಕಿವಿಗೆ ಬೀಳುತ್ತಿದ್ದುವು. ಅದರಿಂದ ಸ್ಕೂಲ್ ನಲ್ಲೂ ಯಾರ ಜೊತೆಗೂ ಸೇರದೆ ಅಲ್ಲೂ ಒಬ್ಬಂಟಿಯಾಗಿಯೇ ಇರುತ್ತಿದ್ದೆ. ನನ್ನ ಓದಾಯಿತು ನಾನಾಯಿತು. ಮನೆಯಲ್ಲೂ ನನ್ನ ಓರಗೆಯವರು ಯಾರೂ ಇರಲಿಲ್ಲವಾದ ಕಾರಣ ಮನೆಯಲ್ಲೂ ಏಕಾಂಗಿಯಾಗಿಯೇ ಬೆಳೆದೆ.

ದೊಡ್ಡವನಾಗುತ್ತಿದ್ದಂತೆ ಆಗಾಗ ಅಪ್ಪನ ನೆನಪು ಬರುತ್ತಿತ್ತು. ಅಪ್ಪನನ್ನು ಒಮ್ಮೆಯಾದರೂ ನೋಡಬೇಕು ಅಂತ ಮನಸ್ಸು ಹಾತೊರೆಯುತ್ತಿತ್ತು. ಅಮ್ಮಮ್ಮನಿಗೆ ಅಪ್ಪನ ಹೆಸರು ಕೇಳಿದ್ರೆ ಆಗುತ್ತಿರಲಿಲ್ಲ. ಆದಕಾರಣ ಕೇಳಲು ಭಯವಾಗಿ ಸುಮ್ಮನಿರುತ್ತಿದ್ದೆ. ಸಂಬಂಧಿಕರ ಮದುವೇಗೆ ಹೋದಲ್ಲಿ ಅಲ್ಲಿಗೆ ಅಪ್ಪ ಬಂದಿರಬಹುದೇನೋ ಅಂತ ಸುತ್ತಲೂ ಹುಡುಕುತ್ತಿದ್ದೆ. ಈ ಅಪ್ಪ ಅಮ್ಮಂದಿರು ಯಾಕೆ ಹೀಗೆ ಮಾಡುತ್ತಾರೆ. ತಾವು ಕಿತ್ತಾಡ್ಕೊಂಡು ಡೈವೋರ್ಸ್ ತಗೊಂಡು ಮಕ್ಕಳಿಗೆ ಅಪ್ಪ ಅಥವಾ ಅಮ್ಮನ ಪ್ರೀತಿಯಿಂದ ವಂಚಿತರಾಗುವಂತೆ ಮಾಡುತ್ತಾರೆ. ಯಾಕೆ ಮಕ್ಕಳ ಬಗ್ಗೆ ಯೋಚನೇನೇ ಮಾಡೋದಿಲ್ಲ. ಡೈವೋರ್ಸ್ ಅನ್ನೋ ಒಂದು ಪತ್ರ ಕೊಟ್ಟ ತಕ್ಷಣ ಸಂಬಂಧಗಳು ದೂರವಾಗಲು ಸಾಧ್ಯಾನಾ.

ಅಮ್ಮ ನನ್ನನ್ನು ಇಂಜಿನಿಯರಿಂಗ್ ಓದಿಸಿದ್ದರು. ಪೂನಾದಲ್ಲಿ ಒಳ್ಳೇ ಕಂಪೆನಿಯಲ್ಲಿ ಕೆಲಸ ಸಿಕ್ಕಿದ ಕಾರಣ ಊರು ಬಿಡಬೇಕಾಯಿತು. ಅಮ್ಮ ಅಮ್ಮಮ್ಮನ ಜೊತೆಯಲ್ಲಿಯೇ ಇದ್ದರು. ಊರು ಬಿಡಬೇಕಾದ್ರೆ ಅಮ್ಮ ಬಿಕ್ಕಿ ಬಿಕ್ಕಿ ಅತ್ತರು. ನನ್ನ ಸೌಮ್ಯ ಸ್ವಭಾವವನ್ನು ಇಷ್ಟಪಟ್ಟ ಸಹೋದ್ಯೋಗಿ ಒಬ್ಬಳು ಮದುವೆಯಾಗುವಂತೆ ಕೇಳಿಕೊಂಡಳು. ನನಗೂ ಒಂಟಿತನ ಸಾಕಾಗಿತ್ತು. ಅಮ್ಮನ ಒಪ್ಪಿಗೆ ಪಡೆದು ಅವಳನ್ನು ಮದುವೆಯಾದೆ.

ಈ ಮಧ್ಯೆ ಅಪ್ಪನ ಸಾವಿನ ವಿಷಯ ಅಮ್ಮನಿಂದ ತಿಳಿಯಿತು. ಬದುಕಿದ್ದಾಗ ಅಂತೂ ಅಪ್ಪನನ್ನು ನೋಡಲಿಲ್ಲ. ಕೊನೆ ಪಕ್ಷ ಸತ್ತಾಗಲಾದರೂ ಒಮ್ಮೆ ಮುಖ ನೋಡಿ ಬರಬೇಕು ಅಂತ ಮನಸ್ಸು ಕೂಗಿ ಹೇಳುತ್ತಿತ್ತು. ತಡೀಲಾರದೆ ನಾನು ನೋಡಿ ಬರುತ್ತೇನೆ ಅಂತ ಅಮ್ಮನಿಗೆ ತಿಳಿಸಿದೆ. ಅಮ್ಮಮ್ಮ ಹೋಗಲು ಬಿಡಲಿಲ್ಲ. ಈಗ ಹೋದಲ್ಲಿ ಆಸ್ತಿ ಪಾಲು ಕೇಳಲು ಬಂದಿದ್ದಾನೆ ಅಂದ್ಕೋಬಹುದು. ಹೋಗೋದು ಬೇಡ ಅಂದುಬಿಟ್ರು. ಅವರ ಮಾತನ್ನು ಮೀರುವ ಹಾಗಿರಲಿಲ್ಲ. ಏನೂ ಮಾಡಲಾಗದೆ ಮನಸ್ಸೊಳಗೇ ಅತ್ತೆ. ಅಪ್ಪನ ಆತ್ಮಕ್ಕೆ ಶಾಂತಿ ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸಿದೆ. ಮಗನಾಗಿ ಅದನ್ನು ಬಿಟ್ಟು ಬೇರೆ ಏನನ್ನೂ ನನ್ನಿಂದ ಮಾಡಲಾಗಲಿಲ್ಲ. ಕೊನೆಗೂ ನಾನು ಅಪ್ಪನನ್ನು ನೋಡಲೇ ಇಲ್ಲ. I love you dad. I miss you.

