Friday 24 February 2012

ಪುತ್ತೂರು ಶ್ರೀ ಮಹಾಲಿಂಗೇಶ್ವರ




ಪುತ್ತೂರಿನ ಮಹತೋಬಾರ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಸುಮಾರು 11-12ನೇ ಶತಮಾನದ ಹಳೆಯ ದೇವಸ್ಥಾನ. ಮಹಾಲಿಂಗೇಶ್ವರ ದೇವಸ್ಥಾನದ ಮುಂದೆ ಇರುವ ಸ್ಮಶಾನ ಇಲ್ಲಿನ ವಿಶೇಷ. ಕಾಶಿ ಬಿಟ್ಟರೆ ಬಹುಷ: ಶಿವನ ದೇವಸ್ಥಾನದ ಮುಂದೆ ಸ್ಮಶಾನ ಬೇರೆಲ್ಲೂ ಕಾಣಸಿಗಲಾರದು.

ದೇವಸ್ಥಾನದ ಸುತ್ತಮುತ್ತ ಆನೆ ಬರುವ ಹಾಗಿಲ್ಲ. ಆಕಸ್ಮಾತ್ ಬಂದಲ್ಲಿ ಅವುಗಳಿಗೆ ಸಾವು ಖಚಿತ ಅನ್ನೋ ಪ್ರತೀತಿ ಇದೆ. ಇದಕ್ಕೆ ಒಂದು ಕಥೆ ಇದೆ. ಒಮ್ಮೆ ಗೋವಿಂದ ಭಟ್ಟರು ಅನ್ನೋ ಬ್ರಾಹ್ಮಣರು ಪೂಜೆ ಮಾಡಲೆಂದು ಒಂದು ಶಿವಲಿಂಗವನ್ನು ಈಗ ದೇವಸ್ಥಾನ ಇರುವ ಜಾಗದಲ್ಲಿ ಮರೆತು ನೆಲದ ಮೇಲಿಟ್ಟರಂತೆ. ಭೂಸ್ಪರ್ಶವಾದ ಶಿವಲಿಂಗವು ಎಷ್ಟು ಎಳೆದರೂ ಮೇಲೇಳಲಿಲ್ಲವಂತೆ. ಆಗ ಅದನ್ನು ಎಳೆಯಲು ಆನೆಯನ್ನು ಕರೆಸಿದರಂತೆ. ಶಿವಲಿಂಗಕ್ಕೆ ಹಗ್ಗ ಕಟ್ಟಿ ಎಳೆಯುತ್ತಿದ್ದಂತೆ ಶಿವಲಿಂಗವು ದೊಡ್ಡದಾಗತೊಡಗಿತಂತೆ. ಅದೇ ಮಹಾಲಿಂಗವಾಗಿ ಮಹಾಲಿಂಗೇಶ್ವರ ಆಯಿತು. ರಭಸವಾಗಿ ಶಿವಲಿಂಗವನ್ನು ಎಳೆಯುತ್ತಿದ್ದ ಆನೆ ಛಿದ್ರಛಿದ್ರವಾಗಿ ದೂರ ದೂರ ಎಸೆಯಲ್ಪಟ್ಟಿತು. ಅದರ ಒಂದೊಂದು ಅಂಗ ಬಿದ್ದ ಒಂದೊಂದು ಸ್ಥಳಕ್ಕೆ ಒಂದೊಂದು ಹೆಸರು ಹುಟ್ಟಿಕೊಂಡಿತು. ಕೊಂಬು ಬಿದ್ದ ಕಡೆ ಕೊಂಬೆಟ್ಟು. ತಲೆ ಬಿದ್ದ ಕಡೆ ತಾಳೆಪಾಡಿ, ಕೈ ಬಿದ್ದ ಕಡೆ ಕೇಪಳ, ಬಾಲ ಬಿದ್ದಲ್ಲಿ ಬೀದಿಮಜಲು ಎಂದು ಹೆಸರಾಯಿತು. ಈ ಪವಾಡವನ್ನು ಕಂಡ, ಅಂದು ಪುತ್ತೂರನ್ನು ಆಳುತ್ತಿದ್ದ ಬಂಗರಾಜ ದೇವರಿಗೆ ಗುಡಿ ಕಟ್ಟಿಸಿದನಂತೆ.  

