Tuesday 5 June 2012

ಇದು ಕಥೆಯಲ್ಲ...


                                                                                          

        ದೂರದರ್ಶನದಲ್ಲಿ ಸತ್ಯಮೇವ ಜಯತೆ ಪ್ರಸಾರವಾಗುತ್ತಿತ್ತು. ಒಬ್ಬೊಬ್ಬ ಹೆಣ್ಣು ಮಗಳೂ ತಮ್ಮ ಜೀವನದಲ್ಲಾದ ನೋವಿನ ಅನುಭವಗಳನ್ನು ಬಿಚ್ಚಿಡುತ್ತಿದ್ದರು. ಇಂತಹ ಘಟನೆಗಳು ಬರೀ ಸಿನೆಮಾದಲ್ಲಿ ಅಥವಾ ಕಥೆಗಳಲ್ಲಿ ಮಾತ್ರ ಸಂಭವಿಸಲು ಸಾಧ್ಯ ಅಂದುಕೊಂಡವರಿಗೆ ಇಂತಹ ಕಟುಕರೂ ಇರಲು ಸಾಧ್ಯಾನಾ ಎಂದು ಆಶ್ಚರ್ಯವಾಗಬಹುದು. ಖಂಡಿತಾ ಇದ್ದಾರೆ ಅನ್ನೋದಕ್ಕೆ ದಿನನಿತ್ಯ ಇದೇ ರೀತಿ ಹಿಂಸೆಯನ್ನನುಭವಿಸುತ್ತಿರಬಹುದಾದ ಸಾವಿರಾರು ಹೆಣ್ಣುಮಕ್ಕಳ ಜೊತೆ ನಾನು ಕೂಡಾ ಒಂದು ಸಾಕ್ಷಿ.

ಅಪ್ಪ ಸರ್ಕಾರಿ ಕೆಲಸದಲ್ಲಿದ್ದುದರಿಂದ ಅಪ್ಪ ತೀರಿ ಹೋದ ನಂತರ ಅನುಕಂಪದ ಆಧಾರದ ಮೇಲೆ ನನಗೆ ಅಪ್ಪನ ಕೆಲಸ ದೊರೆತ್ತಿತ್ತು. ಅಲ್ಲಿ ಸಹೋದ್ಯೋಗಿಯ ಸ್ನೇಹಿತನ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೇಮವಾಗಿತ್ತು. ಅವನು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದ ಅಂದರೆ ನೀನು ನನ್ನನ್ನು ಮದುವೆ ಆಗದಿದ್ದಲ್ಲಿ ನಾನು ಸತ್ತೇ ಹೋಗುತ್ತೀನಿ ಅನ್ನುವಷ್ಟರ ಮಟ್ಟಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದ. ನಾನು ಬಲೆಗೆ ಬಿದ್ದಿದ್ದೆ. ಅಮ್ಮ, ಸಂಬಂಧಿಕರು ಮೊದಲು ಮದುವೆಗೆ ವಿರೋಧ ವ್ಯಕ್ತಪಡಿಸಿದರೂ ಕೊನೆಗೆ ನನ್ನ ಹಠಕ್ಕೆ ಒಪ್ಪಲೇಬೇಕಾಯಿತು.

