Friday 17 February 2012

ಆ ದಿನಗಳು


ನೆನಪಾಗುತ್ತಿದೆ ಬಾಲ್ಯದ ಆ ದಿನಗಳು.

ಪಿರಿಪಿರಿ ಮಳೆಯಲ್ಲಿ ಮೂರು ನಾಲ್ಕು ಜನ ಸೇರಿ ತೂತಾದ ಒಂದು ಕೊಡೆ ಹಿಡ್ಕೊಂಡು ಶಾಲೆಗೆ ಹೋಗುತ್ತಿದ್ದುದ್ದು, ಜೋರು ಮಳೆಗೆ ಶಾಲೆಗೆ ರಜೆ ಕೊಟ್ಟಾಗ ಮಳೆಯಲ್ಲಿ ನೆನೆಯುತ್ತಾ ಸುತ್ತಾಡಿಕೊಂಡು ಮನೆ ಸೇರುತ್ತಿದ್ದುದು. ಶಾಲೆಯಿಂದ ಬಂದ ಕೂಡಲೇ ಚೀಲ ಬಿಸಾಕಿ ಕುಂಟೆಬಿಲ್ಲೆ, ಲಗೋರಿ, ಚಿನ್ನಿದಾಂಡು, ಬುಗುರಿ, ಮರಕೋತಿ ಆಟ ಆಡುತ್ತಿದ್ದುದು; ಸ್ಕೂಲ್ ಡೇಗೆ ಟಮ್ಕಿ ಡ್ಯಾನ್ಸ್ ಆಡುತ್ತಿದ್ದುದು. ಒಮ್ಮೆ ಕಣ್ಣಾಮುಚ್ಚಾಲೆ ಆಟ ಆಡುವಾಗ ನಾನು ಮಂಚದ ಕೆಳಗೆ ಬಚ್ಚಿಟ್ಟುಕೊಂಡವಳು ಅಲ್ಲಿಯೇ ನಿದ್ದೆ ಹೋಗಿದ್ದು; ನಾನು ಕಾಣಿಸುತ್ತಿಲ್ಲ ಅಂತ ಗಲಾಟೆ ಬಿದ್ದಾಗ ನನಗೆ ಎಚ್ಚರವಾಗಿ ಇನ್ನೆಲ್ಲಿ ಹೊಡೀತಾರೋ ಅಂತ ಪುನ: ನಿದ್ದೆ ಬಂದಂತೆ ನಟಿಸಿದ್ದು. ಅಕ್ಕ ನೋಡಿ ದರದರ ಅಂತ ಎಳೆದಿದ್ದು. ಮದುವೆ ಮನೆಗೆ ಹೋದ್ರೆ ಮೈಕ್ ಹಿಡ್ಕೊಂಡು ಹಾಡುತ್ತಿದ್ದುದು; ಊಟಕ್ಕೆ ಕೂತರೆ ಪಾಯಸ ಯಾವಾಗ ಬರುತ್ತದೆ ಅಂತ ಕಾಯುತ್ತಿದ್ದುದು.