ಮಹಾಲಿಂಗೇಶ್ವರ ಗುಡಿಯ ಮುಂದೆ ಮೂರು ಕಾಲುಗಳ್ಳುಳ್ಳ ನಂದಿ ಇದೆ. ಇದಕ್ಕೂ ಒಂದು ಕಥೆ ಇದೆ. ರೈತರು ಹೊಲದಲ್ಲಿ ಬೆಳೆದಿದ್ದ ಪೈರನ್ನು ದಿನಾ ಒಂದು ಬಸವ ಬಂದು ಹಾಳು ಮಾಡುತ್ತಿತ್ತಂತೆ. ಒಂದು ದಿನ ರೈತ ಕಾದು ಕುಳಿತು ಬಸವನ ಕಾಲಿಗೆ ಹೊಡೆದ ರಭಸಕ್ಕೆ ಕಾಲು ಮುರಿದು ಹೋಯಿತಂತೆ. ಮೂರು ಕಾಲುಗಳಲ್ಲಿ ಅಳುತ್ತಾ ಮಹಾಲಿಂಗೇಶ್ವರನ ಮುಂದೆ ಬಂದ ಬಸವನಿಗೆ, ಮುಂದೆ ನಿನಗೆ ಯಾರಿಂದಲೂ ತೊಂದರೆ ಆಗುವುದಿಲ್ಲ ಬದಲಾಗಿ ನನ್ನ ಜೊತೆಗೆ ನಿನ್ನನ್ನೂ ಪೂಜಿಸುವಂತಾಗಲಿ ಎಂದು ಕಲ್ಲಾಗಿ ಮಾಡಿಬಿಟ್ಟನಂತೆ. ಮಹಾಲಿಂಗೇಶ್ವರನ ಎದುರು ಇರುವ ನಂದಿಗೆ ಒಂದು ಕಾಲು ಮುರಿದುಹೋದುದನ್ನು ಈಗಲೂ ಗಮನಿಸಬಹುದು. ಮುರಿದ ಕಾಲು ಈಗಲೂ ಕಲ್ಲಾಗಿ ಹೊಲದ ಮಧ್ಯೆ ಇದೆ ಎಂದು ಪ್ರತೀತಿ.

ಕ್ರಮೇಣ ಶಾಸ್ತ್ರೋಕ್ತವಾಗಿ ಪೂಜಾವಿಧಿಗಳೊಂದಿಗೆ ಪರಿವಾರ ದೇವತೆಗಳಾದ ಪಾರ್ವತಿ, ಸುಬ್ರಮಣ್ಯ, ಗಣೇಶ ಹಾಗೂ ದೈವಗಳನ್ನು ಪ್ರತಿಷ್ಟಾಪಿಸಲಾಯಿತು. ದೇವಸ್ಥಾನದ ಮುಂಭಾಗದಲ್ಲಿ ನಾಗ, ಅಯ್ಯಪ್ಪ ಹಾಗೂ ನವಗ್ರಹಗಳ ಗುಡಿಗಳನ್ನು ನಿರ್ಮಿಸಲಾಯಿತು.