          ಮದುವೆಯಾದ ಮೊದಲ ದಿನವೇ ಅವನು ತನ್ನ ಬಣ್ಣ ಬದಲಾಯಿಸಲಾರಂಭಿಸಿದ್ದ. ಮದುವೆಗೆ ಮೊದಲು ಚಿನ್ನ, ಬಂಗಾರ ಅನ್ನುತ್ತಿದ್ದವನ ಎರಡನೇ ಮುಖದ ಪರಿಚಯವಾಗತೊಡಗಿತ್ತು. ದುಡ್ಡು ಬಿಟ್ಟರೆ ನನ್ನಿಂದ ಹೊಸದೇನೂ ಪಡೆದುಕೊಳ್ಳುವುದಿರಲಿಲ್ಲ. ಎಲ್ಲವನ್ನೂ ಮದುವೆಗೆ ಮುಂಚೇನೆ ಪಡೆದುಕೊಂಡಾಗಿತ್ತು. ನನ್ನಿಂದ ದುಡ್ಡನ್ನು ಹೇಗೆ ಪಡಕೋಬೇಕು ಅಂತ ಅವನು ಚೆನ್ನಾಗಿ ಅರಿತಿದ್ದ. ಅವನು ಕುಡೀತಾನೆ ಅಂತ ನನಗೆ ಗೊತ್ತಿತ್ತು. ಆದರೆ ಅದಕ್ಕೆ ದಾಸನಾಗಿದ್ದ ಅಂತ ಗೊತ್ತಿರಲಿಲ್ಲ. ನಾನು ಪ್ಯೂರ್ ವೆಜಿಟೇರಿಯನ್. ಅವನು ಹಸಿ ಮಾಂಸ ತಂದು ಅಡುಗೆ ಮಾಡುವಂತೆ ಹಿಂಸಿಸುತ್ತಿದ್ದ. ನನಗೆ ಕೈಯಲ್ಲಿ ಮುಟ್ಟುವುದಿರಲಿ ಅದನ್ನು ನೋಡಿದ್ರೇನೆ ವಾಕರಿಕೆ ಬರುತ್ತಿತ್ತು. ಮಾಡದಿದ್ದಲ್ಲಿ ಜುಟ್ಟು ಹಿಡ್ಕೊಂಡು ಬಾಸುಂಡೆ ಬರುವಂತೆ ಬಾರಿಸುತ್ತಿದ್ದ. ಮದುವೆ ಆದ ಮೇಲೆ ಕೆಲಸಕ್ಕೆ ಹೋಗೋದನ್ನೇ ನಿಲ್ಲಿಸಿಬಿಟ್ಟ. ಎಲ್ಲಿ ಬಚ್ಚಿಟ್ಟರೂ, ಒಂದು ಪೈಸೇನೂ ಬಿಡದಂಗೆ ಎತ್ಕೊಂಡು ಹೋಗುತ್ತಿದ್ದ.

ಅಮ್ಮನೂ ಕೆಲಸಕ್ಕೆ ಹೋಗುತ್ತಿದ್ದುದರಿಂದ ನನ್ನ ಮದುವೆಗೆಂದು ಹೇರಳವಾಗಿಯೇ ಚಿನ್ನ ಮಾಡಿಸಿಟ್ಟಿದ್ದರು. ತಾಳಿ ಒಂದನ್ನು ಬಿಟ್ಟು ಎಲ್ಲವನ್ನೂ ಮಾರಿಕೊಂಡ್ಬಿಟ್ಟ. ಅಮ್ಮ ಎಷ್ಟು ಬೇಡವೆಂದರೂ ಕೇಳದೆ ಅವನ ಹಿಂದೆ ಓಡಿ ಬಂದಿದ್ದಕ್ಕೆ ತಕ್ಕ ಶಿಕ್ಷೆಯಾಗಿತ್ತು. ಈ ಮಧ್ಯೆ ಗರ್ಭಿಣಿಯಾದೆ. ಆದರೂ ಅವನು ಕೊಡುತ್ತಿದ್ದ ಹಿಂಸೆ ಏನೂ ಕಡಿಮೆ ಆಗಲಿಲ್ಲ. ಒಂದು ದಿನ ಹೆಣ್ಣು ಮಗುವಿಗೆ ಜನ್ಮ ನೀಡಿದೆ. ಹೆಣ್ಣು ಮಗುವಾದುದಕ್ಕೆ ಹಿಂಸೆ ಇನ್ನೂ ಜಾಸ್ತಿ ಆಯಿತು. ಮಗುವಿಗೆ ಏನಾದರೂ ಮಾಡಬಹುದು ಎಂದು ಮಗುವನ್ನು ಕೈಯಲ್ಲೇ ಹಿಡ್ಕೊಂಡು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ.