*****

Tuesday 17 April 2012

ಆತ್ಮ


ಜನ್ಮ ಮೃತ್ಯು ಜರಾ ವ್ಯಾಧಿ ಈ ನಾಲ್ಕರಲ್ಲಿ ಮನುಷ್ಯ ತುಂಬಾ ಭಯಪಡುವುದು ಮೃತ್ಯುವಿಗೆ. ಜನ್ಮ ಅಂದರೆ ಹುಟ್ಟು. ಹುಟ್ಟಿದ ತಕ್ಷಣ ಮಗು, ಎಲ್ಲೋ ಇದ್ದಿದ್ದು ಎಲ್ಲಿಗೋ ಬಂದಿದ್ದೀನಿ ಅಂತ ಒಮ್ಮೆ ಭಯಪಟ್ಟು ಕಿರುಚಿದರೂ ನಂತರ ಸುತ್ತ ಎಲ್ಲರೂ ಇದ್ದಾರೆ ಅಂತ ಧೈರ್ಯ ತಂದ್ಕೊಂಡು ಅಳೋದನ್ನ ನಿಲ್ಲಿಸುತ್ತೆ. ಜರಾ ಅಂದರೆ ಮುಪ್ಪು. ಇದು ಎಲ್ಲರಿಗೂ ಬರುವಂತಾದ್ದು. ಇದಕ್ಕೆ ಭಯಪಡುವ ಅವಶ್ಯಕತೆ ಇಲ್ಲ. ಕೆಲವರಿಗೆ ಬೇಗ ಬರುತ್ತೆ ಇನ್ನು ಕೆಲವರಿಗೆ ತಡವಾಗಿ ಬರುತ್ತೆ. ಅಂತೆಯೇ ವ್ಯಾಧಿ ಅಂದರೆ ರೋಗ. ಇದಕ್ಕೂ ಪರಿಹಾರವಿದೆ. ರೋಗ ಮನುಷ್ಯರಿಗೆ ಬರದೆ ಮರಕ್ಕೆ ಬರುತ್ತಾ ಅನ್ನೋ ರೂಢಿ ಮಾತಿದೆ. ಆದುದರಿಂದ ವ್ಯಾಧಿಗೂ ಭಯಪಡುವ ಅವಶ್ಯಕತೆ ಇಲ್ಲ. ಆದರೆ ಈ ಮೃತ್ಯು ಅಂದರೆ ಸಾವು ಅನ್ನೋದು ಒಂದು ನಿಗೂಢ. ಈ ಸಾವು ಹೇಳಿ ಕೇಳಿ ಬರೋದಿಲ್ಲ. ಇದು ಯಾವಾಗ ಬರುತ್ತೆ ಅಂತ ಯಾರಿಗೂ ಗೊತ್ತಿರೋದಿಲ್ಲ. ಪ್ರತಿ ಸಾವು ಕೂಡಾ ಎಚ್ಚರಿಕೆ ನೀಡುತ್ತಿರುತ್ತದೆ ಮುಂದಿನ ಸರದಿ ನಿನ್ನದು ಅಂತ. ಈ ಭಯ ವಯಸ್ಸಾದವರಲ್ಲಿ ಜಾಸ್ತಿ.  ಜನ್ಮ, ಜರಾ & ವ್ಯಾಧಿ ಈ ಮೂರರ ಬಗ್ಗೆ ನಮಗೆ ಅರಿವಿದೆ. ಆದರೆ ಈ ಸಾವಿನ ಬಗ್ಗೆ ಅರಿವಿರೋದಿಲ್ಲ. ಸತ್ತ ನಂತರ ನಾವು ಏನಾಗುತ್ತೇವೆ ಎಲ್ಲಿಗೆ ಹೋಗುತ್ತೇವೆ ಅನ್ನೋದು ಗೊತ್ತಿರೋದಿಲ್ಲ. ಹೋಗುವಾಗ ಜೊತೆಯಲ್ಲಿ ಯಾರೂ ಇರೋದಿಲ್ಲ. ಒಬ್ಬರೇ ಹೋಗಬೇಕು. ತಿರುಗಿ ಬರುವ ಹಾಗಿಲ್ಲ. ಬಂದು ನಮ್ಮವರು ಅನ್ನಿಸಿಕೊಂಡವರನ್ನು ಪುನ: ಕೂಡುವ ಹಾಗಿಲ್ಲ. ಎಲ್ಲಾ ಬಾಂಧವ್ಯಗಳನ್ನು ಕಳಚಿಕೊಂಡು ಮತ್ತೆ ಯಾವತ್ತೂ ಹಿಂದಿರುಗಿ ಬರಲಾಗದಂತ ಜಾಗಕ್ಕೆ ಹೋಗಬೇಕು. ನಾನು ಅಂದರೆ ಆತ್ಮ. ದೇಹವಲ್ಲ. ಆತ್ಮ ದೇಹವನ್ನು ಬಿಟ್ಟು ಹೋದ ನಂತರ ಆ ದೇಹವನ್ನು ಸಂಸ್ಕಾರ ಮಾಡಲಾಗುತ್ತದೆ. ಅದು ಯಾವ ಮಹಾತ್ಮನದೇ ಆಗಿರಲಿ ಅದು ಬರೀ ಶವ. ಅದು ಯಾರಿಗೂ ಯಾವುದಕ್ಕೂ ಬೇಡ. ಎಷ್ಟು ಬೇಗ ಸಂಸ್ಕಾರ ಮಾಡಿದಷ್ಟೂ ಭೂಮಿಗೆ ಭಾರ ಕಡಿಮೆ. ಸಮಯ ಕಳೆದಷ್ಟೂ ದುರ್ವಾಸನೆ ಬರಲಾರಂಭಿಸುತ್ತದೆ. ದೇಹವೇನೋ ಬೂದಿ ಆಯಿತು. ಆದರೆ, ನಾನು ಅನ್ನುವ ಈ ಆತ್ಮ ಎಲ್ಲಿಗೆ ಹೋಗುತ್ತದೆ. ನಿಜಕ್ಕೂ ಭಯಪಡುವಂತಹ ವಿಷಯವೇ.