ದೇವಸ್ಥಾನದ ಹಿಂದೆ ನಿತ್ಯ ಹರಿದ್ವರ್ಣದ ಒಂದು ಕೆರೆ ಇದೆ. ಇಲ್ಲಿ ನಡೆಯುವ ತೆಪ್ಪೋತ್ಸವ ಮಹತ್ವಪೂರ್ಣವಾದುದು. ಕಾರ್ತೀಕ ಮಾಸದಲ್ಲಿ ದೇವಸ್ಥಾನ ಹಾಗೂ ಕೆರೆಯ ಸುತ್ತಲೂ ದೀಪಗಳನ್ನು ಹಚ್ಚಿ ಲಕ್ಷದೀಪೋತ್ಸವ ಆಚರಿಸಲಾಗುತ್ತದೆ. ಈ ಕೆರೆಯಲ್ಲಿ ಹಿಂದೆ ಮುತ್ತು ಬೆಳೆಯುತ್ತಿತ್ತಂತೆ. ಇದಕ್ಕೂ ಒಂದು ಕಥೆ ಇದೆ. ದೇವಸ್ಥಾನದ ಹಿಂದೆ ಕೆರೆ ನಿರ್ಮಿಸುತ್ತಿರುವಾಗ ಎಷ್ಟು ಆಳ ಅಗೆದರೂ ನೀರು ಬರಲಿಲ್ಲವಂತೆ. ಅದಕ್ಕೆ ವರುಣನ ಪೂಜೆಗೈದು ಬ್ರಾಹ್ಮಣರಿಗೆ ಕೆರೆಯಲ್ಲಿ ಅನ್ನಸಂತರ್ಪಣೆ ಮಾಡಲಾಯಿತಂತೆ. ಅವರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರೂ ತುಂಬಲಾರಂಭಿಸಿದಾಗ ಅವರು ಊಟ ಬಿಟ್ಟು ಓಡಿದರಂತೆ. ಅವರ ಎಲೆಯಲ್ಲಿದ್ದ ಅನ್ನದ ಅಗಳುಗಳು ಮುತ್ತಾಗಿ ಪರಿವರ್ತನೆಗೊಂಡವಂತೆ. ಮುತ್ತು ಸಿಗೋ ಊರಿಗೆ ಮುತ್ತೂರು ಎಂಬ ಹೆಸರು ಬಂತು. ಕ್ರಮೇಣ ಜನರ ಬಾಯಲ್ಲಿ ಮುತ್ತೂರು, ಪುತ್ತೂರು ಆಯಿತು.


ಇಲ್ಲಿ ಏಪ್ರಿಲ್ ನಲ್ಲಿ ನಡೆಯುವ ಜಾತ್ರೆ ತುಂಬಾ ವಿಶೇಷ. ಏಪ್ರಿಲ್ 1ನೇ ತಾರೀಕಿಗೆ ಗೊನೆ ಕಡಿಯುವುದು. 10ನೇ ತಾರೀಕಿಗೆ ಕೊಡಿ ಏರುವುದು. 16ನೇ ತಾರೀಕಿಗೆ ಮಹಾರಥೋತ್ಸವ. ರಥೋತ್ಸವಕ್ಕೆ ಮುನ್ನ ಬೆಡಿಕಂಬ ಎಂಬ ಹೆಸರಿನಲ್ಲಿ ಸುಡುಮದ್ದುಗಳ ಪ್ರದರ್ಶನ. 18ನೇ ತಾರೀಕಿಗೆ ಕೊಡಿ ಇಳಿಯುವುದು. ಕೊಡಿ ಏರಿದ ನಂತರ ಇಳಿಯುವವರೆಗೆ ಪುತ್ತೂರಿನ ಜನ ಊರು ಬಿಟ್ಟು ಬೇರೆಡೆ ಹೋಗುವುದಿಲ್ಲ ಹಾಗೂ ಮಾಂಸಾಹಾರ ಸೇವಿಸುವುದಿಲ್ಲ. ಈ ದಿನಗಳಲ್ಲಿ ದೇವರಿಗೆ ಊರು ಪ್ರದಕ್ಷಿಣೆ ಹಾಕಿಸಿ ಕಟ್ಟೆ ಪೂಜೆ ಮಾಡಿಸಲಾಗುತ್ತದೆ.

ಜಯ ಕರ್ನಾಟಕ ಸಂಸ್ಥಾಪಕ ಶ್ರೀ ಮುತ್ತಪ್ಪ ರೈ ರವರು 2010 ರಲ್ಲಿ ಸುಮಾರು 1.00 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ 71 ಅಡಿ ಎತ್ತರ, 55 ಟನ್ ಭಾರವಿರುವ ತೇಗದ ಮರದ ಬ್ರಹ್ಮರಥವನ್ನು ಮಹಾಲಿಂಗೇಶ್ವರನಿಗೆ ಸಮರ್ಪಿಸಿದರು ಹಾಗೂ  2012 ರಲ್ಲಿ ಸುಮಾರು 22.00 ಲಕ್ಷ ರೂ. ವೆಚ್ಚದಲ್ಲಿ, ಬ್ರಹ್ಮರಥದ ಸಂರಕ್ಷಣೆಗೆಂದು ಬ್ರಹ್ಮರಥ ಮಂದಿರ ನಿರ್ಮಿಸಿ ಅರ್ಪಿಸಿದರು.