          ಒಂದು ಚಿಕ್ಕ ಹುಳು ಕೂಡಾ ಅದರ ಮೇಲೆ ಸುಮ್ಮನೆ ಒಂದು ಕಡ್ಡಿ ಇಟ್ಟರೆ ಅದರಿಂದ ಬಿಡಿಸಿಕೊಳ್ಳಲು ಹೇಗೆ ಒದ್ದಾಡುತ್ತದೆ. ನಾನ್ಯಾಕೆ ಹೀಗೆ ಇವನ ಹಿಂಸೆ ಸಹಿಸಿಕೊಂಡು ಇವನೊಂದಿಗೆ ಇದ್ದೇನೆ ಹೇಗಿದ್ದವಳು ಹೇಗಾದೆ ಅಂತ ನನ್ನ ಮೇಲೆ ನನಗೇ ಬೇಜಾರಾಗುತ್ತಿತ್ತು. ಆದರೆ ಅವನನ್ನು ಬಿಟ್ಟು ನಾನು ಹೋಗೋದಾದ್ರೂ ಎಲ್ಲಿಗೆ. ಅಮ್ಮನಿಗೆ ಈ ವಯಸ್ಸಲ್ಲಿ ಯಾಕೆ ನೋವು ಕೊಡಲಿ ಅಂತ ಅವನ ಹಿಂಸೆ ಸಹಿಸಿಕೊಂಡು ಸುಮ್ಮನಿರುತ್ತಿದ್ದೆ.

ಒಂದು ದಿನ ಮಗುವನ್ನು ಕೆಳಗೆ ಮಲಗಿಸಿ ಅಡುಗೆ ಮನೆಯಲ್ಲಿ ಏನೋ ಮಾಡುತ್ತಿದ್ದೆ. ಅವನು ಕುಡಿದು ತೂರಾಡುತ್ತಾ ಬಂದವನೇ, ಇವ್ಳಿಗೆ ಒಂದು ಗಂಡು ಮಗುವನ್ನ ಹೆರೋಕಾಗ್ಲಿಲ್ಲ. ಈ ಕರೀ ಮೂಟೇನ ಹೆತ್ತಿದ್ದಾಳೆ ಅಂದವನೇ ಮಗುವನ್ನ ಕಾಲಿನಿಂದ ಫುಟ್ ಬಾಲ್ ಒದೆಯುವಂತೆ ಒದ್ದ. ಅವನು ತಳ್ಳಿದ ರಭಸಕ್ಕೆ ಮಗುವಿನ ತಲೆ ಗೋಡೆಗೆ ತಗುಲಿ ಮಗು ಕಿಟಾರನೆ ಕಿರುಚಲಾರಂಭಿಸಿತು. ದೇವರ ದಯೆಯಿಂದ ಏನೂ ಆಗಲಿಲ್ಲ. ನನಗೆ ಎಲ್ಲಿಂದ ಬಂತೋ ಶಕ್ತಿ ಗೊತ್ತಾಗ್ಲಿಲ್ಲ. ಮಗುವನ್ನು ಎತ್ತಿಕೊಂಡವಳೇ ಅವನನ್ನು ಒಂದೇ ಕೈಯಿಂದ ಹಿಡಿದು ತಳ್ಳಿಬಿಟ್ಟೆ. ಮೊದಲೇ ತೂರಾಡುತ್ತಿದ್ದವನು ಅಲ್ಲಿಯೇ ಮಲಕ್ಕೊಂಡು ಬಿಟ್ಟ. ಮಗುವನ್ನು ಎತ್ತಿಕೊಂಡವಳೇ ಬದುಕಿದೆಯಾ ಬಡಜೀವ ಅಂತ ಸಿಕ್ಕಿದ ಆಟೋ ಹತ್ತಿ ಅಮ್ಮನ ಮನೆಗೆ ಬಂದೆ. ಅಮ್ಮನಿಗೆ ಅವನ ಬಗ್ಗೆ ಎಲ್ಲವನ್ನೂ ಹೇಳಿರಲಿಲ್ಲ. ಹೇಗೆ ಹೇಳಲಿ ನಾನೇ ಇಷ್ಟಪಟ್ಟು ಅವನೊಂದಿಗೆ ಓಡಿ ಬಂದವಳು. ಈಗ ಅಮ್ಮನನ್ನು ಬಿಟ್ಟು ನನಗೆ ಯಾರೂ ಇರಲಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಾ ಅಮ್ಮನಲ್ಲಿ ಎಲ್ಲವನ್ನೂ ಹೇಳಿದೆ. ಅಮ್ಮ ಮೌನವಾಗಿ ಅಳುತ್ತಾ ನನ್ನನ್ನು ತಬ್ಬಿಕೊಂಡು ಸಮಾಧಾನಪಡಿಸುತ್ತಿದ್ದರು.