ನಮ್ಮಲ್ಲಿ ಒಂದು ನಂಬಿಕೆ ಇದೆ. ಸತ್ತ ನಂತರದ ಮೂರು ದಿನಗಳು ಆತ್ಮ ಶವವನ್ನಿಟ್ಟ ಜಾಗದಲ್ಲಿ ಸುತ್ತುತ್ತಿರುತ್ತದೆ ಎಂದು. ಅದಕ್ಕಾಗಿ ಮೂರು ದಿನವೂ ದೀಪ ಉರಿಸಿಟ್ಟು,  ಮೊದಲ ದಿನ ಎಳನೀರು, ಎರಡನೇ ದಿನ ನೀರು ಹಾಗೂ 3ನೇ ದಿನ ಹಾಲನ್ನು ಇಟ್ಟು ಅದರೊಳಗೆ ಒಂದು ನೂಲನ್ನು ಇಳಿಬಿಡಲಾಗುತ್ತದೆ. ನೂಲಿನ ಮುಖಾಂತರ ಆತ್ಮ ಅದನ್ನು ಕುಡಿಯುತ್ತದೆ ಅನ್ನೋ ನಂಬಿಕೆ. ಅದೇ ರೀತಿ ಶವವನ್ನಿಟ್ಟ ಜಾಗದಲ್ಲಿ ಬೂದಿ ಚೆಲ್ಲಿ ಆತ್ಮದ ಹೆಜ್ಜೆ ಗುರುತನ್ನು ಅದರಲ್ಲಿ ಹುಡುಕಲಾಗುತ್ತದೆ. 11ನೇ ದಿನ ಪಿತೃಕಾರ್ಯಗಳನ್ನು ಮಾಡಿ ಅದಕ್ಕೆ ಮುಕ್ತಿ ದೊರಕಿತು ಎಂದು ಭಾವಿಸಲಾಗುತ್ತದೆ.



ಆದರೆ ಒಂದು ದೇಹದಿಂದ ಹೊರಬಂದ ಆ ಆತ್ಮ ಇನ್ನೊಂದು ದೇಹದಲ್ಲಿ ಸೇರಿಕೊಳ್ಳುತ್ತದೆ ಹಾಗೂ ಆತ್ಮವು ಹಣ್ಣುಗಳೊಳಗೆ ಸೇರಿ ಆ ಹಣ್ಣನ್ನು ತಿಂದ ಮನುಷ್ಯನ ಮೂಲಕ ಯೋನಿಯೊಳಗೆ ಸೇರಿ ಭ್ರೂಣವಾಗುತ್ತದೆ ಅನ್ನುವ ಪ್ರತೀತಿ ಇದೆ. ಎಲ್ಲವೂ ಗೋಜಲು ಗೋಜಲು. ನಿಗೂಢ. ಹುಟ್ಟು ಸಾವು ಮಾತ್ರ ನಿಜ. ಆಮೇಲಿನದು ಕಂಡವರು ಯಾರೂ ಇಲ್ಲ.

*****

Thursday 29 March 2012

ಗಣೇಶ


     ಸುಮಾರು 30 ವರ್ಷಗಳ ಹಿಂದಿನ ಮಾತು. ನಮ್ಮೊಂದಿಗೆ ಆಟವಾಡಿಕೊಂಡಿದ್ದ ತಮ್ಮನ ಸ್ನೇಹಿತ ಗಣೇಶ ಆಗ ತಾನೇ ನಾದಸ್ವರ ನುಡಿಸಲು ಆರಂಭಿಸಿದ್ದ. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಪೂಜೆಯ ವೇಳೆಯಲ್ಲಿ ನಾದಸ್ವರ ನುಡಿಸುತ್ತಿದ್ದ ಈತ ಕ್ರಮೇಣ ಮದುವೆ ಮುಂಜಿ ನಾಮಕರಣದಲ್ಲಿ ನುಡಿಸಲಾರಂಭಿಸಿದ. ಸ್ವಲ್ಪ ಸ್ವಲ್ಪಾನೇ ಹೆಸರು ಗಳಿಸಲಾರಂಭಿಸಿದ್ದ. ಜನರು ಈತನನ್ನು ಗುರುತಿಸಲಾರಂಭಿಸಿದ್ದರು. ಆಗ ಅವನಿಗೆ ಸುಮಾರು 18-19 ವರ್ಷ ವಯಸ್ಸಿರಬಹುದು.

     ಅಂದು ನನ್ನ ಮದುವೆಗೆ ಬೆಂಗಳೂರಿನಿಂದ ಭಾವೀ ಗಂಡನ ಸುಮಾರು 20 ಜನ ಸ್ನೇಹಿತರು ಮಂಗಳೂರಿಗೆ ಬಂದಿದ್ದರು. ತಮ್ಮನೊಂದಿಗೆ ಆಟವಾಡಲು ದಿನಾ ನಮ್ಮ ಮನೆಗೆ ಬರುತ್ತಿದ್ದ ಗಣೇಶ ನಮ್ಮ ಮನೆಯವರಲ್ಲಿ ಒಬ್ಬನಾಗಿದ್ದ. ನನ್ನ ಮದುವೆಗೆ ತಾನೇ ನಾದಸ್ವರ ನುಡಿಸುವುದಾಗಿ, ಆದರೆ ಸಂಭಾವನೆ ಮಾತ್ರ ತೆಗೆದುಕೊಳ್ಳುವುದಿಲ್ಲವೆಂದು ಮಾತು ತೆಗೆದುಕೊಂಡಿದ್ದ. ಆ ಸಮಯದಲ್ಲಿ ಶಂಕರಾಭರಣ, ಸನಾದಿ ಅಪ್ಪಣ್ಣ ಸಿನೆಮಾದ ಹಾಡುಗಳು ತುಂಬಾ ಜನಪ್ರಿಯವಾಗಿತ್ತು. ಗಣೇಶ ನುಡಿಸಲಾರಂಭಿಸಿದ. ಮದುವೆಗೆ ಬೆಂಗಳೂರಿನಿಂದ ಬಂದ ಗಂಡನ ಗೆಳೆಯರೆಲ್ಲರೂ ಗಣೇಶನ ಮುಂದೆ ಸೇರಿ ಒಂದಾದ ಮೇಲೆ ಒಂದು ತಮಗಿಷ್ಟವಾದ ಹಾಡನ್ನು ನುಡಿಸಲು ಕೇಳಲಾರಂಭಿಸಿದರು. ಗಣೇಶ ಕೂಡಾ ಸ್ವಲ್ಪವೂ ಬೇಸರವಿಲ್ಲದೆ ಅವರು ಕೇಳಿದ ಹಾಡುಗಳನ್ನು ನುಡಿಸುತ್ತಿದ್ದ.