ಗಾಳಿ ಬಂದಾಗ ಪಟಪಟ ಅಂತ ಬೀಳುತ್ತಿದ್ದ ಮಾವಿನಹಣ್ಣನ್ನು ಆರಿಸಿಕೊಂಡು ಬರಲು ಓಡುತ್ತಿದ್ದುದು.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂದೆ ಸ್ಮಶಾನ. ಅಲ್ಲಿ ಏನಾದ್ರೂ ಹೆಣ ಸುಡುತ್ತಿದ್ದರೆ ಒಬ್ಬಳೇ ಸಂಕ ದಾಟಲು ಹೆದರಿ ಯಾರಾದ್ರೂ ಆ ದಾರೀಲಿ ಬರುವವರೆಗೆ ಕಾಯುತ್ತಿದ್ದುದು; ಜಾತ್ರೇಲಿ ತೇರಿನ ದಿನ ಹೊಡೆಯುತ್ತಿದ್ದ ಬೇಡಿಗೆ(ಪಟಾಕಿ) ಹೆದರುತ್ತಿದ್ದುದು. ಬೇತಾಳದ ಹಿಂದೆ ಹೋಗುತ್ತಿದ್ದುದು. ಐಸ್ ಕ್ರೀಂ ತಿನ್ನುತ್ತಿದ್ದುದು.. ತೊಟ್ಟಿಲಲ್ಲಿ ಕೂರುತ್ತಿದ್ದುದು. ಸರ್ಕಸ್ ಗೆ ಹೋಗುತ್ತಿದ್ದುದು. ಮನೆಮಂದಿ ಎಲ್ಲಾ ಒಟ್ಟಾಗಿ ಸಿನೆಮಾಗೆ ಹೋಗುತ್ತಿದ್ದುದು. ಬೇಸಿಗೆ ರಜೆ ಬಂತೂಂದ್ರೆ ಕೆಮ್ಮಿಂಜೆ ಅತ್ತಿಗೆಮ್ಮನ ಮನೆಗೆ ಹೋಗುತ್ತಿದ್ದುದು. ಅಲ್ಲಿ ಮನೆಯ ಮುಂದೆ ಹರಿಯುತ್ತಿದ್ದ ತೋಡಿನಲ್ಲಿ ಈಜು ಕಲಿಯುತ್ತಿದ್ದುದು. ರಜೆಯಲ್ಲಿ ಅಪ್ಪ ಅಮ್ಮ ಆಟ ಆಡುತ್ತಿದ್ದುದು. ನಾನು ಅಮ್ಮನ ಸೀರೆ ಉಟ್ಕೊಂಡು ಅಮ್ಮ ಆಗುತ್ತಿದ್ದುದು. ಒಂದನೇ ತಾರೀಕು ಬಂತೂಂದ್ರೆ ಸಂಬಳದ ದಿನ ಅಪ್ಪ, ಅಣ್ಣ ತರುತ್ತಿದ್ದ ಸ್ವೀಟಿಗೆ ಕಾಯುತ್ತಿದ್ದುದು. ನಿಂಗೆ ಜಾಸ್ತಿ ನಂಗೆ ಕಡಿಮೆ ಅಂತ ಜಗಳವಾಡುತ್ತಿದ್ದುದು. ಸಾಲಾಗಿ ಊಟಕ್ಕೆ ಕೂತರೆ ನನ್ನ ತಟ್ಟೆಗೆ ಹಾಕಿದ್ದ ಮೀನು ಮಾಯವಾಗಿ ಪಕ್ಕದ ತಟ್ಟೆಯಲ್ಲಿರುತ್ತಿದ್ದುದು.