ಸುಮಾರು ರೂ.14.00 ಕೋಟಿಗಳ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ನಡೆದು ದೇವಾಲಯವು ಪುನರ್ ನಿರ್ಮಾಣಗೊಂಡಿದೆ. ನಾನಾ ಸಂಘ ಸಂಸ್ಥೆಗಳು ಕರಸೇವೆ ನಡೆಸಲು ನಾ ಮುಂದೆ ತಾ ಮುಂದೆ ಎಂದು ಕರಸೇವೆಯಲ್ಲಿ ತೊಡಗಿಸಿಕೊಂಡಿದ್ದು ಒಂದು ಇತಿಹಾಸವೇ ಸರಿ. 2013ರ ಮೇ ತಿಂಗಳ 5ನೇ ತಾರೀಕಿನಿಂದ 16 ರವರೆಗೆ ವಿಜ್ರಂಭಣೆಯಿಂದ ಬ್ರಹ್ಮಕಲಶೋತ್ಸವ ನಡೆದು, ಮೇ  13ರಂದು ಪರಿವಾರ ದೇವತೆಗಳೊಂದಿಗೆ ಮಹಾಲಿಂಗೇಶ್ವರ ದೇವರ ಪ್ರತಿಷ್ಠೆ ಕಾರ್ಯ ನಿರ್ವಿಘ್ನವಾಗಿ ನೆರವೇರಿದೆ.

 

ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಗರ್ಭಗುಡಿಯಲ್ಲಿ ತಾಮ್ರದ ತಂಬಿಗೆಯಲ್ಲಿ ತುಂಬಿಟ್ಟ ಚಿನ್ನದ ನಾಣ್ಯಗಳು ದೊರೆತಿದ್ದು ಕೂಡಾ ಒಂದು ಇತಿಹಾಸ. ಇದೇ ರೀತಿ ದೇವಸ್ಥಾನದ ಜೀರ್ಣೋದ್ಧಾರ ಸಮಯದಲ್ಲಿ ಅನೇಕ ಪವಾಡಗಳು ನಡೆದಿವೆ.

ಮಹಾಲಿಂಗೇಶ್ವರ ದೇವರನ್ನು ಬಹಳವಾಗಿ ನಂಬಿರುವ ಮುತ್ತಪ್ಪ ರೈ ರವರಿಗೆ ಆ ದೇವರ ಪವಾಡಗಳಲ್ಲಿ ಅಪಾರ ನಂಬಿಕೆ. ಇದೇ ರೀತಿ ಶ್ರೀ ದೇವರ ಅನುಗ್ರಹದಿಂದ ಅನೇಕರಿಗೆ ಅನೇಕ ಪವಾಡಗಳ ಅನುಭವವಾಗಿದೆ. ಬೇಡಿಬಂದವರ ಕಷ್ಟಗಳನ್ನು ನಿವಾರಿಸುವ, ತುಂಬಾ ಕಾರಣಿಕ ಇರುವ ಹತ್ತೂರ ಒಡೆಯ ಪುತ್ತೂರಿನ ಮಹಾಲಿಂಗೇಶ್ವರ ದೇವರಲ್ಲಿ ಪುತ್ತೂರಿನ ಜನತೆಗೆ ಅಪಾರ ನಂಬಿಕೆ. ಅಂತೆಯೇ ಪುತ್ತೂರಲ್ಲಿ ಹುಟ್ಟಿ ಬೆಳೆದು ಬೇರೆಡೆ ನೆಲೆಸಿರುವವರಿಗೆ ಕೂಡಾ. ದೇವಸ್ಥಾನದಲ್ಲಿ ಪ್ರತಿದಿನ ಊಟದ (ಪ್ರಸಾದ) ವ್ಯವಸ್ಥೆ ಇದೆ.
 
ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಲ್ಲಿ ಪುತ್ತೂರಿಗೆ ಒಮ್ಮೆ ಭೇಟಿ ಕೊಟ್ಟು ಮಹಾತೋಬಾರ್ ಶ್ರೀ ಮಹಾಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಲು ಮರೆಯದಿರಿ.                                                          (ಸಂಗ್ರಹ) 



*****


No comments:

Post a Comment