     ಗಣೇಶ ನನ್ನ ಮಗಳ ಮದುವೆಗೂ ನಾದಸ್ವರ ನುಡಿಸಲು ಒಪ್ಪಿದ್ದ.. ಗಣೇಶ ಇಂದು ತುಂಬಾ ಹೆಸರು ಗಳಿಸಿ ತುಂಬಾ ಎತ್ತರಕ್ಕೆ ಬೆಳೆದಿದ್ದ. ಒಂದು ಕಾರ್ಯಕ್ರಮಕ್ಕೆ 25 ರಿಂದ 30 ಸಾವಿರ ರೂ.ಗಳನ್ನು ಪಡೆಯುತ್ತಿದ್ದ. ವಿದೇಶಗಳಲ್ಲೂ ಹಲವು ಕಾರ್ಯಕ್ರಮಗಳನ್ನು ನೀಡಿದ್ದ. ಮಗಳ ಮದುವೆಗೂ ನಮ್ಮ ಮದುವೆಗೆ ಬಂದಿದ್ದ ನನ್ನ ಗಂಡನ ಸ್ನೇಹಿತರಲ್ಲಿ ಕೆಲವರು ಬಂದಿದ್ದರು. ಇಂದೂ ಅವರು ಗಣೇಶನ ಮುಂದೆ ಸೇರಿ ಅವರಿಗಿಷ್ಟವಾದ ಹಾಡುಗಳನ್ನು ನುಡಿಸಲು ಕೇಳುತ್ತಿದ್ದರು. ಅದೇ ಶಂಕರಾಭರಣಂ ಹಾಡನ್ನು ನುಡಿಸಲು ಕೇಳಿದರು. ಗಣೇಶ ನುಡಿಸಲಾರಂಭಿಸಿದ.



     ಮಗಳ ಮದುವೇಲಿ ಗಣೇಶನಿಗೆ ಸನ್ಮಾನ ಮಾಡಬೇಕೆಂದು ತೀರ್ಮಾನಿಸಿ ಶಾಲು ಹಣ್ಣುಗಳನ್ನು ತಂದು ಮದುವೆ ಮಂಟಪಕ್ಕೆ ಕರೆದು ಸನ್ಮಾನ ಮಾಡಿದೆವು. ಅವನು 2011ರ ನವೆಂಬರ್ ನಲ್ಲಿ ಅತ್ಯುತ್ತಮ ನಾದಸ್ವರ ವಾದಕ ಎಂದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಸಮಾರಂಭ. ಮಾನ್ಯ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪ್ರಧಾನ. ನಾವು ಮಗಳ ಸಮೇತ ಸಮಾರಂಭಕ್ಕೆ ಹೋಗಿದ್ದೆವು. ಪ್ರಶಸ್ತಿಗೆ ಆಯ್ಕೆಯಾದವರನ್ನು ಒಬ್ಬೊಬ್ಬರನ್ನೇ ಸ್ಟೇಜಿಗೆ ಕರೆದು ಕುಳ್ಳಿರಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿತ್ತು. ಗಣೇಶನ ಸರದಿ ಬಂತು. ನಮ್ಮೂರ ಹುಡುಗ, ಪಕ್ಕದ್ಮನೆ ಹುಡುಗ ಗಂಭೀರವಾಗಿ ಸ್ಠೇಜಿಗೆ ಹತ್ತುತ್ತಿದ್ದಂತೆ ಅಭಿಮಾನದಿಂದ ಮೈ ರೋಮಾಂಚನವಾಗುತ್ತಿತ್ತು. ಬಹುಷ: ಅವನು ನಮ್ಮನ್ನು ಅಲ್ಲಿ ನಿರೀಕ್ಷಿಸಿರಲಿಲ್ಲ. ಸ್ಟೇಜಿಗೆ ಹತ್ತಿ ಕೈ ಮುಗಿಯುತ್ತಿದ್ದಂತೆ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿದ್ದ ನಮ್ಮನ್ನು ಕಂಡವನೇ ನಮ್ಮ ಕಡೆ ಕೈ ಬೀಸಿದ. ಸಂತೋಷ ಅವನ ಮುಖದಲ್ಲಿ ಎದ್ದು ಕಾಣುತ್ತಿತ್ತು. ನಮಗೂ ಹಾಗೆಯೇ ಆಗಿತ್ತು. ಯಾರಾದರೂ ನೋಡಬಹುದು ಅನ್ನುವ ಅರಿವೂ ಇಲ್ಲದೆ ಆನಂದಬಾಷ್ಪ ಉದುರುತ್ತಿತ್ತು.

*****

Monday 26 March 2012

ಸೀಮಂತ

ಸೀಮಂತ

ಗರ್ಭಿಣಿಗೆ 7 ಅಥವಾ 9 ತಿಂಗಳಲ್ಲಿ ಸೀಮಂತ ಮಾಡಲಾಗುತ್ತದೆ. ಗಂಡನ ಮನೆಯಲ್ಲಿ ಸೀಮಂತ ಮಾಡಿ ಚೊಚ್ಚಲ ಹೆರಿಗೆಗೆ ತವರು ಮನೆಗೆ ಕಳುಹಿಸುವುದು ಸಂಪ್ರದಾಯ. 7 ತಿಂಗಳಲ್ಲಿ ಸೀಮಂತ ಮಾಡಿದಲ್ಲಿ ಹಿಂಗಾರ ಸಹಿತ 7 ಬಗೆಯ ಹೂವುಗಳನ್ನು ಮುಡಿಸಲಾಗುತ್ತದೆ  ಹಾಗೂ 7 ಬಗೆಯ ತಿಂಡಿಗಳನ್ನು ಬಡಿಸಲಾಗುತ್ತದೆ. 9 ತಿಂಗಳಲ್ಲಿ ಸೀಮಂತ ಮಾಡಿದಲ್ಲಿ 9 ಬಗೆಯ ಹೂವುಗಳನ್ನು ಮುಡಿಸಲಾಗುತ್ತದೆ ಹಾಗೂ 9 ಬಗೆಯ ಸಿಹಿ ತಿಂಡಿಗಳನ್ನು ಗರ್ಭಿಣಿಗೆ ಬಡಿಸಲಾಗುತ್ತದೆ.
ಗಂಡನ ಮನೆಯವರು ಗರ್ಭಿಣಿಗೆ ಹಸಿರು ಸೀರೆಯನ್ನುಡಿಸಿ ಹೂ ಮುಡಿಸುವುದು