ಯುಗಾದಿ ಹಬ್ಬಕ್ಕೆ ಮಾತ್ರ ಕೊಡಿಸುತ್ತಿದ್ದ ಹೊಸ ಬಟ್ಟೆಯನ್ನು ಎಲ್ಲರಿಗೂ ತೋರಿಸಿ ಸಂಭ್ರಮಿಸುತ್ತಿದ್ದುದು. ದೀಪಾವಳಿಗೆ ಮೈಗೆ ಎಣ್ಣೆ ಹಚ್ಚಿಕೊಂಡು ರಾತ್ರಿ ಎಲ್ಲಾ ಹುಲಿವೇಷ ಕುಣಿಯುತ್ತಿದ್ದುದು. ತಾಳಿಂಬು ಆಡುತ್ತಿದ್ದುದು. ಬೆಳ್ಳಂಬೆಳಿಗ್ಗೆ ಸ್ನಾನಮಾಡಿ ಅಮ್ಮ ಮಾಡುತ್ತಿದ್ದ ಸಿಹಿಅವಲಕ್ಕಿ, ದೋಸೆ ತಿನ್ನುತ್ತಿದ್ದುದು. ತುಳಿಸಿಪೂಜೆ ದಿನ ಪೈಪೋಟಿ ಮೇಲೆ ಡೆಕೊರೇಷನ್ ಮಾಡುತ್ತಿದ್ದುದು. ಗೂಡುದೀಪ ಮಾಡುತ್ತಿದ್ದುದು. ನೀರಿನ ಹಂಡೆಯಲ್ಲಿ ಸರ ಪಟಾಕಿ ಹೊಡೆಯುತ್ತಿದ್ದುದು. ದಸರಾದಲ್ಲಿ ಮನೆಮನೆಗೆ ಬರುತ್ತಿದ್ದ ಹುಲಿವೇಷ, ಕರಡಿ ವೇಷದ ಹಿಂದೆ ಹಿಂದೆ ಹೋಗುತ್ತಿದ್ದುದು. ಬೇಲಿಯಲ್ಲಿರುವ ಹೂವನ್ನೆಲ್ಲ ಕಿತ್ತು ದೊಡ್ಡ ದೊಡ್ಡ ಹಾರ ಮಾಡಿ ದೇವಸ್ಥಾನಕ್ಕೆ ಕೊಡುತ್ತಿದ್ದುದು. ಯಕ್ಷಗಾನ(ಆಟ)ದಲ್ಲಿ ರಾಕ್ಷಸ ವೇಷಧಾರಿ ಬಂದಾಗ ಹೆದರಿ ಒಂದು ಕಣ್ಣಿಂದ ನೋಡುತ್ತಿದ್ದುದು. ಮರುದಿನ ಯಾರು ಹೆಚ್ಚು ಸುತ್ತುತ್ತಾರೆ ಅಂತ ಪೈಪೋಟಿ ಮೇಲೆ ಸುತ್ತುತ್ತಿದ್ದುದು. ಎಂತಹ ಸುಂದರ ನೆನಪುಗಳು. ಕಪಟ ವಂಚನೆಯನ್ನರಿಯದ  ಸುಂದರ ಜೀವನ.

ಸವಿನೆನಪುಗಳು ಬೇಕು ಸವಿಯಲೀ ಬದುಕು…

ನೆನಪು ಮರುಕಳಿಸಿದಾಗಲೆಲ್ಲ ಮಕ್ಕಳಲ್ಲಿ ನೆನಪನ್ನು ಬಿಚ್ಚಿಡುತ್ತೇವೆ. ಅವರು ಕುತೂಹಲದಿಂದ ಮುಂದೇನಾಯ್ತು ಅಂತ ಕೇಳುವಾಗ ಇನ್ನೂ ಉತ್ಸಾಹದಿಂದ ಹೇಳುತ್ತೇವೆ.

ಈಗಿನ ಮಕ್ಕಳಿಗೆ ಎಲ್ಲವೂ ಇದೆ. ಬಯಸಿದ್ದು ತಕ್ಷಣ ಸಿಗುತ್ತದೆ. ಆದರೆ ಮುಂದೆ, ಅವರ ಮಕ್ಕಳಲ್ಲಿ ಹೇಳಲು, ಮಕ್ಕಳು ಮುಂದೇನಾಯ್ತು ಅಂತ ಕೇಳುವಂತಹ ಘಟನೆಗಳು ಬಹುಷ: ಅಷ್ಟಾಗಿ ಇರಲಾರವು. ಮಣಭಾರ ಪುಸ್ತಕ, ಹೋಂ ವರ್ಕ, ಟಿವಿ, ಇಂಟರ್ ನೆಟ್ ಇಷ್ಟೇ ಅವರ ಪ್ರಪಂಚ. ಏನೇ ಆದರೂ ನಾವು ಅನುಭವಿಸಿಷ್ಟು ಬಾಲ್ಯ ಜೀವನದ ಸುಂದರ, ಸಂತಸದ ಕ್ಷಣಗಳನ್ನು ನಮ್ಮ ಮಕ್ಕಳು ಅನುಭವಿಸುತ್ತಿಲ್ಲ. ನಾವು ಕೂಡಾ ಅವರಿಗೆ ಸಾಕಷ್ಟು ಸ್ವಾತಂತ್ರ್ಯ ನೀಡುತ್ತಿಲ್ಲ ಅಂತ ಅನ್ನಿಸುವುದಿಲ್ಲವೆ?






No comments:

Post a Comment