ಆಮೇಲೆ ಅವನ ಮನೆಗೆ ಹೋಗಲಿಲ್ಲ. ಅವನು ಸರಿಹೋಗುತ್ತಾನೆ ಅನ್ನುವ ಸಣ್ಣ ಆಸೇನೂ ನನಗೆ ಇರಲಿಲ್ಲ. ಕುಡಿಯಲು ದುಡ್ಡು ಬೇಕಾಗಿತ್ತು. ಆಫೀಸ್ ಹತ್ತಿರ ಬಂದು ಹಿಂಸೆ ಕೊಡಲಾರಂಭಿಸಿದ. ಅಮ್ಮನ ಮನೆಯ ಹತ್ತಿರ ತೂರಾಡುತ್ತಾ ಬಂದು ಕೂಗಾಡುತ್ತಿದ್ದ. ಫೋನ್ ನಲ್ಲಿ ಅವಾಚ್ಯ ಶಬ್ಧಗಳಿಂದ ಬಯ್ಯುತ್ತಿದ್ದ. ನಮ್ಮ ಸಂಬಂಧಿಕರೊಬ್ಬರು ಎಸಿಪಿ ಇದ್ದರು. ಅವರು ಸ್ಠೇಷನ್ ಗೆ ಕರೆಸಿ ಹೆದರಿಸಿದ ನಂತರ ಆಫೀಸ್ ಹತ್ತಿರ ಮನೆಯ ಹತ್ತಿರ ಬರೋದನ್ನ ನಿಲ್ಲಿಸಿದ. ಆಮೇಲೆ ಡೈವೋರ್ಸ್ ಗೆ ಅಪ್ಲೈ ಮಾಡಿದೆ. ಸ್ನೇಹಿತರು ಇನ್ನೊಂದು ಮದುವೆ ಮಾಡುವ ಪ್ರಯತ್ನ ಮಾಡಿದರು. ಆದರೆ ನನ್ನ ಮುಂದೆ ಮಗಳ ಭವಿಷ್ಯ ಬಿಟ್ಟು ಬೇರೇನೂ ಇರಲಿಲ್ಲ.

ಈಗ ನನಗೆ ಹಣದ ಕೊರತೆ ಇಲ್ಲ. ಮಗಳನ್ನು ಚೆನ್ನಾಗಿಯೇ ಓದಿಸಿದೆ. ಅವಳ ಜೀವನ ನನ್ನ ತರಹ ಆಗಬಾರದು. ಅವಳು ಒಂದು ಒಳ್ಳೆಯ ಮನೆ ಸೇರಬೇಕು. ದಿನನಿತ್ಯ ದೇವರಲ್ಲಿ ಒಂದೇ ಪ್ರಾರ್ಥನೆ ಅವಳಿಗೆ ಒಳ್ಳೆಯ ಜೀವನ ಸಿಗಲಿ ಎಂದು. ದೇವರು ನನ್ನ ನಂಬಿಕೆ ಖಂಡಿತಾ ಹುಸಿ ಮಾಡೋದಿಲ್ಲ. ಯಾಕೇಂದ್ರೆ ಯಾವುದನ್ನೂ ಮುಚ್ಚಿಡದೆ ನಾವು ಹೇಳಿಕೊಳ್ಳೋದು ಭಗವಂತನಲ್ಲಿ ಮಾತ್ರ.

*****



                                               

No comments:

Post a Comment