ಬೈತಲೆಗೆ ಸಿಂಧೂರ (ಗೋಪಿ ಚಂದನ) ಹಚ್ಚುವುದು
ಅತ್ತೆ ಆಭರಣ ತೊಡಿಸುವುದು
ತಾಯಿ ಆಭರಣ ತೊಡಿಸುವುದು

ತಾಯಿ ಮಡಿಲು ತುಂಬುವುದು
ಮಡಿಲ ಮೇಲೆ ಒಂದು ಟವೆಲ್ ನ್ನು ಹಾಕಿ ಮೊದಲು 2 ತೆಂಗಿನಕಾಯಿ ತುಂಬಬೇಕು ನಂತೆರ ವೀಳ್ಯದೆಲೆ, ಅಡಿಕೆ ಸೇರಿಸಿ ಅಕ್ಕಿಯನ್ನು ಮಡಿಲಿಗೆ ತುಂಬಬೇಕು. ಇದೇ ರೀತಿ 5 ಸಲ ಮಾಡಿ ಸೇಸೆ ಹಾಕಬೇಕು.
ಗಂಡನ ಮನೆಯವರು ಮಡಿಲು ತುಂಬುವುದು


ಮುತ್ತೈದೆಯರು ಮಡಿಲು ತುಂಬುವುದು

ಗಂಡನ ಮನೆಯವರಿಂದ ಆರತಿ

ತಾಯಿ ಮನೆಯವರಿಂದ ಆರತಿ

ಮೊದಲಿಗೆ ತವರು ಮನೆಯಿಂದ ತಂದ ಬುತ್ತಿ ಅನ್ನ, ಕೊಟ್ಟೆ, ಕಾಯಿಹಾಲು ಬಡಿಸಬೇಕು ನಂತರ 7 ಬಗೆಯ ಅಥವಾ 9 ಬಗೆಯ ತಿಂಡಿಗಳನ್ನು ಬಡಿಸಬೇಕು.
ಗರ್ಭಿಣಿಯ ಜೊತೆಯಲ್ಲಿ ನಾಲ್ಕು ಜನ ಮಕ್ಕಳನ್ನು ಕೂರಿಸುತ್ತಾರೆ. ಅವರಿಗೂ ಒಂದೊಂದು ಬಡಿಸಬೇಕು.


ಅತ್ತೆ ಮನೆಯವರು ಬಡಿಸುವುದು



Sunday 18 March 2012

ಬೀಗರೌತಣ


ಬೀಗರೌತಣ












































ಬಸಿರು


ಮಗಳನ್ನು ಎಳಕ್ಕೊಂಡು ಬಂದವಳೇ, ನೋಡಿ ಅಕ್ಕ ಎಂತ ಕೆಲಸ ಮಾಡ್ಕೊಂಡವ್ಳೆ. ನಮ್ ಮರ್ಯಾದೆ ಎಲ್ಲ ಕಳೆದ್ಲು. ನಾನೀಗ ಏನು ಮಾಡ್ಲಿ. ಏನು ಮಾಡ್ಬೇಕು ಅಂತಾನೇ ಗೊತ್ತಾಗ್ತಿಲ್ಲ. ಈಗ ನೀವೇ ನನ್ಗೆ ಸಹಾಯ ಮಾಡ್ಬೇಕು  ಅಂತ ಮನೆ ಕೆಲಸದವಳು ಅಳುತ್ತಾ ಕಾಲು ಹಿಡ್ಕೊಂಡು ಬಿಟ್ಳು. ನಾನು ಅವಳನ್ನು ಕೈಹಿಡಿದೆತ್ತಿ ಮೊದಲು ಕಣ್ಣೊರಸಿಕೊ, ನಿಧಾನವಾಗಿ ಏನಾಯ್ತು ಅಂತ ಬಿಡಿಸಿ ಹೇಳು ಅಂದೆ. ಅವಳು ಮಗಳ ತಲೆಗೊಂದು ಮೊಟಕಿ, ಹೇಳಲಾರಂಭಿಸಿದಳು.

ನಮ್ ಯಜಮಾನಪ್ಪನ ಅಕ್ಕನ್ ಮಗ ಯಾವ್ದೋ ಕಂಪ್ನೀಲಿ ಕೆಲ್ಸ ಸಿಕ್ತು ಅಂತ ಬೆಂಗ್ಳೂರಿಗೆ ಬಂದವ್ನೆ. ನಮ್ ಯಜಮಾನಪ್ಪ ಅಲ್ಲಿ ಇಲ್ಲಿ ಯಾಕೆ ಇರ್ತೀಯಾ ನಮ್ಮನೇಲೆ ಇರು ಅಂತ ಹೇಳ್ದ. ಹೆಣ್ಮಕ್ಳು ಇರೋ ಮನೆ ಅಂತ ನನ್ಗೆ ಅವ್ನನ್ನ ಮನೇಲಿ ಇಟ್ಕೋಳ್ಳೋಕೆ ಇಷ್ಟ ಇರ್ಲಿಲ್ಲ. ಅವ್ನ ಬುದ್ಧೀನೂ ಸರಿ ಇರ್ಲಿಲ್ಲ. ಇವ್ಳು ಗಾರ್ಮೆಂಟ್ ಕಂಪ್ನೀಗೆ ಕೆಲ್ಸಕ್ಕೆ ಹೋಗುತ್ತಿದ್ದಳು. ನಾನು ನಿಮ್ಮನೆ ಕೆಲ್ಸ ಮುಗಿಸ್ಕೊಂಡು ಛತ್ರದ ಕೆಲಸಕ್ಕೆ ಹೋಗುತ್ತಿದ್ದೆ. ಹಗಲಿಡೀ ಮನೇಲಿ ಯಾರೂ  ಇರ್ತಿರ್ಲಿಲ್ಲ.  ಒಂದಿನ ಇವ್ನು ಬಂದವ್ನೇ ನಾನಿವಳನ್ನ ಮದ್ವೆ ಆಗ್ತೀನಿ ಅಂದ. ನಾನು ಆಗೋದಿಲ್ಲಪ್ಪಾ ನಾವು ಅವ್ಳಿಗೆ ಬೇರೆ ಗಂಡು ನೋಡಿದ್ದೇವೆ ಅಂದೆ. ಅವ್ನು ಅದನ್ನೇ ಮನಸ್ಸಲ್ಲಿಟ್ಟು ಇಂತಾ ಕೆಲ್ಸ ಮಾಡವ್ನೆ. ಈಗ ಹೇಗೆ ಕೊಡಲ್ಲ ಅಂತ ಹೇಳ್ತಾರೆ ನಾನೂ ನೋಡ್ತೀನಿ ಅಂತ ಹೇಳ್ತವ್ನೆ. ಹಂಗೂ ತೆಗ್ಸಿ ಬಿಡೋಣ ಅಂತ ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದೆ. ಡಾಕುಟ್ರು ಆಗ್ಲೇ 5 ತಿಂಗ್ಳು ಆಗೈತೆ. ಈಗ ಏನಾದ್ರೂ ತೆಗಿಸಿದ್ರೆ ಜೀವಕ್ಕೆ ಅಪಾಯ. ತುಂಬಾ ಖರ್ಚು ಆಗ್ತೈತೆ ಅಂತ ಹೇಳುದ್ರು. ನೀವೇ ಹೇಳಿ ಅಕ್ಕ ನಾನೀಗ ಏನು ಮಾಡ್ಲಿ.

ನಿನ್ನ ಮಗಳ ಈಗಿನ ಪರಿಸ್ಥಿತಿ ನೋಡಿದ್ರೆ ಅವಳನ್ನು ಬೇರೆ ಯಾರೂ ಮದುವೆ ಆಗೋದು ಸಾಧ್ಯ ಇಲ್ಲ. ತೆಗ್ಸೋ ಆಲೋಚನೆ ಬಿಟ್ಟು ಬಿಡು. ಆ ಹುಡುಗನನ್ನು ಕರ್ಕೊಂಡು ಬಾ ನಾನು ಅವನಲ್ಲಿ ಮಾತ್ನಾಡ್ತೀನಿ ಅಂತ ಹೇಳಿದೆ. ಅದರಂತೆ ಅವನನ್ನ ಕರ್ಕೊಂಡು ಬಂದಳು. ಅವನು ಕೆಲವು ಬೇಡಿಕೆಗಳನ್ನಿಟ್ಟ. ಸರಿ ನಾನು ಅದನ್ನೆಲ್ಲ ನೋಡ್ಕೋತೀನಿ ಅಂದೆ. ಮದುವೆಗೆ ದಿನ ಗೊತ್ತಾಯಿತು. ಮದುವೇನೂ ಆಯಿತು. ಅವರಿಗೆ ಬೇರೆ ಮನೆ ಮಾಡಿ ಕೊಡಲಾಯಿತು. ಹೊಸ ಮನೆಯಲ್ಲಿ ಹೊಸ ಸಂಸಾರ ಶುರು ಮಾಡಿದರು.

ಚಾಪೆ ಹಾಸಿಕೊಂಡು ಮಲಗಿದ್ದ ಅವಳು ಸೂರು ನೋಡುತ್ತಾ ಹೊಟ್ಟೆಯ ಮೇಲೆ ಮೆಲ್ಲಗೆ ಕೈಯಾಡಿಸುತ್ತಾ ಯೋಚಿಸುತ್ತಿದ್ದಳು. ಆಗಾಗ್ಗೆ ಗಾರ್ಮೆಂಟ್ ಕಂಪೆನಿಗೆ ಬರುತ್ತಿದ್ದ ಕಂಪೆನಿಯ ಯಜಮಾನನ ಮಗ ಇವಳ ಸೌಂದರ್ಯ ಕಂಡು ಆಸಕ್ತನಾಗಿದ್ದ. ಅವಳು ಅದನ್ನೇ ಪ್ರೀತಿ ಅಂತ ತಿಳ್ಕೊಂಡು ಅವನ ಜೊತೆ ಸಲುಗೆಯಿಂದಿದ್ದಳು. ಸಿನೆಮಾದಲ್ಲಿ ನಡೆಯುವಂತೆ ತನ್ನ ಜೀವನದಲ್ಲೂ ಪವಾಡ ನಡೆದು ಕಂಪೆನಿಯ ಒಡತಿ ಆಗಬಹುದು ಎಂದು ಕನಸು ಕಂಡ ಅವಳು ಅವನು ಕೇಳಿದ್ದನ್ನೆಲ್ಲ ಕೊಟ್ಟಳು. ಅವಳು ಬಸುರಿ ಎಂದು ತಿಳಿಯುತ್ತಲೇ ಅವನು ಕಂಪೆನಿಗೆ ಬರೋದನ್ನೇ ಬಿಟ್ಟುಬಿಟ್ಟ. ಏನೂ ಮಾಡಲು ತೋಚದೆ ತೊಳಲಾಡುತ್ತಿದ್ದಾಗ ತಾನು ಮದುವೆಯಾಗುವುದಾಗಿ ಮುಗ್ಧ ಅತ್ತೆ ಮಗ ದಾರಿ ತೋರಿದ್ದ.  
*****

Saturday 17 March 2012

ಮಳೆ ನಿಂತು ಹೋದ ಮೇಲೆ


ಅವರು ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುತ್ತಿದ್ದರು. ಪ್ರೀತಿ ಹೆಚ್ಚಾಗಿ ಹುಚ್ಚರಂತೆ ಕಿತ್ತಾಡುತ್ತಿದ್ದರು. ಅಂದು ಇದ್ದಕ್ಕಿದ್ದ ಹಾಗೆ ಸಣ್ಣ ವಿಷಯಕ್ಕೆ ಪ್ರಾರಂಭವಾದ ಜಗಳ  ಅತಿರೇಕಕ್ಕೆ ಹೋಗಲಾರಂಭಿಸಿತು. ಎಲ್ಲಾ ಭಾಷೆಗಳೂ ಬಂದು ಹೋದವು. ಕೊನೆಗೆ ಇನ್ನು ಇಲ್ಲಿ ಇರೋದ್ರಲ್ಲಿ ಅರ್ಥವಿಲ್ಲ. ಅಂದ್ಕೊಂಡವಳೇ ಅವಳು ಕೈಗೆ ಸಿಕ್ಕ ಬಟ್ಟೆಬರೆಗಳನ್ನು ತುಂಬಿಕೊಂಡು ಹೊರಟುಬಿಟ್ಟಳು.  

ಅವಳು: ಪ್ರಪಂಚದಲ್ಲಿ ಇವ್ರು ಒಬ್ರೇನಾ ಕೆಲ್ಸಕ್ಕೆ ಹೋಗೋದು. ಮನೇಲಿ ಬಸಿರು ಹುಡುಗಿ ಒಬ್ಬಳೇ ಇರುತ್ತಾಳೆ ಅನ್ನೋ ಜ್ಞಾನ ಬೇಡ್ವಾ. ಫೋನ್ ಮಾಡಿದ್ರೆ ಕಟ್ ಮಾಡ್ತಾರೆ. ಅಷ್ಟೂ ಕನ್ಸರ್ನ್ ಇಲ್ಲದ ಮೇಲೆ ಇವರಿಗೆ ಮದ್ವೆ ಯಾಕೆ ಬೇಕಾಗಿತ್ತು ಮನೆ ಸಂಸಾರ ಎಲ್ಲ ಯಾಕೆ ಬೇಕು. ಮದ್ವೆ ಆದ ಹೊಸದರಲ್ಲಿ ಏನು ಚಿನ್ನ ರನ್ನ ಅಂತ ಮುದ್ದಾಡಿದ್ದೇ ಮುದ್ದಾಡಿದ್ದು. ಇದು ಮೊದಲನೇ ಸಲ ಅಲ್ಲ. ರಿಪೀಟ್ ಆಗುತ್ತಲೇ ಇದೆ. ಎಷ್ಟೂಂತ ಸಹಿಸೋದು. ನಿನ್ನೆಯಂತೂ ಯಾವುದೋ ಪಾರ್ಟಿ ಇತ್ತೂಂತ ಹನ್ನೊಂದು ಗಂಟೆ ರಾತ್ರಿ ಬಂದಿದ್ದಾರೆ. ಮೊಬೈಲ್ಗೆ ಕಾಲ್ ಮಾಡಿದ್ರೆ ಸ್ವಿಚ್ ಆಫ್. ಯಾಕೆ ಲೇಟ್ ಅಂತ ಕೇಳಿದ್ದು ತಪ್ಪಾ? ಅದ್ನೇ ದೊಡ್ಡದು ಮಾಡಿ ಹೇಗೆ ಕೂಗಾಡಿದ್ರು. ನನ್ನಿಷ್ಟ ಕಣೆ ಇದು ನನ್ಮನೆ. ಎಷ್ಟೊತ್ತಿಗಾದ್ರೂ ಬರ್ತೇನೆ ಎಷ್ಟೊತ್ತಿಗಾದ್ರೂ ಹೋಗ್ತೇನೆ. ಪಾರ್ಟೀಲೀ ಒಂದು ಪೆಗ್ ಹಾಕಿದ್ರು ಅನ್ಸುತ್ತೆ.  ಇಲ್ಲಾಂದ್ರೆ ಈ ತರಹ ಮಾತಾಡ್ತಿರಲಿಲ್ಲ. ಹೆಂಡತಿಯಾಗಿ ನನ್ಗೆ ಅಷ್ಟೂ ಸ್ವಾತಂತ್ರ್ಯ ಇಲ್ವಾ. ಮಾಡ್ತೀನಿ ಸರಿಯಾಗಿ. ಒಬ್ಬರೇ ಇದ್ದು ಅನುಭವಿಸಲಿ ಗೊತ್ತಾಗತ್ತೆ. ಅವರೇ ಬಂದು ಗೋಗರೆದ್ರೂ ಹೋಗ್ಬಾರದು. 

ಅವನು: ಏನು ಕಿರಿ ಕಿರಿ ಮಾಡ್ತಾಳೆ. ಮೀಟಿಂಗ್ ಇದೆ ಊಟಾನೂ ಅಲ್ಲೇ ಇದೆ. ನನ್ನನ್ನು ಕಾಯ್ಬೇಡ ಅಂತ ಬೆಳಿಗ್ಗೆ ಹೋಗುವಾಗಲೇ ಹೇಳಿ ಹೋಗಿದ್ದೆ. ಬಾಸ್ ಎಲ್ಲ ಜೊತೇಲಿರುವಾಗ ಬೇಡಾ ಅನ್ನೋದು ಚೆನ್ನಾಗಿರಲ್ಲ ಅಂತ ಒಂದು ಪೆಗ್ ತಗೊಂಡ್ನಪ್ಪ. ಅದೇ ದೊಡ್ಡ ತಪ್ಪಾ. ಅವ್ಳಿಗೆ ಇಷ್ಟ ಇಲ್ಲಾ ಅಂತ ಗೊತ್ತು. ಆದರೆ ಏನು ಮಾಡ್ಲಿ ಎಲ್ರೂ ಹೆಂಡ್ತಿ ಗುಲಾಮ ಅಂತ ರೇಗಿಸಲ್ವಾ ಯಾರೂ ಮಾಡ್ದೇ ಇರೋ ತಪ್ಪು ನಾನು ಮಾಡಿದ್ನಾ. ಎಷ್ಟು ಕನ್ವಿನ್ಸ್ ಮಾಡಿದ್ರೂ ಒಪ್ತಾ ಇಲ್ಲ. ಮೂರು ಹೊತ್ತೂ ಇವ್ಳ ಮುಂದೇನೇ ಕೂತ್ಕೊಂಡು ಇರೋಕೆ ಆಗುತ್ತಾ ಮದ್ವೆ ಆದ ಮಾತ್ರಕ್ಕೆ ಫ್ರೆಂಡ್ಸ್ ಗಳನೆಲ್ಲ ಮರೆಯೋಕಾಗತ್ತಾ. ಅವ್ರೂ ಬೇಕು ತಾನೆ. ಗಂಡಸರು ಅಂದ್ಮೇಲೆ ಸಾವಿರ ಕೆಲ್ಸ ಇರತ್ತೆ. ಮಾತೆತ್ತಿದ್ರೆ ಗಂಟುಮೂಟೆ ಕಟ್ಕೊಂಡು ಹೊರಡ್ತಾಳೆ. ಹೋಗ್ಲಿ  ನನ್ನನ್ನು ಬಿಟ್ಟು ಎಷ್ಟು ದಿನ ಇರ್ತಾಳೋ ನಾನೂ ನೋಡ್ತೀನಿ.  

ಇಬ್ಬರೂ ಒಬ್ಬರಿಗೊಬ್ಬರು ಇನ್ನು ಯಾವತ್ತೂ ದೂರವಾಗದಂತೆ ಬೆಸೆದುಕೊಂಡಿದ್ದರು. ಎರಡು ದಿನಗಳ ವಿರಹದ ನಂತರದ ಬೆಸುಗೆ.  ತಬ್ಬಿಕೊಂಡಿದ್ದಂತಯೇ ಅವಳ ತಲೆಗೆ ಮೆಲ್ಲಗೆ ಮೊಟಕಿ ಬಿಟ್ಟು ಹೋಗ್ತೀಯಾ ನನ್ನ ಎಷ್ಟು ಧೈರ್ಯ ನಿಂಗೆ ಇನ್ನೊಂದ್ಸಲ ಹೀಗೆ ಮಾಡಿದ್ರೆ ನೋಡು ಏನು ಮಾಡ್ತೀನೀಂತ ನೀನು ವಾಪಸ್ಸು ಬರೋದ್ರೊಳಗೆ.. ಮುಂದೆ ಏನೂ ಹೇಳದಂತೆ ಅವಳು ಅವನ ಬಾಯಿಯನ್ನು ಮುಚ್ಚಿದಳು. ನೀವು ಮಾತ್ರ ಇನ್ನೇನು. ನಾನು ಹೋಗ್ತಾ ಇರ್ಬೇಕಾದ್ರೆ ತಡೆಯೋದಲ್ವ. ಹೋದ್ರೆ ಹೋಗ್ಲಿ ಅಂತ ಸುಮ್ನೆ ನೋಡ್ತಾ ಇದ್ರಿ. ಕೋಪ ಬರಲ್ವಾ. ತಬ್ಬಿಕೊಂಡಿದ್ದಂತೆಯೇ ಟಿವಿ ಆನ್ ಮಾಡಿದಳು. ಹಾಡು ಬರುತ್ತಿತ್ತು ಒಲವಿನ ಪೂಜೆಗೆ ಒಲವೇ ಮಂದಾರ ಒಲವೆ ಬದುಕಿನ ಬಂಗಾರ ಒಲವಿನ ನೆನಪೆ ಹೃದಯಕೆ ಮಧುರ….. ವಾವ್ ಎಂತಹ ಸುಂದರ ಸಾಲುಗಳು  ಇಬ್ಬರೂ ಮುಸಿ ಮುಸಿ ನಕ್ಕರು. ಬೆಸುಗೆ ಇನ್ನೂ ಬಿಗಿಯಾಗತೊಡಗಿತು.
*****

ಮದುವೆ



ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನ:
ಕಂತೇ ಬಧ್ನಾಮಿ ಸುಭಗೆ ತ್ವಂಜೀವ ಶರದ ಶತಂ::
ವರನಿಗೆ ಹಾಲ್ನೀರು ನಿವಾಳಿಸುವುದು

ದಿಬ್ಬಣ ಎದುರುಗೊಳ್ಳುವುದು

ವರನಿಗೆ ಮೆಟ್ಟಕ್ಕಿ ಮೇಲೆ ನಿಲ್ಲಿಸಿ ಪಾದಸ್ನಾನ

ವರನಿಗೆ ಹಾಲು, ಬಾಳೆಹಣ್ಣು ನೀಡಿ ಸತ್ಕರಿಸುವುದು
ವೀಳ್ಯ ಬದಲಾಯಿಸುವುದು

ವಧುವಿಗೆ ಮೇಲ್ನೀರು ಸ್ನಾನ

ವಧುವಿಗೆ ಅಂಕೋಲ್ ಧಾರೆ

ಬಾಗಿಲು ಮುಹೂರ್ತ


ವರನಿಗೆ ಮೇಲ್ನೀರು ಸ್ನಾನ


ವರನಿಗೆ ಅಂಕೋಲ್ ಧಾರೆ



ಧಾರೆ ಸೀರೆ, ತಳಿಗೆ ಸೀರೆ, ಹೂಗಳೊಂದಿಗೆ ಬರುವುದು
ಸ್ವಾಗತ


ನಾದಸ್ವರ

ವರನ ತಾಯಿ ಧಾರೆಸೀರೆ, ಕುಪ್ಪಸ ನೀಡುವುದು


ವರನನ್ನು ಮಂಟಪಕ್ಕೆ ಕರೆದುಕೊಂಡು ಬರುವುದು

ವರಪೂಜೆ
ವಧುವನ್ನು ಮಂಟಪಕ್ಕೆ ಕರೆದುಕೊಂಡು ಬರುವುದು

ಅಂತರಪಟ
ರಂಜೆ ಹೂವಿನ ಮಾಲೆ ಹಾಕುವುದು


ಮಾಲಧಾರಣೆ


ಧಾರೆ
ಕನ್ಯಾದಾನ

ಮಂಗಳಸೂತ್ರ ಧಾರಣೆ
ಕಾಲುಂಗುರ ಹಾಕುವುದು


ವಧುವಿನಿಂದ ಕಂಕಣ

ವರನಿಂದ ಕಂಕಣ

ಹೋಮದ ಪ್ರಸಾದ ಇಡುವುದು

ವಧುವಿನ ತಮ್ಮ ಹೋಮಕ್ಕೆ ಹೊದ್ಲು(ಅರಳು) ಎರೆಯುವುದು

ಲಾಜ ಹೋಮ
ಸಪ್ತಪದಿ


ಆರತಿ
ಕಂದನನ್ನು ಆಡಿಸುವುದು


ವಧುನಿಗೆ ವರನ ಕಡೆಯವರು ಸೆರಗು ಹಾಕಿ ಸೀರೆ ಉಡಿಸಿ ಕುಂಕುಮ ಹಚ್ಚಿ ಅಲಂಕಾರ ಮಾಡುವುದು

ಹೆಂಗಳೆಯರು ಸುತ್ತುವರಿದು ಬಚ್ಚಿಟ್ಟಿರುವ ವಧುವನ್ನು ವರ ಹುಡುಕುತ್ತಿರುವುದು
ಉಂಗುರದ ಆಟ